
NEET Protest Live| ಪ್ರಧಾನ್ ರಾಜೀನಾಮೆಗೆ ರಾಜಿಯಿಲ್ಲ: ನಾಳೆಯವರೆಗೆ ಸರ್ಕಾರಕ್ಕೆ ಗಡುವು ನೀಡಿದ ಸಿಜೆಪಿ
26 ದಿನಗಳ ಉಪವಾಸ ಸತ್ಯಾಗ್ರಹವನ್ನು ಸೋನಮ್ ವಾಂಗ್ಚುಕ್ ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಭರವಸೆಯ ಬಳಿಕ ಉಪವಾಸ ಮುರಿದು, "ಇದು ಹಸಿವಿನ ಅಂತ್ಯ, ಹೊಣೆಗಾರಿಕೆಯ ಆರಂಭ" ಎಂದರು.
ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ ಅಂತ್ಯಗೊಳಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆಯ ಬಳಿಕ ಅವರು ಉಪವಾಸ ಮುರಿದರು.
ಜೂನ್ 28ರಿಂದ ಉಪವಾಸ ಆರಂಭಿಸಿದ್ದ ವಾಂಗ್ಚುಕ್ ಅವರಿಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜ್ಯೂಸ್ ನೀಡುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ಈ ವೇಳೆ ಲೇಹ್-ಲಡಾಖ್ ಅಪೆಕ್ಸ್ ಬಾಡಿಯ ಹಿರಿಯ ನಾಯಕರು, ವೈದ್ಯರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಉಪವಾಸ ಮುಗಿಸಿದ ಬಳಿಕ ಮಾತನಾಡಿದ ಸೋನಮ್ ವಾಂಗ್ಚುಕ್, "ನನ್ನ ಉಪವಾಸವನ್ನು ಅಂತ್ಯಗೊಳಿಸುತ್ತಿರುವುದು ಸಂತೋಷದ ಸಂಗತಿ. ಎಲ್ಲರಿಗೂ ಧನ್ಯವಾದಗಳು. ಇದು ಹಸಿವಿನ ಅಂತ್ಯ ಮಾತ್ರ, ಆದರೆ ಹೊಣೆಗಾರಿಕೆ ಆರಂಭವಾಗಿದೆ" ಎಂದು ಹೇಳಿದರು.
ಅದೇ ವೇಳೆ ತಮ್ಮ ಪತ್ನಿ ಗೀತಾಂಜಲಿಯತ್ತ ತಿರುಗಿ ಮಾತನಾಡಿದ ಅವರು, "ಗೀತಾಂಜಲಿ ಯಾವಾಗಲೂ ನನ್ನೊಂದಿಗೆ ನಿಂತಿದ್ದಾರೆ. ಅವರಿಗೆ ಕೇವಲ ಧನ್ಯವಾದ ಹೇಳುವುದಲ್ಲ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ಭಾವುಕರಾದರು.
ಉಪವಾಸ ಅಂತ್ಯಗೊಳ್ಳುವ ಸಂದರ್ಭದಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸರ್ಕಾರ ನೀಡಿದ ಭರವಸೆಗಳನ್ನು ಓದಿದರು. ದೀರ್ಘಕಾಲ ನಡೆದ ಮಾತುಕತೆಗಳ ಬಳಿಕ ಈ ಒಪ್ಪಂದ ಸಾಧ್ಯವಾಗಿದ್ದು, ಇದರೊಂದಿಗೆ ವಾಂಗ್ಚುಕ್ ಅವರ 26 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.
