
NEET Protest Live| ಪ್ರಧಾನ್ ರಾಜೀನಾಮೆಗೆ ರಾಜಿಯಿಲ್ಲ: ನಾಳೆಯವರೆಗೆ ಸರ್ಕಾರಕ್ಕೆ ಗಡುವು ನೀಡಿದ ಸಿಜೆಪಿ
26 ದಿನಗಳ ಉಪವಾಸ ಸತ್ಯಾಗ್ರಹವನ್ನು ಸೋನಮ್ ವಾಂಗ್ಚುಕ್ ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಭರವಸೆಯ ಬಳಿಕ ಉಪವಾಸ ಮುರಿದು, "ಇದು ಹಸಿವಿನ ಅಂತ್ಯ, ಹೊಣೆಗಾರಿಕೆಯ ಆರಂಭ" ಎಂದರು.
ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ ಅಂತ್ಯಗೊಳಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆಯ ಬಳಿಕ ಅವರು ಉಪವಾಸ ಮುರಿದರು.
ಜೂನ್ 28ರಿಂದ ಉಪವಾಸ ಆರಂಭಿಸಿದ್ದ ವಾಂಗ್ಚುಕ್ ಅವರಿಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜ್ಯೂಸ್ ನೀಡುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ಈ ವೇಳೆ ಲೇಹ್-ಲಡಾಖ್ ಅಪೆಕ್ಸ್ ಬಾಡಿಯ ಹಿರಿಯ ನಾಯಕರು, ವೈದ್ಯರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಉಪವಾಸ ಮುಗಿಸಿದ ಬಳಿಕ ಮಾತನಾಡಿದ ಸೋನಮ್ ವಾಂಗ್ಚುಕ್, "ನನ್ನ ಉಪವಾಸವನ್ನು ಅಂತ್ಯಗೊಳಿಸುತ್ತಿರುವುದು ಸಂತೋಷದ ಸಂಗತಿ. ಎಲ್ಲರಿಗೂ ಧನ್ಯವಾದಗಳು. ಇದು ಹಸಿವಿನ ಅಂತ್ಯ ಮಾತ್ರ, ಆದರೆ ಹೊಣೆಗಾರಿಕೆ ಆರಂಭವಾಗಿದೆ" ಎಂದು ಹೇಳಿದರು.
ಅದೇ ವೇಳೆ ತಮ್ಮ ಪತ್ನಿ ಗೀತಾಂಜಲಿಯತ್ತ ತಿರುಗಿ ಮಾತನಾಡಿದ ಅವರು, "ಗೀತಾಂಜಲಿ ಯಾವಾಗಲೂ ನನ್ನೊಂದಿಗೆ ನಿಂತಿದ್ದಾರೆ. ಅವರಿಗೆ ಕೇವಲ ಧನ್ಯವಾದ ಹೇಳುವುದಲ್ಲ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ಭಾವುಕರಾದರು.
ಉಪವಾಸ ಅಂತ್ಯಗೊಳ್ಳುವ ಸಂದರ್ಭದಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸರ್ಕಾರ ನೀಡಿದ ಭರವಸೆಗಳನ್ನು ಓದಿದರು. ದೀರ್ಘಕಾಲ ನಡೆದ ಮಾತುಕತೆಗಳ ಬಳಿಕ ಈ ಒಪ್ಪಂದ ಸಾಧ್ಯವಾಗಿದ್ದು, ಇದರೊಂದಿಗೆ ವಾಂಗ್ಚುಕ್ ಅವರ 26 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.
Live Updates
- 24 July 2026 12:30 PM IST
ಶಿಕ್ಷಣ ಸುಧಾರಣೆ ಚರ್ಚೆಗೆ ಸರ್ಕಾರ ಸಿದ್ಧ: ಗದ್ದಲದ ನಡುವೆ ಲೋಕಸಭೆ ಸೋಮವಾರಕ್ಕೆ ಮುಂದೂಡಿಕೆ
ಶಿಕ್ಷಣ ಸುಧಾರಣೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಪುನರುಚ್ಚರಿಸಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ಚರ್ಚೆಗೆ ಅವಕಾಶ ನೀಡುವಂತೆ ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ಈ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಲು ಅವಕಾಶ ಕೋರಿದರು. ಆದರೆ ಸದನದ ಕಲಾಪವನ್ನು ಮುನ್ನಡೆಸುತ್ತಿದ್ದ ಜಗದಂಬಿಕಾ ಪಾಲ್, ಅಗತ್ಯ ದಾಖಲೆಗಳನ್ನು ಮಂಡಿಸಿದ ಬಳಿಕ ಮಾತನಾಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು ಸದನದ ಮಧ್ಯಭಾಗಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. "ವಿ ವಾಂಟ್ ಇಸ್ತೀಫಾ" ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪ ಸುಗಮವಾಗಿ ನಡೆಸಲು ಸಾಧ್ಯವಾಗದ ಕಾರಣ, ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದೇ ಜಗದಂಬಿಕಾ ಪಾಲ್ ಲೋಕಸಭೆಯ ಕಲಾಪವನ್ನು ಸೋಮವಾರದವರೆಗೆ ಮುಂದೂಡಿದರು.
