
ಸಾಂದರ್ಭಿಕ ಚಿತ್ರ
Menstrual Leave | ಕಡ್ಡಾಯ ಒಂದು ದಿನದ ಋತುಸ್ರಾವ ರಜೆ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಋತುಸ್ರಾವ ರಜೆಯ ಸೌಲಭ್ಯ ಕೇವಲ ಸಾಫ್ಟ್‌ವೇರ್ ಅಥವಾ ಕಾರ್ಪೊರೇಟ್ ಕಂಪನಿಗಳಷ್ಟೇ ಅಲ್ಲದೆ, ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಹಾಗೂ ಅಸಂಘಟಿತ ವಲಯದ ಮಹಿಳೆಯರಿಗೂ ಸಿಗಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ರಾಜ್ಯದ 18 ರಿಂದ 52 ವರ್ಷದೊಳಗಿನ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ‘ಋತುಸ್ರಾವ ರಜೆ’ ನೀತಿಯನ್ನು ಸರ್ಕಾರವು ಕಟ್ಟುನಿಟ್ಟಾಗಿ ತರುವಂತೆ ಹೈಕೋರ್ಟ್ ಆದೇಶಿಸಿದೆ.
ಬದುಕುವ ಹಕ್ಕಿನ ಅವಿಭಾಜ್ಯ ಅಂಗ
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಮಾರ್ಮಿಕ ನುಡಿಗಳನ್ನು ಆಡಿದೆ. "ಮಹಿಳೆಯರ ಋತುಸ್ರಾವದ ಆರೋಗ್ಯವು ಸಂವಿಧಾನದ 21ನೇ ವಿಧಿಯಡಿ ನೀಡಲಾದ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ರಜೆಯ ಪ್ರಶ್ನೆಯಲ್ಲ, ಬದಲಿಗೆ ಮಹಿಳೆಯರ ಘನತೆಯ ಪ್ರಶ್ನೆಯಾಗಿದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಋತುಸ್ರಾವ ರಜೆಯ ಸೌಲಭ್ಯ ಕೇವಲ ಸಾಫ್ಟ್‌ವೇರ್ ಅಥವಾ ಕಾರ್ಪೊರೇಟ್ ಕಂಪನಿಗಳಷ್ಟೇ ಅಲ್ಲದೆ, ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಹಾಗೂ ಅಸಂಘಟಿತ ವಲಯದ ಮಹಿಳೆಯರಿಗೂ ಸಿಗಬೇಕು. 18 ರಿಂದ 52 ವರ್ಷದೊಳಗಿನ ಎಲ್ಲಾ ನೌಕರರು ಈ ರಜೆಗೆ ಅರ್ಹರು. ಖಾಯಂ ನೌಕರರ ಜೊತೆಗೆ ಗುತ್ತಿಗೆ (Contract) ಮತ್ತು ಹೊರಗುತ್ತಿಗೆ (Outsourcing) ಆಧಾರದ ಮೇಲೆ ಕೆಲಸ ಮಾಡುವವರಿಗೂ ಈ ರಜೆ ವಿಸ್ತರಿಸಬೇಕು. ಪ್ರಸ್ತಾವಿತ ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ-2025’ ಅನ್ನು ಶೀಘ್ರವಾಗಿ ಕಾನೂನಾಗಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಹೋಟೆಲ್ ಸಿಬ್ಬಂದಿಯ ಹೋರಾಟಕ್ಕೆ ಜಯ
ಬೆಳಗಾವಿ ಜಿಲ್ಲೆಯ ಮೂಡಲಗಿಯ ಹೋಟೆಲ್ ನೌಕರರೊಬ್ಬರು ತಮಗೆ ರಜೆ ನಿರಾಕರಿಸಲಾಗುತ್ತಿದೆ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಕೆಲವು ಉದ್ಯೋಗದಾತರ ಸಂಘಟನೆಗಳು ಈ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ, "ಮಹಿಳೆಯರ ಜೈವಿಕ ಅಗತ್ಯಗಳನ್ನು ಗೌರವಿಸುವುದು ನಿಜವಾದ ಸಮಾನತೆಯ ಸಂಕೇತ" ಎಂದು ಹೇಳುವ ಮೂಲಕ ಕೋರ್ಟ್ ಉದ್ಯೋಗದಾತರಿಗೆ ಚಾಟಿ ಬೀಸಿದೆ. ಈಗಾಗಲೇ ರಾಜ್ಯ ಸರ್ಕಾರ ಈ ನೀತಿಗೆ ಅನುಮೋದನೆ ನೀಡಿದ್ದರೂ, ಕೆಲವು ಖಾಸಗಿ ಸಂಸ್ಥೆಗಳು ಇದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದವು. ಈಗ ಹೈಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದಿಂದಾಗಿ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.

