Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌
x
ಸಿಎಂ ಸಿದ್ಧರಾಮಯ್ಯ

Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌

ಸಿಎಂ ಸಿದ್ದರಾಮಯ್ಯ ಅವರಿಂದ ದಾಖಲೆಯ 17ನೇ ಕರ್ನಾಟಕ ರಾಜ್ಯ ಬಜೆಟ್ 2026-27 ಮಂಡನೆ. ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿರುವ ಈ ಆಯವ್ಯಯದ ಪ್ರಮುಖ ಅಂಶಗಳು ಮತ್ತು ನೇರ ಅಪ್‌ಡೇಟ್ಸ್‌ ಇಲ್ಲಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯ ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿದೆ.

ದಾಖಲೆಯ ಸರದಾರನ ಆಯವ್ಯಯ

ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಇನ್ನು ರಾಷ್ಟ್ರಮಟ್ಟದಲ್ಲಿ ಗಮನಿಸುವುದಾದರೆ, ದೇಶದಲ್ಲೇ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅನುಭವದ ಭಂಡಾರವೇ ಆಗಿರುವ ಸಿಎಂ, ಈ ಬಾರಿ ರಾಜ್ಯದ ಜನರ ನಿರೀಕ್ಷೆಗಳನ್ನು ಹೇಗೆ ಸರಿದೂಗಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Live Updates

  • 6 March 2026 3:08 PM IST

    ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್:ಬಸವರಾಜ ಬೊಮ್ಮಾಯಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಆಗಿದ್ದು, ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ, ಇದರಿಂದ ರಾಜ್ಯದ ಹಣಕಾಸಿನ ಮೇಲೆ ದೂರಗಾಮಿ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

    ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಕಳಪೆ ಬಜೆಟ್, ಅಭಿವೃದ್ದಿ ಶೂನ್ಯ ಪ್ರಗತಿ ರಹಿತವಾದ ಅತಿ ಹೆಚ್ಚು ಸಾಲ ಮಾಡಿರುವ ಬಜೆಟ್, 1.32 ಲಕ್ಷ ಕೋಟಿ ಸಾಲ ಮಾಡಿ ಸುಮಾರು 25 ಸಾವಿರ ಕೋಟಿ ರೂ. ಹೊಸ ತೆರಿಗೆ ಹಾಕಿ 32 ಸಾವಿರ ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಿದ್ದಾರೆ. ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ, ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್. ಇದರಿಂದ ದೂರಗಾಮಿ ರಾಜದ ಹಣಕಾಸಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದೆ. ರಾಜ್ಯವನ್ನು ಹತ್ತರಿಂದ 15 ವರ್ಷ ಹಿಂದೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನಿರಾಸೆಯಾಗಿದೆ 17 ಬಾರಿ ಬಜೆಟ್ ಮಂಡನೆ ಮಾಡಿರುವ ಸಿಎಂರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.

    ಉದಾಹರಣೆಗೆ ನೀರಾವರಿಗೆ ಕೇವಲ 22 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 25 ಸಾವಿರ ಕೋಟಿ ರೂ. ಮೀಸಲಿಡಬೇಕಿತ್ತು. ಆದರೆ, ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಆರೋಗ್ಯ, ಗ್ರಾಮೀಣಾಭಿವೃದ್ಧಿಗೆ ಅನುದಾನ ಕಡಿಮೆ ಇದೆ. ಇವರು ಯಾವ ರೀತಿಯ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. 

  • 6 March 2026 3:08 PM IST

    ರಾಜ್ಯದ ಆರ್ಥಿಕತೆ ದಿಕ್ಕಾಪಾಲ: ಸಿದ್ದರಾಮಯ್ಯ 17ನೇ ಬಜೆಟ್ ಕೇವಲ ಸಾಲದ ಗ್ಯಾರಂಟಿ - ವಿಪಕ್ಷಗಳ ತೀವ್ರ ವಾಗ್ದಾಳಿ

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ರಾಜ್ಯದ 17ನೇ ಬಜೆಟ್‌ಗೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಕುಮಾರಸ್ವಾಮಿ ವ್ಯಂಗ್ಯವಾಡಿದ್ದು, ಸ್ಲೋಗನ್ ರಾಮಯ್ಯನವರ ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಸಿದ್ದರಾಮಯ್ಯನವರು ಎಂದು ಅವರು ಆರೋಪಿಸಿದ್ದಾರೆ. 

    ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ಒಂದು ಮಾತು ಸ್ಪಷ್ಟ; ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ ಕರ್ನಾಟಕ. ಮುಂದಿನ ದಿನಗಳು ಇನ್ನೂ ದುರ್ಬರವಾಗಿವೆ. ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ.

    ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಏಕೆಂದರೆ, ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ. 16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 3.61%ರಿಂದ 4.7%ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ 11,000 ಕೋಟಿಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ.

    ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಮುಖ್ಯಮಂತ್ರಿಗಳು.

    ರಾಜ್ಯದ್ದು ಈಗ 4.48 ಲಕ್ಷ ರೂ. ಕೋಟಿ ಗಾತ್ರದ ಬಜೆಟ್. ರಾಜ್ಯದ ಈಗಿನ ಒಟ್ಟು ಸಾಲ 8.24 ಲಕ್ಷ ರೂ.ಕೋಟಿ! ಈ ಸಾಲ 1.16 ಲಕ್ಷ ರೂ. ಕೋಟಿಯಿಂದ 1.32 ಲಕ್ಷ ರೂ.ಕೋಟಿಗೆ ಏರಿದೆ!! ಮುಂದಿನ ವರ್ಷಕ್ಕೆ 9 ಲಕ್ಷ ರೂ. ಕೋಟಿ ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ.

    ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ ಎಂದು ಆರೋಪಿಸಿದ್ದಾರೆ. 

  • 6 March 2026 1:34 PM IST

    ವಸತಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ: ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆ ಪೂರ್ಣಗೊಳಿಸುವ ಗುರಿ

    ರಾಜ್ಯದ ಪ್ರತಿಯೊಬ್ಬರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ವಸತಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 3 ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ. ವಿಶೇಷವಾಗಿ, ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡದೆಯೇ ಸುಮಾರು 4.90 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿತ್ತು. ಇದರಿಂದಾಗಿ ಅರ್ಧಕ್ಕೆ ನಿಂತಿರುವ ಅಥವಾ ಪ್ರಾರಂಭವಾಗದ ಈ ಮನೆಗಳ ನಿರ್ಮಾಣಕ್ಕೆ ಪ್ರಸಕ್ತ ಸರ್ಕಾರ ಚಾಲನೆ ನೀಡಲು ಮುಂದಾಗಿದೆ. ಈ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ಒದಗಿಸುವುದು ಮಾತ್ರವಲ್ಲದೆ, ಹಂತ ಹಂತವಾಗಿ ಇವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಈ ಬಜೆಟ್‌ನಲ್ಲಿ ತಿಳಿಸಲಾಗಿದೆ.

  • 6 March 2026 1:23 PM IST

    ಬಜೆಟ್‌ನಲ್ಲಿ ಯುವನಿಧಿಗೆ ಅನುದಾನ ನೀಡದ ಸರ್ಕಾರ

    ಸಿಎಂ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನ್ನ ಭಾಗ್ಯ ಯೋಜನೆಗೆ 6,200 ಕೋಟಿ ರೂ. ಗೃಹ ಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ, ಶಕ್ತಿ ಯೋಜನೆಗೆ 5,300 ಕೋಟಿ ರೂ. ಹಣ ಮೀಸಲು ನೀಡಿದ್ದಾರೆ. ಆದರೆ ಯುವ ನಿಧಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. 

  • 6 March 2026 1:19 PM IST

    ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಹೊಸ ಯೋಜನೆ: ಹೊಸ ಹಾಸ್ಟೆಲ್‌ ಹಾಗೂ ಉದ್ಯೋಗಕ್ಕೆ ಆರ್ಥಿಕ ನೆರವು ಘೋಷಣೆ

    ರಾಜ್ಯದ ಪರಿಶಿಷ್ಟ ಪಂಗಡಗಳ (ST) ಸಮುದಾಯದ ಸಮಗ್ರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಸರ್ಕಾರವು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 150 ಸಂಖ್ಯಾಬಲ ಹೊಂದಿರುವ 50 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ರಾಜ್ಯದ ವಿವಿಧೆಡೆ ಆರಂಭಿಸಲು ನಿರ್ಧರಿಸಲಾಗಿದೆ. ಇನ್ನು ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆರೈಕೆಗಾಗಿ 119 ಮಹಿಳಾ ಕೇರ್‌ಟೇಕರ್ ಹುದ್ದೆಗಳ ಮಂಜೂರಾತಿಯನ್ನು ನೀಡಲಾಗಿದೆ.

    ನಿರುದ್ಯೋಗಿ ಯುವಕ-ಯುವತಿಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರವು ವಿಶೇಷ ಆರ್ಥಿಕ ನೆರವನ್ನು ಘೋಷಿಸಿದೆ. ಫಾಸ್ಟ್ ಫುಡ್ ಟ್ರಕ್ ಟ್ರೈಲರ್ ಅಥವಾ ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಆರಂಭಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ 4 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲಾಗುವುದು. 