Live Updates
- 24 July 2026 8:26 AM IST
ಜವಾಬ್ದಾರಿ ಕೇಳುವ ವಿದ್ಯಾರ್ಥಿಗಳನ್ನು 'ದೇಶದ ಶತ್ರು'ಗಳಂತೆ ನೋಡುತ್ತಿದೆ ಮೋದಿ ಸರ್ಕಾರ: ಸೋನಿಯಾ ಗಾಂಧಿ
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಜವಾಬ್ದಾರಿ ಮತ್ತು ಶಿಕ್ಷಣ ಸುಧಾರಣೆ ಕೇಳುತ್ತಿರುವ ವಿದ್ಯಾರ್ಥಿಗಳನ್ನು ಸರ್ಕಾರ "ದೇಶದ ಶತ್ರುಗಳಂತೆ" ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
'An Education System's Collapse, Young India's Trauma' ಶೀರ್ಷಿಕೆಯ ಲೇಖನದಲ್ಲಿ ಅವರು, ದೇಶದ ಶಿಕ್ಷಣ ವ್ಯವಸ್ಥೆಯನ್ನು ಮೋದಿ ಸರ್ಕಾರ ಹದಗೆಡಿಸಿದ್ದು, ವಿದ್ಯಾರ್ಥಿಗಳ ಧೈರ್ಯಕ್ಕೆ ಉತ್ತರವಾಗಿ ಕ್ರೌರ್ಯ ಮತ್ತು ದಮನದ ಮಾರ್ಗವನ್ನು ಅನುಸರಿಸಿದೆ ಎಂದು ಟೀಕಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಕುಸಿತದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ತೀವ್ರಗೊಂಡಿವೆ. ವಿದ್ಯಾರ್ಥಿಗಳ ಬೇಡಿಕೆಗಳು ಸರಳವಾಗಿದ್ದು, ಕೇಂದ್ರ ಸರ್ಕಾರದಿಂದ ಜವಾಬ್ದಾರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮಾತ್ರ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ನೈತಿಕ, ರಾಜಕೀಯ ಮತ್ತು ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದ ಸೋನಿಯಾ ಗಾಂಧಿ, ವಿದ್ಯಾರ್ಥಿಗಳೊಂದಿಗೆ ನಿಲ್ಲುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಪೊಲೀಸ್ ಸಿಬ್ಬಂದಿ ಬಳಸಿದ ಬಲಪ್ರಯೋಗವನ್ನು ಅವರು ಖಂಡಿಸಿದ್ದಾರೆ. 2020ರ ಪೌರತ್ವ ತಿದ್ದುಪಡಿ ಕಾಯ್ದೆ (CAA)-ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರೋಧಿ ಪ್ರತಿಭಟನೆಗಳ ವೇಳೆ ವಿಶ್ವವಿದ್ಯಾಲಯ ಆವರಣಗಳಲ್ಲಿ ನಡೆದ ಪೊಲೀಸ್ ಕ್ರಮ ಹಾಗೂ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಸಂದರ್ಭದ ಘಟನೆಗಳನ್ನು ಉಲ್ಲೇಖಿಸಿದ ಅವರು, ಇಂತಹ ಕ್ರಮಗಳು ಈ ಸರ್ಕಾರಕ್ಕೆ ಹೊಸದಲ್ಲ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ದುರ್ಬಲಗೊಳಿಸಿರುವುದಷ್ಟೇ ಅಲ್ಲ, ಜವಾಬ್ದಾರಿಯಿಲ್ಲದ ಆಡಳಿತ, ಅಹಂಕಾರ ಮತ್ತು ಅಸಂವೇದನಾಶೀಲತೆಯನ್ನು ರೂಢಿಸಿಕೊಂಡಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.
- 24 July 2026 8:23 AM IST
ದೆಹಲಿ ಮೆಟ್ರೋದ 17 ನಿಲ್ದಾಣಗಳು ಬಂದ್; ಪ್ರಯಾಣಿಕರಿಗೆ ಡಿಎಂಆರ್‌ಸಿ ಎಚ್ಚರಿಕೆ
ದೆಹಲಿ ಮೆಟ್ರೋ ರೈಲು ನಿಗಮ (DMRC) ಭದ್ರತಾ ಕಾರಣಗಳಿಂದ ಜುಲೈ 24ರ ಬೆಳಿಗ್ಗೆ 7:30ರಿಂದ 17 ಮೆಟ್ರೋ ನಿಲ್ದಾಣಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಪ್ರಕಟಿಸಿದೆ. ಆದರೆ, ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ಮೆಟ್ರೋ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ಸೌಲಭ್ಯ ಮಾತ್ರ ಲಭ್ಯವಿರುತ್ತದೆ ಎಂದು ಡಿಎಂಆರ್‌ಸಿ ಸ್ಪಷ್ಟಪಡಿಸಿದೆ. ಮುಚ್ಚಲಾದ ನಿಲ್ದಾಣಗಳಲ್ಲಿ ಲೋಕ್ ಕಲ್ಯಾಣ್ ಮಾರ್ಗ, ರಾಜೀವ್ ಚೌಕ್ ಸೇರಿದಂತೆ ಒಟ್ಟು 17 ನಿಲ್ದಾಣಗಳು ಸೇರಿವೆ. ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಂಆರ್‌ಸಿ ತಿಳಿಸಿದೆ. ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕೂ ಮುನ್ನ ಅಧಿಕೃತ ಮಾಹಿತಿ ಪರಿಶೀಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಡಿಎಂಆರ್‌ಸಿ ಮನವಿ ಮಾಡಿದೆ. ಮುಂದಿನ ಸೂಚನೆ ಹೊರಬರುವವರೆಗೆ ಈ ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ.

