
ಸುಪ್ರೀಂ ಕೋರ್ಟ್
LIVE| ಪ್ರಶ್ನೆಪತ್ರ ಸೋರಿಕೆ ತಡೆ ಮಸೂದೆಗೆ 10 ಗಂಟೆ ಚರ್ಚೆಗೆ ಸರ್ಕಾರ ಸಿದ್ಧ: ಕಿರಣ್ ರಿಜಿಜು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಬಂಧಿತರ ಬಿಡುಗಡೆಗೆ ಬಿಹಾರ ಸರ್ಕಾರ ಆದೇಶಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಸ್ಥಗಿತಗೊಂಡಿದ್ದ ಸಂಸತ್ ಕಲಾಪದ ಬಳಿಕ, ಅಕ್ರಮ ತಡೆಗೆ ಸಂಬಂಧಿಸಿದ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026 ಕುರಿತು ಮಂಗಳವಾರ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ಮಸೂದೆ ಕುರಿತ ಚರ್ಚೆಗೆ ಆರು ಗಂಟೆಗಳ ಕಾಲಾವಕಾಶ ನಿಗದಿಪಡಿಸಿದ್ದು, ಅಗತ್ಯವಿದ್ದರೆ ಇನ್ನಷ್ಟು ಸಮಯ ನೀಡುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂ. ದವರೆಗೆ ದಂಡ ವಿಧಿಸುವ ಕಠಿಣ ನಿಯಮಗಳನ್ನು ಒಳಗೊಂಡಿರುವ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಹಾಗೂ ದೇಶಾದ್ಯಂತ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಈ ಮಸೂದೆಗೆ ವೇಗ ನೀಡಲಾಗಿದೆ.
ಪ್ರತಿಭಟನಾಕಾರರ ವಿರುದ್ಧ ಕೇಸ್
ಇದನ್ನರ ನಡುವೆ, ಬಿಹಾರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಜೊತೆಗೆ ಈ ಸಂಬಂಧ ಬಂಧಿತರಾಗಿರುವ ಎಲ್ಲರನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಜುಲೈ 25ರಂದು ನಡೆದ ಬಿಹಾರ ಬಂದ್ ವೇಳೆ ಒಟ್ಟು 694 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರಲ್ಲಿ 339 ಅಪ್ರಾಪ್ತರನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ 355 ಮಂದಿಯ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈಗ ಈ ಎಲ್ಲಾ ಎಫ್‌ಐಆರ್‌ಗಳು, ಕ್ರಿಮಿನಲ್ ದೂರುಗಳು ಹಾಗೂ ಶೋಕಾಸ್ ನೋಟಿಸ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆ ತಕ್ಷಣ ಆರಂಭವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಘೋಷಣೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಹಾಗೂ ಬಂಧಿತರನ್ನು ಬಿಡುಗಡೆ ಮಾಡುವಂತೆ ವಿದ್ಯಾರ್ಥಿ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ ಕೆಲವೇ ಗಂಟೆಗಳ ಬಳಿಕ ಹೊರಬಿದ್ದಿದೆ. ಬಿಹಾರ ಸರ್ಕಾರದ ಈ ಕ್ರಮವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.
Live Updates
- 28 July 2026 3:39 PM IST
ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮಸೂದೆಗೆ ಅಖಿಲೇಶ್ ಯಾದವ್ ಪ್ರಶ್ನೆ: ಎನ್‌ಟಿಎ ಕಾರ್ಯವೈಖರಿ ವಿರುದ್ಧ ವಾಗ್ದಾಳಿ
ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದ ಸಾರ್ವಜನಿಕ ಪರೀಕ್ಷೆಗಳು ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಸೂದೆ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಳಿಕವೇ ತರಲಾಗಿದೆ ಎಂದು ಹೇಳಿದ ಅವರು, ಸರ್ಕಾರ ಮೊದಲು ಪ್ರತಿಭಟನೆಗಳನ್ನು ಕಡೆಗಣಿಸಿತ್ತು. ಆದರೆ ವಿದ್ಯಾರ್ಥಿಗಳ ಹೋರಾಟದಿಂದಲೇ ಸರ್ಕಾರ ತಲೆಬಾಗುವಂತಾಯಿತು ಎಂದು ಆರೋಪಿಸಿದರು.
ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್, ಅವರ ರಾಜೀನಾಮೆಯ ಬಳಿಕ ಸರ್ಕಾರ ನಿರಾಳವಾಗಿರುವಂತೆ ಕಂಡಿತು. "ಪ್ರಧಾನಮಂತ್ರಿಯನ್ನು ಉಳಿಸಲು ಒಬ್ಬ 'ಪ್ರಧಾನ'ರ ರಾಜೀನಾಮೆ ಪಡೆಯಲಾಯಿತು" ಎಂದು ವ್ಯಂಗ್ಯವಾಡಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಪೂರ್ವಸಿದ್ಧತೆಯಿಲ್ಲದೆ ನಡೆದ ಅಪರೂಪದ ಹೋರಾಟವಾಗಿತ್ತು. ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಟನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದಲ್ಲದೆ, ತಾವೂ ಹೋರಾಟದಲ್ಲಿ ಸೇರಿದ್ದರು. ಏಕೆಂದರೆ ಇದು ದೇಶದ ಭವಿಷ್ಯಕ್ಕೆ ಸಂಬಂಧಿಸಿದ ಹೋರಾಟವಾಗಿತ್ತು ಎಂದು ಅವರು ಹೇಳಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ಅಖಿಲೇಶ್ ಯಾದವ್, "ದೇಣಿಗೆಗಳನ್ನು ಕಳವಾಗುವುದನ್ನು ತಡೆಯಲು ಸಾಧ್ಯವಾಗದವರು ಪ್ರಶ್ನೆಪತ್ರಿಕೆ ಸೋರಿಕೆಯನ್ನು ಹೇಗೆ ತಡೆಯುತ್ತಾರೆ?" ಎಂದು ಪ್ರಶ್ನಿಸಿದರು.
ಪರೀಕ್ಷಾ ವ್ಯವಸ್ಥೆಯನ್ನು ಹೊರಗುತ್ತಿಗೆ ನೀಡಿರುವುದನ್ನೂ ಅವರು ಟೀಕಿಸಿದರು. ಎನ್‌ಟಿಎ ದೇಶದ ಪ್ರಮುಖ ಪರೀಕ್ಷೆಗಳನ್ನು ನಡೆಸಲು ಸ್ಥಾಪನೆಯಾಗಿದ್ದರೂ, ಅದರ ಜವಾಬ್ದಾರಿಗಳನ್ನೇ ಹೊರಗುತ್ತಿಗೆ ನೀಡಿರುವುದು ಏಕೆ ಎಂದು ಪ್ರಶ್ನಿಸಿದ ಅವರು, "ಈ ರೀತಿಯ ಪ್ರಮುಖ ಪರೀಕ್ಷೆಗಳ ಜವಾಬ್ದಾರಿಯನ್ನು ಹೊರಗುತ್ತಿಗೆಗೆ ನೀಡಿದರೆ ಉತ್ತರದಾಯಿತ್ವ ಎಲ್ಲಿದೆ? ನಾಳೆ ಸರ್ಕಾರವನ್ನೇ ಹೊರಗುತ್ತಿಗೆಗೆ ನೀಡುವ ಪರಿಸ್ಥಿತಿ ಬರುತ್ತದೆಯೇ?" ಎಂದು ವ್ಯಂಗ್ಯವಾಡಿದರು.
ಇದೇ ವೇಳೆ, ಎನ್‌ಟಿಎಯಿಂದ ತೆಗೆದುಹಾಕಲಾದ 47 ಅಧಿಕಾರಿಗಳು ಯಾರು? ಪರೀಕ್ಷೆಗಳ ನಿರ್ವಹಣೆಯನ್ನು ಯಾರಿಗೆ ಹೊರಗುತ್ತಿಗೆ ನೀಡಲಾಗಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಅಖಿಲೇಶ್ ಯಾದವ್ ಆಗ್ರಹಿಸಿದರು.
- 28 July 2026 2:55 PM IST
ಪರೀಕ್ಷಾ ಮಸೂದೆ ಸರ್ಕಾರದ ವೈಫಲ್ಯದ ಸ್ಮಾರಕ; ಲೋಕಸಭೆಯಲ್ಲಿ ಗೌರವ್ ಗೊಗೊಯ್ ವಾಗ್ದಾಳಿ
ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಕೇಂದ್ರ ಸರ್ಕಾರ ಮಂಡಿಸಿರುವ ಸಾರ್ವಜನಿಕ ಪರೀಕ್ಷೆಗಳು ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತೀವ್ರ ಟೀಕೆ ವ್ಯಕ್ತಪಡಿಸಿದರು. ಈ ಮಸೂದೆ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದ್ದು, ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇದು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.
