ಬೆಂಗಳೂರಿನ ಫುಟ್ಬಾಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ವಿಶ್ವಕಪ್ ಪಂದ್ಯಗಳ ದಿನ ಮಧ್ಯರಾತ್ರಿ 3. 30ರವರೆಗೆ ಹೋಟೆಲ್‌ಗಳು ಓಪನ್​
x

ಬೆಂಗಳೂರಿನ ಫುಟ್ಬಾಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ವಿಶ್ವಕಪ್ ಪಂದ್ಯಗಳ ದಿನ ಮಧ್ಯರಾತ್ರಿ 3. 30ರವರೆಗೆ ಹೋಟೆಲ್‌ಗಳು ಓಪನ್​

ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (NRAI) ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಸರ್ಕಾರ, ಜುಲೈ 14, 15 ಹಾಗೂ 19ರಂದು ಈ ವಿಶೇಷ ಅನುಮತಿ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.


Click the Play button to hear this message in audio format

ಫಿಫಾ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಹಿನ್ನೆಲೆಯಲ್ಲಿ ಜುಲೈ 14, 15 ಹಾಗೂ 19ರಂದು ಬೆಂಗಳೂರಿನ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯರಾತ್ರಿ 3.30ರವರೆಗೆ ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಫುಟ್ಬಾಲ್ ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಕ್ರೀಡಾಭಿಮಾನಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿಶ್ವಕಪ್ ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಧ್ಯರಾತ್ರಿ 3.30 ಗಂಟೆಯವರೆಗೆ ಆಹಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (NRAI) ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಸರ್ಕಾರ, ಜುಲೈ 14, 15 ಹಾಗೂ 19ರಂದು ಈ ವಿಶೇಷ ಅನುಮತಿ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.

ಫಿಫಾ ವಿಶ್ವಕಪ್‌ನ ಪ್ರಮುಖ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ತಡರಾತ್ರಿ ನಡೆಯಲಿರುವ ಕಾರಣ, ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಯಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ವಿಶೇಷ ಆದೇಶ ಹೊರಡಿಸಿದ್ದು, ಈ ಮೂರು ದಿನಗಳಲ್ಲಿ ತಡರಾತ್ರಿವರೆಗೆ ಪಂದ್ಯಗಳ ನೇರ ಪ್ರಸಾರ ಹಾಗೂ ಆಹಾರ ಸೇವೆಗೆ ಅವಕಾಶ ನೀಡಲಾಗಿದೆ.

ಈ ಸಡಿಲಿಕೆ ಕೇವಲ ನಿರ್ದಿಷ್ಟ ದಿನಗಳಿಗೆ ಮಾತ್ರ ಅನ್ವಯವಾಗಲಿದ್ದು, ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಜವಾಬ್ದಾರಿ.

ವಿಶ್ವಕಪ್‌ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ದೊಡ್ಡ ಪರದೆಗಳಲ್ಲಿ ವೀಕ್ಷಿಸಲು ಸಿದ್ಧತೆ ನಡೆಸಿರುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಈ ಆದೇಶದಿಂದ ಅನುಕೂಲವಾಗಲಿದೆ. ಜೊತೆಗೆ, ಮಧ್ಯರಾತ್ರಿವರೆಗೂ ಪಂದ್ಯ ವೀಕ್ಷಿಸಲು ಬಯಸುವ ಸಾವಿರಾರು ಫುಟ್ಬಾಲ್ ಅಭಿಮಾನಿಗಳಿಗೂ ಸರ್ಕಾರದ ಈ ನಿರ್ಧಾರ ಸಂತಸ ಮೂಡಿಸಿದೆ.

Read More
Next Story