ರಾಮಮಂದಿರ ಹುಂಡಿ ಅಕ್ರಮದ ಆರೋಪ: ಬೆಳಗಾವಿ ಆರ್‌ಎಸ್‌ಎಸ್ ಸಭೆಯಲ್ಲಿ ತೀವ್ರ ಕಳವಳ
x

ರಾಮಮಂದಿರ ಹುಂಡಿ ಅಕ್ರಮದ ಆರೋಪ: ಬೆಳಗಾವಿ ಆರ್‌ಎಸ್‌ಎಸ್ ಸಭೆಯಲ್ಲಿ ತೀವ್ರ ಕಳವಳ

ಸಂಘದ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ಈವರೆಗೆ ಪೂರ್ಣಗೊಂಡಿರುವ ವಿವಿಧ ಕಾರ್ಯಕ್ರಮಗಳ ವಿಮರ್ಶೆ ನಡೆಸಿದ ಮುಖಂಡರು, ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲು ನಿರ್ಧರಿಸಿದರು.


ಅಯೋಧ್ಯೆಯ ನೂತನ ರಾಮಮಂದಿರದ ಹುಂಡಿ ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ತೀವ್ರ ಕಳವಳ ವ್ಯಕ್ತಪಡಿಸಿದೆ. ಬೆಳಗಾವಿಯಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ಆರ್‌ಎಸ್‌ಎಸ್‌ ವಾರ್ಷಿಕ 'ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ'ಯಲ್ಲಿ ಈ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದ್ದು, ಭಕ್ತರ ಶ್ರದ್ಧೆಗೆ ಧಕ್ಕೆಯಾಗದಂತೆ ಎಚ್ಚರವಹಿಸುವ ನಿರ್ಣಯವನ್ನು ಮಂಡಿಸಲಾಗಿದೆ.

ರಾಮಮಂದಿರ ನಿರ್ಮಾಣ ಹಾಗೂ ಅದರ ನಿರ್ವಹಣೆಯಲ್ಲಿ ಕೋಟ್ಯಂತರ ಹಿಂದೂಗಳ ಭಾವನೆ ಅಡಗಿದೆ. ಹೀಗಾಗಿ, ಹುಂಡಿ ಹಣ ಎಣಿಕೆಯಲ್ಲಿ ಕೇಳಿಬಂದಿರುವ ಆರೋಪಗಳು ದುರದೃಷ್ಟಕರ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಹಾಗೂ ಭಕ್ತರ ನಂಬಿಕೆಗೆ ಚ್ಯುತಿ ಬಾರದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂದು ಸೂಚಿಸಲಾಗಿದೆ. ಪ್ರಸ್ತುತ ಈ ಅಕ್ರಮದ ಆರೋಪದ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯು ಶೀಘ್ರದಲ್ಲೇ ನಿರ್ಣಾಯಕ ಹಂತ ತಲುಪಲಿದ್ದು, ಸತ್ಯಾಂಶ ಹೊರಬರುವ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ.

ಜನಸಂಖ್ಯಾ ಅಸಮತೋಲನದ ಸವಾಲುಗಳ ಚರ್ಚೆ

ರಾಮಮಂದಿರದ ವಿಚಾರದ ಜೊತೆಗೆ ದೇಶದ ಆಂತರಿಕ ಭದ್ರತೆ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮಗಳ ಕುರಿತೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ವಿಶೇಷವಾಗಿ ಮುಂಬರುವ ಜನಗಣತಿ ಪ್ರಕ್ರಿಯೆ ಹಾಗೂ ದೇಶದ ಕೆಲವು ಭಾಗಗಳಲ್ಲಿ ಸೃಷ್ಟಿಯಾಗಿರುವ ಜನಸಂಖ್ಯಾ ಅಸಮತೋಲನದಿಂದ ಎದುರಾಗಬಹುದಾದ ಭವಿಷ್ಯದ ಸವಾಲುಗಳ ಬಗ್ಗೆ ಗಂಭೀರ ವಿಚಾರ ವಿನಿಮಯ ನಡೆದಿದೆ. ಯುವ ಸಮುದಾಯವನ್ನು ಕಾಡುತ್ತಿರುವ ಮಾದಕವಸ್ತು ಜಾಲದ ವಿಸ್ತರಣೆ ಮತ್ತು ಅದರ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಯಿತು. ಇದೇ ವೇಳೆ, ಸಂತ ಶಿರೋಮಣಿ ರವಿದಾಸ ಮಹಾರಾಜರ 650ನೇ ಜಯಂತಿ ವರ್ಷಾಚರಣೆಯ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ಆರ್‌ಎಸ್‌ಎಸ್‌ ಶತಾಬ್ದಿ ವರ್ಷದ ಕಾರ್ಯಯೋಜನೆ

ಸಂಘದ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ಈವರೆಗೆ ಪೂರ್ಣಗೊಂಡಿರುವ ವಿವಿಧ ಕಾರ್ಯಕ್ರಮಗಳ ವಿಮರ್ಶೆ ನಡೆಸಿದ ಮುಖಂಡರು, ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲು ನಿರ್ಧರಿಸಿದರು. ಶಾಖೆಗಳ ಮಟ್ಟದಲ್ಲಿ ಸಂಘದ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಹಾಗೂ ಸರಸಂಘಚಾಲಕರ 2026-27ನೇ ಸಾಲಿನ ಪ್ರವಾಸದ ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಒಟ್ಟು 226 ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.

ತರಬೇತಿ ಶಿಬಿರಗಳ ಯಶಸ್ವಿ ವಿಮರ್ಶೆ

2026ರ ಮಾರ್ಚ್‌ ನಂತರ ಸಂಘದ ವಿವಿಧ ಹಂತಗಳಲ್ಲಿ ನಡೆದ ತರಬೇತಿ ಶಿಬಿರಗಳ ಪ್ರಗತಿಯನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು. ಪ್ರಸ್ತುತ ವರ್ಷದಲ್ಲಿ ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಾ ವರ್ಗಗಳು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದ್ದು, 18,842 ಸ್ವಯಂಸೇವಕರು ತರಬೇತಿ ಪಡೆದಿದ್ದಾರೆ. ಈ ಶಿಬಿರಗಳಲ್ಲಿ ಶಾಖಾ ಸಂಚಾಲನೆ, ಸಂಘದ ಕಾರ್ಯಪದ್ಧತಿ, ಗ್ರಾಮ ವಿಕಾಸ, ವಿಪತ್ತು ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ಕುಟುಂಬ ಪ್ರಬೋಧನದಂತಹ ಮಹತ್ವದ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು.

Read More
Next Story