ವಿಪಕ್ಷದ ಪರವಾಗಿ ಚರ್ಚೆ ಆರಂಭಿಸಿದ ಗೊಗೊಯ್, ಮಸೂದೆಯನ್ನು ಓದಿದರೆ ಸರ್ಕಾರ ಶಿಕ್ಷಣ ಹಾಗೂ ಪರೀಕ್ಷಾ ಸುಧಾರಣೆ ಬಗ್ಗೆ ಗಂಭೀರವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೇವಲ ಮೇಲ್ನೋಟದ ಕ್ರಮವಾಗಿ ಈ ಮಸೂದೆ ತರಲಾಗಿದೆ ಎಂದು ಆರೋಪಿಸಿದರು.
2024ರ ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾದ 45 ಮಂದಿಯಲ್ಲಿ 44 ಮಂದಿ ಜಾಮೀನು ಪಡೆದಿದ್ದಾರೆ. ಪ್ರಮುಖ ಆರೋಪಿ ಸಂಜೀವ್ ಮುಖಿಯಾ 11 ತಿಂಗಳು ತಲೆಮರೆಸಿಕೊಂಡಿದ್ದು, ನಂತರ ಜಾಮೀನು ಪಡೆದಿದ್ದಾರೆ. ಇದುವೇ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
2024ರ ಕಾನೂನು ಅಷ್ಟೊಂದು ಪರಿಣಾಮಕಾರಿಯಾಗಿದ್ದರೆ ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತೆ ಹೇಗೆ ನಡೆದವು ಎಂದು ಪ್ರಶ್ನಿಸಿದ ಅವರು, "ಈ ಮಸೂದೆ ಸರ್ಕಾರದ ವೈಫಲ್ಯದ ಸ್ಮಾರಕ" ಎಂದು ವಾಗ್ದಾಳಿ ನಡೆಸಿದರು.
ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಉಲ್ಲೇಖಿಸಿದ ಗೊಗೊಯ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಯಾವುದೇ ಸೋರಿಕೆ ನಡೆದಿಲ್ಲ ಎಂದು ಅವರು ಹೇಳಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಪ್ರತಿಭಟನೆಗಳ ಬಳಿಕ ಸಚಿವ ಸ್ಥಾನದಿಂದ ತೆರವಾಗಿದ್ದ ಅವರನ್ನು ಸಂಸತ್ತಿನಲ್ಲಿ ಸ್ವಾಗತಿಸಿದ ರೀತಿಯನ್ನೂ ಅವರು ಟೀಕಿಸಿದರು.
ಪರೀಕ್ಷಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಜಾಲವನ್ನು ನಿರ್ಮೂಲನೆ ಮಾಡುವ ಯಾವುದೇ ಕ್ರಮ ಈ ಮಸೂದೆಯಲ್ಲಿ ಇಲ್ಲ. ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರ ಬೇರೆ ವಿಷಯಗಳತ್ತ ಗಮನ ಹರಿಸುತ್ತಿದೆ ಎಂದು ಅವರು ಆರೋಪಿಸಿದರು.
ಎರಡು ವರ್ಷಗಳ ಹಿಂದೆ ರಾಧಾಕೃಷ್ಣನ್ ಉನ್ನತ ಮಟ್ಟದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಸರ್ಕಾರ ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದ ಗೊಗೊಯ್, ಅವು ಜಾರಿಯಾಗಿದ್ದರೆ ಪ್ರಶ್ನೆಪತ್ರಿಕೆ ಸೋರಿಕೆಗಳು ಮುಂದುವರಿಯುತ್ತಿರಲಿಲ್ಲ ಎಂದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕುರಿತೂ ಪ್ರಶ್ನೆ ಎತ್ತಿದ ಅವರು, 47 ಅಧಿಕಾರಿಗಳನ್ನು ವಜಾಗೊಳಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಎನ್‌ಟಿಎಯ ಅನುಮೋದಿತ ಸಿಬ್ಬಂದಿ ಸಂಖ್ಯೆ ಕೇವಲ 34 ಆಗಿದ್ದರೆ, ಈ 47 ಮಂದಿ ಎಲ್ಲಿಂದ ಬಂದರು ಎಂದು ಪ್ರಶ್ನಿಸಿದರು.
