ದಿಲ್ಜಿತ್ ನಟನೆಯ 'ಸತ್ಲುಜ್' ಸಿನಿಮಾ ಭಾರತದಲ್ಲಿ ಬ್ಯಾನ್ ಆಗಿದ್ದೇಕೆ?
127 ಕಟ್, ಮೂರು ಬಾರಿ ಹೆಸರು ಬದಲಿಸಿಕೊಂಡರೂ ಬಿಡುಗಡೆ ವಿವಾದ ತಪ್ಪಲಿಲ್ಲ. ದಿಲ್ಜಿತ್ ದೋಸಾಂಜ್ ನಟನೆಯ 'ಪಂಜಾಬ್ 95' ಸಿನಿಮಾ ಯಾಕೆ ಬ್ಯಾನ್ ಆಯಿತು? ಇಲ್ಲಿದೆ ಸಂಪೂರ್ಣ ಮಾಹಿತಿ.
ಪಂಜಾಬ್‌ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನಾಧಾರಿತ ಚಿತ್ರ 'ಪಂಜಾಬ್ 95' ಮತ್ತೊಮ್ಮೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪಂಜಾಬಿನ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಹಾಗೂ ಅರ್ಜುನ್ ರಾಂಪಾಲ್ ಅಭಿನಯಿಸಿರುವ ಈ ಚಿತ್ರ ಸೆನ್ಸಾರ್ ವಿವಾದ, ಹೆಸರು ಬದಲಾವಣೆ ಮತ್ತು ಓಟಿಟಿಯಿಂದ ತೆರವುಗೊಳಿಸಿದ ಬೆಳವಣಿಗೆಗಳಿಂದ ಸುದ್ದಿಯಲ್ಲಿದೆ.
ಈ ಚಿತ್ರವನ್ನು ಆರಂಭದಲ್ಲಿ 'ಘಲ್ಲುಘಾರಾ' ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಬಳಿಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ 'ಪಂಜಾಬ್ 95' ಎಂದು ಮರುನಾಮಕರಣ ಮಾಡಲಾಯಿತು. ನಂತರ ಓಟಿಟಿ ಬಿಡುಗಡೆಗಾಗಿ 'ಸತ್ಲುಜ್' ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಯಿತು. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಚಿತ್ರವನ್ನು ಓಟಿಟಿ ವೇದಿಕೆಯಿಂದ ತೆಗೆದುಹಾಕಲಾಯಿತು.
ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಆರಂಭದಲ್ಲಿ ಹಲವು ತಿದ್ದುಪಡಿಗಳನ್ನು ಸೂಚಿಸಿತ್ತು. ನಂತರ ಈ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗಿದ್ದು, ಅಂತಿಮವಾಗಿ 127ಕ್ಕೂ ಹೆಚ್ಚು ದೃಶ್ಯಗಳಿಗೆ ಕಟ್ ಅಥವಾ ತಿದ್ದುಪಡಿ ಸೂಚನೆ ನೀಡಲಾಗಿದೆ ಎಂಬ ಆರೋಪ ಚಿತ್ರತಂಡದಿಂದ ಕೇಳಿಬಂದಿತು. ನಿರ್ದೇಶಕ ಹನಿ ತ್ರೇಹಾನ್, ಇಷ್ಟು ತಿದ್ದುಪಡಿಗಳ ಬಳಿಕ ಚಿತ್ರದ ಮೂಲ ಆಶಯವೇ ಕಳೆದುಹೋಗುತ್ತದೆ ಎಂದು ಹೇಳಿ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡದೆ ಓಟಿಟಿಗೆ ತರುವ ನಿರ್ಧಾರ ಕೈಗೊಂಡಿದ್ದರು.

