ಒಮಾನ್‌ನಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್ ಕಿಂಗ್‌ಪಿನ್ ಸೌರಭ್ ಚಂದ್ರಾಕರ್ ಬಂಧನ
x

ಒಮಾನ್‌ನಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್ ಕಿಂಗ್‌ಪಿನ್ ಸೌರಭ್ ಚಂದ್ರಾಕರ್ ಬಂಧನ

6,000 ಕೋಟಿ ರೂ.ಗಳ ಮಹದೇವ್ ಬೆಟ್ಟಿಂಗ್ ಆಪ್ ಹಗರಣದ ಪ್ರಮುಖ ಆರೋಪಿ ಸೌರಭ್ ಚಂದ್ರಕರ್‌ನನ್ನು ಓಮನ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಇಡಿ ಕಸರತ್ತು ನಡೆಸುತ್ತಿದೆ.


ಬಹುಕೋಟಿ ರೂಪಾಯಿಗಳ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದ ಪ್ರಮುಖ ಆರೋಪಿ ಹಾಗೂ ವಿದೇಶಕ್ಕೆ ಪರಾರಿಯಾಗಿದ್ದ ಸಂಸ್ಥಾಪಕ ಸೌರಭ್ ಚಂದ್ರಾಕರ್ನನ್ನು ಒಮಾನ್‌ನಲ್ಲಿ ಬಂಧಿಸಲಾಗಿದೆ. ಇದೀಗ ಆತನನ್ನು ಭಾರತಕ್ಕೆ ಹಸ್ತಾಂತರ ಅಥವಾ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಒಮಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ (ED) ಹಾಗೂ ಛತ್ತೀಸ್‌ಗಢ ಪೊಲೀಸರು ನೀಡಿದ್ದ ಇಂಟರ್‌ಪೋಲ್ ರೆಡ್ ನೋಟಿಸ್ ಆಧಾರದ ಮೇಲೆ, ಕೆಲ ವಾರಗಳ ಹಿಂದೆ ಒಮಾನ್‌ನ ರಾಯಲ್ ಒಮಾನ್ ಪೊಲೀಸ್ ಸೌರಭ್ ಚಂದ್ರಾಕರ್‌ನನ್ನು ವಶಕ್ಕೆ ಪಡೆದಿದೆ. ಚಂದ್ರಾಕರ್ ಛತ್ತೀಸ್‌ಗಢದ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.

ಇಡಿ ತನಿಖೆಯ ಪ್ರಕಾರ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ ಛತ್ತೀಸ್‌ಗಢದ ಕೆಲವು ಉನ್ನತ ಮಟ್ಟದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಾತ್ರವೂ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟಿನ ಪ್ರಮಾಣ ಸುಮಾರು 6,000 ಕೋಟಿ ರೂ. ಎಂದು ಇಡಿ ಅಂದಾಜಿಸಿದೆ.

ಬೇರೆ ದೇಶದ ಪಾಸ್‌ಪೋರ್ಟ್ ಬಳಕೆಯ ಶಂಕೆ

ತನಿಖಾ ಸಂಸ್ಥೆಗಳ ಮಾಹಿತಿ ಪ್ರಕಾರ, ಸೌರಭ್ ಚಂದ್ರಾಕರ್ ತನ್ನ ಗುರುತು ಮರೆಮಾಚಲು ಆಗ್ನೇಯ ಏಷ್ಯಾದ ಒಂದು ದೇಶದ ಪಾಸ್‌ಪೋರ್ಟ್ ಬಳಸುತ್ತಿದ್ದ ಎಂಬ ಶಂಕೆಯಿದೆ. ಆತನ ಆಪ್ತ ಸಹಚರ ಹಾಗೂ ಮಹಾದೇವ್ ಆ್ಯಪ್ ಸಹ-ಸಂಸ್ಥಾಪಕ ರವಿ ಉಪ್ಪಲ್ ಕೂಡ ಪರಾರಿಯಾಗಿದ್ದು, ದುಬೈಯಿಂದ ದಕ್ಷಿಣ ಪೆಸಿಫಿಕ್‌ನ ವನುವಾಟು ದೇಶಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದುಬೈಯಲ್ಲೂ ಬಂಧನವಾಗಿತ್ತು

ಭಾರತೀಯ ತನಿಖಾ ಸಂಸ್ಥೆಗಳ ಪ್ರಕಾರ, ಸೌರಭ್ ಚಂದ್ರಾಕರ್ 2024ರಲ್ಲಿ ದುಬೈಯಲ್ಲಿಯೂ ಸ್ಥಳೀಯ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ. ಆದರೆ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿತ್ತು. ಈಗ ಒಮಾನ್‌ನಲ್ಲಿ ಮತ್ತೆ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಆತನನ್ನು ದೇಶಕ್ಕೆ ಕರೆತರಲು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ವೇಗಗೊಳಿಸಿದೆ.

ಭಾರತ ಮತ್ತು ಒಮಾನ್ ನಡುವಿನ ಉತ್ತಮ ರಾಜತಾಂತ್ರಿಕ ಸಂಬಂಧದಿಂದ ಈ ಪ್ರಕ್ರಿಯೆ ಯಶಸ್ವಿಯಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜೂನ್ 1ರಿಂದ ಜಾರಿಗೆ ಬಂದಿರುವ ಭಾರತ-ಒಮಾನ್ ಮುಕ್ತ ವ್ಯಾಪಾರ ಒಪ್ಪಂದ (FTA) ಕೂಡ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಿದೆ. 2025-26ನೇ ಸಾಲಿನಲ್ಲಿ ಭಾರತ-ಒಮಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರ 11.2 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದೆ.

