
ಸುಪ್ರೀಂ ಕೋರ್ಟ್
LIVE| ಪ್ರಶ್ನೆಪತ್ರ ಸೋರಿಕೆ ತಡೆ ಮಸೂದೆಗೆ 10 ಗಂಟೆ ಚರ್ಚೆಗೆ ಸರ್ಕಾರ ಸಿದ್ಧ: ಕಿರಣ್ ರಿಜಿಜು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಬಂಧಿತರ ಬಿಡುಗಡೆಗೆ ಬಿಹಾರ ಸರ್ಕಾರ ಆದೇಶಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಸ್ಥಗಿತಗೊಂಡಿದ್ದ ಸಂಸತ್ ಕಲಾಪದ ಬಳಿಕ, ಅಕ್ರಮ ತಡೆಗೆ ಸಂಬಂಧಿಸಿದ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026 ಕುರಿತು ಮಂಗಳವಾರ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ಮಸೂದೆ ಕುರಿತ ಚರ್ಚೆಗೆ ಆರು ಗಂಟೆಗಳ ಕಾಲಾವಕಾಶ ನಿಗದಿಪಡಿಸಿದ್ದು, ಅಗತ್ಯವಿದ್ದರೆ ಇನ್ನಷ್ಟು ಸಮಯ ನೀಡುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂ. ದವರೆಗೆ ದಂಡ ವಿಧಿಸುವ ಕಠಿಣ ನಿಯಮಗಳನ್ನು ಒಳಗೊಂಡಿರುವ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಹಾಗೂ ದೇಶಾದ್ಯಂತ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಈ ಮಸೂದೆಗೆ ವೇಗ ನೀಡಲಾಗಿದೆ.
ಪ್ರತಿಭಟನಾಕಾರರ ವಿರುದ್ಧ ಕೇಸ್
ಇದನ್ನರ ನಡುವೆ, ಬಿಹಾರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಜೊತೆಗೆ ಈ ಸಂಬಂಧ ಬಂಧಿತರಾಗಿರುವ ಎಲ್ಲರನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಜುಲೈ 25ರಂದು ನಡೆದ ಬಿಹಾರ ಬಂದ್ ವೇಳೆ ಒಟ್ಟು 694 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರಲ್ಲಿ 339 ಅಪ್ರಾಪ್ತರನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ 355 ಮಂದಿಯ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈಗ ಈ ಎಲ್ಲಾ ಎಫ್‌ಐಆರ್‌ಗಳು, ಕ್ರಿಮಿನಲ್ ದೂರುಗಳು ಹಾಗೂ ಶೋಕಾಸ್ ನೋಟಿಸ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆ ತಕ್ಷಣ ಆರಂಭವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಘೋಷಣೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಹಾಗೂ ಬಂಧಿತರನ್ನು ಬಿಡುಗಡೆ ಮಾಡುವಂತೆ ವಿದ್ಯಾರ್ಥಿ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ ಕೆಲವೇ ಗಂಟೆಗಳ ಬಳಿಕ ಹೊರಬಿದ್ದಿದೆ. ಬಿಹಾರ ಸರ್ಕಾರದ ಈ ಕ್ರಮವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.
Live Updates
- 28 July 2026 12:20 PM IST
ನೀಟ್ ಪ್ರತಿಭಟನೆ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯಸಭೆಯಲ್ಲಿ ಸಿಪಿಐ ಆಗ್ರಹ
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಸಿಪಿಐ ರಾಜ್ಯಸಭಾ ಸದಸ್ಯ ಪಿ. ಸಂದೋಶ್ ಕುಮಾರ್ ರಾಜ್ಯಸಭೆಯಲ್ಲಿ ರೂಲ್ 267 ಅಡಿಯಲ್ಲಿ ವ್ಯವಹಾರ ಸ್ಥಗಿತ ನೋಟಿಸ್ ಸಲ್ಲಿಸಿದ್ದಾರೆ.
