
ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೊ ಹಂಚಿಕೆಗೆ ಸುಪ್ರೀಂ ಕೋರ್ಟ್ ನಿರ್ಬಂಧ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕೂಡ ಈ ವೇಳೆ ನ್ಯಾಯಾಲಯದ ಕಲಾಪಗಳನ್ನು ಸಂಪೂರ್ಣ ಸನ್ನಿವೇಶದಲ್ಲಿ ಅರ್ಥೈಸಬೇಕು. ಆಯ್ದ ವಿಡಿಯೊ ತುಣುಕುಗಳ ಆಧಾರದ ಮೇಲೆ ತಪ್ಪು ನಿರ್ಧಾರಗಳಿಗೆ ಬರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ನ್ಯಾಯಾಂಗ ಕಲಾಪಗಳ ಆಡಿಯೋ ಮತ್ತು ವಿಡಿಯೊ ದಾಖಲಾತಿಗಳನ್ನು ಸಂಬಂಧಿತ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಸಾಮಾಜಿಕ ಜಾಲತಾಣಗಳು ಅಥವಾ ಇತರೆ ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟ್, ಮರುಪೋಸ್ಟ್, ಅಪ್‌ಲೋಡ್ ಅಥವಾ ಹಣಗಳಿಕೆ ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ಸಂಬಂಧಿತ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅಥವಾ ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅವರ ಪೂರ್ವಾನುಮತಿ ಇಲ್ಲದೆ ನ್ಯಾಯಾಂಗ ಕಲಾಪಗಳ ಆಡಿಯೋ-ವಿಡಿಯೊ ದಾಖಲಾತಿಗಳನ್ನು ಹೊರತೆಗೆದು, ತಿದ್ದುಪಡಿ ಮಾಡಿ, ಪ್ರಸಾರ, ಪೋಸ್ಟ್, ಮರುಪೋಸ್ಟ್, ಅಪ್‌ಲೋಡ್ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಿದೆ.
ಸುದ್ದಿ ವರದಿಗೆ ನಿರ್ಬಂಧ ಇಲ್ಲ
ಈ ಆದೇಶವು ನ್ಯಾಯಾಲಯದ ಕಾರ್ಯಚಟುವಟಿಕೆಗಳ ಕುರಿತು ಮಾಧ್ಯಮಗಳು ಮಾಡುವ ಸುದ್ದಿ ವರದಿಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ ಪತ್ರಿಕೆ, ಟಿವಿ ಹಾಗೂ ಡಿಜಿಟಲ್ ಮಾಧ್ಯಮಗಳು ನ್ಯಾಯಾಂಗ ಬೆಳವಣಿಗೆಗಳ ಕುರಿತು ವರದಿ ಮಾಡುವುದಕ್ಕೆ ಈ ಆದೇಶ ಅನ್ವಯಿಸುವುದಿಲ್ಲ.
ಪಿಐಎಲ್ ವಿಚಾರಣೆ ವೇಳೆ ಆದೇಶ
ನ್ಯಾಯಾಲಯದ ಕಲಾಪಗಳ ಲೈವ್ ಸ್ಟ್ರೀಮಿಂಗ್ ಮತ್ತು ಅದರ ವಿಡಿಯೊಗಳ ಅನಿಯಂತ್ರಿತ ಪ್ರಸಾರಕ್ಕೆ ನಿರ್ಬಂಧ ವಿಧಿಸುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಮಧ್ಯಂತರ ಆದೇಶ ನೀಡಲಾಗಿದೆ.
ವಿಚಾರಣೆ ವೇಳೆ ಹಿರಿಯ ವಕೀಲ ವಿಕಾಸ್ ಸಿಂಗ್, ನ್ಯಾಯಾಲಯದ ಲೈವ್ ಸ್ಟ್ರೀಮಿಂಗ್‌ಗೆ ತಮಗೆ ಮೂಲಭೂತ ಆಕ್ಷೇಪವಿಲ್ಲ. ಆದರೆ ಕಲಾಪಗಳ ಆಯ್ದ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠದ ಕಲಾಪದ ಒಂದು ವಿಡಿಯೊ ವೈರಲ್ ಆದ ಘಟನೆಯನ್ನು ಉಲ್ಲೇಖಿಸಿ, ಇಂತಹ ಪ್ರಸಾರಗಳಿಂದ ನ್ಯಾಯಾಂಗ ಪ್ರಕ್ರಿಯೆ ಹಾಸ್ಯದ ವಿಷಯವಾಗುತ್ತಿದೆ ಎಂದು ಹೇಳಿದರು. ಈ ಅಭಿಪ್ರಾಯಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಹ ಬೆಂಬಲ ವ್ಯಕ್ತಪಡಿಸಿದರು.
ಡಿಜಿಟಲ್ ಯುಗದಲ್ಲಿ ಮಾಹಿತಿ ನಿಯಂತ್ರಣ ಸವಾಲು
ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, ಡಿಜಿಟಲ್ ಯುಗದಲ್ಲಿ ಮಾಹಿತಿಯ ನಿಯಂತ್ರಣವೇ ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯದ ಕಲಾಪಗಳು ಮನರಂಜನಾ ವಾಹಿನಿಯಂತೆ 24 ಗಂಟೆಗಳ ಕಾಲ ಪ್ರಸಾರವಾಗಬಾರದು ಎಂಬುದನ್ನೂ ಅವರು ಉಲ್ಲೇಖಿಸಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕೂಡ, ನ್ಯಾಯಾಲಯದ ಕಲಾಪಗಳನ್ನು ಸಂಪೂರ್ಣ ಸನ್ನಿವೇಶದಲ್ಲಿ ಅರ್ಥೈಸಬೇಕು. ಆಯ್ದ ವಿಡಿಯೊ ತುಣುಕುಗಳ ಆಧಾರದ ಮೇಲೆ ತಪ್ಪು ನಿರ್ಧಾರಗಳಿಗೆ ಬರಬಾರದು ಎಂದು ಅಭಿಪ್ರಾಯಪಟ್ಟರು.