ಜ್ಯೂಸ್ ಅಂಗಡಿಯಿಂದ ಸಾವಿರಾರು ಕೋಟಿ ಹಗರಣದವರೆಗೆ

ಸೌರಭ್ ಚಂದ್ರಾಕರ್ 2019ರಲ್ಲಿ ದುಬೈಗೆ ತೆರಳುವ ಮೊದಲು ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಭಿಲಾಯಿಯಲ್ಲಿ ತನ್ನ ಸಹೋದರನೊಂದಿಗೆ "ಜ್ಯೂಸ್ ಫ್ಯಾಕ್ಟರಿ" ಎಂಬ ಹೆಸರಿನ ಜ್ಯೂಸ್ ಅಂಗಡಿ ನಡೆಸುತ್ತಿದ್ದ. ಬಳಿಕ ದುಬೈಯಿಂದ ಮಹಾದೇವ್ ಬೆಟ್ಟಿಂಗ್ ಜಾಲವನ್ನು ನಡೆಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ಕೆಲ ವರ್ಷಗಳ ಹಿಂದೆ ಸೌರಭ್ ಚಂದ್ರಾಕರ್ ಹಾಗೂ ರವಿ ಉಪ್ಪಲ್ ಇಬ್ಬರೂ ಜಂಟಿ ಹೇಳಿಕೆ ನೀಡಿ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

ಬುರ್ಜ್ ಖಲೀಫಾದಲ್ಲೂ ಆಸ್ತಿ ಜಪ್ತಿ

ಈ ವರ್ಷದ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ, ಸೌರಭ್ ಚಂದ್ರಾಕರ್ ಹಾಗೂ ಆತನಿಗೆ ಸಂಬಂಧಿಸಿದ ಸಂಸ್ಥೆಗಳ 1,700 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಈ ಆಸ್ತಿಗಳ ಬಹುಪಾಲು ದುಬೈಯಲ್ಲಿದ್ದು, ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿರುವ ಆಸ್ತಿಗಳೂ ಇದರಲ್ಲಿ ಸೇರಿವೆ ಎಂದು ಇಡಿ ತಿಳಿಸಿತ್ತು.

ಹೇಗೆ ಕಾರ್ಯನಿರ್ವಹಿಸುತ್ತಿತ್ತು ಮಹಾದೇವ್ ಬೆಟ್ಟಿಂಗ್ ಜಾಲ?

ಇಡಿ ತನಿಖೆಯ ಪ್ರಕಾರ, ಮಹಾದೇವ್ ಆ್ಯಪ್ ಒಂದು ಅಂತರರಾಷ್ಟ್ರೀಯ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಜಾಲವಾಗಿದ್ದು, Tiger Exchange, Gold365, Laser247 ಸೇರಿದಂತೆ ಹಲವು ವೆಬ್‌ಸೈಟ್‌ಗಳು ಮತ್ತು ಡೊಮೇನ್‌ಗಳ ಮೂಲಕ ಬೆಟ್ಟಿಂಗ್ ನಡೆಸಲಾಗುತ್ತಿತ್ತು.

ಈ ಜಾಲವು ದೇಶದಾದ್ಯಂತ ಫ್ರಾಂಚೈಸಿ ಮಾದರಿಯಲ್ಲಿ 'ಪ್ಯಾನೆಲ್' ಮತ್ತು 'ಬ್ರಾಂಚ್'ಗಳ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇದರ ಸಂಪೂರ್ಣ ನಿಯಂತ್ರಣವನ್ನು ದುಬೈಯಿಂದ ಸೌರಭ್ ಚಂದ್ರಾಕರ್ ಹಾಗೂ ರವಿ ಉಪ್ಪಲ್ ನಡೆಸುತ್ತಿದ್ದರು ಎಂದು ಇಡಿ ಆರೋಪಿಸಿದೆ.

ಇದುವರೆಗೆ 13 ಮಂದಿ ಬಂಧನ

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇದುವರೆಗೆ 13 ಮಂದಿಯನ್ನು ಬಂಧಿಸಿದ್ದು, 74 ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಆರೋಪಿಗಳಾಗಿ ಹೆಸರಿಸಿದೆ. ಛತ್ತೀಸ್‌ಗಢದ ರಾಯಪುರದಲ್ಲಿರುವ ವಿಶೇಷ ಪಿಎಂಎಲ್‌ಎ (PMLA) ನ್ಯಾಯಾಲಯಕ್ಕೆ ಐದು ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ.

ಇದಲ್ಲದೆ, ಸೌರಭ್ ಚಂದ್ರಾಕರ್, ರವಿ ಉಪ್ಪಲ್ ಹಾಗೂ ಅನಿಲ್ ಅಗ್ರವಾಲ್ ಅಲಿಯಾಸ್ ಅತುಲ್ ಮತ್ತು ಶುಭಂ ಸೋನಿ ಸೇರಿದಂತೆ ಇತರ ಆರೋಪಿಗಳನ್ನು 'ಪರಾರಿಯಾದ ಆರ್ಥಿಕ ಅಪರಾಧಿಗಳು' ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

Read More
Next Story