ಎನ್‌ಟಿಎ ಅಧ್ಯಕ್ಷರ ನೇಮಕಾತಿಯ ಮೇಲೂ ಪ್ರಶ್ನೆ ಎತ್ತಿದ ಗೊಗೊಯ್, ಶಿಕ್ಷಣ ಇಲಾಖೆಯ ನೇಮಕಾತಿ ಮತ್ತು ಔಟ್‌ಸೋರ್ಸಿಂಗ್ ಪ್ರಕ್ರಿಯೆಯಲ್ಲಿ ಗುಣಮಟ್ಟಕ್ಕಿಂತ ನಿರ್ದಿಷ್ಟ ಸಂಘಟನೆಯ ಪ್ರಭಾವ ಹೆಚ್ಚಾಗಿದೆ ಎಂದು ಆರೋಪಿಸಿದರು.
- 28 July 2026 2:38 PM IST
ಪ್ರಶ್ನೆಪತ್ರ ಸೋರಿಕೆ ತಡೆ ಮಸೂದೆ ಚರ್ಚೆಗೆ ಚಾಲನೆ: ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆಗೆ ಐತಿಹಾಸಿಕ ಹೆಜ್ಜೆ ಎಂದ ಜಿತೇಂದ್ರ ಸಿಂಗ್
ಪ್ರಶ್ನೆಪತ್ರ ಸೋರಿಕೆ ಹಾಗೂ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಲೋಕಸಭೆಯಲ್ಲಿ ಚಾಲನೆ ನೀಡಿದರು. ಈ ಮಸೂದೆ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಹಾಗೂ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಕ್ರಮ ಎಂದು ಅವರು ಬಣ್ಣಿಸಿದರು.
ಮಸೂದೆಯನ್ನು ಮಂಡಿಸಿದ ಜಿತೇಂದ್ರ ಸಿಂಗ್, "ಈ ದೇಶದ ಯುವಕರ ಭವಿಷ್ಯವನ್ನು ರಕ್ಷಿಸುವುದು ಹಾಗೂ ಮಕ್ಕಳ ಭವಿಷ್ಯದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈ ಮಸೂದೆ ಪುನರುಚ್ಚರಿಸುತ್ತದೆ. ಇದು ಭಾರತೀಯ ಸಂಸತ್ತಿನ ಇತಿಹಾಸದಲ್ಲೇ ಒಂದು ಮಹತ್ವದ ಮಸೂದೆ" ಎಂದು ಹೇಳಿದರು.
ಪ್ರಶ್ನೆಪತ್ರ ಸೋರಿಕೆ ಹೊಸ ಸಮಸ್ಯೆಯಲ್ಲ ಎಂದು ಹೇಳಿದ ಅವರು, ವಿವಿಧ ರಾಜ್ಯಗಳಲ್ಲಿ ಈ ಹಿಂದೆ ನಡೆದ ಹಲವು ಘಟನೆಗಳನ್ನು ಉಲ್ಲೇಖಿಸಿದರು. ಈ ಹಿನ್ನೆಲೆ ಸಾರ್ವಜನಿಕ ಪರೀಕ್ಷೆಗಳಿಗಾಗಿ ಪ್ರತ್ಯೇಕ ಕಾನೂನು ಅಗತ್ಯವೆಂಬ ಅರಿವು ಕೇಂದ್ರ ಸರ್ಕಾರಕ್ಕೆ ಮೂಡಿದ್ದು, ಅದಕ್ಕಾಗಿ ಈ ಮಸೂದೆಯನ್ನು ತರಲಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಥಾಪನೆ ಕುರಿತೂ ಮಾತನಾಡಿದ ಜಿತೇಂದ್ರ ಸಿಂಗ್, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎನ್‌ಟಿಎ ಸ್ಥಾಪಿಸಿತು ಎಂದು ಹೇಳಿದರು.
ಇತ್ತೀಚೆಗೆ ನಡೆದ ಪ್ರಶ್ನೆಪತ್ರ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, 2024ರ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಜವಾಬ್ದಾರಿಯುತ ಸರ್ಕಾರವಾಗಿ ಇತ್ತೀಚಿನ ಘಟನೆಗಳಿಂದ ಪಾಠ ಕಲಿತು ಈ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದರು.
