
Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್
ಸಿಎಂ ಸಿದ್ದರಾಮಯ್ಯ ಅವರಿಂದ ದಾಖಲೆಯ 17ನೇ ಕರ್ನಾಟಕ ರಾಜ್ಯ ಬಜೆಟ್ 2026-27 ಮಂಡನೆ. ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿರುವ ಈ ಆಯವ್ಯಯದ ಪ್ರಮುಖ ಅಂಶಗಳು ಮತ್ತು ನೇರ ಅಪ್‌ಡೇಟ್ಸ್ ಇಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯ ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿದೆ.
ದಾಖಲೆಯ ಸರದಾರನ ಆಯವ್ಯಯ
ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಇನ್ನು ರಾಷ್ಟ್ರಮಟ್ಟದಲ್ಲಿ ಗಮನಿಸುವುದಾದರೆ, ದೇಶದಲ್ಲೇ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅನುಭವದ ಭಂಡಾರವೇ ಆಗಿರುವ ಸಿಎಂ, ಈ ಬಾರಿ ರಾಜ್ಯದ ಜನರ ನಿರೀಕ್ಷೆಗಳನ್ನು ಹೇಗೆ ಸರಿದೂಗಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
Live Updates
- 6 March 2026 12:14 PM IST
ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಘೋಷಿಸಿದ್ದಾರೆ. ವಾಯುಯಾನ ಹಾಗೂ ಜಲಸಾಹಸ ಯೋಜನೆ ಅನುಷ್ಠಾನ ಸೀ ಪ್ಲೇನ್ ಮತ್ತು ಹೆಲಿ ಟ್ಯಾಕ್ಸಿ ,ಜೋಯ್ ರೈಡ್, ರಿವರ್ ಕ್ರೂಸ್‌ಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಸಿಗರಿಗೆ ಸುಮಧುರ, ಸಕಾರಾತ್ಮಕ ಅನುಭವಕ್ಕಾಗಿ ಟ್ಯಾಕ್ಸಿ ಚಾಲಕರು ,ಆಟೋ ಚಾಲಕರು, ಪೊಲೀಸ್ ಸಿಬ್ಬಂದಿಗಳಿಗೆ ಕೌಶಲ್ಯ ನೀಡಲಾಗುವುದು. ಗದಗ, ಕಪ್ಪತ್ತಗುಡ್ಡ, ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
- 6 March 2026 12:13 PM IST
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇಗುಲಗಳ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಕರಾವಳಿ ಭಾಗದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಬಿಗ್ ಗಿಫ್ಟ್ ನೀಡಿದ್ದಾರೆ. ರಾಜ್ಯದ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ಧ ದೇವಾಲಯಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸುವುದಾಗಿ ಘೋಷಿಸಿದ್ದಾರೆ.
- 6 March 2026 12:12 PM IST
ಚಿತ್ರದುರ್ಗದ ಬಬ್ಬೂರು ತರಬೇತಿ ಕೇಂದ್ರ ಉನ್ನತೀಕರಣ: ರಾಜ್ಯದ ರೈತರಿಗೆ ಸಿಗಲಿದೆ ಹೈಟೆಕ್ ಸೌಲಭ್ಯ
ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನಲ್ಲಿರುವ ಜಿಲ್ಲಾ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ‘ಕೃಷಿ ಉದ್ದಿಮೆ ತರಬೇತಿ ಕೇಂದ್ರ’ವಾಗಿ ಉನ್ನತೀಕರಿಸಲು ತೀರ್ಮಾನಿಸಲಾಗಿದೆ. ಈ ಕೇಂದ್ರವು ರಾಜ್ಯದ ರೈತರಿಗೆ ಕೃಷಿ ಆಧಾರಿತ ಉದ್ದಿಮೆಗಳನ್ನು ಕೈಗೊಳ್ಳಲು ಅಗತ್ಯವಿರುವ ನೈಪುಣ್ಯತೆ ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಸ್ಥಳೀಯವಾಗಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುವುದು. ಈ ಮೂಲಕ ಯಾಂತ್ರೀಕೃತ ಕೃಷಿಯನ್ನು ಪ್ರೋತ್ಸಾಹಿಸಿ, ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದರೊಂದಿಗೆ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ MSIL ವತಿಯಿಂದ 'ರೈತ ಮಾಲ್'ಗಳನ್ನು ಸ್ಥಾಪಿಸಲಾಗುವುದು. ಇದರಿಂದ ರೈತರು ಗುಣಮಟ್ಟದ ಕೃಷಿ ಪರಿಕರಗಳಿಗಾಗಿ ಅಲೆದಾಡುವುದು ತಪ್ಪಲಿದ್ದು, ಎಲ್ಲವೂ ಒಂದೇ ಕಡೆ ಸುಲಭವಾಗಿ ಲಭ್ಯವಾಗಲಿದೆ.