ಶೂನ್ಯವೇಳೆ ಹಾಗೂ ಪ್ರಶ್ನೋತ್ತರ ಅವಧಿ ಸೇರಿದಂತೆ ನಿಗದಿತ ಕಲಾಪವನ್ನು ಸ್ಥಗಿತಗೊಳಿಸಿ, ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ಆಯೋಗ ರಚಿಸಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ, ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ದೇಶವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಗೆ ಕಾರಣವಾದ ಎಲ್ಲಾ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ವಿಷಯವು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ, ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ, ರಾಷ್ಟ್ರೀಯ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆ ಹಾಗೂ ನಾಗರಿಕರ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ ತುರ್ತು ಮತ್ತು ಮಹತ್ವದ ವಿಚಾರವಾಗಿದ್ದು, ಸಂಸತ್ತಿನಲ್ಲಿ ತಕ್ಷಣ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಪಿ. ಸಂದೋಶ್ ಕುಮಾರ್ ಒತ್ತಾಯಿಸಿದ್ದಾರೆ.
- 28 July 2026 11:55 AM IST
ಪೇಪರ್ ಲೀಕ್ ತಡೆಗೆ ಹೊಸ ಮಸೂದೆ ಯಾಕೆ? ಕೇಂದ್ರವನ್ನು ಪ್ರಶ್ನಿಸಿದ ನಾನಾ ಪಟೋಲೆ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಹೊಸ ಮಸೂದೆ ತರಲು ಮುಂದಾಗಿರುವುದನ್ನು ಕಾಂಗ್ರೆಸ್ ನಾಯಕ ನಾನಾ ಪಟೋಲೆ ಪ್ರಶ್ನಿಸಿದ್ದಾರೆ. ಈಗಾಗಲೇ ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಾನೂನುಗಳಿದ್ದು, ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, ಬಿಜೆಪಿ ಆಡಳಿತದಲ್ಲಿ ದೇಶಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗಿವೆ. ಈಗ ಹೊಸ ಮಸೂದೆ ತರುವ ಬದಲು ಈಗಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಹೊಸ ಮಸೂದೆ ಕುರಿತು ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ ಅವರು, ಈಗಾಗಲೇ 10 ವರ್ಷಗಳ ಜೈಲು ಶಿಕ್ಷೆಯಂತಹ ಕಠಿಣ ಶಿಕ್ಷೆಗಳಿರುವ ಕಾನೂನು ಜಾರಿಯಲ್ಲಿದೆ. 2024ರಲ್ಲಿ ಇದೇ ಉದ್ದೇಶದ ಮಸೂದೆ ಅಂಗೀಕಾರವಾಗಿದ್ದರೂ, 2026ರಲ್ಲಿ ಮತ್ತೊಂದು ಮಸೂದೆ ತರಲು ಸರ್ಕಾರ ಮುಂದಾಗಿರುವುದು ಏಕೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ನಾನಾ ಪಟೋಲೆ ಪ್ರಶ್ನಿಸಿದ್ದಾರೆ.
- 28 July 2026 10:02 AM IST
ಪ್ರಧಾನ್ ಖಾತೆ ಬದಲಿಸುವ ಕೇಂದ್ರದ ಪ್ರಸ್ತಾಪಕ್ಕೆ 'ನೋ' ಎಂದ ಸಿಜೆಪಿ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಸಿಜೆಪಿ ನಡೆಸಿದ್ದ ಪ್ರತಿಭಟನೆ ವೇಳೆ, ಪ್ರಧಾನ್ ಅವರ ಖಾತೆಯನ್ನು ಬದಲಾಯಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮುಂದಿಟ್ಟಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಮೂಲಗಳ ಪ್ರಕಾರ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಸಿಜೆಪಿ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರನ್ನು ಶಿಕ್ಷಣ ಖಾತೆಯಿಂದ ಬೇರೆ ಸಚಿವಾಲಯಕ್ಕೆ ವರ್ಗಾಯಿಸುವ ಪ್ರಸ್ತಾಪ ಮಾಡಿದ್ದರು. ಆದರೆ ಸಿಜೆಪಿ ಪರವಾಗಿ ಮಾತುಕತೆ ನಡೆಸುತ್ತಿದ್ದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಪ್ರತಿಭಟನಾಕಾರರ ಬೇಡಿಕೆ ಧರ್ಮೇಂದ್ರ ಪ್ರಧಾನ್ ಅವರ ಸಂಪೂರ್ಣ ರಾಜೀನಾಮೆಯೇ ಆಗಿದ್ದು, ಖಾತೆ ಬದಲಾವಣೆ ಯಾವುದೇ ರೀತಿಯಲ್ಲೂ ಒಪ್ಪಲಾಗುವುದಿಲ್ಲ ಎಂದು ಸಿಜೆಪಿ ಸ್ಪಷ್ಟಪಡಿಸಿತ್ತು. ರಾಜೀನಾಮೆಗಿಂತ ಕಡಿಮೆ ಮಟ್ಟದ ಯಾವುದೇ ಒಪ್ಪಂದಕ್ಕೆ ಸಮ್ಮತಿಸಿದರೆ ಪ್ರತಿಭಟನಾಕಾರರಿಂದ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ಅಭಿಪ್ರಾಯವೂ ಸಿಜೆಪಿ ನಾಯಕರದ್ದಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಸಚಿವರನ್ನು ತೆಗೆದುಹಾಕುವುದು ಅಥವಾ ಅವರ ಖಾತೆ ಬದಲಿಸುವುದು ಪ್ರಧಾನಮಂತ್ರಿಯವರ ವಿಶೇಷಾಧಿಕಾರ ಎಂದು ಕೇಂದ್ರ ಸಚಿವರು ಮಾತುಕತೆ ವೇಳೆ ತಿಳಿಸಿದ್ದರು. ಆದರೂ ಸಿಜೆಪಿ ತನ್ನ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ.
ಶನಿವಾರ ಮಧ್ಯಾಹ್ನ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಬಳಿಕ ಕೇಂದ್ರ ಸರ್ಕಾರ ಮತ್ತು ಸಿಜೆಪಿ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯಿತು. ಬಳಿಕ ಸಿಜೆಪಿ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು.
ಈ ನಡುವೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಧರ್ಮೇಂದ್ರ ಪ್ರಧಾನ್ ಅವರ ಖಾತೆ ಬದಲಾವಣೆ ಮಾತ್ರ ಸಾಕಾಗುವುದಿಲ್ಲ, ಅವರು ಸಂಪೂರ್ಣವಾಗಿ ಸಚಿವ ಸಂಪುಟದಿಂದ ಹೊರಹೋಗಬೇಕು ಎಂದು ಒತ್ತಾಯಿಸಿದ್ದರು. "ಧರ್ಮೇಂದ್ರ ಪ್ರಧಾನ್ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ಸಂಕೇತ. ಅವರು ಹುದ್ದೆಯಿಂದ ನಿರ್ಗಮಿಸಲೇಬೇಕು" ಎಂದು ಅವರು ಹೇಳಿದ್ದರು.
ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
- 28 July 2026 9:46 AM IST
ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ನಿಗಾ ಆರೋಪ: ಇಂದು ಅರ್ಜಿ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್
ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಿರಂತರ ನಿಗಾ ಇಟ್ಟಿದ್ದಾರೆ ಎಂದು ಆರೋಪಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಕೈಗೆತ್ತಿಕೊಳ್ಳಲಿದೆ.
ಸೋಮವಾರ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠ, "ಪರಿಸ್ಥಿತಿ ಈಗ ತಣ್ಣಗಾಗಿದೆ, ಇನ್ನಷ್ಟು ತಣ್ಣಗಾಗಲು ಬಿಡಿ" ಎಂದು ಹೇಳಿ, ಪೊಲೀಸ್ ನಿಗಾ ವ್ಯವಸ್ಥೆಗೆ ಸಂಬಂಧಿಸಿದ ಸಮಗ್ರ ಮಾರ್ಗಸೂಚಿಗಳ ಕುರಿತು ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿತು.
