x

ಮಂಡ್ಯಕ್ಕೆ ಬರಬೇಕಿದ್ದ ಬೃಹತ್ ಕೈಗಾರಿಕೆಗಳಿಗೆ ಬ್ರೇಕ್: ಭೂಮಿ ಹಂಚಿಕೆ ವಿಳಂಬದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ವಿಳಂಬದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ನಡುವಿನ ರಾಜಕೀಯ ಪೈಪೋಟಿ ಕೆಲಸ ಮಾಡುತ್ತಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.


Click the Play button to hear this message in audio format

ಮಂಡ್ಯ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಹಾಗೂ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗಳು ಇದೀಗ ರಾಜಕೀಯ ಸಂಘರ್ಷದ ಸುಳಿಗೆ ಸಿಲುಕಿವೆ. ಕೇಂದ್ರ ಸರ್ಕಾರದ ಮಹತ್ವದ ಕೈಗಾರಿಕಾ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಮಂಜೂರು ಮಾಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಉದ್ಯೋಗ ಸೃಷ್ಟಿಗೆ ಕಾರಣವಾಗಬೇಕಿದ್ದ ವಿಚಾರವೊಂದು ಇದೀಗ ಮಂಡ್ಯದ ಅಭಿವೃದ್ಧಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ವತಿಯಿಂದ ಎರಡು ಪ್ರಮುಖ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್ ವಾಹನಗಳ (EV) ಪರೀಕ್ಷಾ ಕೇಂದ್ರಗಳು ಮಂಡ್ಯದ ಕೈಗಾರಿಕಾ ಚಿತ್ರಣವನ್ನೇ ಬದಲಿಸಬಲ್ಲ ಮಹತ್ವದ ಯೋಜನೆಗಳಾಗಿವೆ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ತಂಡವು ಮಂಡ್ಯ ತಾಲೂಕಿನ ಬಸರಾಳು, ಮೈಶುಗರ್ ಹಾಗೂ ಕೆ.ಆರ್. ಪೇಟೆ ಭಾಗಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತ್ತು. ಅಂತಿಮವಾಗಿ ಬಸರಾಳು ಬಳಿ ಪರೀಕ್ಷಾ ಕೇಂದ್ರಗಳಿಗೆ ಅನುಕ್ರಮವಾಗಿ 100 ಎಕರೆ ಹಾಗೂ 60 ಎಕರೆ ಸೇರಿ ಒಟ್ಟು 160 ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ, ಕಳೆದ ಹತ್ತು ತಿಂಗಳುಗಳಿಂದ ಸತತ ಸಭೆಗಳು, ಪತ್ರ ವ್ಯವಹಾರ ಹಾಗೂ ತಾಂತ್ರಿಕ ಮೌಲ್ಯಮಾಪನಗಳು ನಡೆದಿದ್ದರೂ ರಾಜ್ಯ ಸರ್ಕಾರ ಮತ್ತು ಕೆಐಎಡಿಬಿ (KIADB) ಭೂಮಿ ಮಂಜೂರು ಮಾಡದೆ ಸತಾಯಿಸುತ್ತಿದೆ ಎನ್ನುವುದು ಕುಮಾರಸ್ವಾಮಿ ಅವರ ಪ್ರಮುಖ ಆಕ್ಷೇಪ. ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುದೀರ್ಘ ಪತ್ರ ಬರೆದು ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಅಭಿವೃದ್ಧಿಗೆ ಅಡ್ಡಿಯಾಯ್ತಾ ದ್ವೇಷದ ರಾಜಕಾರಣ?

