x

ಬಿಡದಿ ಟೌನ್‌ಶಿಪ್‌ಗೆ ಸಂತೋಷ್ ಹೆಗ್ಡೆ ವಿರೋಧ | RSS ನೋಂದಣಿ ವಿವಾದ ಬಗ್ಗೆ ಖಡಕ್ ಮಾತು

ಬಿಡದಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಜಸ್ಟಿಸ್ ಸಂತೋಷ್ ಹೆಗ್ಡೆ, ಭೂಸ್ವಾಧೀನದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


Click the Play button to hear this message in audio format

ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ದೇಶದ ಪ್ರಸ್ತುತ ವಿದ್ಯಮಾನಗಳು, ರೈತರ ಸಮಸ್ಯೆಗಳು, ಕಾನೂನು ಮತ್ತು ಸಮಾಜದ ಮೌಲ್ಯಗಳ ಕುರಿತು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ್ದಾರೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿದ್ದರು. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದರೂ, ರೈತರ ನೋವು ನೋಡಿ ಸುಮ್ಮನಿರಲಾಗದೆ ಹೊರಬಂದಿರುವುದಾಗಿ ತಿಳಿಸಿದ್ದಾರೆ.

ಬಿಡದಿಯಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ರೈತರ ಪರವಾಗಿ ಧ್ವನಿ ಎತ್ತಿರುವ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗಡೆ ಅವರು, ದೇಶದಲ್ಲಿ ರೈತರು ಮತ್ತು ಪ್ರಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಅವರು, ಆಹಾರ ನೀಡುವ ರೈತನನ್ನು ಇವತ್ತು ಸಮಾಜ ತಿನ್ನುವಾಗಲೂ ನೆನೆಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ತೆಂಗು, ಅಡಿಕೆ ಹಾಗೂ ರೇಷ್ಮೆಯಂತಹ ಫಲವತ್ತಾದ ಕೃಷಿ ಭೂಮಿಯ ಸುಮಾರು ಏಳು ಲಕ್ಷ ಮರಗಳನ್ನು ಕಡಿಯಲು ಮುಂದಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಕೈಗಾರಿಕೆ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರದ ಬಳಿ ಸಾಕಷ್ಟು ಬಂಜರು ಜಮೀನುಗಳಿದ್ದರೂ, ರೈತರ ಹೊಟ್ಟೆಯ ಮೇಲೆ ಹೊಡೆದು ಕೃಷಿ ಭೂಮಿಯನ್ನೇ ವಶಪಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ತಕ್ಷಣವೇ ನ್ಯಾಯ ಒದಗಿಸುವಂತೆ ಅವರು ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಪತ್ರ ಬರೆದು ಆಗ್ರಹಿಸಿದ್ದಾರೆ.

ಆರ್‌ಎಸ್‌ಎಸ್ ನೋಂದಣಿ ಹಾಗೂ ಕಾನೂನಿನ ಚೌಕಟ್ಟು

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಮತ್ತು ಪಥಸಂಚಲನಕ್ಕೆ ಅನುಮತಿ ಪಡೆಯುವ ಗೃಹ ಸಚಿವರ ಹೇಳಿಕೆಗಳ ಬಗ್ಗೆ ಹೆಗಡೆ ಅವರು ಕಾನೂನಾತ್ಮಕ ವಿಶ್ಲೇಷಣೆ ನಡೆಸಿದ್ದಾರೆ. ಸಂವಿಧಾನಾತ್ಮಕವಾಗಿ ಪ್ರತಿಯೊಂದು ಸಂಘಟನೆಗೂ ತನ್ನದೇ ಆದ ಹಕ್ಕುಗಳಿದ್ದು, ಆರ್‌ಎಸ್‌ಎಸ್ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿದ್ದರೆ ಮಾತ್ರ ಕ್ರಮ ಜರುಗಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆರ್‌ಎಸ್‌ಎಸ್ ಯಾವ ಕಾನೂನಿನ ಅಡಿಯಲ್ಲಿ ನೋಂದಣಿಯಾಗಬೇಕಿತ್ತು ಎಂಬುದನ್ನು ಮೊದಲು ಸಂಬಂಧಪಟ್ಟ ನೋಂದಣಿ ಪ್ರಾಧಿಕಾರವೇ ನೋಟಿಸ್ ಜಾರಿ ಮಾಡಿ ಸ್ಪಷ್ಟಪಡಿಸಬೇಕು ಎಂದು ಅವರು ನುಡಿದಿದ್ದಾರೆ. ಇನ್ನು ಪಥಸಂಚಲನಕ್ಕೆ ಸಂಬಂಧಿಸಿದಂತೆ ಸಂಚಾರ ದಟ್ಟಣೆ ಹಾಗೂ ಸುರಕ್ಷತೆಯ ಕಾರಣಕ್ಕಾಗಿ ಪೊಲೀಸ್ ಅನುಮತಿ ಕಡ್ಡಾಯವೇ ಹೊರತು, ನೋಂದಣಿಯ ಹೆಸರಿನಲ್ಲಿ ರಾಜಕೀಯ ಪ್ರೇರಿತ ತಾರತಮ್ಯ ಮಾಡುವುದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಜಸ್ಟಿಸ್ ಹೆಗಡೆ ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷಾತೀತ ನಿಲುವು ಹಾಗೂ ಸಮಾಜದಲ್ಲಿ ಮೌಲ್ಯಗಳ ಕುಸಿತದ ಬಗ್ಗೆ ಕಳವಳ

ತಮ್ಮ ತಂದೆಯವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರೂ ಸಹ, ತಾವು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಅಂದಿನ ಬಿಜೆಪಿ ಮುಖ್ಯಮಂತ್ರಿಗಳ ವಿರುದ್ಧವೇ ವರದಿ ನೀಡಿದ್ದನ್ನು ನೆನಪಿಸಿಕೊಂಡ ಹೆಗಡೆ ಅವರು, ತಾವು ಸದಾ ಪಕ್ಷಾತೀತ ಹಾಗೂ ಕಾನೂನಿನ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಇಂದಿನ ಸಮಾಜವು ಕೇವಲ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುತ್ತಿದ್ದು, ತಪ್ಪು ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಭ್ರಷ್ಟಾಚಾರವನ್ನು ಕೇವಲ ಕಾನೂನಿನಿಂದ ತಡೆಯಲು ಸಾಧ್ಯವಿಲ್ಲ, ಬದಲಿಗೆ ಸಮಾಜದಲ್ಲಿ ನೈತಿಕ ಬದಲಾವಣೆಗಳು ಬರಬೇಕಾಗಿದೆ. ಯುವ ಪೀಳಿಗೆಯಲ್ಲಿ ಪ್ರಾಮಾಣಿಕತೆ ಮತ್ತು ತೃಪ್ತಿಯ ಭಾವನೆಯನ್ನು ಮೂಡಿಸಲು ಶಾಲಾ ಹಂತದಿಂದಲೇ ನೀತಿಪಾಠಗಳನ್ನು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತರು ಈ ಸಂದರ್ಭದಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.

Read More
Next Story