x

ನಾಗೇಂದ್ರ ಮರುಸಚಿವ ಸ್ಥಾನ: ಪ್ರತಿಪಕ್ಷಗಳ ಒತ್ತಾಯ, ಕಾಂಗ್ರೆಸ್ ಒಳಗೆ ಮೌನ

ನಾಗೇಂದ್ರ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕಾರಣ ಅವರನ್ನು ಸಂಪುಟದಿಂದ ತೆಗೆಯುವುದು ಸುಲಭವಲ್ಲ. ಆದರೆ, ಅವರನ್ನು ತೆಗೆದರೆ ರಗಳೆ ಇಲ್ಲ ಎನ್ನುವ ನಿಲುವು ಸಿಎಂ ಡಿಕೆಶಿ ಅವರದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ.


ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪ್ರಕರಣದ ಆರೋಪಗಳು ಮತ್ತು ತನಿಖೆ ಮುಂದುವರಿದಿರುವ ನಡುವೆಯೇ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಪ್ರಶ್ನಿಸುತ್ತಿದ್ದು, ರಾಜೀನಾಮೆಗೆ ಒತ್ತಾಯಿಸುತ್ತಿದೆ. ಇದರಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿದೆ.

ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಪ್ರಕರಣದ ಹಿನ್ನೆಲೆಯಲ್ಲಿ ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ 2026ರ ಆಗಸ್ಟ್‌ನಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತನಿಖಾ ಸಂಸ್ಥೆಗಳ ಆರೋಪಪಟ್ಟಿ ಮುಂದುವರಿದಿರುವ ಸಂದರ್ಭದಲ್ಲೇ ಅವರಿಗೆ ಸಚಿವ ಸ್ಥಾನ ನೀಡಿರುವುದು ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮತ್ತೊಮ್ಮೆ ದಾಳಿ ನಡೆಸಲು ಪ್ರಮುಖ ಅಸ್ತ್ರವಾಗಿದೆ.

ಆದರೆ ನಾಗೇಂದ್ರ ವಿಚಾರದಲ್ಲಿ ಕಾಂಗ್ರೆಸ್​​ನಲ್ಲಿ ಮೌನವೇ ಹೆಚ್ಚಿದೆ. ನಾಗೇಂದ್ರ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕಾರಣ ಅವರನ್ನು ಸಂಪುಟದಿಂದ ತೆಗೆಯುವುದು ಸುಲಭವಲ್ಲ. ಆದರೆ, ಅವರನ್ನು ತೆಗೆದರೆ ರಗಳೆ ಇಲ್ಲ ಎನ್ನುವ ನಿಲುವು ಸಿಎಂ ಡಿಕೆಶಿ ಅವರದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ.

ವಾಲ್ಮೀಕಿ ನಿಗಮದ ಪ್ರಕರಣವೇ ಪ್ರಮುಖ ಅಸ್ತ್ರ

ನಾಗೇಂದ್ರ ಅವರ ಮರುಸೇರ್ಪಡೆಯನ್ನು ಪ್ರಶ್ನಿಸುತ್ತಿರುವ ಪ್ರತಿಪಕ್ಷಗಳು ಮುಖ್ಯವಾಗಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಮುಂದಿಟ್ಟುಕೊಂಡಿವೆ. ನಿಗಮದ ಖಾತೆಗಳಲ್ಲಿ ಸುಮಾರು 187 ಕೋಟಿ ರೂಪಾಯಿ ಹಣವನ್ನು ಒಟ್ಟುಗೂಡಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿದ್ದರೆ, ಅದರಲ್ಲಿ 89.63 ಕೋಟಿ ರೂಪಾಯಿಯನ್ನು ನಕಲಿ ದಾಖಲೆಗಳು, ಚೆಕ್‌ಗಳು ಮತ್ತು ಆರ್‌ಟಿಜಿಎಸ್ ವಹಿವಾಟುಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ಸಿಬಿಐ ಆರೋಪ.

ಈ ಹಣ ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ಹಲವು ಹಂತಗಳಲ್ಲಿ ವರ್ಗಾವಣೆಯಾಗಿ, ಬಳಿಕ ನಗದು, ಚಿನ್ನ ಮತ್ತು ದುಬಾರಿ ವಸ್ತುಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪವೂ ಇದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಸರ್ಕಾರದ ನಿರ್ಧಾರದ ಬಗ್ಗೆ ಪ್ರಶ್ನೆ ಮೂಡಿಸುತ್ತದೆ ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ.

ಇಡಿ ತನಿಖೆ, ಆಸ್ತಿ ಜಪ್ತಿ ಕೂಡ ಪ್ರತಿಪಕ್ಷಗಳ ಅಸ್ತ್ರ

ವಾಲ್ಮೀಕಿ ನಿಗಮದ ಪ್ರಕರಣದ ತನಿಖೆ ಕೇವಲ ಆರೋಪಪಟ್ಟಿಗೆ ಸೀಮಿತವಾಗಿಲ್ಲ. 2024ರಲ್ಲಿ ಇಡಿ ನಾಗೇಂದ್ರ ಅವರಿಗೆ ಸಂಬಂಧಿಸಿದ ಸ್ಥಳಗಳೂ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಕಡೆ ಶೋಧ ನಡೆಸಿತ್ತು. ನಿಗಮದ ಹಣವನ್ನು ನಕಲಿ ಖಾತೆಗಳು ಮತ್ತು ಶೆಲ್ ಸಂಸ್ಥೆಗಳ ಮೂಲಕ ಹಲವು ಹಂತಗಳಲ್ಲಿ ವರ್ಗಾಯಿಸಲಾಗಿದೆ ಎಂಬ ಆರೋಪವನ್ನು ಇಡಿ ಮಾಡಿತ್ತು.