- 28 July 2026 2:36 PM IST
ಪ್ರಶ್ನೆಪತ್ರ ಸೋರಿಕೆ ತಡೆ ಮಸೂದೆ ಚರ್ಚೆಗೆ ಚಾಲನೆ: ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆಗೆ ಐತಿಹಾಸಿಕ ಹೆಜ್ಜೆ ಎಂದ ಜಿತೇಂದ್ರ ಸಿಂಗ್
ಪ್ರಶ್ನೆಪತ್ರ ಸೋರಿಕೆ ಹಾಗೂ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದ ಸಾರ್ವಜನಿಕ ಪರೀಕ್ಷೆಗಳು ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಲೋಕಸಭೆಯಲ್ಲಿ ಚಾಲನೆ ನೀಡಿದರು. ಈ ಮಸೂದೆ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಹಾಗೂ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಕ್ರಮ ಎಂದು ಅವರು ಬಣ್ಣಿಸಿದರು.
ಮಸೂದೆಯನ್ನು ಮಂಡಿಸಿದ ಜಿತೇಂದ್ರ ಸಿಂಗ್, "ಈ ದೇಶದ ಯುವಕರ ಭವಿಷ್ಯವನ್ನು ರಕ್ಷಿಸುವುದು ಹಾಗೂ ಮಕ್ಕಳ ಭವಿಷ್ಯದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈ ಮಸೂದೆ ಪುನರುಚ್ಚರಿಸುತ್ತದೆ. ಇದು ಭಾರತೀಯ ಸಂಸತ್ತಿನ ಇತಿಹಾಸದಲ್ಲೇ ಒಂದು ಮಹತ್ವದ ಮಸೂದೆ" ಎಂದು ಹೇಳಿದರು.
ಪ್ರಶ್ನೆಪತ್ರ ಸೋರಿಕೆ ಹೊಸ ಸಮಸ್ಯೆಯಲ್ಲ ಎಂದು ಹೇಳಿದ ಅವರು, ವಿವಿಧ ರಾಜ್ಯಗಳಲ್ಲಿ ಈ ಹಿಂದೆ ನಡೆದ ಹಲವು ಘಟನೆಗಳನ್ನು ಉಲ್ಲೇಖಿಸಿದರು. ಈ ಹಿನ್ನೆಲೆ ಸಾರ್ವಜನಿಕ ಪರೀಕ್ಷೆಗಳಿಗಾಗಿ ಪ್ರತ್ಯೇಕ ಕಾನೂನು ಅಗತ್ಯವೆಂಬ ಅರಿವು ಕೇಂದ್ರ ಸರ್ಕಾರಕ್ಕೆ ಮೂಡಿದ್ದು, ಅದಕ್ಕಾಗಿ ಈ ಮಸೂದೆಯನ್ನು ತರಲಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಥಾಪನೆ ಕುರಿತೂ ಮಾತನಾಡಿದ ಜಿತೇಂದ್ರ ಸಿಂಗ್, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎನ್‌ಟಿಎ ಸ್ಥಾಪಿಸಿತು ಎಂದು ಹೇಳಿದರು.
ಇತ್ತೀಚೆಗೆ ನಡೆದ ಪ್ರಶ್ನೆಪತ್ರ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, 2024ರ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಜವಾಬ್ದಾರಿಯುತ ಸರ್ಕಾರವಾಗಿ ಇತ್ತೀಚಿನ ಘಟನೆಗಳಿಂದ ಪಾಠ ಕಲಿತು ಈ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದರು.
- 28 July 2026 2:27 PM IST
ಪ್ರಶ್ನೆಪತ್ರ ಸೋರಿಕೆ ತಡೆ ಮಸೂದೆಗೆ 10 ಗಂಟೆ ಚರ್ಚೆಗೆ ಸರ್ಕಾರ ಸಿದ್ಧ: ಕಿರಣ್ ರಿಜಿಜು
ಪ್ರಶ್ನೆಪತ್ರ ಸೋರಿಕೆ ಹಾಗೂ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದ ಸಾರ್ವಜನಿಕ ಪರೀಕ್ಷೆಗಳು ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ 10 ಗಂಟೆಗಳ ಕಾಲ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಮಂಗಳವಾರ ಮಾತನಾಡಿದ ಅವರು, ಆರಂಭದಲ್ಲಿ ಎಲ್ಲಾ ಪಕ್ಷಗಳ ನಾಯಕರು ಆರು ಗಂಟೆಗಳ ಚರ್ಚೆಗೆ ಒಪ್ಪಿಗೆ ನೀಡಿದ್ದರು. ಬಳಿಕ ಪರಸ್ಪರ ಸಮಾಲೋಚನೆಯ ನಂತರ ಚರ್ಚೆಯ ಅವಧಿಯನ್ನು ಎಂಟು ಗಂಟೆಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ವಿಪಕ್ಷಗಳು ಇನ್ನಷ್ಟು ಸಮಯವನ್ನು ಕೇಳಿದರೆ, ಒಟ್ಟು 10 ಗಂಟೆಗಳವರೆಗೆ ಚರ್ಚೆ ನಡೆಸಲು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ. ಈ ಪ್ರಸ್ತಾವನೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೂ ಅನುಮೋದನೆ ನೀಡಿದ್ದಾರೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.
