
NEET Protest Live| ಪ್ರಧಾನ್ ರಾಜೀನಾಮೆಗೆ ರಾಜಿಯಿಲ್ಲ: ನಾಳೆಯವರೆಗೆ ಸರ್ಕಾರಕ್ಕೆ ಗಡುವು ನೀಡಿದ ಸಿಜೆಪಿ
26 ದಿನಗಳ ಉಪವಾಸ ಸತ್ಯಾಗ್ರಹವನ್ನು ಸೋನಮ್ ವಾಂಗ್ಚುಕ್ ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಭರವಸೆಯ ಬಳಿಕ ಉಪವಾಸ ಮುರಿದು, "ಇದು ಹಸಿವಿನ ಅಂತ್ಯ, ಹೊಣೆಗಾರಿಕೆಯ ಆರಂಭ" ಎಂದರು.
ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ ಅಂತ್ಯಗೊಳಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆಯ ಬಳಿಕ ಅವರು ಉಪವಾಸ ಮುರಿದರು.
ಜೂನ್ 28ರಿಂದ ಉಪವಾಸ ಆರಂಭಿಸಿದ್ದ ವಾಂಗ್ಚುಕ್ ಅವರಿಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜ್ಯೂಸ್ ನೀಡುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ಈ ವೇಳೆ ಲೇಹ್-ಲಡಾಖ್ ಅಪೆಕ್ಸ್ ಬಾಡಿಯ ಹಿರಿಯ ನಾಯಕರು, ವೈದ್ಯರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಉಪವಾಸ ಮುಗಿಸಿದ ಬಳಿಕ ಮಾತನಾಡಿದ ಸೋನಮ್ ವಾಂಗ್ಚುಕ್, "ನನ್ನ ಉಪವಾಸವನ್ನು ಅಂತ್ಯಗೊಳಿಸುತ್ತಿರುವುದು ಸಂತೋಷದ ಸಂಗತಿ. ಎಲ್ಲರಿಗೂ ಧನ್ಯವಾದಗಳು. ಇದು ಹಸಿವಿನ ಅಂತ್ಯ ಮಾತ್ರ, ಆದರೆ ಹೊಣೆಗಾರಿಕೆ ಆರಂಭವಾಗಿದೆ" ಎಂದು ಹೇಳಿದರು.
ಅದೇ ವೇಳೆ ತಮ್ಮ ಪತ್ನಿ ಗೀತಾಂಜಲಿಯತ್ತ ತಿರುಗಿ ಮಾತನಾಡಿದ ಅವರು, "ಗೀತಾಂಜಲಿ ಯಾವಾಗಲೂ ನನ್ನೊಂದಿಗೆ ನಿಂತಿದ್ದಾರೆ. ಅವರಿಗೆ ಕೇವಲ ಧನ್ಯವಾದ ಹೇಳುವುದಲ್ಲ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ಭಾವುಕರಾದರು.
ಉಪವಾಸ ಅಂತ್ಯಗೊಳ್ಳುವ ಸಂದರ್ಭದಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸರ್ಕಾರ ನೀಡಿದ ಭರವಸೆಗಳನ್ನು ಓದಿದರು. ದೀರ್ಘಕಾಲ ನಡೆದ ಮಾತುಕತೆಗಳ ಬಳಿಕ ಈ ಒಪ್ಪಂದ ಸಾಧ್ಯವಾಗಿದ್ದು, ಇದರೊಂದಿಗೆ ವಾಂಗ್ಚುಕ್ ಅವರ 26 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.
Live Updates
- 24 July 2026 4:24 PM IST
ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ: ರಾಹುಲ್ ವಿರುದ್ಧ ಸ್ವಯಂಪ್ರೇರಿತ ಕ್ರಮಕ್ಕೆ ಸಿಜೆಐಗೆ ವಕೀಲರ ಮನವಿ
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಸಮೀಪ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಕುರಿತು ಸ್ವಯಂಪ್ರೇರಿತವಾಗಿ (ಸುಒ ಮೋಟು) ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ನೀಡುವಂತೆ ವಿವಿಧ ಹೈಕೋರ್ಟ್‌ಗಳ ವಕೀಲರ ಗುಂಪು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಮನವಿ ಸಲ್ಲಿಸಿದೆ.