- 24 July 2026 12:06 PM IST
ಧರ್ಮೇಂದ್ರ ಪ್ರಧಾನ್‌ರನ್ನು ವಜಾಗೊಳಿಸಿ: ಪ್ರಧಾನಿ ಮೋದಿಗೆ ಕೆ.ಸಿ. ವೇಣುಗೋಪಾಲ್ ಆಗ್ರಹ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರನ್ನು ಶಿಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸುವುದು. ಆದರೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸದೆ ಸರ್ಕಾರ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ವಿದ್ಯಾರ್ಥಿಗಳ ಧ್ವನಿಗೆ ಸ್ಪಂದಿಸಿ ಶಿಕ್ಷಣ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
- 24 July 2026 12:01 PM IST
ಜಂತರ್ ಮಂತರ್ ಪ್ರತಿಭಟನೆ ಎಚ್ಚರಿಕೆ: ದೆಹಲಿ ವಿವಿಗೆ ರಾಹುಲ್ ಗಾಂಧಿ ತರಾಟೆ
ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯ ನೀಡಿರುವ ಸೂಚನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ತಮ್ಮ ಪ್ರಜಾಸತ್ತಾತ್ಮಕ ಹಕ್ಕು ಚಲಾಯಿಸುತ್ತಿರುವ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಅಧಿಕಾರ ವಿಶ್ವವಿದ್ಯಾಲಯಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯವು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುವ ಕಾನೂನುಬಾಹಿರ ಸಭೆಗಳು ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೆ, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಸುರಕ್ಷತೆ, ಶೈಕ್ಷಣಿಕ ಪ್ರಗತಿ ಮತ್ತು ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುತ್ತಿರುವ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಧೈರ್ಯ ನಿಮಗೆ ಹೇಗೆ ಬಂತು? ಸಮಯ ಬಂದಾಗ ಇದಕ್ಕೆ ನೀವು ಜವಾಬ್ದಾರರಾಗಬೇಕಾಗುತ್ತದೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ದೆಹಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ಜಂತರ್ ಮಂತರ್‌ನಿಂದ ದೂರವಿರಬೇಕು, ಕಾನೂನು ಪಾಲನೆಗೆ ಆದ್ಯತೆ ನೀಡಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ತನ್ನ ಪ್ರಕಟಣೆಯಲ್ಲಿ ಸಲಹೆ ನೀಡಿದೆ.
- 24 July 2026 11:53 AM IST
ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ: ಸಂಸತ್‌ನಲ್ಲಿ ವಿಪಕ್ಷಗಳ ಹೋರಾಟ
ಸಿಜೆಪಿಯ 'ಸಂಸದ್ ಚಲೋ' ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪೆಲೆಟ್ ಗನ್ ಬಳಸಿದ್ದಾರೆ ಎಂಬ ಆರೋಪವನ್ನು ಸಂಸತ್‌ನಲ್ಲಿ ಒಗ್ಗಟ್ಟಾಗಿ ಪ್ರಸ್ತಾಪಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಿಳಿಸಿದೆ. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರದಾಯಕರಾಗಬೇಕು ಎಂದು ಪಕ್ಷ ಒತ್ತಾಯಿಸಿದೆ.