ಪ್ರಶ್ನೆಪತ್ರ ಸೋರಿಕೆ ಮತ್ತು ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಕಾನೂನು ಚೌಕಟ್ಟನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ತಿದ್ದುಪಡಿ ಮಸೂದೆಯನ್ನು ತರಲಾಗಿದೆ. ಸದನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ನಿರಂತರ ಗದ್ದಲದ ಬಳಿಕ ಇದೀಗ ಈ ಮಸೂದೆ ಕುರಿತು ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ.
- 28 July 2026 2:09 PM IST
ಪೇಪರ್ ಲೀಕ್ ತಡೆ ಮಸೂದೆ ಚರ್ಚೆ 10 ಗಂಟೆಗಳವರೆಗೆ ವಿಸ್ತರಣೆ? ರಾಹುಲ್ ಗಾಂಧಿ ಭಾಷಣ ಸಾಧ್ಯತೆ
ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮ ತಡೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ತಡೆ ಮಸೂದೆ ಕುರಿತು ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಗೆ ಆರಂಭದಲ್ಲಿ ಆರು ಗಂಟೆಗಳ ಕಾಲ ನಿಗದಿಪಡಿಸಲಾಗಿದ್ದರೂ, ಚರ್ಚೆಯ ಅವಧಿ ಸುಮಾರು 10 ಗಂಟೆಗಳವರೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷ ಮೂಲಗಳು ತಿಳಿಸಿವೆ. ಮಸೂದೆ ಮಂಗಳವಾರವೇ ಅಂಗೀಕಾರವಾಗುವ ಸಾಧ್ಯತೆ ಕಡಿಮೆಯಾಗಿದ್ದು, ಬುಧವಾರ ಮತದಾನ ನಡೆಯುವ ನಿರೀಕ್ಷೆಯಿದೆ. ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿ ಮಾತನಾಡುವ ಸಾಧ್ಯತೆಯಿದ್ದು, ಪ್ರತಿಪಕ್ಷಗಳು ಹಲವು ತಿದ್ದುಪಡಿಗಳನ್ನು ಮಂಡಿಸುವ ಸಾಧ್ಯತೆಯೂ ಇದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೂ ಪಕ್ಷದ ಪರವಾಗಿ ಮಾತನಾಡಲಿದ್ದು, ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದ ಎಸ್‌ಪಿ ಯುವ ಸಂಸದರಿಗೆ ಸಹ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
- 28 July 2026 12:57 PM IST
ಪ್ರತಿಭಟನೆ ವೇಳೆ ಬಂಧಿತರಾದ ನಿರಪರಾಧ ವಿದ್ಯಾರ್ಥಿಗಳ ಬಿಡುಗಡೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ ಅಥವಾ ವಶಕ್ಕೆ ಪಡೆಯಲ್ಪಟ್ಟ ವಿದ್ಯಾರ್ಥಿಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.