ವಕೀಲ ಸಂಕೇತ್ ಗುಪ್ತಾ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಜುಲೈ 21ರಂದು 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದ ಸಮೀಪ ನಡೆದ ಪ್ರತಿಭಟನೆಯನ್ನು "ಹೈ-ಸೆಕ್ಯುರಿಟಿ ವಲಯದಲ್ಲಿನ ಕಾನೂನುಬಾಹಿರ ಸಭೆ" ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಸತ್ಯಶೋಧನಾ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.
ಪ್ರಧಾನಿ ಹಾಗೂ ಇತರ ಸಾಂವಿಧಾನಿಕ ಹುದ್ದೆಗಳ ನಿವಾಸಗಳ ಸುತ್ತಮುತ್ತ ನಡೆಯುವ ಪ್ರತಿಭಟನೆಗಳು ಭದ್ರತಾ ನಿಯಮಗಳನ್ನು ಉಲ್ಲಂಘಿಸುವಂತಾಗಿದ್ದು, ಇಂತಹ ಘಟನೆಗಳು ಮುಂದುವರಿದರೆ ಭದ್ರತಾ ವಲಯಗಳಲ್ಲಿ ಕಾನೂನುಬಾಹಿರ ಸಭೆಗಳು ಸಾಮಾನ್ಯವಾಗುವ ಅಪಾಯವಿದೆ ಎಂದು ವಕೀಲರು ತಮ್ಮ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಹೈ-ಸೆಕ್ಯುರಿಟಿ ಪ್ರದೇಶಗಳ ಸುತ್ತ ಸಾರ್ವಜನಿಕ ಸಭೆ ಮತ್ತು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಅನುಸರಿಸಬೇಕಾದ ಕಡ್ಡಾಯ ಮಾರ್ಗಸೂಚಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.
- 24 July 2026 3:37 PM IST
ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಶಿಕ್ಷೆ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಉದ್ದೇಶದ ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಸತ್ ಭವನ ಸಂಕೀರ್ಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳಿಗಿಂತಲೂ ಕಠಿಣ ಶಿಕ್ಷೆಯ ವಿಧಿಗಳನ್ನು ಒಳಗೊಂಡಿರುವ ಮಸೂದೆಯನ್ನು ಮುಂದಿನ ವಾರ ಸಂಸತ್‌ನಲ್ಲಿ ಮಂಡಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗುರುವಾರ ಮಧ್ಯರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಹೊಸ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲಾಗುವುದು ಎಂದು ಘೋಷಿಸಿದ್ದರು. ಈ ಬೆಳವಣಿಗೆ, ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿಜೆಪಿ (CJP) ನೇತೃತ್ವದ ಪ್ರತಿಭಟನೆಗಳ ನಡುವೆಯೇ ನಡೆದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರಿಕೆ ನಿಗದಿ, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡುವಂತೆ ಸಿಜೆಪಿ ಆಗ್ರಹಿಸುತ್ತಿದೆ.
- 24 July 2026 3:30 PM IST
ಸಿಜೆಪಿ ಬೇಡಿಕೆ ಸಲ್ಲಿಕೆ; ನಾಳೆ ಸರ್ಕಾರದ ಉತ್ತರ: ಜೆ.ಪಿ. ನಡ್ಡಾ
ಕಾಕ್ರೋಚ್ ಜನತಾ ಪಕ್ಷ ಪ್ರತಿನಿಧಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಸಂಘಟನೆ ಸಲ್ಲಿಸಿರುವ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ನಾಳೆ ಮಧ್ಯಾಹ್ನ ತನ್ನ ಪ್ರತಿಕ್ರಿಯೆ ನೀಡಲಿದೆ ಎಂದು ತಿಳಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಡ್ಡಾ, "ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಯಿತು. ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಅವರ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಅವರು ಮೂರು ಪ್ರಮುಖ ಬೇಡಿಕೆಗಳು ಹಾಗೂ ಐದು ಸಲಹೆಗಳನ್ನು ನಮ್ಮ ಮುಂದೆ ಮಂಡಿಸಿದ್ದಾರೆ" ಎಂದು ಹೇಳಿದರು.
