Assembly Elections 2026: TMC Moves Supreme Court Against ECs Rule on Govt Staff for Bengal Vote Countingmt
x

ಸುಪ್ರೀಂ ಕೋರ್ಟ್‌ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಮತ ಎಣಿಕೆಗೆ ಕೇಂದ್ರ ಸರ್ಕಾರಿ ಸಿಬ್ಬಂದಿ ನಿಯೋಜನೆ: ಟಿಎಂಸಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಆಯೋಗದ ಈ ಸ್ಪಷ್ಟನೆಯನ್ನು ಹಾಗೂ ಏಪ್ರಿಲ್ 13ರ ಸುತ್ತೋಲೆಯನ್ನು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಿಲೇವಾರಿ ಮಾಡಿತು.


Click the Play button to hear this message in audio format

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಕೇಂದ್ರ ಸರ್ಕಾರಿ ನೌಕರರನ್ನು ಮೇಲ್ವಿಚಾರಕರಾಗಿ ನಿಯೋಜಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶನಿವಾರ (ಮೇ 2) ವಜಾಗೊಳಿಸಿದೆ. ಈ ಮೂಲಕ ಮೇ 4ರಂದು ನಡೆಯಲಿರುವ ಮತ ಎಣಿಕೆ ಪ್ರಕ್ರಿಯೆಗೆ ಇದ್ದ ಅಡೆತಡೆಯೊಂದು ನಿವಾರಣೆಯಾಗಿದೆ.

ಮತ ಎಣಿಕೆ ಪ್ರಕ್ರಿಯೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ತುರ್ತು ವಿಚಾರಣೆಗಾಗಿ ಶನಿವಾರವೇ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯಮಲ್ಯ ಬಾಗ್ಚಿ ಅವರನ್ನೊಳಗೊಂಡ ವಿಶೇಷ ಪೀಠವನ್ನು ರಚಿಸಲಾಗಿತ್ತು. ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಚುನಾವಣಾ ಆಯೋಗ ಮಾಡಿಕೊಂಡಿರುವ ವ್ಯವಸ್ಥೆಯಲ್ಲಿ ಯಾವುದೇ ಮಧ್ಯಪ್ರವೇಶ ಮಾಡಲು ನಿರಾಕರಿಸಿತು.

ಟಿಎಂಸಿ ಆಕ್ಷೇಪವೇನಿತ್ತು?

ಏಪ್ರಿಲ್ 13 ರಂದು ಪಶ್ಚಿಮ ಬಂಗಾಳದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯ ಪ್ರಕಾರ, ಪ್ರತಿ ಮತ ಎಣಿಕೆ ಕೇಂದ್ರದ ಟೇಬಲ್‌ನಲ್ಲಿ ಕನಿಷ್ಠ ಒಬ್ಬರಾದರೂ ಕೇಂದ್ರ ಸರ್ಕಾರ ಅಥವಾ ಕೇಂದ್ರ ಸಾರ್ವಜನಿಕ ವಲಯದ ಉದ್ಯೋಗಿ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಲಾಗಿತ್ತು.

ಇದನ್ನು ತೀವ್ರವಾಗಿ ವಿರೋಧಿಸಿದ್ದ ಟಿಎಂಸಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು. "ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈ ಕೇಂದ್ರ ಸಿಬ್ಬಂದಿಗಳು ಅವರ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತಾರೆ. ಹೀಗಾಗಿ ಅವರು ನಮ್ಮ ವಿರುದ್ಧ ಪಕ್ಷಪಾತ ಮಾಡುವ ಭೀತಿಯಿದೆ. ಇತರ ರಾಜ್ಯಗಳನ್ನು ಬಿಟ್ಟು ಕೇವಲ ಪಶ್ಚಿಮ ಬಂಗಾಳಕ್ಕೆ ಮಾತ್ರ ಈ ನಿಯಮ ಅನ್ವಯಿಸುವುದು ತಾರತಮ್ಯದಿಂದ ಕೂಡಿದೆ," ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಟಿಎಂಸಿ ವಾದವನ್ನು ಆಲಿಸಿದ ನ್ಯಾಯಪೀಠ, ಈ ವಾದವು ಕೇವಲ 'ತಪ್ಪು ಊಹೆ'ಯ ಆಧಾರದ ಮೇಲಿದೆ ಎಂದು ಅಭಿಪ್ರಾಯಪಟ್ಟಿತು. "ಕೇಂದ್ರ ಸರ್ಕಾರಿ ನೌಕರರು ಕಡ್ಡಾಯವಾಗಿ ಒಂದು ನಿರ್ದಿಷ್ಟ ಪಕ್ಷದ ವಿರುದ್ಧವೇ ಕೆಲಸ ಮಾಡುತ್ತಾರೆ ಎನ್ನುವ ನಿಮ್ಮ ವಾದ ದೋಷಪೂರಿತವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರ ಮೇಲೆ ಸ್ವಲ್ಪಮಟ್ಟಿಗಾದರೂ ನಂಬಿಕೆ ಇಡಬೇಕಾಗುತ್ತದೆ," ಎಂದು ನ್ಯಾಯಪೀಠ ಮೌಖಿಕವಾಗಿ ಚಾಟಿ ಬೀಸಿತು.

ಚುನಾವಣಾ ಆಯೋಗದ ಸ್ಪಷ್ಟನೆ

ಇದೇ ವೇಳೆ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲರು, "ಮತ ಎಣಿಕೆ ಕೇಂದ್ರದಲ್ಲಿ ಕೇವಲ ಕೇಂದ್ರದ ಸಿಬ್ಬಂದಿ ಮಾತ್ರ ಇರುವುದಿಲ್ಲ. ರಾಜ್ಯ ಸರ್ಕಾರಿ ನೌಕರರ ಜೊತೆಯಲ್ಲೇ ಕೇಂದ್ರ ಸರ್ಕಾರಿ ನೌಕರರನ್ನು ನಿಯೋಜಿಸಲಾಗುತ್ತಿದೆ. ಅಂತಿಮವಾಗಿ ಚುನಾವಣಾಧಿಕಾರಿಗಳು ರಾಜ್ಯದ ಸಿಬ್ಬಂದಿಯೇ ಆಗಿರುತ್ತಾರೆ ಮತ್ತು ಇಡೀ ಪ್ರಕ್ರಿಯೆ ಸಂಪೂರ್ಣವಾಗಿ ಅವರ ನಿಯಂತ್ರಣದಲ್ಲಿಯೇ ಇರುತ್ತದೆ" ಎಂದು ಸ್ಪಷ್ಟಪಡಿಸಿದರು.

ಆಯೋಗದ ಈ ಸ್ಪಷ್ಟನೆಯನ್ನು ಹಾಗೂ ಏಪ್ರಿಲ್ 13ರ ಸುತ್ತೋಲೆಯನ್ನು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಿಲೇವಾರಿ ಮಾಡಿತು. ಇದಕ್ಕೂ ಮುನ್ನ, ಏಪ್ರಿಲ್ 30ರಂದು ಕಲ್ಕತ್ತಾ ಹೈಕೋರ್ಟ್ ಕೂಡ ಚುನಾವಣಾ ಆಯೋಗದ ಈ ಕ್ರಮವನ್ನು ಎತ್ತಿಹಿಡಿದು, ಟಿಎಂಸಿ ಅರ್ಜಿಯನ್ನು ವಜಾಗೊಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Read More
Next Story