    ಇವೆಲ್ಲದರ ಜೊತೆಗೆ, ಪರಿಶಿಷ್ಟ ಪಂಗಡದ ಸಮುದಾಯದವರ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ಅವರಿಗೆ ನ್ಯಾಯ ಒದಗಿಸಲು ರಾಜ್ಯದಲ್ಲಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಆಯೋಗವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಯೋಜನೆಗಳು ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾಗಲಿವೆ ಎಂದು ಆಶಿಸಲಾಗಿದೆ.

  • 6 March 2026 1:14 PM IST

    ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುದೀಕರಣಕ್ಕೆ ಸಿಗುವ ಧನಸಹಾಯ ಈಗ1.5 ರೂ ಲಕ್ಷಕ್ಕೆ ಏರಿಕೆ!

    ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಪ್ರತಿ ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಸರ್ಕಾರ ಪಾವತಿಸುವ ಮೊತ್ತವನ್ನು 75,000 ರೂಪಾಯಿಗಳಿಂದ 1,50,000 ರೂಪಾಯಿಗಳಿಗೆ ದುಪ್ಪಟ್ಟುಗೊಳಿಸಲಾಗಿದೆ. ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿರುವ ಸಿ.ಎಂ, ಈ ನಾಲ್ಕೂ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2,500 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಶೋಷಿತ ವರ್ಗಗಳ ಸಮಗ್ರ ಏಳಿಗೆಗೆ ಬಜೆಟ್‌ನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

  • 6 March 2026 1:13 PM IST

    ಕರ್ನಾಟಕ ಬಜೆಟ್ 2026-27: ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಬಂಪರ್ ಕೊಡುಗೆ ಘೋಷಿಸಿದ ಸಿಎಂ ಸಿದ್ದರಾಮಯ್ಯ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ರಾಜ್ಯದ ವಸತಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದ್ದು, ಒಟ್ಟು 660 ಕೋಟಿ ರೂಪಾಯಿ ವೆಚ್ಚದಲ್ಲಿ 30 ಹೊಸ ಕ್ರೈಸ್ (KREIS) ವಸತಿ ಶಾಲೆಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 20, ಪರಿಶಿಷ್ಟ ಪಂಗಡದ 5 ಮತ್ತು ಹಿಂದುಳಿದ ವರ್ಗಗಳ 5 ಶಾಲೆಗಳು ಒಳಗೊಂಡಿವೆ. ಇನ್ನು ಸಮಾಜದ ಆರ್ಥಿಕ ಪ್ರಗತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಪ್ರತ್ಯೇಕ 'ಬೌದ್ಧ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಇದರೊಂದಿಗೆ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆಯಾಗಿ 1,500 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮೀಸಲಿಡಲಾಗಿದೆ.

  • 6 March 2026 12:48 PM IST

    ಕಾರವಾರ ಹಾಗೂ ಯಾದಗಿರಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ

    ಕರಾವಳಿ ಜನರ ಬಹು ದಿನದ ಬೇಡಿಕೆಯಾದ ಕಾರವಾರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಿದ್ದಾರೆ. ಇದರ ಜತೆಗೆ ಯಾದಗಿರಿಗೂ ಬಜೆಟ್‌ನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಾಗಿದೆ.  

  • 6 March 2026 12:38 PM IST

    ವಿಶ್ವವಿದ್ಯಾನಿಲಯ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಚುನಾವಣೆಗೆ ಬಜೆಟ್‌ನಲ್ಲಿ ಅಸ್ತು

    ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧಾರಿಸಿದ್ದು ಈ ಕುರಿತು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

     

  • 6 March 2026 12:32 PM IST

    ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌

    ರೇಷ್ಮೆನಗರಿ ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರಿನ ತಾಂಡವಪುರ ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಪ್ರಮುಖ 15 ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ, ಡಿಜಿಟಲ್ ವಹಿವಾಟು, ಇ-ಹರಾಜು ಮತ್ತು ಇ-ಪಾವತಿ ವ್ಯವಸ್ಥೆ ಆರಂಭಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿಗೆ ನೀಡುತ್ತಿರುವ 10 ರೂ. ಸಾಗಾಣಿಕಾ ವೆಚ್ಚವನ್ನು 20 ರೂ.ಗಳಿಗೆ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

Read More
Next Story