ವಿಚಾರಣೆ ವೇಳೆ, ಅಪರಾಧ ದಾಖಲೆ ಇಲ್ಲದ ವಿದ್ಯಾರ್ಥಿಗಳನ್ನು ಬಂಧನದಲ್ಲಿಡಲು ಯಾವುದೇ ಸಮರ್ಥನೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಪ್ರತಿಭಟನೆ ವೇಳೆ ವಶಕ್ಕೆ ಪಡೆಯಲಾದ ವಿದ್ಯಾರ್ಥಿಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಇಲ್ಲದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಈ ಆದೇಶವು ವಿದ್ಯಾರ್ಥಿ ಪ್ರತಿಭಟನೆ ವೇಳೆ ಬಂಧಿತರಾದ ಮತ್ತು ಯಾವುದೇ ಅಪರಾಧ ಪ್ರಕರಣಗಳಲ್ಲಿ ಹಿಂದೆ ಭಾಗಿಯಾಗದ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
- 28 July 2026 12:49 PM IST
ಪ್ರತಿಭಟನೆ ವೇಳೆ ಪೊಲೀಸರಿಗೆ ಹೊಸ ಪ್ರೋಟೋಕಾಲ್ ಅಗತ್ಯ: ಸುಪ್ರೀಂ ಕೋರ್ಟ್
ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಪೊಲೀಸರ ಕ್ರಮಕ್ಕೆ ಹೊಸ ಪ್ರೋಟೋಕಾಲ್ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪರೀಕ್ಷಾ ಅಕ್ರಮಗಳು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೊಲೀಸ್ ಅತಿರೇಕ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಶಾಂತಿಯುತ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಹಿಂದೆ ನ್ಯಾಯಾಲಯ ಸೂಚಿಸಿದ್ದ ಮಾರ್ಗಸೂಚಿಗಳನ್ನು ಪೊಲೀಸರು ಸಮರ್ಪಕವಾಗಿ ಪಾಲಿಸಿಲ್ಲ ಎಂದು ತಿಳಿಸಿತು. ಕಾನೂನನ್ನು ಕೈಗೆತ್ತಿಕೊಂಡವರು ಯಾರು ಎಂಬುದನ್ನು ಪತ್ತೆಹಚ್ಚಲು ಸಂಪೂರ್ಣ ಸ್ವತಂತ್ರ ತನಿಖೆ ಅಗತ್ಯವಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.
ಜುಲೈ 20ರಂದು ಜಂತರ್‌ಮಂತರ್‌ನಿಂದ ಸಂಸತ್ ಕಡೆಗೆ ನಡೆದ ಪ್ರತಿಭಟನೆ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗ ಹಾಗೂ ಲಾಠಿಚಾರ್ಜ್ ನಡೆಸಿದ ಹಿನ್ನೆಲೆಯಲ್ಲಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿದ್ಯಾರ್ಥಿಗಳ ಪ್ರತಿಭಟನೆ ಸಂವಿಧಾನದ ಚೌಕಟ್ಟಿನೊಳಗೆ ನಡೆದ ಶಾಂತಿಯುತ ಪ್ರತಿಭಟನೆಯಾಗಿತ್ತು. ಆದರೆ ಇಂತಹ ಪ್ರತಿಭಟನೆಗಳಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳುವ ಸಾಧ್ಯತೆ ಇರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಸಹಜವಾಗಿದ್ದು, ಅಶ್ರುವಾಯು, ಪೆಲೆಟ್ ಗನ್ ಸೇರಿದಂತೆ ಜನಸಮೂಹ ನಿಯಂತ್ರಣಕ್ಕೆ ಬಳಸುವ ಕ್ರಮಗಳ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ನಡೆಸಿ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತು. ಎಲ್ಲಾ ಹಿತಾಸಕ್ತಿಪಕ್ಷಗಳು ರಚನಾತ್ಮಕ ಸಲಹೆಗಳನ್ನು ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿದ್ಯಾರ್ಥಿಗಳ ವಿರುದ್ಧ ಅತಿಯಾದ ಬಲಪ್ರಯೋಗ ನಡೆದಿದ್ದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದರು. ಆದರೆ ಪ್ರತಿಭಟನೆ ವೇಳೆ ಸುಮಾರು 250 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ವಿದ್ಯಾರ್ಥಿಗಳ ನಡುವೆ ಕೊಲೆ, ಅತ್ಯಾಚಾರ ಹಾಗೂ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಮಾಜಘಾತುಕ ಅಂಶಗಳು ನುಸುಳಿದ್ದವು ಎಂಬ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಕಿಡಿಗೇಡಿಗಳು ನುಸುಳಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಅದನ್ನು ನೆಪವನ್ನಾಗಿ ಮಾಡಿಕೊಂಡು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಡೆಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಜೊತೆಗೆ, ಪ್ರತಿಭಟನೆ ವೇಳೆ ವಕೀಲರ ಮೇಲೆ ನಡೆದ ಹಲ್ಲೆ ಪ್ರಕರಣದ ವಿಚಾರಣೆ ಈಗಾಗಲೇ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಎಂದು ನ್ಯಾಯಾಲಯ ಉಲ್ಲೇಖಿಸಿತು.
