
ಮಾಜಿ ಪ್ರಧಾನಿಯೂ ಆದ ರಾಜ್ಯಸಭಾ ಸದಸ್ಯ ಎಚ್ .ಡಿ.ದೇವೇಗೌಡ
ನೀರಿಗಾಗಿ ದೇವೇಗೌಡರು ಗದ್ಗದಿತ : ರಾಜ್ಯಸಭಾ ಅವಧಿ ಅಂತ್ಯದ ಹೊತ್ತಲ್ಲೇ ನಿಷ್ಠೆಯ ಮಾತು ಆಡಿದ್ದು ಯಾಕೆ?
ಎನ್‌ಡಿಎ ಜತೆಗೆ ಮೈತ್ರಿ ಮುರಿದುಕೊಳ್ಳುವುದಿಲ್ಲ ಎಂಬ ಎಚ್.ಡಿ.ದೇವೇಗೌಡರ ಮಾತಿನ ಹಿಂದೆ ಅನೇಕ ಅರ್ಥಗಳಿರಬಹುದೇ ಎಂಬೆಲ್ಲ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಅವುಗಳ ಕುರಿತು ಇಲ್ಲಿದೆ ವಿಶ್ಲೇಷಣೆ.
ರಾಜ್ಯಸಭೆಯಲ್ಲಿ ಗದ್ಗದಿತರಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಮನವಿ ಮಾಡಿಕೊಂಡ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರ ಕೆಲ ಮಾತುಗಳು ಸಾಕಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ ! ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದ ದೊಡ್ಡಗೌಡರು ಕೊನೆಯದಾಗಿ “ಎನ್‌ಡಿಎ ಜತೆಗೆ ಇರುತ್ತೆನೆ. ಮೈತ್ರಿಕೂಟ ಬದಲಾವಣೆ ಮಾಡುವುದಿಲ್ಲ” ಎಂದೆಲ್ಲ ಹೇಳಿದ್ದಾರೆ. ಅವರ ಈ ಮಾತುಗಳ ಸುತ್ತ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಮೈತ್ರಿಕೂಟದಿಂದಾಗಿ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಕಿತ್ತೊಗೆಯಲು ಬಿಜೆಪಿ-ಜೆಡಿಎಸ್ ಜತೆಯಾಗಿ ಹೆಜ್ಜೆ ಹಾಕುತ್ತಿದೆ. ಈ ನಡುವೆ ಎಚ್.ಡಿ.ದೇವೇಗೌಡರ ರಾಜ್ಯಸಭಾ ಸದಸ್ಯ ಸ್ಥಾನವು ಇನ್ನೊಂದು ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ಈ ಹೊತ್ತಲ್ಲೇ ದೇವೇಗೌಡರ ಪ್ರತಿ ಮಾತುಗಳು ಸಹ ಸಾಕಷ್ಟು ಗೂಡಾರ್ಥಗಳಿಗೆ ಕಾರಣವಾಗಿದೆ.
ಮತ್ತೊಮ್ಮೆ ತಮ್ಮನೇ ರಾಜ್ಯಸಭೆಗೆ ಆಯ್ಕೆ ಮಾಡಲಿ ಅಥವಾ ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿಗೆ ರಾಜ್ಯದ ಸಿಎಂ ಪಟ್ಟ ನೀಡಲಿ ಇಲ್ಲದೇ ಹೋದರೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಯಾವುದಾದರೊಂದು ಅಧಿಕಾರ ನೀಡಿ...ಎಂಬೆಲ್ಲ ಒಳಮರ್ಮಗಳು ಅವರ ಮಾತುಗಳಲ್ಲಿರಬಹುದೆಂಬ ಚರ್ಚೆಗಳು ಜೋರಾಗಿದೆ.
