
Parliament Session 2026 Live| ಮಹಿಳಾ ಮೀಸಲಾತಿ ವಿರೋಧಿಸಿದ್ರೆ ದೀರ್ಘಕಾಲ ಬೆಲೆ ತೆರಬೇಕಾಗುತ್ತದೆ- ಮೋದಿ ಎಚ್ಚರಿಕೆ
ಸಂಸತ್ತಿನ ವಿಶೇಷ ಅಧಿವೇಶನ ಇಂದಿನಿಂದ ಆರಂಭ! ಮಧ್ಯಾಹ್ನ 3:30ಕ್ಕೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾತನಾಡಲಿದ್ದಾರೆ.
ದೇಶದ ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇತಿಹಾಸದಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಏಪ್ರಿಲ್ 16 ರಿಂದ 18 ರವರೆಗೆ ನಡೆಯಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ 'ನಾರಿ ಶಕ್ತಿ ವಂದನ್ ಅಧಿನಿಯಮ' ಅನುಷ್ಠಾನಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದ್ದು, ಒಟ್ಟು 850 ಸ್ಥಾನಗಳ ಪೈಕಿ 273 ಸ್ಥಾನಗಳು ಮಹಿಳೆಯರಿಗಾಗಿ ಮೀಸಲಿಡಲಾಗುವುದು. 2021ರ ಜನಗಣತಿಯ ವಿಳಂಬದ ಹಿನ್ನೆಲೆಯಲ್ಲಿ, 2011ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಸರ್ಕಾರ ನಿರ್ಧರಿಸಿದೆ.
Live Updates
- 16 April 2026 3:19 PM IST
“ದೇಶಕ್ಕೆ ಹೊಸ ದಿಕ್ಕು ನೀಡಲಿದ್ದೇವೆ”: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ
ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಸಂಸತ್ತಿನ ಇತಿಹಾಸದಲ್ಲಿ ಈ ಕ್ಷಣ ಅತ್ಯಂತ ವಿಶಿಷ್ಟವಾದುದಾಗಿದೆ. ನಾವು ದೇಶಕ್ಕೆ ಹೊಸ ದಿಕ್ಕನ್ನು ನೀಡಲಿದ್ದೇವೆ," ಎಂದು ಹೆಮ್ಮೆಯಿಂದ ತಿಳಿಸಿದರು. ಈ ಮಹತ್ವದ ಸಂದರ್ಭವು ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
#WATCH | Speaks in Lok Sabha on women's reservation and delimitation, Prime Minister Narendra Modi says, "The need was that when this idea was first conceived 25-30 years ago, and the need was felt, we should have implemented it, and today we have brought it to a mature stage.… pic.twitter.com/0YleyXk1fB
— ANI (@ANI) April 16, 2026 - 16 April 2026 2:30 PM IST
ಮಹಿಳಾ ಮೀಸಲಾತಿ ಹೆಸರಲ್ಲಿ ಓಟ್ ಬ್ಯಾಂಕ್ ರಾಜಕೀಯ: ಸಂಸತ್‌ನಲ್ಲಿ ಅಖಿಲೇಶ್ ಯಾದವ್ ಕಿಡಿ
ಸಂಸತ್ತಿನಲ್ಲಿ ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಮಸೂದೆಗಳ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿಯ ತಂತ್ರಗಳು ಬಯಲಾಗಿವೆ: ಈ ಮಸೂದೆಗಳನ್ನು ತರುತ್ತಿರುವ ಅಸಲಿ ಉದ್ದೇಶವೆಂದರೆ ಬಿಜೆಪಿಯ ರಾಜಕೀಯ ತಂತ್ರಗಳು ಇತರ ವಿಷಯಗಳಲ್ಲಿ ಸಂಪೂರ್ಣವಾಗಿ ಬಯಲಾಗಿವೆ. ಎಸ್‌ಐಆರ್ (SIR) ವಿಷಯದಲ್ಲೂ ಇದು ಸಾಬೀತಾಗಿದೆ. ಬಿಜೆಪಿಯ ಏಕೈಕ ಅಜೆಂಡಾ ಎಂದರೆ ಮತಗಳು ಮತ್ತು ಅದನ್ನು ಹೇಗೆ ಪ್ರಭಾವಿಸುವುದು ಎಂಬುದು ಮಾತ್ರ.