ಪೊಲೀಸ್ ನಿಗಾ ಕುರಿತು ಈಗಿರುವ ಕಾನೂನು ವ್ಯವಸ್ಥೆ ಸಮರ್ಪಕವಾಗಿದೆಯೇ ಅಥವಾ ಹೆಚ್ಚಿನ ಪರಿಶೀಲನೆ ಅಗತ್ಯವಿದೆಯೇ ಎಂಬುದನ್ನು ಸಮಗ್ರ ಅರ್ಜಿಯ ಮೂಲಕ ನ್ಯಾಯಾಲಯ ಪರಿಶೀಲಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು. ಪ್ರಸ್ತುತ ಸಲ್ಲಿಸಲಾಗಿರುವ ಅರ್ಜಿ ನಿರ್ದಿಷ್ಟ ವಿಷಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಈ ಅರ್ಜಿಯನ್ನು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಆಯಿಷೆ ಘೋಷ್ ಸಲ್ಲಿಸಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ನಿರಂತರ ನಿಗಾ ಇಟ್ಟಿರುವುದು ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ.
- 28 July 2026 9:42 AM IST
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ: ದಾಖಲಾದ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಲಾಗಿದ್ದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ ಅಥವಾ ವಶಕ್ಕೆ ಪಡೆಯಲಾದ ಎಲ್ಲರನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದು, 13 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಅವರ ವಿರುದ್ಧದ ಪ್ರಕರಣಗಳನ್ನು ಕಾನೂನು ಪ್ರಕಾರ ಹಿಂಪಡೆಯುವ ಪ್ರಕ್ರಿಯೆ ತಕ್ಷಣ ಆರಂಭವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗೃಹ ಮತ್ತು ರಾಜಕೀಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ತೇವಾರಿ ಸಹಿ ಮಾಡಿರುವ ಆದೇಶದಲ್ಲಿ, ಪರೀಕ್ಷಾ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜವಾಬ್ದಾರಿತ್ವ ಹೆಚ್ಚಿಸುವುದು ಮತ್ತು ಅಗತ್ಯ ಸುಧಾರಣೆಗಳನ್ನು ಜಾರಿಗೆ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಬಂಧನಕ್ಕೊಳಗಾದ ಅಥವಾ ವಶದಲ್ಲಿರುವವರ ಪ್ರಕರಣಗಳನ್ನು ಪರಿಶೀಲಿಸಿ ಅವರನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಯಾವುದೇ ಪ್ರತಿಕೂಲ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
- 28 July 2026 9:38 AM IST
ಪ್ರಶ್ನೆಪತ್ರ ಸೋರಿಕೆ, ಪ್ರತಿಭಟನಾಕಾರರ ಮೇಲಿನ ಬಲಪ್ರಯೋಗ: ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಜ್ಜು
ಸಂಸತ್ತಿನ ಉಭಯ ಸದನಗಳ ಕಾರ್ಯತಂತ್ರವನ್ನು ಅಂತಿಮಗೊಳಿಸಲು ಸಭೆ ನಡೆಸಲಿರುವ ಪ್ರತಿಪಕ್ಷಗಳು, ಪ್ರಶ್ನೆಪತ್ರ ಸೋರಿಕೆ ಪ್ರಕರಣ ಹಾಗೂ ಪ್ರತಿಭಟನಾಕಾರರ ವಿರುದ್ಧ ನಡೆದಿರುವ ಬಲಪ್ರಯೋಗದ ವಿಚಾರವನ್ನು ತೀವ್ರವಾಗಿ ಪ್ರಸ್ತಾಪಿಸಲು ಸಜ್ಜಾಗಿವೆ. ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಸರ್ಕಾರವನ್ನು ಈ ಎರಡೂ ವಿಷಯಗಳಲ್ಲಿ ಉತ್ತರದಾಯಿತ್ವಕ್ಕೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಶ್ನೆಪತ್ರ ಸೋರಿಕೆ ಪ್ರಕರಣಗಳ ಜೊತೆಗೆ ಪ್ರತಿಭಟನಾಕಾರರ ವಿರುದ್ಧ ಲಾಠಿ ಚಾರ್ಜ್, ಪೆಲೆಟ್ ಗನ್ ಹಾಗೂ ಎಕೆ-47 ಬಳಸಲಾಗಿದೆ ಎಂಬ ಆರೋಪಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.