- 28 July 2026 12:35 PM IST
ಪೊಲೀಸ್ ಕ್ರಮದ ತನಿಖೆಗೆ ಸ್ವತಂತ್ರ ಸಮಿತಿ? ಸುಪ್ರೀಂ ಕೋರ್ಟ್ ಸುಳಿವು
ಪ್ರತಿಭಟನೆಗಳ ವೇಳೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ಸ್ವತಂತ್ರ ಸಮಿತಿ ರಚಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಈ ಕುರಿತು ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದೆ. ಮುಂದಿನ ವಿಚಾರಣೆಯ ವೇಳೆ ಸಂಬಂಧಿತ ರಾಜ್ಯಗಳ ಅಡ್ವೊಕೇಟ್ ಜನರಲ್‌ಗಳು ವರ್ಚುವಲ್ ಮೂಲಕ ಹಾಜರಾಗಿ ತಮ್ಮ ಅಭಿಪ್ರಾಯ ಮಂಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಅರ್ಜಿಗಳಲ್ಲಿ ಉಲ್ಲೇಖವಾಗಿರುವ ಘಟನೆಗಳಷ್ಟೇ ಅಲ್ಲದೆ, ದೇಶಾದ್ಯಂತ ಪ್ರತಿಭಟನೆಗಳ ವೇಳೆ ಪೊಲೀಸರು ಅನುಸರಿಸಬೇಕಾದ ಕ್ರಮಗಳು ಹಾಗೂ ಜನಸಮೂಹ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆಯೂ ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿದೆ.
ಪ್ರತಿಭಟನೆಗಳ ಸಂದರ್ಭಗಳಲ್ಲಿ ಪೊಲೀಸರ ಪ್ರತಿಕ್ರಿಯೆ, ಅಶ್ರುವಾಯು ಸೇರಿದಂತೆ ಜನಸಮೂಹ ನಿಯಂತ್ರಣ ಕ್ರಮಗಳ ಬಳಕೆ ಹಾಗೂ ಸಾರ್ವಜನಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವ ಉದ್ದೇಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಅಂತಿಮ ಆದೇಶ ನೀಡುವ ಮೊದಲು ಎಲ್ಲಾ ಸಂಬಂಧಿತ ರಾಜ್ಯಗಳ ವಾದಗಳನ್ನು ಆಲಿಸಿ, ದೇಶಾದ್ಯಂತ ಅನ್ವಯವಾಗುವ ಸಮಗ್ರ ನಿರ್ದೇಶನಗಳನ್ನು ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
- 28 July 2026 12:28 PM IST
ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು: ಸಿಜೆಐ
ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಾಂತಿಯುತ ಪ್ರತಿಭಟನೆ ನಡೆಸುವುದು ವಿದ್ಯಾರ್ಥಿಗಳ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ಹಕ್ಕು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಅವರು, ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಅದು ಸಂಪೂರ್ಣವಾಗಿ ಸಂವಿಧಾನದ ಚೌಕಟ್ಟಿನೊಳಗೆಯೇ ನಡೆದಿತ್ತು ಎಂದು ಹೇಳಿದ್ದಾರೆ. ಇಂತಹ ಪ್ರತಿಭಟನೆಗಳಲ್ಲಿ ಹೊರಗಿನ ಕೆಲವರು ತಮ್ಮ ಉದ್ದೇಶಗಳೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇದ್ದರೂ, ಅದನ್ನು ನೆಪವನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳ ಹಕ್ಕುಗಳಿಗೆ ಧಕ್ಕೆ ಉಂಟುಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಗ್ರ ಚರ್ಚೆಯ ಅಗತ್ಯವಿದೆ ಎಂದೂ ಸಿಜೆಐ ಹೇಳಿದ್ದಾರೆ. ಕಾಲಾನುಗುಣವಾಗಿ ಪ್ರತಿಭಟನೆಗಳ ಸ್ವರೂಪ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಅಶ್ರುವಾಯು ಸೇರಿದಂತೆ ಜನಸಮೂಹ ನಿಯಂತ್ರಣಕ್ಕೆ ಬಳಸುವ ಕ್ರಮಗಳ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಸಹಜವಾಗಿದ್ದು, ಎಲ್ಲ ಹಿತಾಸಕ್ತಿಪಕ್ಷಗಳೂ ರಚನಾತ್ಮಕ ಸಲಹೆಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.