- 6 March 2026 12:09 PM IST
ಅಬಕಾರಿ ರಾಜಸ್ವ 36.492 ಕೋಟಿ ರೂ. ಸಂಗ್ರಹ
ಕಳೆದ ವರ್ಷ ಫೆಬ್ರವರಿ ಅಂತ್ಯದವರೆಗೆ ಅಬಕಾರಿ ರಾಜಸ್ವ 36.492 ಕೋಟಿ ರೂ. ಸಂಗ್ರಹವಾಗಿದ್ದು, ಶೇ. 12.7 ರಾಜಸ್ವ ಸಂಗ್ರಹ ಬೆಳವಣಿಗೆಯಾಗಿದೆ. 2026-27ಕ್ಕೆ ಅಬಕಾರಿ ಇಲಾಖೆಯಿಂದ 45,000ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ. ನೋಂದಣಿ ಮುದ್ರಾಂಕದಿಂದ ಕಳೆದ ವರ್ಷ 22,629 ಕೋಟಿ ರೂ. ರಾಜಸ್ವ ಸಂಗ್ರಹವಾಗಿದ್ದು, ಮುಂದಿನ ವರ್ಷಕ್ಕೆ 29,000 ಕೋಟಿ ರೂ. ರಾಜಸ್ವ ಸಂಗ್ರಹಕ್ಕೆ ಗುರಿ ಹೊಂದಲಾಗಿದೆ.
ಮೋಟಾರು ವಾಹನ ತೆರಿಗೆಯಿಂದ 11,630 ಕೋಟಿ ರೂ. ಸಂಗ್ರಹ, ಪ್ರಸಕ್ತ ವರ್ಷದಲ್ಲಿ 15,500 ಕೋಟಿ ರೂ. ಸಂಗ್ರಹಕ್ಕೆ ಗುರಿ ಹೊಂದಲಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 13,000 ಕೋಟಿ ರೂ. ಅನುದಾನ ನೀಡಲಾಗುವುದು, ಮೂರು ವರ್ಷಗಳಲ್ಲಿ ಅವಧಿಯಲ್ಲಿ 13,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.
- 6 March 2026 12:04 PM IST
490 ಕೋಟಿ ರೂ. ವೆಚ್ಚದ ‘ಉಡುತೊರೆಹಳ್ಳ’ ಯೋಜನೆಗೆ ಚಾಲನೆ
ಚಾಮರಾಜನಗರದ ಹನೂರು ತಾಲೂಕಿನಲ್ಲಿ ಅಂತರ್ಜಲ ವೃದ್ಧಿ ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ರೂ.490 ಕೋಟಿ ವೆಚ್ಚದಲ್ಲಿ ಉಡುತೊರೆಹಳ್ಳ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
- 6 March 2026 12:02 PM IST
ಕರ್ನಾಟಕ ಬಜೆಟ್ 2026-27| ಶಿಡ್ಲಘಟ್ಟ ಮತ್ತು ಚಿಂತಾಮಣಿಯ 164 ಕೆರೆಗಳಿಗೆ ಹರಿಯಲಿದೆ ನೀರು
ಹೆಬ್ಬಾಳ - ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲೂಕಿನ 119 ಕೆರೆಗಳೂ ಸೇರಿ ಒಟ್ಟಾರೆ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಠಾನವನ್ನು ರೂ.237 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ರೂ.140 ಕೋಟಿ ಅಂದಾಜು ಮೊತ್ತದಲ್ಲಿ ಹೆಚ್.ಎನ್ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯ ಅನುಷ್ಠಾನಗೊಳಿಸಲಾಗುತ್ತದೆ.
