
ಪತಿಯೊಬ್ಬ ತನ್ನ ಪತ್ನಿಯ ಕೈಕಾಲುಗಳನ್ನು ಕಟ್ಟಿ ಹಾಕಿ, ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಅತಿ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.
ಛತ್ತೀಸ್‌ಗಢ್| ಪತ್ನಿಗೆ ಕಟ್ಟಿ ಹಾಕಿ ಚಿತ್ರಹಿಂಸೆ; ಮಕ್ಕಳ ಮುಂದೆಯೇ ಮೂತ್ರ ಕುಡಿಸಿದ ಪತಿ
ಛತ್ತೀಸ್‌ಗಢದಲ್ಲಿ ಪತ್ನಿಯ ತಲೆ ಬೋಳಿಸಿ, ಮಸಿ ಬಳಿದು, ಮಕ್ಕಳ ಮುಂದೆಯೇ ಬಲವಂತವಾಗಿ ಮೂತ್ರ ಕುಡಿಸಿ ದೌರ್ಜನ್ಯ ಎಸಗಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಕೈಕಾಲುಗಳನ್ನು ಕಟ್ಟಿ ಹಾಕಿ, ಮುಖಕ್ಕೆ ಮಸಿ ಬಳಿದು ಅತಿ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಹೆದರಿ ನಡುಗುತ್ತಿದ್ದ ತನ್ನ ನಾಲ್ಕು ಮಕ್ಕಳ ಮುಂದೆಯೇ ಆಕೆಗೆ ಬಲವಂತವಾಗಿ ಮೂತ್ರ ಕುಡಿಸಿ ವಿಕೃತ ಆನಂದ ಹೊಂದಿದ್ದಾನೆ. ಈ ಇಡೀ ಭೀಕರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಸಂತ್ರಸ್ತೆ ತಾರಾ ಮತ್ತು ಆರೋಪಿ ಜಿತೇಂದ್ರ ಘಾಸಿಯಾ ಸುಮಾರು 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ವರ್ಷಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹ, ದೈಹಿಕ ಕಿರುಕುಳ ಮತ್ತು ತೀವ್ರ ಆರ್ಥಿಕ ಸಂಕಷ್ಟದಿಂದ ಬೇಸತ್ತ ಮಹಿಳೆ, ಮಕ್ಕಳೊಂದಿಗೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜೀವನೋಪಾಯಕ್ಕಾಗಿ ಅವರು ಮನೆಗೆಲಸ ಮಾಡುತ್ತಿದ್ದರು. ಆದರೆ ಜೂನ್ 14 ರಂದು ಪತ್ನಿ ತಂಗಿದ್ದ ಜಾಗವನ್ನು ಪತ್ತೆಹಚ್ಚಿದ ಜಿತೇಂದ್ರ, ಆಕೆಯ ಚಾರಿತ್ರ್ಯವನ್ನು ಶಂಕಿಸಿ ಮನಬಂದಂತೆ ಜಗಳವಾಡಿದ್ದಾನೆ. ಬಳಿಕ ಆಕೆಯನ್ನು ಹೊರಗೆ ಎಳೆದುಕೊಂಡು ಬಂದು ಕೈಕಾಲುಗಳನ್ನು ಕಟ್ಟಿ ಹಾಕಿ, ಕೂದಲು ಕತ್ತರಿಸಿ ತಲೆ ಬೋಳಿಸಿದ್ದಾನೆ. ಮುಖಕ್ಕೆ ಇಂಜಿನ್ ಆಯಿಲ್ ಹಾಗೂ ಮಸಿ ಬಳಿದು, ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಘೋರ ಕೃತ್ಯದಲ್ಲಿ ಆರೋಪಿ ತನ್ನ ಮಕ್ಕಳನ್ನೂ ಭಾಗಿಯಾಗುವಂತೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಾಯಿಗೆ ಕಪಾಳಮೋಕ್ಷ ಮಾಡುವಂತೆ ಮಕ್ಕಳಿಗೆ ಸೂಚಿಸಿದ್ದಲ್ಲದೆ, ಮಗುವಿನ ಕೈಯಲ್ಲೇ ತಾಯಿಗೆ ಮೂತ್ರ ಕುಡಿಸಲು ಯತ್ನಿಸಿದ್ದಾನೆ. ಬಳಿಕ ತಾನೇ ಖುದ್ದಾಗಿ ಆಕೆಗೆ ಮೂತ್ರ ಕುಡಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇತ್ತ ಆರೋಪಿ ಜಿತೇಂದ್ರ, ತನ್ನ ಪತ್ನಿ ಕುಟುಂಬವನ್ನು ತೊರೆದು ಬೇರೆ ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ. ಆದರೆ ಮಹಿಳೆ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ಪತಿ ಮೊದಲಿನಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಹಾಗೂ ತನ್ನ ಚಾರಿತ್ರ್ಯವನ್ನು ಶಂಕಿಸುತ್ತಿದ್ದ ಎಂದು ಹೇಳಿ ತನಗೆ ನ್ಯಾಯ ಬೇಕೆಂದು ಆಗ್ರಹಿಸಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಕೊರಿಯಾ ಜಿಲ್ಲಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರಂಭದಲ್ಲಿ ಕೇವಲ ಕೌಟುಂಬಿಕ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗಿದ್ದರೂ, ಘಟನೆಯ ಕರಾಳತೆಯನ್ನು ಬಿಚ್ಚಿಡುವ ವಿಡಿಯೋ ಲಭ್ಯವಾದ ನಂತರ ಪೊಲೀಸರು ಪ್ರಕರಣಕ್ಕೆ ಮತ್ತಷ್ಟು ಗಂಭೀರ ಹಾಗೂ ಕಠಿಣ ಕಾನೂನು ಸೆಕ್ಷನ್‌ಗಳನ್ನು ಸೇರ್ಪಡೆಗೊಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶಾ ಚೌಬೆ ತಿಳಿಸಿದ್ದಾರೆ.