"ಈ ಬೇಡಿಕೆಗಳು ಮತ್ತು ಸಲಹೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ ಬಳಿಕ ನಾಳೆ ಮಧ್ಯಾಹ್ನ ಮತ್ತೆ ಸಭೆ ನಡೆಸಿ ನಮ್ಮ ನಿಲುವನ್ನು ಅವರಿಗೆ ತಿಳಿಸಲಾಗುವುದು" ಎಂದು ನಡ್ಡಾ ಸ್ಪಷ್ಟಪಡಿಸಿದರು.
ಪರೀಕ್ಷಾ ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಿಜೆಪಿ ನಡುವಿನ ಈ ಮಾತುಕತೆ ಮಹತ್ವದ ಹಂತ ತಲುಪಿದ್ದು, ಮುಂದಿನ ಸಭೆಯಲ್ಲಿ ಸರ್ಕಾರದ ಅಧಿಕೃತ ಪ್ರತಿಕ್ರಿಯೆ ಹೊರಬೀಳುವ ನಿರೀಕ್ಷೆಯಿದೆ.
- 24 July 2026 2:55 PM IST
ಪ್ರಧಾನ್ ರಾಜೀನಾಮೆಯೊಂದೇ ಪರಿಹಾರ: ಸರ್ಕಾರಕ್ಕೆ ದಿಪ್ಕೆ ಸ್ಪಷ್ಟ ಸಂದೇಶ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವುದೇ ವಿದ್ಯಾರ್ಥಿಗಳ ಪ್ರತಿಭಟನೆಗೆ ಏಕೈಕ ಪರಿಹಾರ ಎಂದು ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಧ್ಯಕ್ಷ ಅಭಿಜಿತ್ ದಿಪ್ಕೆ ಹೇಳಿದ್ದಾರೆ. ಸರ್ಕಾರದೊಂದಿಗೆ ನಡೆಯಲಿರುವ ಮಾತುಕತೆಗೆ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ದಿಪ್ಕೆ, "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹೊರತುಪಡಿಸಿ ಬೇರೆ ಯಾವುದೇ ಪರಿಹಾರವನ್ನು ನಾವು ಒಪ್ಪುವುದಿಲ್ಲ. ನಮ್ಮ ಪ್ರತಿಭಟನೆ ಹಿಂಪಡೆಯುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಇದು ಸೋನಮ್ ವಾಂಗ್ಚುಕ್ ಅಥವಾ ನನ್ನೊಬ್ಬನ ಹೋರಾಟವಲ್ಲ. ಇದು ದೇಶದ ಯುವಕರ ಹೋರಾಟ. ಈ ಪ್ರತಿಭಟನೆಗೆ ಯಾವುದೇ ವಿರೋಧ ಪಕ್ಷದ ಸಂಬಂಧ ಇಲ್ಲ. ಸರ್ಕಾರ ಈ ಹೋರಾಟಕ್ಕೆ ಪರಿಹಾರ ಬಯಸಿದರೆ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು" ಎಂದು ಅವರು ಹೇಳಿದರು.
ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ದಿಪ್ಕೆ, "ಸರ್ಕಾರವು ಅವರನ್ನು ನಿರ್ಬಂಧದಲ್ಲಿಟ್ಟಿತ್ತು ಎಂದು ನನಗೆ ಅನಿಸುತ್ತದೆ. ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಬಹುದಾಗಿತ್ತು, ಆದರೆ ನಮಗೆ ಅಥವಾ ವಿರೋಧ ಪಕ್ಷದ ಸಂಸದರಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿರಲಿಲ್ಲ. ಅವರು ಉಪವಾಸ ಅಂತ್ಯಗೊಳಿಸಿರುವುದು ಸಂತಸದ ವಿಷಯ" ಎಂದು ಹೇಳಿದರು.
- 24 July 2026 2:51 PM IST
ನೀಟ್ ಹೋರಾಟ ತೀವ್ರಗೊಳಿಸಿದ ಕಾಂಗ್ರೆಸ್: ಇಂದು ದೆಹಲಿ ಪ್ರತಿಭಟನೆ, ನಾಳೆ ದೇಶವ್ಯಾಪಿ ಸತ್ಯಾಗ್ರಹ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದರ ಭಾಗವಾಗಿ ಶುಕ್ರವಾರ ದೆಹಲಿಯ ಕೇಂದ್ರ ಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದು, ಶನಿವಾರ ಸಂಜೆ ದೇಶಾದ್ಯಂತ ಮೇಣದಬತ್ತಿ ಮೆರವಣಿಗೆ ಮತ್ತು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕಾಂಗ್ರೆಸ್ ತನ್ನ ಜಿಲ್ಲಾ ಘಟಕಗಳಿಗೆ ದೇಶವ್ಯಾಪಿ ಪ್ರತಿಭಟನೆಗಳನ್ನು ಸಂಘಟಿಸಲು ಸೂಚನೆ ನೀಡಿದೆ. ವಿದ್ಯಾರ್ಥಿಗಳ ಪರವಾಗಿ ನ್ಯಾಯ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಆಗ್ರಹಿಸಿ ಈ ಪ್ರತಿಭಟನೆಗಳು ನಡೆಯಲಿವೆ ಎಂದು ಪಕ್ಷ ತಿಳಿಸಿದೆ.
ಕೇಂದ್ರ ಸರ್ಕಾರವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ದೆಹಲಿಯಿಂದ ಗ್ರಾಮೀಣ ಮಟ್ಟದವರೆಗೂ ಹೋರಾಟವನ್ನು ವಿಸ್ತರಿಸುವ ಮೂಲಕ ಈ ವಿಚಾರವನ್ನು ಜನಾಂದೋಲನವಾಗಿಸುವ ಗುರಿಯನ್ನು ಪಕ್ಷ ಹೊಂದಿದೆ.
- 24 July 2026 2:42 PM IST
ಸಿಜೆಪಿ-ಕೇಂದ್ರ ಸರ್ಕಾರ ಮಾತುಕತೆ ಆರಂಭ; ನಡ್ಡಾ, ಜಿತೇಂದ್ರ ಸಿಂಗ್ ಭಾಗಿ
ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಬೇಡಿಕೆಗಳ ಕುರಿತು ಸಿಜೆಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಮಹತ್ವದ ಮಾತುಕತೆ ಶುಕ್ರವಾರ ನವದೆಹಲಿಯ ವಿಠಲ್‌ಭಾಯಿ ಪಟೇಲ್ ಹೌಸ್‌ನಲ್ಲಿ ಆರಂಭವಾಗಿದೆ. ಎರಡೂ ಪಕ್ಷಗಳ ನಡುವಿನ ಇದು ಮೂರನೇ ಅಧಿಕೃತ ಸಭೆಯಾಗಿದೆ.
ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಿಜೆಪಿ ಪರವಾಗಿ ರಾಷ್ಟ್ರೀಯ ವಕ್ತಾರ ಸೌರವ್ ದಾಸ್ ಹಾಗೂ ಮತ್ತೊಬ್ಬ ಯುವ ಪ್ರತಿನಿಧಿ ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಈ ಹಿಂದೆ ಜುಲೈ 20ರಂದು ಜೆ.ಪಿ. ನಡ್ಡಾ ನಿವಾಸದಲ್ಲಿ ನಡೆದ ಎರಡು ಸುತ್ತಿನ ಸಭೆಗಳಲ್ಲಿ ಸೌರವ್ ದಾಸ್ ಹಾಗೂ ಸಿಜೆಪಿ ವಕ್ತಾರ ಆಶುತೋಷ್ ರಾಂಕಾ ಭಾಗವಹಿಸಿದ್ದರು.
ಸರ್ಕಾರದ ಪ್ರಮುಖ ಭರವಸೆಗಳ ನಂತರ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ತಮ್ಮ 26 ದಿನಗಳ ಉಪವಾಸವನ್ನು ಗುರುವಾರ ರಾತ್ರಿ ಅಂತ್ಯಗೊಳಿಸಿದ ಕೆಲವೇ ಗಂಟೆಗಳ ಬಳಿಕ ಈ ಸಭೆ ನಡೆಯುತ್ತಿದೆ.
ಇದಕ್ಕೂ ಮೊದಲು ಸಚಿವರ ನಿವಾಸ ಅಥವಾ ಕಚೇರಿಯಲ್ಲಿ ಮಾತುಕತೆ ನಡೆಸುವ ಸರ್ಕಾರದ ಆಹ್ವಾನವನ್ನು ಸಿಜೆಪಿ ತಿರಸ್ಕರಿಸಿತ್ತು. ತಟಸ್ಥ ಸ್ಥಳದಲ್ಲಿಯೇ ಮಾತುಕತೆ ನಡೆಯಬೇಕು ಎಂಬುದು ಸಂಘಟನೆಯ ಒತ್ತಾಯವಾಗಿತ್ತು.
ಇದೇ ವೇಳೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.
- 24 July 2026 1:41 PM IST
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕ್ರಮಗಳ ಮೇಲೆ ನಿಗಾ: ಕೇಂದ್ರಕ್ಕೆ ಸುಪ್ರೀಂ ಸೂಚನೆ
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಮೇಲೆ ತಾವು ನಿರಂತರ ನಿಗಾ ವಹಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ತಾತ್ಕಾಲಿಕ ಕ್ರಮಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನ್ಯಾಯಾಲಯ ಕೇಂದ್ರಕ್ಕೆ ಸ್ಪಷ್ಟ ಸಂದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ, ರಾಷ್ಟ್ರೀಯ ವೈದ್ಯಕೀಯ ಸಂಘಗಳ ಒಕ್ಕೂಟ (FAIMA) ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸಿತು. ಈ ವೇಳೆ ಕೇಂದ್ರ ಸರ್ಕಾರವು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಕೈಗೊಂಡ ಕ್ರಮಗಳು, ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳ ಅನುಷ್ಠಾನ ಹಾಗೂ ಐಐಟಿ ಮಾದರಿಯ ಪರೀಕ್ಷಾ ವ್ಯವಸ್ಥೆಯನ್ನು ಹೇಗೆ ಅಳವಡಿಸಿಕೊಳ್ಳಲಿದೆ ಎಂಬುದರ ಕುರಿತು ವಿವರ ನೀಡುವಂತೆ ಸೂಚಿಸಿತು.
ಕೇಂದ್ರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳನ್ನು ಮೀರಿ ಸರ್ಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು. "ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಉನ್ನತ ಮಟ್ಟದಲ್ಲಿ ಎಲ್ಲಾ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು" ಎಂದು ಅವರು ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ, ನೀಟ್ ಮರುಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ಸಾಗಣೆಗೆ ವಾಯುಪಡೆಯನ್ನು ಬಳಸಿದ್ದರೂ, ಇಂತಹ ಕ್ರಮಗಳು ತಾತ್ಕಾಲಿಕ ಪರಿಹಾರ ಮಾತ್ರ ಎಂದು ಹೇಳಿದರು. "ತಾತ್ಕಾಲಿಕ ವ್ಯವಸ್ಥೆಗಳು ಹಲವು ವರ್ಷಗಳಿಂದ ಸಮಸ್ಯೆಗಳನ್ನು ಉಂಟುಮಾಡಿವೆ. ಪರೀಕ್ಷಾ ವ್ಯವಸ್ಥೆಯನ್ನು ಶಾಶ್ವತವಾಗಿ ಸುಧಾರಿಸುವ ಸಂಸ್ಥಾಗತ ಕ್ರಮಗಳನ್ನು ಜಾರಿಗೆ ತರುವುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಲಿದೆ" ಎಂದು ಪೀಠ ತಿಳಿಸಿತು.