- 6 March 2026 11:58 AM IST
ಮೇಕೆದಾಟು ಯೋಜನೆಗೆ ಮರುಜೀವ
ಮೇಕೆದಾಟು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ ಹಂತದಲ್ಲಿ ಬಾಕಿ ಇರುವ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ. ಸಾಮರ್ಥ್ಯದ ಸಮತೋಲನಾ ಜಲಾಶಯವನ್ನು ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
- 6 March 2026 11:51 AM IST
ಕೃಷಿ ವಲಯದ ಅಭಿವೃದ್ಧಿಗೆ 8,045 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಗಳ ಅನುಷ್ಠಾನ
ರಾಜ್ಯದ ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. ರಾಜ್ಯದ ವಿವಿಧ ನದಿ ಕಣಿವೆಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯ ವೃದ್ಧಿ ಮತ್ತು ಅಂತರ್ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಒಟ್ಟಾರೆ ನೀರಾವರಿ ವ್ಯವಸ್ಥೆಯನ್ನು ಬಲಪಡಿಸಲು ಬಜೆಟ್‌ನಲ್ಲಿ ಭಾರಿ ಮೊತ್ತದ ಅನುದಾನ ಮೀಸಲಿಡಲಾಗಿದೆ.
ಈ ಯೋಜನೆಯ ಪ್ರಮುಖ ಭಾಗವಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಉಡುತೊರೆಹಳ್ಳ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಸುಮಾರು 490 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆಯು ಈ ಭಾಗದ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಲ್ಲದೆ, ಸುಮಾರು 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ಸುಸ್ಥಿರ ನೀರಾವರಿ ಸೌಲಭ್ಯವನ್ನು ಒದಗಿಸಲಿದೆ. ಇದರಿಂದ ದಶಕಗಳಿಂದ ನೀರಿನ ಸಮಸ್ಯೆಯಲ್ಲಿದ್ದ ಹನೂರು ಭಾಗದ ರೈತರ ಬಾಳಿಗೆ ಆಸರೆಯಾಗುವ ನಿರೀಕ್ಷೆಯಿದೆ.
ಇನ್ನು ಉತ್ತರ ಕರ್ನಾಟಕದ ಭಾಗದಲ್ಲಿಯೂ ನೀರಾವರಿ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ ಹೊಸ ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಜಲಾಶಯವು 0.67 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಲಿದ್ದು, ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ.
ಒಟ್ಟಾರೆಯಾಗಿ ಕೃಷ್ಣಾ, ಕಾವೇರಿ, ಗೋದಾವರಿ ಸೇರಿದಂತೆ ರಾಜ್ಯದ ಪ್ರಮುಖ ನದಿ ಕಣಿವೆಗಳಲ್ಲಿ ಸುಮಾರು 8,045 ಕೋಟಿ ರೂಪಾಯಿಗಳ ಬೃಹತ್ ಮೊತ್ತದಲ್ಲಿ 75ಕ್ಕೂ ಹೆಚ್ಚು ನೀರಾವರಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡಲ್ಲಿ ರಾಜ್ಯದ ಕೃಷಿ ಭೂಮಿಗೆ ಶಾಶ್ವತ ನೀರಿನ ಸೌಲಭ್ಯ ದೊರೆಯಲಿದ್ದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
- 6 March 2026 11:48 AM IST
ರಾಜ್ಯದ ಪಶುಸಂಗೋಪನಾ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ: 100 ಹೊಸ ಆಸ್ಪತ್ರೆ, ಮೈಸೂರಲ್ಲಿ ಬೋಯರ್ ಮೇಕೆ ತಳಿ ಕೇಂದ್ರ ಸ್ಥಾಪನೆ