ರಾಜ್ಯಸಭೆಯ ಟಿಎಂಸಿ ಉಪನಾಯಕಿ ಸಾಗರಿಕಾ ಘೋಷ್, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಿರಾಯುಧ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಆರೋಪಿಸಿದ್ದಾರೆ. ಈ ದಾಳಿಯಿಂದ ಕೆಲ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬ ವಿದ್ಯಾರ್ಥಿಗೆ ಕಣ್ಣಿಗೆ ತೀವ್ರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಾಗರಿಕಾ ಘೋಷ್, "ಜವಾಬ್ದಾರಿಯುತ ಪರೀಕ್ಷಾ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸರ್ಕಾರ ಅಮಾನವೀಯವಾಗಿ ವರ್ತಿಸಿದೆ. ಪೆಲೆಟ್ ಗನ್ ಬಳಕೆಯ ಸಾಕ್ಷ್ಯಗಳು ಹೊರಬಂದಿವೆ" ಎಂದು ಆರೋಪಿಸಿದ್ದಾರೆ.
ಟಿಎಂಸಿ ರಾಜ್ಯಸಭೆ ನಾಯಕ ಡೆರೆಕ್ ಓ'ಬ್ರಿಯಾನ್ ಪ್ರತಿಕ್ರಿಯಿಸಿ, "ಕೇವಲ ಒಬ್ಬ ಸಚಿವರ ರಾಜೀನಾಮೆಯಿಂದ ಈ ವಿಚಾರ ಮುಗಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ಪ್ರಕರಣಕ್ಕೆ ಉತ್ತರ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಜುಲೈ 20ರಂದು ನಡೆದ ಪೊಲೀಸ್ ಕ್ರಮದ ವೇಳೆ ಪೆಲೆಟ್ ಗಾಯಗಳಿರುವ ಪ್ರತಿಭಟನಾಕಾರರ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ವಿಚಾರ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದು, ಈ ವಿಷಯದ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
- 24 July 2026 11:42 AM IST
ಸಿಜೆಪಿ ಪ್ರತಿಭಟನೆ ಹಿನ್ನೆಲೆ ಇಂಟರ್‌ನೆಟ್ ಸ್ಥಗಿತ: ಅರ್ಜಿ ವಿಚಾರಣೆ ಇಂದು
ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಜಂತರ್ ಮಂತರ್ ಸುತ್ತಮುತ್ತ ಜಾರಿಗೊಳಿಸಿರುವ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಡೆಸಲಿದೆ.
ಪ್ರತಿಭಟನೆ ನಡೆಯುತ್ತಿರುವ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವ ಕ್ರಮವು ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸೇವೆ ಪುನಃ ಆರಂಭಿಸಲು ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಈ ಪ್ರಕರಣದ ವಿಚಾರಣೆ ವೇಳೆ ಇಂಟರ್‌ನೆಟ್ ಸ್ಥಗಿತಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳ ನಿಲುವಿನತ್ತ ಗಮನ ಕೇಂದ್ರೀಕರಿಸಲಾಗಿದೆ. ನ್ಯಾಯಾಲಯದ ತೀರ್ಪು ಪ್ರತಿಭಟನೆ ಹಾಗೂ ಸಾರ್ವಜನಿಕ ಹಕ್ಕುಗಳ ವಿಚಾರದಲ್ಲಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.
- 24 July 2026 11:33 AM IST
ಸಿಜೆಪಿ ಪ್ರತಿಭಟನೆ ಹಿನ್ನೆಲೆ ಇಂಟರ್‌ನೆಟ್ ಸ್ಥಗಿತ: ಅರ್ಜಿ ವಿಚಾರಣೆ ಇಂದು
ಸಿಜೆಪಿ (CJP) ಪ್ರತಿಭಟನೆ ಹಿನ್ನೆಲೆಯಲ್ಲಿ ಜಂತರ್ ಮಂತರ್ ಸುತ್ತಮುತ್ತ ಜಾರಿಗೊಳಿಸಿರುವ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಡೆಸಲಿದೆ.
ಪ್ರತಿಭಟನೆ ನಡೆಯುತ್ತಿರುವ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವ ಕ್ರಮವು ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸೇವೆ ಪುನಃ ಆರಂಭಿಸಲು ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಈ ಪ್ರಕರಣದ ವಿಚಾರಣೆ ವೇಳೆ ಇಂಟರ್‌ನೆಟ್ ಸ್ಥಗಿತಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳ ನಿಲುವಿನತ್ತ ಗಮನ ಕೇಂದ್ರೀಕರಿಸಲಾಗಿದೆ. ನ್ಯಾಯಾಲಯದ ತೀರ್ಪು ಪ್ರತಿಭಟನೆ ಹಾಗೂ ಸಾರ್ವಜನಿಕ ಹಕ್ಕುಗಳ ವಿಚಾರದಲ್ಲಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.