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ವಿಳಂಬದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ನಡುವಿನ ರಾಜಕೀಯ ಪೈಪೋಟಿ ಕೆಲಸ ಮಾಡುತ್ತಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ರಾಮನಗರ ಜಿಲ್ಲೆಯ ಬಿಡದಿ ಸಮಗ್ರ ನಗರ ಯೋಜನೆಯನ್ನು ಜೆಡಿಎಸ್ ತೀವ್ರವಾಗಿ ವಿರೋಧಿಸುತ್ತಿದೆ. ರೈತರ ಭೂಸ್ವಾಧೀನದ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಜೆಡಿಎಸ್ ನಡೆಯಿಂದಾಗಿ, ಅದಕ್ಕೆ ಪ್ರತಿಯಾಗಿ ಮಂಡ್ಯದ ಕೈಗಾರಿಕಾ ಯೋಜನೆಗಳಿಗೆ ಸರ್ಕಾರ ಬ್ರೇಕ್ ಹಾಕಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಮಂಡ್ಯ ಮತ್ತು ರಾಮನಗರ ಭಾಗಗಳಲ್ಲಿ ಒಕ್ಕಲಿಗ ಸಮುದಾಯದ ರಾಜಕೀಯ ಪ್ರಾಬಲ್ಯವಿದ್ದು, ಇಲ್ಲಿನ ರಾಜಕೀಯ ಮೇಲುಗೈ ಸಾಧಿಸುವ ಪೈಪೋಟಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಬಲಿಯಾಗುತ್ತಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಭವಿಷ್ಯದ ಆತಂಕ

ಕರ್ನಾಟಕವು ದೇಶದ ವಾಹನ ಉತ್ಪಾದನೆ ಮತ್ತು ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯಲ್ಲಿದೆ. ಮಂಡ್ಯದಲ್ಲಿ ಈ ಪರೀಕ್ಷಾ ಕೇಂದ್ರಗಳು ಆರಂಭವಾದರೆ, ರಸ್ತೆ ನಿರ್ಮಾಣ ಮತ್ತು ಕಟ್ಟಡ ಕಾಮಗಾರಿ ಯಂತ್ರಗಳ ಗುಣಮಟ್ಟವನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಇವಿ ಪರೀಕ್ಷಾ ಕೇಂದ್ರವು ವಾಹನಗಳ ಸುರಕ್ಷತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಪ್ರಮುಖ ಪಾತ್ರ ವಹಿಸುತ್ತದೆ. ಕೇಂದ್ರಗಳು ಕಾರ್ಯಾರಂಭ ಮಾಡಿದರೆ, ತಾಂತ್ರಿಕ ಸಂಶೋಧನೆ ಮತ್ತು ಪೂರಕ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಬೆಳೆಯಲಿವೆ. ಇದರಿಂದ ಸ್ಥಳೀಯ ಯುವಕರಿಗೆ ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಆದರೆ, ಸಾರ್ವಜನಿಕ ಪ್ರಾಮುಖ್ಯತೆ ಇರುವ ಇಂತಹ ಪ್ರತಿಷ್ಠಿತ ಯೋಜನೆಗಳನ್ನು ಕೇವಲ ರಾಜಕೀಯ ಕಾರಣಗಳಿಗಾಗಿ ವಿಳಂಬ ಮಾಡುವುದು ರಾಜ್ಯದ ಹಿತದೃಷ್ಟಿಯಿಂದ ಸೂಕ್ತವಲ್ಲ. ದ್ವೇಷದ ರಾಜಕಾರಣವನ್ನು ಬದಿಗಿಟ್ಟು, ರಾಜ್ಯ ಸರ್ಕಾರವು ಕೂಡಲೇ ಈ ಯೋಜನೆಗಳಿಗೆ ಭೂಮಿ ಮಂಜೂರು ಮಾಡಬೇಕು ಎಂದು ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ರಾಜಕೀಯ ನಾಯಕರ ಪ್ರತಿಷ್ಠೆಯ ಮೇಲಾಟಗಳ ನಡುವೆ ಮಂಡ್ಯದ ಯುವಜನತೆಯ ಭವ್ಯ ಭವಿಷ್ಯ ಹಾಗೂ ಉದ್ಯೋಗದ ಕನಸು ಕಮರಿಹೋಗದಿರಲಿ ಎಂಬುದೇ ಈ ಭಾಗದ ಜನರ ಪ್ರಮುಖ ಆಶಯವಾಗಿದೆ.

Read More
Next Story