2025ರಲ್ಲೂ ತನಿಖೆ ಮುಂದುವರಿದಿದ್ದು, ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಬಳಿಕ ನಾಗೇಂದ್ರ ಅವರಿಗೆ ಸೇರಿದ 8.07 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿತ್ತು. ಈ ಬೆಳವಣಿಗೆಗಳನ್ನೂ ಪ್ರತಿಪಕ್ಷಗಳು ಸರ್ಕಾರದ ವಿರುದ್ಧದ ರಾಜಕೀಯ ವಾದಕ್ಕೆ ಬಳಸುತ್ತಿವೆ.

ಸಿಬಿಐ ಆರೋಪಪಟ್ಟಿಯಿಂದ ಮತ್ತಷ್ಟು ಒತ್ತಡ

2026ರ ಜೂನ್‌ನಲ್ಲಿ ಸಿಬಿಐ ನಾಗೇಂದ್ರ ಸೇರಿದಂತೆ 30 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದು ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದೆ. ವಾಲ್ಮೀಕಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಆರೋಪಪಟ್ಟಿಗಳಲ್ಲೂ ನಾಗೇಂದ್ರ ಅವರ ಹೆಸರು ಬಂದಿದೆ ಎಂದು ವರದಿಯಾಗಿದೆ.

ಇದರ ಜತೆಗೆ 13.95 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಲು ಪ್ರತಿಯಾಗಿ ನಾಗೇಂದ್ರ ಅವರಿಗೆ 1.20 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂಬ ಆರೋಪವನ್ನೂ ಸಿಬಿಐ ಮಾಡಿದೆ. ಈ ಆರೋಪಗಳು ಮುಂದುವರಿದಿರುವ ಸಂದರ್ಭದಲ್ಲೇ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಪಕ್ಷಗಳ ರಾಜಕೀಯ ದಾಳಿಯನ್ನು ಎದುರಿಸುವ ಅನಿವಾರ್ಯತೆ ತಂದಿದೆ.

ಚುನಾವಣಾ ಹಣದ ಆರೋಪವೂ ಮುನ್ನೆಲೆಗೆ

ಪ್ರಕರಣದಲ್ಲಿ ಅಕ್ರಮವಾಗಿ ವರ್ಗಾವಣೆಯಾದ ಹಣದ ಒಂದು ಭಾಗವನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂಬ ಇಡಿ ಆರೋಪವೂ ಇದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾ ಚಟುವಟಿಕೆಗಳಿಗೆ ಹಾಗೂ ನಾಗೇಂದ್ರ ಅವರ ವೈಯಕ್ತಿಕ ಖರ್ಚಿಗೆ 20.19 ಕೋಟಿ ರೂಪಾಯಿ ಬಳಸಲಾಗಿದೆ ಎಂದು ಇಡಿ ಹೇಳಿದೆ.

ಇದಲ್ಲದೆ, ಬಳ್ಳಾರಿ, ಬಳ್ಳಾರಿ ಗ್ರಾಮೀಣ, ಕಂಪ್ಲಿ ಮತ್ತು ಕೂಡ್ಲಿಗಿ ಕ್ಷೇತ್ರಗಳ ಸುಮಾರು 7.5 ಲಕ್ಷ ಮತದಾರರಿಗೆ ಹಣ ಹಂಚಲು ಸುಮಾರು 21 ಕೋಟಿ ರೂಪಾಯಿ ಬಳಸಲಾಗಿದೆ ಎಂಬ ಆರೋಪವೂ ಇಡಿ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಈ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ರಾಜಕೀಯವಾಗಿ ಮತ್ತಷ್ಟು ಒತ್ತಡ ಹೇರುವ ಸಾಧ್ಯತೆ ಇದೆ.

ಕಾಂಗ್ರೆಸ್‌ಗೆ ರಾಜಕೀಯ ಇಕ್ಕಟ್ಟು ಏಕೆ?

ನಾಗೇಂದ್ರ ವಿರುದ್ಧದ ಆರೋಪಗಳೆಲ್ಲವೂ ನ್ಯಾಯಾಲಯದಲ್ಲಿ ಅಂತಿಮವಾಗಿ ಸಾಬೀತಾಗಿಲ್ಲ. ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. ಹೀಗಾಗಿ ಕಾನೂನಿನ ದೃಷ್ಟಿಯಿಂದ ಆರೋಪಪಟ್ಟಿ ಸಲ್ಲಿಕೆಯೇ ಅಪರಾಧ ಸಾಬೀತಾದಂತಲ್ಲ. ಆದರೆ ರಾಜಕೀಯವಾಗಿ ಪರಿಸ್ಥಿತಿ ಭಿನ್ನವಾಗಿದೆ. ಹಿಂದೆ ಇದೇ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವ್ಯಕ್ತಿಯನ್ನು ತನಿಖೆ ಮುಂದುವರಿದಿರುವಾಗಲೇ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಪರಿಸ್ಥಿತಿ ತಂದಿದೆ. ತನಿಖಾ ಸಂಸ್ಥೆಗಳ ಆರೋಪಪಟ್ಟಿ, ಇಡಿ ದಾಳಿ, ಆಸ್ತಿ ಜಪ್ತಿ ಮತ್ತು ಹಣದ ಅಕ್ರಮ ವರ್ಗಾವಣೆ ಆರೋಪಗಳನ್ನು ಒಟ್ಟಾಗಿ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿದೆ.

Read More
Next Story