ಮುಂದೆಯೂ ಎನ್‌ಡಿಎ ಜತೆಗೇ ಇರುತ್ತೇವೆ ಎಂದ ದೇವೇಗೌಡರು
ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿಗಳು ಮಾತನಾಡಿದ್ದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ನಾನು ನಿಮ್ಮ ಜತೆಯಲ್ಲಿಯೇ ಇರುತ್ತೇನೆ. ನನ್ನ ಮಗ ನಿಮ್ಮ ಸಂಪುಟದಲ್ಲಿದ್ದಾನೆ. ನಾವು ಮುಂದೆಯೂ ಎನ್‌ಡಿಎ ಜತೆಗೇ ಇರುತ್ತೇವೆ. ಮೈತ್ರಿಕೂಟ ಬದಲಾವಣೆ ಮಾಡುವ ಯಾವ ಪ್ರಶ್ನೆಯೂ ಇಲ್ಲ. ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಎಂಬುದಷ್ಟೇ ನನ್ನ ಏಕೈಕ ಮನವಿ ಎಂದು ಕೋರಿದ್ದರು. ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ ಜತೆ ಯಶಸ್ವಿಯಾಗಿ ವ್ಯಾಪಾರ ಒಪ್ಪಂದ ಹಾಗೂ ವಿಕಸಿತ ಭಾರತಕ್ಕೆ ಮೋದಿ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದ್ದರು.
ಏನಿರಬಹುದು ಗೌಡರ ಯೋಜನೆ
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ವೇಳೆ (2020 ) ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್.ಡಿ.ದೇವೇಗೌಡರನ್ನು ರಾಜ್ಯ ಸಭೆಗೆ ಕಳುಹಿಸಲಾಗಿತ್ತು. ಬಳಿಕ ರಾಜ್ಯದಲ್ಲಿನ ರಾಜಕೀಯ ಬದಲಾವಣೆಯಿಂದಾಗಿ ಸಮ್ಮಿಶ್ರ ಸರಕಾರ ಪತನಗೊಂಡು, ಪ್ರಸ್ತುತ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಆದರೆ, ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದ ವೇಳೆ ರಾಜ್ಯದಲ್ಲಿ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರೆ ಮುಖ್ಯಮಂತ್ರಿಯಾಗಿದ್ದರು. ಆದರೀಗ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ.
ಒಟ್ಟು 6 ವರ್ಷಗಳ ರಾಜ್ಯಸಭಾ ಸದಸ್ಯರ ಅಧಿಕಾರವಧಿ ಇನ್ನೊಂದು ತಿಂಗಳೊಳಗೆ ಅಂತ್ಯಗೊಳ್ಳಲಿದೆ. ಹೀಗಾಗಿ ಮತ್ತೊಂದು ಸುತ್ತಿನ ಅವಧಿಗೆ ತಮ್ಮನೇ ಆಯ್ಕೆ ಮಾಡಿ ಎನ್ನುವ ಪರೋಕ್ಷ ಬೇಡಿಕೆಯು ಇದಾಗಿರಬಹುದು. ಇಲ್ಲವೆ ಅವರ ಸ್ಥಾನಕ್ಕೆ ಆಪ್ತರಾದ ಯಾರನ್ನಾದರೂ ತಂದು ಕೂರಿಸುವ ಯೋಜನೆಯು ಅವರಲ್ಲಿರಬಹುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎಂಬೆಲ್ಲ ಲೆಕ್ಕಾಚಾರಗಳು ಅವರ ಮಾತಿನಲ್ಲಿರಬಹುದು ಎನ್ನಲಾಗಿದೆ. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸಹಕಾರೊಂದಿಗೆ ಜೆಡಿಎಸ್‌ನ ಗೆಲುವಿನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಕಸರತ್ತು ಇದಾಗಿರಬಹುದು.
ರಾಷ್ಟ್ರೀಯ ಪಕ್ಷ ಆಗಲಿದೆಯೇ ಜೆಡಿಎಸ್ ?
ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಭವಿಷ್ಯದಲ್ಲಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸುವುದು ಇಲ್ಲವೇ ಬಿಜೆಪಿಯೊಂದಿಗೆ ಪ್ರತ್ಯೇಕವಾಗಿ ಜೆಡಿಎಸ್ ಶಾಶ್ವತವಾಗಿ ಉಳಿಸಿಕೊಳ್ಳುವ ಯೋಜನೆಯು ಇದಾಗಿರಬಹುದು. ತಮ್ಮ ಮತ್ತೊಬ್ಬ ಪುತ್ರನಾದ ಎಚ್.ಡಿ.ರೇವಣ್ಣ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಯಾವುದಾದರೊಂದು ಅಧಿಕಾರ ಕೊಡಿಸುವ ಉದ್ದೇಶವು ದೇವೇಗೌಡರಿಗಿರಬಹುದು ಎಂಬೆಲ್ಲ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದ ದೇವೇಗೌಡರು, ನನ್ನ ಮುಂದೆಯೇ ನನ್ನ ಮಗ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಲು ಪೊಲೀಸರು ಬಂದಿದ್ದರು. ಇದೆಲ್ಲದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ನಮ್ಮ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಹವಣಿಸುತ್ತಿದೆ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿ ಮುರಿದುಕೊಳ್ಳುವುದಿಲ್ಲ ಎಂಬ ಅವರ ಮಾತುಗಳ ಹಿಂದೆ ರಾಜಕೀಯ ಲೆಕ್ಕಚಾರಗಳು ಜೋರಾಗಿಯೆ ಹರಿದಾಡುತ್ತಿದೆ.
