x

ಜಿಬಿಎಗೆ ಚುನಾವಣೆಗೆ ಸುಪ್ರೀಂ ಬ್ರೇಕ್‌, ಬಿಡದಿ ಕದನಕ್ಕೆ ಯಡಿಯೂರಪ್ಪ ಎಂಟ್ರಿ, ಸಂಪುಟಕ್ಕೆ 12 ಹೊಸ ಮುಖ

ಜಿಬಿಎ ಚುನಾವಣಾ ಗಡುವನ್ನು ಸುಪ್ರೀಂಕೋರ್ಟ್‌ ಆಗಸ್ಟ್ 31ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಬಿಡದಿ ಟೌನ್‌ಶಿಪ್‌ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಸರ್ಕಾರದ ವಿರುದ್ಧ ಕೇಸರಿ ಪಡೆ ಕಹಳೆ ಮೊಳಗಿಸಿದೆ. ಎಐಸಿಸಿ ವರಿಷ್ಠರು ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.


ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಮತ್ತೆ ಗ್ರಹಣ ಹಿಡಿದಿದೆ. ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆ ಜಿಬಿಎ ಚುನಾವಣೆ ಗಡುವು ವಿಸ್ತರಿಸುವಂತೆ ಕೋರಿದ್ದ ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ಮನವಿ ಪುರಸ್ಕರಿಸಿರುವ ಸುಪ್ರೀಂಕೋರ್ಟ್, ಡಿಸೆಂಬರ್ 31ರ ಒಳಗೆ ಚುನಾವಣೆ ನಡೆಸಲು ಕಾಲಾವಕಾಶ ನೀಡಿದೆ.

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಈ ಹೊಸ ಗಡುವು ನೀಡಲಾಗಿದೆ. ಆ ಮೂಲಕ ಬೆಂಗಳೂರಿಗರು ವರ್ಷಗಳಿಂದ ಕಾಯುತ್ತಿರುವ ಜಿಬಿಎ ಚುನಾವಣೆ ಮತ್ತೆ ಗ್ರಹಣ ಹಿಡಿದಿದೆ.

ರಾಜ್ಯದಲ್ಲಿ ಜೂನ್ 30ರಿಂದ ಆರಂಭವಾಗಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಇಡೀ ಆಡಳಿತ ಯಂತ್ರ ಮತ್ತು ನೌಕರರು ತೊಡಗಿಸಿಕೊಂಡಿದ್ದಾರೆ. ಜಿಬಿಎ ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಲಿದೆ. ಗಡುವಿನೊಳಗೆ ಚುನಾವಣೆ ನಡೆಸುವುದು ತಾಂತ್ರಿಕವಾಗಿ ಅಸಾಧ್ಯ. ಹಾಗಾಗಿ, ಕಾಲಾವಕಾಶ ವಿಸ್ತರಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ರಾಜ್ಯದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಸರ್ಕಾರದ ಮನವಿಯನ್ನು ಪುರಸ್ಕರಿಸಿತು. ಚುನಾವಣಾ ಗಡುವನ್ನು ಆಗಸ್ಟ್ 31ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಬಿಡದಿ ಟೌನ್‌ಶಿಪ್‌ ಯೋಜನೆಗೆ ರೈತರ ತೀವ್ರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಮುಂದಾಗಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ವಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ.

ಸರ್ಕಾರದ ಧೋರಣೆ ಖಂಡಿಸಿ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಬೃಹತ್ ಹೋರಾಟಕ್ಕೆ ಇಳಿದಿವೆ. ಇದುವರೆಗೆ ಬಿಡದಿ ವಿಚಾರವಾಗಿ ಜೆಡಿಎಸ್ ಮಾತ್ರವೇ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿತ್ತು, ಆದರೆ ಈಗ ಮೈತ್ರಿ ಧರ್ಮದಂತೆ ಬಿಜೆಪಿಯು ರೈತರ ಪರವಾಗಿ ಅಖಾಡಕ್ಕೆ ಧುಮುಕಿದೆ.

ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಕಹಳೆ ಮೊಳಗಿಸಿದೆ.

ಬಿಜೆಪಿ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಹಿರಿಯ ಮುಖಂಡರಾದ ಸಿ.ಟಿ. ರವಿ, ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಬಿಡದಿ ರೈತರು ಭಾಗವಹಿಸಿದ್ದರು.

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ಆಡಳಿತಕ್ಕೆ ಹೊಸ ಚೈತನ್ಯ ತುಂಬಲು ಎಐಸಿಸಿ ವರಿಷ್ಠರು ಹೊಸ ಮುಖಗಳಿಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.

ಈ ಬಾರಿ ಸಂಪುಟದಲ್ಲಿ ಸುಮಾರು ಶೇ 60 ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.

ಪಕ್ಷದ ಹಿರಿಯ ನಾಯಕರ ಅನುಭವದ ಜೊತೆಗೆ ಯುವಕರಿಗೆ ಆದ್ಯತೆ ನೀಡುವುದು ವರಿಷ್ಠರ ಉದ್ದೇಶ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಯುವ ಮತ್ತು ಕ್ರಿಯಾಶೀಲ ಸಚಿವರ ತಂಡ ರೂಪಿಸಲು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮಾಸ್ಟರ್‌ ಪ್ಲಾನ್ ರೂಪಿಸಿದ್ದು, ಅರ್ಹತೆಯ ಆಧಾರದ ಮೇಲೆ ಸಚಿವರನ್ನು ಆಯ್ಕೆ ಮಾಡಲು ಕೆಲ ಪ್ರಮುಖ ಮಾನದಂಡಗಳನ್ನು ನಿಗದಿಪಡಿಸಿದ್ದಾರೆ.

Read More
Next Story