- 24 July 2026 11:31 AM IST
ಸಂಸತ್‌ನಲ್ಲಿ ವಿಪಕ್ಷಗಳ ಪ್ರತಿಭಟನೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು.
ಶಿಕ್ಷಣ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿಪಕ್ಷ ಸದಸ್ಯರು, ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು. ಸಂಸತ್ ಕಲಾಪದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲು ವಿಪಕ್ಷಗಳು ಮುಂದಾದವು.
- 24 July 2026 10:18 AM IST
'ಯಾವ ಪರೀಕ್ಷೆಯೂ, ಯಾವ ವ್ಯವಸ್ಥೆಯೂ ಒಂದು ಜೀವದ ಬೆಲೆ ಆಗಬಾರದು' : ನೀಟ್ ವಿದ್ಯಾರ್ಥಿಗಳಿಗೆ ನೋರಾ ಫತೇಹಿ ಬೆಂಬಲ
ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬಾಲಿವುಡ್ ನಟಿ ನೋರಾ ಫತೇಹಿ ಬೆಂಬಲ ಸೂಚಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜೂನ್ 20ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಹಾನಿಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ನೋರಾ ಫತೇಹಿ, "ಪ್ರತಿ ವಿದ್ಯಾರ್ಥಿ, ಪ್ರತಿ ಕುಟುಂಬ ಮತ್ತು ಅನಿಶ್ಚಿತತೆಯ ಭಾರ ಹೊತ್ತಿರುವ ಪ್ರತಿಯೊಬ್ಬರ ಬಗ್ಗೆ ನನ್ನ ಹೃದಯ ಮಿಡಿಯುತ್ತದೆ. ಶಿಕ್ಷಣವು ಕೇವಲ ಪರೀಕ್ಷೆ ಅಥವಾ ಅಂಕಗಳಲ್ಲ. ಅದು ಕುಟುಂಬಗಳ ತ್ಯಾಗ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಪ್ರತೀಕವಾಗಿದೆ. ಅವರಿಗೆ ನ್ಯಾಯ, ಗೌರವ ಮತ್ತು ವಿಶ್ವಾಸ ಸಿಗಬೇಕು" ಎಂದು ಬರೆದಿದ್ದಾರೆ.
"ಯಾವ ಪರೀಕ್ಷೆಯ ಫಲಿತಾಂಶವೂ, ಯಾವ ಶಿಕ್ಷಣ ವ್ಯವಸ್ಥೆಯೂ ಒಂದು ಜೀವದ ಬೆಲೆ ಆಗಬಾರದು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ ಅನೇಕರು ನಿರಾಶೆ, ನೋವು ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳ ಬಗ್ಗೆ ನನಗೆ ತೀವ್ರ ದುಃಖವಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಧೈರ್ಯ ಮತ್ತು ಸಹನಶಕ್ತಿಗೆ ನಾನು ಗೌರವ ಸಲ್ಲಿಸುತ್ತೇನೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ ಎಂದು ಆಶಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಆಲಿಯಾ ಭಟ್, ನಸೀರುದ್ದೀನ್ ಶಾ, ರತ್ನಾ ಪಾಠಕ್ ಶಾ, ಶಬಾನಾ ಆಜ್ಮಿ, ಪ್ರಕಾಶ್ ರಾಜ್, ರಾಜ್‌ಕುಮಾರ್ ರಾವ್, ರೇವತಿ, ಟೊವಿನೋ ಥಾಮಸ್, ಅನುರಾಗ್ ಕಶ್ಯಪ್ ಹಾಗೂ ಅರಿಜಿತ್ ಸಿಂಗ್ ಸೇರಿದಂತೆ ಹಲವು ಗಣ್ಯರು ಕೂಡ ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
- 24 July 2026 10:03 AM IST
ಶಿಕ್ಷಣ ಸಚಿವರನ್ನು ವಜಾ ಮಾಡಿ: ಕೇಂದ್ರಕ್ಕೆ ಸಿಜೆಪಿ ಸವಾಲ್
ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕಾನೂನು ತರಲು ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದೆ.
