ವಿದ್ಯಾರ್ಥಿ ವಿವಸ್ತ್ರಗೊಳಿಸಿ ಹಲ್ಲೆ: ರಿಮ್ಯಾಂಡ್ ವರದಿ
ಪಶುವೈದ್ಯಕೀಯ ವಿದ್ಯಾರ್ಥಿ ಜೆ.ಎಸ್. ಸಿದ್ಧಾರ್ಥನ್ ಅನ್ನು ವಿವಸ್ತ್ರಗೊಳಿಸಿ ಐದು ಗಂಟೆ ಕಾಲ ಬೆಲ್ಟ್ ಮತ್ತು ವೈರ್‌ನಿಂದ ಥಳಿಸಲಾಗಿದೆ ಎಂದು ರಿಮ್ಯಾಂಡ್ ವರದಿ ಹೇಳಿದೆ.
ವಯನಾಡ್‌ನ ಪೂಕೊಡೆಯಲ್ಲಿರುವ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ(20 ವರ್ಷ) ಫೆಬ್ರವರಿ 18 ರಂದು ಕಾಲೇಜು ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದ. ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಐದು ಗಂಟೆ ಕಾಲ ಹಲ್ಲೆ: ಫೆಬ್ರವರಿ 16 ರಂದು ರಾತ್ರಿ 9 ಗಂಟೆ ಸುಮಾರಿಗೆ ಸಿದ್ಧಾರ್ಥನ ಮೇಲೆ ಆರಂಭವಾದ ಹಲ್ಲೆ ಫೆ. 17 ರ ಬೆಳಗಿನ ಜಾವ 2 ಗಂಟೆಯವರೆಗೆ ನಡೆಯಿತು ಎಂದು ವರದಿ ಹೇಳುತ್ತದೆ. ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ, ಸಹಪಾಠಿಗಳು ಮತ್ತು ಹಿರಿಯರು ಆತನ ವಿಚಾರಣೆ ನಡೆಸಿದರು.
ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬಾತ ಮನೆಗೆ ತೆರಳಿದ್ದ ಸಿದ್ಧಾರ್ಥನನ್ನು ಫೆಬ್ರವರಿ 15 ರಂದು ಮತ್ತೆ ಕಾಲೇಜಿಗೆ ಕರೆದು, ಹಾಸ್ಟೆಲ್‌ನ ʻಅಲಿಖಿತ ಕಾನೂನುʼ ಬಳಸಿ ಪರಿಹರಿಸಲು ಪ್ರಯತ್ನಿಸಿದ. ಒಳಉಡುಪುಗಳನ್ನುಕಳಚಿ, ಬೆಲ್ಟ್ ಮತ್ತು ಕೇಬಲ್ ವೈರ್ ಬಳಸಿ ಹಲ್ಲೆ ನಡೆಸಿದ್ದಾರೆ' ಎಂದು ವರದಿ ತಿಳಿಸಿದೆ.
ಪೊಲೀಸರು ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ಅಕ್ರಮ ಬಂಧನ), 323 (ಸ್ವಯಂಪ್ರೇರಿತ ಹಲ್ಲೆ), 324 (ಆಯುಧದಿಂದ ಗಾಯಗೊಳಿಸುವುದು), 306 (ಆತ್ಮಹತ್ಯೆಗೆ ಪ್ರಚೋದನೆ), ಮತ್ತು ಕೇರಳ ರ್ಯಾಗಿಂಗ್ ನಿಷೇಧ ಸೆಕ್ಷನ್‌ಗಳಡಿ ಪ್ರಕರಣದಾಖಲಿಸಿದ್ದಾರೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನು ಅಮಾನತುಗೊಳಿಸಿದ್ದಾರೆ.