ಕೋಟಿ ಒಳಗೆ ಕೋಟಾ (Quota within Quota) ಭೀತಿ: ನಾವು ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ ಬಿಜೆಪಿಯ ಪಿತೂರಿಗಳನ್ನು ನಾವು ವಿರೋಧಿಸುತ್ತೇವೆ. ಜಾತಿ ಗಣತಿಯ ವರದಿ ಪ್ರಕಟವಾಗುವವರೆಗೆ ಇವರು ಯಾಕೆ ಕಾಯುತ್ತಿಲ್ಲ? ಏಕೆಂದರೆ ಜಾತಿ ಗಣತಿ ವರದಿ ಬಂದರೆ, ಓಬಿಸಿ (OBC) ಮಹಿಳೆಯರಿಗೆ ಮೀಸಲಾತಿಯೊಳಗೆ ಪ್ರತ್ಯೇಕ ಕೋಟಾ ನೀಡಬೇಕಾಗುತ್ತದೆ. ಇದನ್ನು ತಪ್ಪಿಸಲೆಂದೇ ಸರ್ಕಾರ ಈ ಹಾದಿ ಹಿಡಿದಿದೆ ಎಂದು ಅಖಿಲೇಶ್ ಆರೋಪಿಸಿದರು.
ಕ್ಷೇತ್ರ ಮರುವಿಂಗಡಣೆ ಎಂಬ ಸಂಚು: ಸರ್ಕಾರ ಪ್ರಸ್ತಾಪಿಸುತ್ತಿರುವ ಕ್ಷೇತ್ರ ಮರುವಿಂಗಡಣೆ ಕೇವಲ ಬಿಜೆಪಿಗೆ ಪೂರಕವಾಗುವಂತೆ ರಾಜಕೀಯ ನಕ್ಷೆಯನ್ನು ಬದಲಿಸುವ ತಂತ್ರವಾಗಿದೆ. ಅಸ್ಸಾಂನಲ್ಲಿ ಇದು ಈಗಾಗಲೇ ನಡೆದಿದೆ. ಈಗ ರಾಷ್ಟ್ರಮಟ್ಟದಲ್ಲಿ ಅದನ್ನು ಮಾಡಲು ಹೊರಟಿದ್ದಾರೆ.
ಯುಪಿ ವಿಧಾನಸಭೆ ಸ್ಥಾನಗಳ ಹೆಚ್ಚಳದ ಬಗ್ಗೆ ಸಂಶಯ: ಕ್ಷೇತ್ರ ಮರುವಿಂಗಡಣೆಯ ಮೂಲಕ ಉತ್ತರ ಪ್ರದೇಶ ವಿಧಾನಸಭೆಯ ಸ್ಥಾನಗಳ ಸಂಖ್ಯೆಯನ್ನು 500 ರಿಂದ 600 ಕ್ಕೆ ಏರಿಸುವ ಸಾಧ್ಯತೆಯಿದೆ ಎಂಬ ಅನುಮಾನ ನಮಗಿದೆ. ಈ ಸ್ಥಾನಗಳ ಹೆಚ್ಚಳದ ಹಿಂದೆ ಬಿಜೆಪಿ ಯಾವ ರೀತಿಯ ಪಿತೂರಿ ನಡೆಸಿದೆ ಎಂಬ ಬಗ್ಗೆ ನಮಗೆ ಭಾರೀ ಸಂಶಯವಿದೆ ಎಂದು ಅವರು ಹೇಳಿದರು.
- 16 April 2026 1:54 PM IST
ದಕ್ಷಿಣ ಭಾರತದ ರಾಜ್ಯಗಳ ಹಾದಿ ತಪ್ಪಿಸಲು ಪ್ರತಿಪಕ್ಷಗಳ ಸಂಚು
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸಿದ ನಂತರ ಪ್ರತಿಪಕ್ಷಗಳು ವ್ಯಕ್ತಪಡಿಸುತ್ತಿರುವ ಆಕ್ಷೇಪಣೆಗಳ ವಿರುದ್ಧ ಕಿಡಿಕಾರಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, "ಪ್ರತಿಪಕ್ಷಗಳು ದಕ್ಷಿಣ ಭಾರತದ ರಾಜ್ಯಗಳನ್ನು ದಿಕ್ಕು ತಪ್ಪಿಸಲು ಸುಳ್ಳು ಅಭಿಯಾನವನ್ನು ನಡೆಸುತ್ತಿವೆ" ಎಂದು ಆರೋಪಿಸಿದ್ದಾರೆ.