ರಾಜ್ಯದ ಪಶುಸಂಗೋಪನಾ ವಲಯವನ್ನು ಬಲಪಡಿಸಲು ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, 2026-27ನೇ ಸಾಲಿನಲ್ಲಿ ರೈತರು ಮತ್ತು ಪಶುಪಾಲಕರಿಗೆ ಪೂರಕವಾದ ಹಲವು ಹೊಸ ಯೋಜನೆಗಳನ್ನು ಘೋಷಿಸಿದೆ. ಮುಖ್ಯವಾಗಿ ರಾಜ್ಯಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ನಬಾರ್ಡ್ ಸಹಯೋಗದೊಂದಿಗೆ ಒಟ್ಟು 100 ಹೊಸ ಪಶು ವೈದ್ಯಕೀಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಪಶು ಆರೋಗ್ಯ ಸೇವೆಯನ್ನು ಹೈಟೆಕ್ ಮಾಡುವ ನಿಟ್ಟಿನಲ್ಲಿ 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜ್ಯದ 15 ತಾಲೂಕು ಪಶು ಆಸ್ಪತ್ರೆಗಳನ್ನು 'ಪಾಲಿಕ್ಲಿನಿಕ್'ಗಳಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿಯೇ ಜಾನುವಾರುಗಳಿಗೆ ಸುಧಾರಿತ ಚಿಕಿತ್ಸೆ ಲಭ್ಯವಾಗಲಿದೆ. ಇನ್ನು ಮೇಕೆ ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ, ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಅತ್ಯಾಧುನಿಕ 'ಬೋಯರ್ ಮೇಕೆ ತಳಿ ಸಂವರ್ಧನಾ ಕೇಂದ್ರ'ವನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಮುಕ್ತಿ ನೀಡಲು ಸರ್ಕಾರ ಈ ಬಾರಿ ವಿಶೇಷ ಗಮನಹರಿಸಿದೆ. 'ವರ್ಷಕ್ಕೊಂದು ಕರು' ಎಂಬ ಆಕರ್ಷಕ ಘೋಷವಾಕ್ಯದೊಂದಿಗೆ ರಾಜ್ಯದ 1,000 ಗ್ರಾಮ ಪಂಚಾಯಿತಿಗಳಲ್ಲಿ 'ಫಲಧಾರೆ' ಎಂಬ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. 5 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿ ಹಸುಗಳಲ್ಲಿ ಕಂಡುಬರುವ ಬಂಜೆತನ ನಿವಾರಣೆ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗುವುದು.
- 6 March 2026 11:44 AM IST
ಮೀನುಗಾರಿಕೆ ವಲಯಕ್ಕೆ ಬಂಪರ್ ಕೊಡುಗೆ: ಸಲಕರಣೆ ಕಿಟ್ ದರ ದುಪ್ಪಟ್ಟು, ಮಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ
ರಾಜ್ಯದ ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ತಾಂತ್ರಿಕ ಪ್ರಗತಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಪ್ರಕಟಿಸಿದೆ. ಮೀನುಗಾರರಿಗೆ ಉಚಿತವಾಗಿ ನೀಡಲಾಗುವ ಮೀನುಗಾರಿಕೆ ಸಲಕರಣೆ ಕಿಟ್‌ಗಳ ದರವನ್ನು ಈ ಹಿಂದೆ ಇದ್ದ 10,000 ರೂಪಾಯಿಗಳಿಂದ 20,000 ರೂಪಾಯಿಗಳಿಗೆ ಹೆಚ್ಚಿದೆ. ಇದರೊಂದಿಗೆ, ಜೈವಿಕ ತಂತ್ರಜ್ಞಾನ ಆಧಾರಿತ ಉದ್ಯಮಗಳು, ನವೀನ ತಂತ್ರಜ್ಞಾನದ ಸಂಶೋಧನೆ ಹಾಗೂ ಸಮುದ್ರ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಸುಸಜ್ಜಿತವಾದ 'ಸೆಂಟರ್ ಆಫ್ ಎಕ್ಸಲೆನ್ಸ್' (ಉತ್ಕೃಷ್ಟತಾ ಕೇಂದ್ರ) ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರಿಗೆ ತಾಜಾ ಮೀನು ಮತ್ತು ಮೀನಿನ ಖಾದ್ಯಗಳನ್ನು ಲಭ್ಯವಾಗುವಂತೆ ಮಾಡಲು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಗರಗಳಲ್ಲಿ ಹೊಸದಾಗಿ 'ಮತ್ಸ್ಯದರ್ಶಿನಿ'ಗಳನ್ನು ಪ್ರಾರಂಭಿಸಲಾಗುತ್ತಿದೆ. ಅಲ್ಲದೆ, ಮೀನುಗಾರರ ಮಾರುಕಟ್ಟೆ ಸೌಲಭ್ಯವನ್ನು ಬಲಪಡಿಸಲು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸುಸಜ್ಜಿತವಾದ ಹೊಸ ಮೀನು ಮಾರುಕಟ್ಟೆಗಳನ್ನು ನಿರ್ಮಿಸಲು ಸರ್ಕಾರ ಯೋಜಿಸಿದೆ.

