ಬಿಡದಿ ಟೌನ್‌ಶಿಪ್ ಕುಮಾರಸ್ವಾಮಿ ಕೂಸು: ಹೆಚ್‌ಡಿಕೆ, ಅಶೋಕ್ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ
x
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್​.

ಬಿಡದಿ ಟೌನ್‌ಶಿಪ್ 'ಕುಮಾರಸ್ವಾಮಿ ಕೂಸು': ಹೆಚ್‌ಡಿಕೆ, ಅಶೋಕ್ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ

ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆದ ಪ್ರತಿಭಟನೆ ಮಾಡಲು ಬಂದ ಬಹುತೇಕರು ನಿಜವಾದ ರೈತರಾಗಿರಲಿಲ್ಲ. ಕೇವಲ ಹಸಿರು ಶಾಲು ಹೊದ್ದುಕೊಂಡು ಬಂದಿದ್ದ ಅವರೆಲ್ಲರೂ ಜೆಡಿಎಸ್ ಕಾರ್ಯಕರ್ತರಾಗಿದ್ದರು ಎಂದು ಲಕ್ಷ್ಮಣ ಆರೋಪಿಸಿದರು.


Click the Play button to hear this message in audio format

ರಾಜಧಾನಿ ಬೆಂಗಳೂರು ಹೊರವಲಯದ ಬಿಡದಿ ಟೌನ್‌ಶಿಪ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕಳೆದ ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಬಿಡದಿ ಟೌನ್ ಶಿಪ್ ವಾಸ್ತವವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಕಾಲದ ಕೂಸು ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರೇ ಹುಟ್ಟುಹಾಕಿದ ಯೋಜನೆ

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಕುಮಾರಸ್ವಾಮಿ ಅವರು ಅತಿ ವೇಗದಲ್ಲಿ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಬೃಹತ್ ಯೋಜನೆ ಅವರದೇ ಕಾಲದ ಕೂಸಾಗಿದೆ. 2006ರಲ್ಲಿಯೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಮೂಲ ರೂಪುರೇಷೆ ಸಿದ್ಧವಾಗಿತ್ತು. ತದನಂತರ ಬಂದ ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಕೂಡ ಈ ಯೋಜನೆಯನ್ನು ಮುಂದುವರೆಸುವ ಕೆಲಸ ಮಾಡಿತ್ತು. ಒಟ್ಟು 7481 ಎಕರೆ ಬೃಹತ್ ಭೂಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಟೌನ್ ಶಿಪ್‌ಗೆ ಸಂಬಂಧಿಸಿದಂತೆ ಇದೀಗ ಪ್ರಾಥಮಿಕ ಅಧಿಸೂಚನೆ (ಪ್ರಿಲಿಮಿನರಿ ನೋಟಿಫಿಕೇಶನ್) ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ, ತಾವೇ ಹುಟ್ಟುಹಾಕಿದ ಯೋಜನೆಗೆ ಈಗ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ ಎಂದು ಲಕ್ಷ್ಮಣ್ ಟೀಕಿಸಿದರು.

ಅನಿತಾ, ನಿಖಿಲ್ ಕುಮಾರಸ್ವಾಮಿಗೂ ಸೇರಿದೆ ಭೂಮಿ

ಯೋಜನೆಗೆ ರೈತರ ವಿರೋಧವಿದೆ ಎಂದು ಬಿಂಬಿಸುತ್ತಿರುವ ಜೆಡಿಎಸ್ ನಾಯಕರ ಕುಟುಂಬದವರೇ ಈ ಟೌನ್ ಶಿಪ್ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಲಕ್ಷ್ಮಣ್ ಬಿಚ್ಚಿಟ್ಟರು. ಟೌನ್ ಶಿಪ್ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಅನಿತಾ ಕುಮಾರಸ್ವಾಮಿ ಅವರ ೩೫ ಎಕರೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಹೆಸರಿನಲ್ಲಿ ೫ ಎಕರೆ ಭೂಮಿ ಇದೆ. ಈ ಭೂಮಿಯನ್ನು ಬೇರೆ ಕಡೆಯಿಂದ ವರ್ಗಾವಣೆ ಮಾಡಿಕೊಳ್ಳಲಾಗಿದ್ದು, ಇದು ಬೇನಾಮಿ ಆಸ್ತಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇದೀಗ ಇದೇ ಜಾಗಕ್ಕೆ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಅವರು ಸರ್ಕಾರದ ಬಳಿ ಪರಿಹಾರವನ್ನು ಸಹ ಕೇಳಿದ್ದಾರೆ. ಹೀಗಿರುವಾಗ ಯೋಜನೆಯನ್ನು ವಿರೋಧಿಸುವ ನೈತಿಕತೆ ಅವರಿಗಿಲ್ಲ ಎಂದು ಗುಡುಗಿದರು.