- 16 April 2026 1:50 PM IST
ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು 'ಕ್ರಾಂತಿಕಾರಿ' ಎಂದು ಬಣ್ಣಿಸಿದ ನಿತಿನ್ ಗಡ್ಕರಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಶ್ಲಾಘಿಸಿದ್ದು, ಇದು ಮಹಿಳೆಯರ ಪಾಲಿಗೆ ಒಂದು "ಕ್ರಾಂತಿಕಾರಿ ಮಸೂದೆ" ಎಂದು ಕರೆದಿದ್ದಾರೆ. ಮಹಿಳೆಯರ ಸಬಲೀಕರಣ ಮತ್ತು ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ಈ ಮಸೂದೆಯು ದೇಶದಲ್ಲಿ ಹೊಸ ಬದಲಾವಣೆಯನ್ನು ತರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- 16 April 2026 1:23 PM IST
ಕ್ಷೇತ್ರ ಮರುವಿಂಗಡಣೆ ಎಂಬುದು ಬಿಜೆಪಿಯ ರಾಜಕೀಯ ಅಸ್ತ್ರ: ಗೌರವ್ ಗೊಗೊಯ್ ಕಿಡಿ
ಲೋಕಸಭೆಯಲ್ಲಿ ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಮಹಿಳಾ ಮೀಸಲಾತಿ ಜಾರಿಯ ನೆಪದಲ್ಲಿ ಸರ್ಕಾರವು ಕ್ಷೇತ್ರ ಮರುವಿಂಗಡಣೆಯನ್ನು (Delimitation) ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ನೆಪದಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಜನರ ಮೇಲೆ ಹೇರಲು ಸರ್ಕಾರ ಪ್ರಯತ್ನಿಸುತ್ತಿದೆ. ಲೋಕಸಭೆಯ ಸದಸ್ಯ ಬಲವನ್ನು 850ಕ್ಕೆ ಏರಿಸುವ ಪ್ರಸ್ತಾವನೆ ಕೇಳಿಬರುತ್ತಿದೆ, ಆದರೆ ಈ ಅಂಕಿ-ಅಂಶ ಎಲ್ಲಿಂದ ಬಂತು? ಇದರ ಬಗ್ಗೆ ಯಾವುದಾದರೂ ಅಧಿಕೃತ ಅಧ್ಯಯನ ನಡೆದಿದೆಯೇ? ಅಥವಾ ಜನಗಣತಿ ನಡೆಸಲಾಗಿದೆಯೇ? ಯಾವುದೇ ಆಧಾರವಿಲ್ಲದೆ ಈ ನಿರ್ಧಾರಕ್ಕೆ ಬಂದಿರುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ.
ಕ್ಷೇತ್ರ ಮರುವಿಂಗಡಣೆ ಈಗ ರಾಜಕೀಯ ಆಯುಧ: ಜನರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮೂಲಕ ಆಡಳಿತವನ್ನು ಸುಧಾರಿಸುವುದು ಕ್ಷೇತ್ರ ಮರುವಿಂಗಡಣೆಯ ಮೂಲ ಉದ್ದೇಶವಾಗಿರಬೇಕು. ಆದರೆ, ಬಿಜೆಪಿ ಸರ್ಕಾರವು ಇದನ್ನು ಚುನಾವಣೆಯನ್ನು ಪ್ರಭಾವಿಸುವ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದಲ್ಲಿ ಇದನ್ನು ನಾವು ಈಗಾಗಲೇ ನೋಡಿದ್ದೇವೆ.
