x

ಬೆಂಗಳೂರು ಟನಲ್ ರಸ್ತೆ ಅವೈಜ್ಞಾನಿಕ, ಪ್ರವಾಹ ಭೀತಿ: ರಾಜ್ಯಪಾಲರಿಗೆ ಐಐಎಸ್‌ಸಿ ತಜ್ಞರ ಸಮಿತಿ ವರದಿ ಸಲ್ಲಿಕೆ

ಟನಲ್ ರಸ್ತೆಯು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯಾಗಿದೆ. ಈಗಿರುವ ರಸ್ತೆಯಲ್ಲಿ ಟನಲ್ ನಿರ್ಮಿಸಿದರೆ ಮತ್ತು ಅದೇ ಮಾರ್ಗದಲ್ಲಿ ಮೆಟ್ರೋ ನಿರ್ಮಿಸಿದರೆ ಆಗುವ ವೆಚ್ಚವನ್ನು ಸಮಿತಿಯು ತುಲನೆ ಮಾಡಿದೆ.


Click the Play button to hear this message in audio format

ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಟನಲ್ (ಸುರಂಗ) ರಸ್ತೆ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರ ತಂಡವು, ಸುರಂಗ ಮಾರ್ಗ ನಿರ್ಮಾಣವು ಅತ್ಯಂತ ಅವೈಜ್ಞಾನಿಕವಾಗಿದೆ ಮತ್ತು ಇದರಿಂದ ನಗರದಲ್ಲಿ ಪ್ರವಾಹ ಭೀತಿ ಎದುರಾಗಲಿದೆ ಎಂದು ಎಚ್ಚರಿಸಿ ರಾಜ್ಯಪಾಲರಿಗೆ ವರದಿ ಸಲ್ಲಿಸಿದೆ.

ಪ್ರೊ. ಆಶೀಷ್ ವರ್ಮ ಅವರ ನೇತೃತ್ವದ ತಜ್ಞರ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿದೆ. ಸರ್ಕಾರದ ಡಿಪಿಆರ್ ದತ್ತಾಂಶ ಹಾಗೂ ಐಐಎಸ್‌ಸಿ ಪ್ರಯೋಗಾಲಯದ ದತ್ತಾಂಶಗಳನ್ನು ಹೋಲಿಕೆ ಮಾಡಿ ಯೋಜನೆಯ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಸಮಿತಿಯ ಸದಸ್ಯರಾದ ಬಿ.ವಿ. ಸಂತೋಷ್ ಕುಮಾರ್ ಅವರು 'ದ ಫೆಡರಲ್ ಕರ್ನಾಟಕ'ದ ವಿಶೇಷ ಕಾರ್ಯಕ್ರಮದಲ್ಲಿ ಈ ಸಂಶೋಧನಾ ವರದಿಯ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಮೆಟ್ರೋಗಿಂತ ಆರು ಪಟ್ಟು ಹೆಚ್ಚು ವೆಚ್ಚದ ಯೋಜನೆ

ಟನಲ್ ರಸ್ತೆಯು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯಾಗಿದೆ. ಈಗಿರುವ ರಸ್ತೆಯಲ್ಲಿ ಟನಲ್ ನಿರ್ಮಿಸಿದರೆ ಮತ್ತು ಅದೇ ಮಾರ್ಗದಲ್ಲಿ ಮೆಟ್ರೋ ನಿರ್ಮಿಸಿದರೆ ಆಗುವ ವೆಚ್ಚವನ್ನು ಸಮಿತಿಯು ತುಲನೆ ಮಾಡಿದೆ. ಉದ್ದೇಶಿತ ಮಾರ್ಗದಲ್ಲಿ ಮೆಟ್ರೋ ತಂದರೆ ಪ್ರತಿ ಪ್ರಯಾಣಿಕರಿಗೆ ಕೇವಲ 86 ಪೈಸೆ ವೆಚ್ಚವಾಗುತ್ತದೆ. ಆದರೆ, ಅದೇ ಟನಲ್ ರಸ್ತೆ ನಿರ್ಮಿಸಿದರೆ ಪ್ರಯಾಣಿಕರಿಗೆ 5 ರೂಪಾಯಿ 36 ಪೈಸೆ ಖರ್ಚಾಗುತ್ತದೆ. ಅಂದರೆ, ಮೆಟ್ರೋಗಿಂತ ಟನಲ್ ರಸ್ತೆ ನಿರ್ಮಾಣಕ್ಕೆ ಆರು ಪಟ್ಟು ಹೆಚ್ಚು ವೆಚ್ಚವಾಗಲಿದ್ದು, ಇದು ಜನಸಾಮಾನ್ಯರಿಗೆ ಆರ್ಥಿಕವಾಗಿ ಹೊರೆಯಾಗಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಸಾರ್ವಜನಿಕರ ತೆರಿಗೆ ಹಣದ ಪೋಲು ಬೇಡ

ಆರಂಭದಲ್ಲಿ 18 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವಿತ್ತು. ಬಳಿಕ ಅದನ್ನು ಹೆಬ್ಬಾಳದಿಂದ ಪಶುವೈದ್ಯಕೀಯ ಕಾಲೇಜಿನವರೆಗೆ 2.5 ಕಿಲೋಮೀಟರ್‌ಗೆ ಸೀಮಿತಗೊಳಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಮುನ್ನ, ಅದು ಸಾರ್ವಜನಿಕರಿಗೆ ನಿಜವಾಗಿಯೂ ಉಪಯೋಗವಾಗುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವ ಬದಲು ಎಚ್ಚರಿಕೆಯಿಂದ ಯೋಜನೆ ರೂಪಿಸಬೇಕು. ಟನಲ್ ರಸ್ತೆಯಂತಹ ಬೃಹತ್ ಹೂಡಿಕೆಯ ಯೋಜನೆಗಳನ್ನು ಕೇವಲ ಅಲ್ಪಾವಧಿಯ ಪರಿಹಾರವಾಗಿ ನೋಡದೆ, ದೀರ್ಘಾವಧಿಯ ಪರಿಣಾಮಗಳನ್ನು ಮುಂದಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮೆಟ್ರೋ ಯೋಜನೆಗೆ ಮೊದಲ ಆದ್ಯತೆ ನೀಡಿ

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಟನಲ್ ರಸ್ತೆ ಶಾಶ್ವತ ಪರಿಹಾರವಲ್ಲ. ಇದರ ಬದಲಾಗಿ ಸಾರ್ವಜನಿಕ ಸಾರಿಗೆ, ವಿಶೇಷವಾಗಿ ಮೆಟ್ರೋ ಸಂಪರ್ಕವನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಅತ್ಯಂತ ಮುಖ್ಯವಾಗಿದೆ. ನಗರದಲ್ಲಿ ಮೊದಲು ಮೆಟ್ರೋ ಸಂಪರ್ಕ ಕಲ್ಪಿಸಿ, ಅದರಿಂದ ಟ್ರಾಫಿಕ್ ದಟ್ಟಣೆ ಎಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ ಎಂಬುದನ್ನು ಅವಲೋಕಿಸಿದ ಬಳಿಕವಷ್ಟೇ ಟನಲ್ ರಸ್ತೆಯ ಅಗತ್ಯದ ಬಗ್ಗೆ ಯೋಚಿಸಬೇಕಿತ್ತು. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸದೆ ಆರಂಭದಲ್ಲೇ ಟನಲ್ ರಸ್ತೆ ಯೋಜನೆಗೆ ಕೈಹಾಕುವುದು ಸೂಕ್ತವಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

Read More
Next Story