ಹೇಗೆ ನಡೆಯಲಿದೆ ಆಯ್ಕೆ
ಕರ್ನಾಟಕದಿಂದ ಒಟ್ಟು 12 ಮಂದಿ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. 6 ವರ್ಷದ ಅಧಿಕಾರವಧಿಯ ಈ ಸ್ಥಾನದಲ್ಲಿ 2026 ನೇ ಸಾಲಿನಲ್ಲಿ ರಾಜ್ಯದಿಂದ ಒಟ್ಟು 4 ಸದಸ್ಯರ ಅಧಿಕಾರವಧಿ ಅಂತ್ಯಗೊಳ್ಳಲಿದೆ. ಎಚ್.ಡಿ.ದೇವೇಗೌಡ (ಜೆಡಿಎಸ್), ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್), ಈರಣ್ಣ ಕಡಾಡಿ (ಬಿಜೆಪಿ), ಕೆ.ನಾರಾಯಣ (ಬಿಜೆಪಿ) ಅವರ ಅಧಿಕಾರವಧಿ ಜೂ.24ರಂದು ಕೊನೆಗೊಳ್ಳಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಅಷ್ಟೇ ಸಂಖ್ಯೆಯ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಒಟ್ಟು 12 ಮಂದಿ ಸದಸ್ಯರ ಪೈಕಿ ಐದು ಮಂದಿ ಕಾಂಗ್ರೆಸ್, ನಾಲ್ಕು ಬಿಜೆಪಿ ಹಾಗೂ ಒಬ್ಬರು ಜೆಡಿಎಸ್ ಪಕ್ಷದ ಸದಸ್ಯರಿದ್ದಾರೆ. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅತೀ ಹೆಚ್ಚಿನ ಶಾಸಕರನ್ನು ಹೊಂದಿರುವ ಕಾರಣಕ್ಕೆ ಮೂರು ಮಂದಿ ಕಾಂಗ್ರೆಸ್‌ನಿಂದಲೇ ಆಯ್ಕೆಯಾಗುವ ಸಾಧ್ಯತೆಗಳಿವೆ. ಒಬ್ಬ ಅಭ್ಯರ್ಥಿ ಗೆಲ್ಲಲು ಸರಿಸುಮಾರು 45 ರಿಂದ 46 ಮೊದಲ ಪ್ರಾಶಸ್ತ್ಯದ (ಶಾಸಕರ) ಮತಗಳ ಅಗತ್ಯವಿದೆ. ಕಾಂಗ್ರೆಸ್ ಬಳಿ ೧೩೬ ಶಾಸಕರಿರುವ ಕಾರಣಕ್ಕೆ ತಲಾ 45 ಮತಗಳಂತೆ ಮೂರು ಅಭ್ಯರ್ಥಿಗಳು ಸುಲಭವಾಗಿ ಆಯ್ಕೆಯಾಗಬಹುದು. ಬಿಜೆಪಿ ಬಳಿ 63 ಹಾಗೂ ಜೆಡಿಎಸ್ ಬಳಿ 18 ಶಾಸಕರಿದ್ದಾರೆ. ಹೀಗಾಗಿ ಮೈತ್ರಿಯಾಗಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಬಹುದು. ಹೀಗಾಗಿ ದೇವೇಗೌಡರು ರಾಜ್ಯದಿಂದ ಮತ್ತೊಮ್ಮೆ ಆಯ್ಕೆಯಾಗುವ ಲೆಕ್ಕಾಚಾರಗಳು ಅವರ ಮಾತಿನ ಹಿಂದಿರಬಹುದು.