ಈ ವೇಳೆ FAIMA ಪರ ವಕೀಲ ತನ್ವಿ ದುಬೆ, ಮುಂದಿನ ವರ್ಷದಿಂದ ಜಾರಿಗೆ ಬರಲಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನದ (SOP) ಸಂಪೂರ್ಣ ರೂಪುರೇಷೆಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತೆ ಮನವಿ ಮಾಡಿದರು.
- 24 July 2026 1:20 PM IST
ಸಿಜೆಪಿ ಪ್ರತಿಭಟನೆ ಅರ್ಜಿ ಬಗ್ಗೆ ಮಾಧ್ಯಮ ವರದಿಗಳು ಸುಳ್ಳು: ಸಿಜೆಐ ಸೂರ್ಯಕಾಂತ್
ಜುಲೈ 20ರಂದು ನಡೆದ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ತಿರಸ್ಕರಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ "ಬೇಜವಾಬ್ದಾರಿಯುತ ಮತ್ತು ಸುಳ್ಳು" ಎಂದು ತಳ್ಳಿಹಾಕಿದ್ದಾರೆ.
ಶುಕ್ರವಾರ ನ್ಯಾಯಾಲಯದಲ್ಲಿ ಮಾತನಾಡಿದ ಅವರು, ಈ ಸಂಬಂಧ ಯಾವುದೇ ರಿಟ್ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. "ಕಳೆದ ಎರಡು ದಿನಗಳಿಂದ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಗೆ ಪಟ್ಟಿ ಮಾಡಲು ನಿರಾಕರಿಸಿದರು ಎಂಬ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಬೆಳಿಗ್ಗೆ 10 ಗಂಟೆಯವರೆಗೂ ಒಂದು ಪುಟದ ಅರ್ಜಿಯೂ ಸಲ್ಲಿಕೆಯಾಗಿರಲಿಲ್ಲ. ಕೇವಲ ಒಂದು ಮನವಿಯನ್ನು ಕಳುಹಿಸಲಾಗಿತ್ತು. ಅದನ್ನು ಹೇಗೆ ರಿಟ್ ಅರ್ಜಿಯೆಂದು ಪರಿಗಣಿಸಲು ಸಾಧ್ಯ?" ಎಂದು ಪ್ರಶ್ನಿಸಿದರು.
ಜುಲೈ 20ರಂದು ಸಿಜೆಪಿ ನೇತೃತ್ವದಲ್ಲಿ ನಡೆದ 'ಸಂಸದ್ ಚಲೋ' ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಆರೋಪಿಸಿ, ಈ ವಿಷಯದ ತುರ್ತು ವಿಚಾರಣೆಗೆ ವಕೀಲರೊಬ್ಬರು ಬುಧವಾರ ಮನವಿ ಮಾಡಿದ್ದರು. ಈ ವೇಳೆ ಪ್ರತಿಭಟನೆಯ ವಿಡಿಯೊಗಳಿರುವುದಾಗಿ ಅವರು ತಿಳಿಸಿದ್ದರು.