ಪ್ರಧಾನಿ ಮೋದಿ ಅವರು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಘೋಷಿಸಿದ ಬಳಿಕ, ಸಿಜೆಪಿ ರಾಷ್ಟ್ರೀಯ ವಕ್ತಾರ ಆಶುತೋಷ್ ರಂಕಾ ಪ್ರತಿಕ್ರಿಯಿಸಿ, "ಮೋದಿ ಜೀ, ನಾಳೆಯೇ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಿ. ಅದೇ ಸರ್ಕಾರ ಕೈಗೊಳ್ಳಬಹುದಾದ ಅತ್ಯಂತ ಕಠಿಣ ಕ್ರಮ" ಎಂದು ಹೇಳಿದ್ದಾರೆ.
ಇದೇ ವೇಳೆ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಾಮಾಜಿಕ ಜಾಲತಾಣ Xನಲ್ಲಿ ಗೋಡೆಗಳೇ ಇಲ್ಲದ ಜಾಗಕ್ಕೆ ಬೀಗ ಹಾಕುತ್ತಿರುವ ವ್ಯಕ್ತಿಯ ಚಿತ್ರವನ್ನು ಹಂಚಿಕೊಂಡಿದ್ದು, ಸರ್ಕಾರ ತರಲಿರುವ ಮಸೂದೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಪರೀಕ್ಷಾ ಅಕ್ರಮಗಳ ವಿರುದ್ಧ ಸರ್ಕಾರದ ಕ್ರಮಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಮುಂದುವರಿದಿದ್ದು, ಶಿಕ್ಷಣ ಸಚಿವರ ಜವಾಬ್ದಾರಿಯ ವಿಚಾರವೂ ಮತ್ತೆ ಮುನ್ನೆಲೆಗೆ ಬಂದಿದೆ.
- 24 July 2026 9:28 AM IST
ಪ್ರಧಾನಿಯ ವಿಡಿಯೋ ಸಂದೇಶ ಕಣ್ಣೊರೆಸುವ ಪ್ರಯತ್ನ: ಕಾಂಗ್ರೆಸ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆಪತ್ರ ಸೋರಿಕೆ ಪ್ರಕರಣದ ಕುರಿತು ಬಿಡುಗಡೆ ಮಾಡಿದ ವಿಡಿಯೋ ಸಂದೇಶವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಎರಡು ತಿಂಗಳ ಮೌನದ ಬಳಿಕ ಪ್ರಧಾನಿ ಮಾತನಾಡಿದ್ದರೂ, ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಅವರ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ಅವರಲ್ಲಿ ಜವಾಬ್ದಾರಿತನದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದ್ದಾರೆ. "ಯಾವುದೇ ಪರಿಹಾರಕ್ಕೆ ಮೊದಲ ಹೆಜ್ಜೆಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಎನ್‌ಇಇಟಿ-ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರ ಸೋರಿಕೆಯನ್ನು ಮೋದಿ ಸರ್ಕಾರ ಆರಂಭದಲ್ಲಿ ನಿರಾಕರಿಸಿತ್ತು ಎಂದು ಜೈರಾಮ್ ರಮೇಶ್ ಆರೋಪಿಸಿದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸುದ್ದಿಗೋಷ್ಠಿಯಲ್ಲಿಯೂ "ಸೋರಿಕೆ" ಎಂಬ ಪದ ಬಳಸಲು ನಿರಾಕರಿಸಿದ್ದರು ಹಾಗೂ ಶಿಕ್ಷಣ ಸಚಿವಾಲಯವೂ ಸಂಸತ್ತಿನ ಶಿಕ್ಷಣ ಸ್ಥಾಯಿ ಸಮಿತಿಗೆ ಪ್ರಶ್ನೆಪತ್ರ ಸೋರಿಕೆ ನಡೆದಿಲ್ಲ ಎಂದು ತಿಳಿಸಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಎರಡು ತಿಂಗಳ ಸಾರ್ವಜನಿಕ ಆಕ್ರೋಶದ ಪರಿಣಾಮವಾಗಿ ಪ್ರಧಾನಿ ಈಗ ಸತ್ಯವನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯ ಲೆಕ್ಕಾಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ವಿದ್ಯಾರ್ಥಿಗಳು ಮೋದಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದೇ ವೇಳೆ, ಎನ್‌ಇಇಟಿ-ಯುಜಿ 2024 ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಗಳ ಸಾಕ್ಷ್ಯಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿದೆ ಎಂದು ಕಾಂಗ್ರೆಸ್ ಮತ್ತೊಮ್ಮೆ ಆರೋಪಿಸಿದೆ.