ಅಸ್ಸಾಂನ ಉದಾಹರಣೆ ಮತ್ತು ತಾರತಮ್ಯ: ಅಸ್ಸಾಂನಲ್ಲಿ ಕ್ಷೇತ್ರ ಮರುವಿಂಗಡಣೆಯ ನಂತರ, ಒಂದು ಲೋಕಸಭಾ ಕ್ಷೇತ್ರದಲ್ಲಿ 14 ಲಕ್ಷ ಮತದಾರರಿದ್ದರೆ, ಮತ್ತೊಂದು ಕ್ಷೇತ್ರದಲ್ಲಿ 26 ಲಕ್ಷ ಮತದಾರರಿದ್ದಾರೆ. ಇಂತಹ ವ್ಯತ್ಯಾಸದಿಂದ ಜನರಿಗೇನು ಲಾಭ? ಇದು ಕೇವಲ ಬಿಜೆಪಿಯ ರಾಜಕೀಯ ಹಿತಾಸಕ್ತಿಗಾಗಿ ಮಾಡಿರುವ ಕೆಲಸ. ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದಲ್ಲಿ ಮಾಡಿದಂತೆಯೇ ಈಗ ಮಹಿಳಾ ಮೀಸಲಾತಿಯನ್ನು ನೆಪ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ರಾಜಕೀಯ ಲಾಭ ಪಡೆಯಲು ಸರ್ಕಾರ ಸಂಚು ರೂಪಿಸಿದೆ.
ಸಂವಿಧಾನದ 81ನೇ ವಿಧಿಯ ಉಲ್ಲಂಘನೆ: ಸಂವಿಧಾನದ 81ನೇ ವಿಧಿಯ ಪ್ರಕಾರ, 2026ರ ನಂತರ ನಡೆಯುವ ಮೊದಲ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಮರುವಿಂಗಡಣೆ ನಡೆಯಬೇಕು. ಆದರೆ ಸರ್ಕಾರವು ಈ ವಿಧಿಯನ್ನು ದುರ್ಬಲಗೊಳಿಸಿ, ತಮಗೆ ಇಷ್ಟ ಬಂದ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಲು ಹೊರಟಿದೆ. ಇದು ಅಸಂವಿಧಾನಿಕ ಮಾತ್ರವಲ್ಲದೆ, ನಮ್ಮ ದೇಶದ ಒಕ್ಕೂಟ ವ್ಯವಸ್ಥೆಗೆ (Federal Structure) ವಿರುದ್ಧವಾಗಿದೆ ಎಂದು ಗೊಗೊಯ್ ಆಕ್ರೋಶ ವ್ಯಕ್ತಪಡಿಸಿದರು.
- 16 April 2026 12:46 PM IST
ಮಹಿಳಾ ಮೀಸಲಾತಿ ಜಾರಿ: ಸಂಸತ್ತಿನಲ್ಲಿ ಅರ್ಜುನ್ ರಾಮ್ ಮೇಘವಾಲ್ ವಿವರಣೆ
'ನಾರಿ ಶಕ್ತಿ ವಂದನ್ ಅಧಿನಿಯಮ' (ಮಹಿಳಾ ಮೀಸಲಾತಿ ಮಸೂದೆ) ಅಂಗೀಕಾರವಾದಾಗ, ಅದನ್ನು ತಕ್ಷಣವೇ ಜಾರಿಗೆ ತರಬೇಕೆಂದು ವಿರೋಧ ಪಕ್ಷದವರೇ ಒತ್ತಾಯಿಸಿದ್ದರು. ಆದರೆ, ಆಗಿನ ನಿಯಮದಂತೆ 2026ರ ನಂತರ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳು ಪ್ರಕಟವಾದ ಬಳಿಕವಷ್ಟೇ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಿತ್ತು. 2027ರ ಜನಗಣತಿಯ ಅಂತಿಮ ವರದಿ ಬರಲು 2028ರವರೆಗೆ ಕಾಯಬೇಕಾಗುತ್ತದೆ.