ಆದರೆ, ಕೇವಲ ಮೌಖಿಕ ಪ್ರಸ್ತಾಪದ ಹಂತದಲ್ಲೇ ವಿಡಿಯೊಗಳನ್ನು ಪರಿಶೀಲಿಸಲು ನ್ಯಾಯಾಲಯ ಸಿದ್ಧವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದರು. "ನಮಗೆ ವಿಡಿಯೊಗಳನ್ನು ನೋಡುವ ಸಮಯವಿಲ್ಲ. ಈ ಹಂತದಲ್ಲಿ ಅವುಗಳನ್ನು ಪರಿಶೀಲಿಸುವ ಅಗತ್ಯವೂ ಇಲ್ಲ" ಎಂದು ಅವರು ಹೇಳಿದ್ದರು.
ಸಿಜೆಪಿ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಸಂಸತ್ ಕಡೆಗೆ ಸಾಗಲು ಯತ್ನಿಸಿದ ವೇಳೆ ಭದ್ರತಾ ಪಡೆಗಳು ಲಾಠಿಚಾರ್ಜ್ ಹಾಗೂ ಕಣ್ಣೀರು ಅನಿಲ ಪ್ರಯೋಗ ನಡೆಸಿದ್ದವು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿತ್ತು.
- 24 July 2026 1:06 PM IST
ಪ್ರಧಾನ್ ರಾಜೀನಾಮೆ ನೀಡುವವರೆಗೆ ಚರ್ಚೆಯಿಲ್ಲ: ರಾಹುಲ್ ಗಾಂಧಿ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಸರ್ಕಾರದೊಂದಿಗೆ ಅಥವಾ ಸಂಸತ್‌ನಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದೇಶದ ವಿದ್ಯಾರ್ಥಿಗಳ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬುದು ವಿಪಕ್ಷಗಳ ಏಕೈಕ ಬೇಡಿಕೆಯಾಗಿದೆ ಎಂದು ಹೇಳಿದರು.
ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೆ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಹಾಗೂ ಸಂಸತ್‌ನಲ್ಲಿ ಚರ್ಚೆಗೂ ಅವಕಾಶವಿಲ್ಲ ಎಂಬ ನಿಲುವನ್ನು ವಿಪಕ್ಷಗಳು ಮುಂದುವರಿಸಲಿವೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
- 24 July 2026 12:40 PM IST
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: 'ಇದು ಹೀಗೆ ಮುಂದುವರಿಯಲು ಸಾಧ್ಯವಿಲ್ಲ' ಎಂದ ಸುಪ್ರೀಂ ಕೋರ್ಟ್
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರೀಕ್ಷಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ "ತಪ್ಪುಗಳ ಸರಣಿ"ಗೆ ಅಂತ್ಯ ಹಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಅಲೋಕ್ ಆರಾಧೆ ಅವರಿದ್ದ ಪೀಠ, ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾದರಿಗೆ ಹೇಗೆ ವರ್ಗಾಯಿಸಲಾಗುವುದು ಎಂಬುದರ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. ಜೊತೆಗೆ, ಕಂಪ್ಯೂಟರ್ ಆಧಾರಿತ ಪರೀಕ್ಷಾ (CBT) ವ್ಯವಸ್ಥೆಗೆ ಬದಲಾದಾಗ ಅಭ್ಯರ್ಥಿಗಳ ಮಾಹಿತಿಯ ಸುರಕ್ಷತೆಯನ್ನು ಹೇಗೆ ಖಚಿತಪಡಿಸಲಾಗುವುದು ಎಂಬುದನ್ನೂ ವಿವರಿಸುವಂತೆ ಸೂಚಿಸಿತು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯದ ಕುರಿತು ಸಮಗ್ರ ನಿಲುವು ಮಂಡಿಸಲು ಇನ್ನಷ್ಟು ಸಮಯ ನೀಡುವಂತೆ ನ್ಯಾಯಾಲಯವನ್ನು ಕೋರಿದರು.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆಯಲ್ಲಿ ವಿವರ ನೀಡುವ ನಿರೀಕ್ಷೆಯಿದೆ.