ಪ್ರತಿಭಟನೆ ಮಾಡಿದ್ದು ರೈತರಲ್ಲ, ಜೆಡಿಎಸ್ ಕಾರ್ಯಕರ್ತರು

ಇತ್ತೀಚೆಗೆ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆದ ಧರಣಿಯ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರರು, ಅಲ್ಲಿ ಪ್ರತಿಭಟನೆ ಮಾಡಲು ಬಂದಿದ್ದವರಲ್ಲಿ ಬಹುತೇಕರು ನಿಜವಾದ ರೈತರಾಗಿರಲಿಲ್ಲ. ಕೇವಲ ಹಸಿರು ಶಾಲು ಹೊದ್ದುಕೊಂಡು ಬಂದಿದ್ದ ಅವರೆಲ್ಲರೂ ಜೆಡಿಎಸ್ ಕಾರ್ಯಕರ್ತರಾಗಿದ್ದರು. ಅವರ ನಡುವೆ ಬೆರಳೆಣಿಕೆಯಷ್ಟು ಮಾತ್ರ ನೈಜ ರೈತರು ಇದ್ದರು ಎಂದು ಸ್ಪಷ್ಟಪಡಿಸಿದರು. ಒಟ್ಟು ಭೂಮಿ ಕಳೆದುಕೊಳ್ಳುತ್ತಿರುವ ಸಾವಿರಾರು ರೈತರಲ್ಲಿ ಶೇಕಡಾ ೯೩ರಷ್ಟು ರೈತರು ಯೋಜನೆಗೆ ಒಪ್ಪಿಗೆ ಸೂಚಿಸಿ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಕೇವಲ ಶೇ. ೭ರಷ್ಟು ಅಂದರೆ ಸುಮಾರು ೬೬೩ ರೈತರು ಮಾತ್ರ ಭೂಮಿ ನೀಡಲು ನಿರಾಕರಿಸಿದ್ದಾರೆ. ಹೀಗಿರುವಾಗ ಇಡೀ ರೈತ ಸಮುದಾಯವೇ ಯೋಜನೆ ವಿರೋಧಿಸುತ್ತಿದೆ ಎನ್ನುವುದು ಸುಳ್ಳು. ವಿರೋಧಿಸುತ್ತಿರುವ ಆ ಅಲ್ಪಸಂಖ್ಯಾತ ರೈತರನ್ನೂ ಸಹ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮನವೊಲಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ಸುಳ್ಳು ಹೇಳುವುದರಲ್ಲಿ ಆರ್. ಅಶೋಕ್ ನಂಬರ್ ಒನ್

ಇದೇ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧವೂ ಕಿಡಿಕಾರಿದ ಲಕ್ಷ್ಮಣ್, ಅಶೋಕ್ ಅವರು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದರು. ಕಸದ ವಿಲೇವಾರಿ ಸೇರಿದಂತೆ ಹಲವು ವಿಚಾರಗಳಲ್ಲಿ ಅಶೋಕ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅಶೋಕ್ ಅವರು ನಂಬರ್ ಒನ್ ಸ್ಥಾನದಲ್ಲಿದ್ದು, ಅವರಿಗೆ ಇದಕ್ಕಾಗಿ ವಿಶೇಷ ಪ್ರಶಸ್ತಿಯನ್ನೇ ಕೊಡಿಸಬೇಕು ಎಂದು ವ್ಯಂಗ್ಯವಾಡಿದರು.

ಅಭಿವೃದ್ಧಿ ಕಾರ್ಯಗಳು ನಡೆಯುವಾಗ ಅಡೆತಡೆಗಳು ಬರುವುದು ಸಹಜ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಆಡಳಿತಾವಧಿಯಲ್ಲೂ ಬಡಾವಣೆಗಳ ನಿರ್ಮಾಣವಾಗಿದೆ. ಒಳ್ಳೆಯ ಕೆಲಸಗಳು ಆಗಲೇಬೇಕಿರುವುದರಿಂದ, ಯಾವುದೇ ಕಾರಣಕ್ಕೂ, ಯಾರ ಎಷ್ಟೇ ವಿರೋಧವಿದ್ದರೂ ಬಿಡದಿ ಟೌನ್ ಶಿಪ್ ಯೋಜನೆ ನಿಲ್ಲುವುದಿಲ್ಲ. ವಿರೋಧ ಪಕ್ಷಗಳು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ವಿಚಾರವನ್ನು ಬಳಸಿಕೊಳ್ಳುತ್ತಿವೆ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

Read More
Next Story