2011ರ ಜನಗಣತಿಯೇ ಆಧಾರ: ಈ ವಿಳಂಬವನ್ನು ತಪ್ಪಿಸಲು ಮತ್ತು ಮಹಿಳಾ ಮೀಸಲಾತಿಯನ್ನು ಆದಷ್ಟು ಬೇಗ ಜಾರಿಗೆ ತರಲು ಈ ಹೊಸ ಮಸೂದೆಗಳು ಪೂರಕವಾಗಿವೆ. 2027ರ ಜನಗಣತಿಯ ಅಂತಿಮ ಅಂಕಿಅಂಶಗಳಿಗಾಗಿ ಕಾಯುವ ಬದಲು, 2011ರ ಜನಗಣತಿಯ ಆಧಾರದ ಮೇಲೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಈ ಕಾನೂನುಗಳು ಅವಕಾಶ ಮಾಡಿಕೊಡಲಿವೆ ಎಂದು ಮೇಘವಾಲ್ ವಿವರಿಸಿದರು.
- 16 April 2026 12:35 PM IST
ನಾಳೆ ಸಂಜೆ 4ಕ್ಕೆ ಮಸೂದೆಗಳ ಮೇಲೆ ಮತದಾನ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಮೂರು ಮಸೂದೆಗಳ ಮೇಲೆ ನಾಳೆ (ಶುಕ್ರವಾರ) ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ಚರ್ಚೆಯ ವೇಳೆ ಸಂಸದರಿಗೆ ಮಾತನಾಡಲು ಪೂರಕವಾದ ಸಮಯವನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಗಳ ಮೇಲಿನ ಚರ್ಚೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.
- 16 April 2026 12:33 PM IST
ಮೂರು ಮಸೂದೆಗಳ ಮೇಲೆ 12 ಗಂಟೆಗಳ ಕಾಲ ಚರ್ಚೆ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಗಳ ಮೇಲೆ ಇಂದು ಮತ್ತು ನಾಳೆ ಸೇರಿ ಒಟ್ಟು 12 ಗಂಟೆಗಳ ಕಾಲ ಚರ್ಚೆ ನಡೆಸುವಂತೆ ಪ್ರಸ್ತಾವನೆ ಮಂಡಿಸಿದ್ದಾರೆ. ಒಂದು ವೇಳೆ ಸಭಾಧ್ಯಕ್ಷರು (ಸ್ಪೀಕರ್) ಬಯಸಿದಲ್ಲಿ, ಚರ್ಚೆಯ ಸಮಯವನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ರಿಜಿಜು ತಿಳಿಸಿದ್ದಾರೆ.
- 16 April 2026 12:31 PM IST
ವಿರೋಧ ಪಕ್ಷಗಳ ಆಕ್ಷೇಪಣೆ ತಿರಸ್ಕರಿಸಿದ ಓಂ ಬಿರ್ಲಾ; ಏಕಕಾಲದಲ್ಲಿ ಮೂರು ಮಸೂದೆಗಳ ಚರ್ಚೆಗೆ ಅನುಮತಿ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷಗಳು ಎತ್ತಿದ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದು, ಮೂರೂ ಮಸೂದೆಗಳ ಮೇಲೆ ಏಕಕಾಲದಲ್ಲಿ (concurrently) ಚರ್ಚೆ ನಡೆಸಲು ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಈ ಮಸೂದೆಗಳ ಮಂಡನೆಯನ್ನು ತೀವ್ರವಾಗಿ ವಿರೋಧಿಸಿದ್ದರೂ, ಸ್ಪೀಕರ್ ಅವರು ಚರ್ಚೆಯನ್ನು ಮುಂದುವರಿಸಲು ಹಸಿರು ನಿಶಾನೆ ತೋರಿಸಿದ್ದಾರೆ.
- 16 April 2026 12:05 PM IST
ಮೂರು ಮಸೂದೆಗಳ ಮಂಡನೆಗೆ ಕೆ.ಸಿ. ವೇಣುಗೋಪಾಲ್ ವಿರೋಧ
ಲೋಕಸಭೆಯಲ್ಲಿ ಮೂರು ಮಸೂದೆಗಳ ಮಂಡನೆಯನ್ನು ಕೆ.ಸಿ. ವೇಣುಗೋಪಾಲ್ ವಿರೋಧಿಸಿದ್ದಾರೆ. ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಲೋಕಸಭೆಯಲ್ಲಿ ಈ ಮೂರೂ ಮಸೂದೆಗಳ ಮಂಡನೆಯನ್ನು ವಿರೋಧಿಸಿದ್ದು, ಈ ಬಗ್ಗೆ ಪಕ್ಷದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.

