4,500 ಇ-ಬಸ್‌ಗಳು ಬರುತ್ತಿಲ್ಲ, 1,505 ಕೋಟಿ ಸಬ್ಸಿಡಿ ಕೊಟ್ಟರೂ ರಾಜ್ಯ ಯಾಕೆ ತರುತ್ತಿಲ್ಲ?
ಕೇಂದ್ರದ ಪಿಎಂ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ ಮಂಜೂರಾದ 4,500 ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್ಸುಗಳ ಖರೀದಿ ಪ್ರಕ್ರಿಯೆಯು ರಾಜ್ಯ ಕ್ಯಾಬಿನೆಟ್ ಅನುಮೋದನೆ ಸಿಗದೆ ಸದ್ಯಕ್ಕೆ ಸ್ಥಗಿತಗೊಂಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ದಿಲ್ಲದೆ ಸಂಚರಿಸುವ ಕೆಲವು ಬಿಎಂಟಿಸಿ ಬಸ್ಸುಗಳನ್ನು ನೀವು ಗಮನಿಸಿರಬಹುದು. ಇವೆಲ್ಲವೂ ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯ ಆಧಾರದ ಮೇಲೆ ಸಾಗುತ್ತಿರುವ ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್ಸುಗಳು. ನಗರದ ಸಾರಿಗೆ ವ್ಯವಸ್ಥೆಗೆ ಅತ್ಯಂತ ಸೂಕ್ತವಾಗಿರುವ ಮತ್ತು ವಾಯು ಮಾಲಿನ್ಯವನ್ನು ಬಹುತೇಕ ತಡೆಗಟ್ಟುವ ಈ ವಿದ್ಯುತ್ ಚಾಲಿತ ವಾಹನಗಳು ಭವಿಷ್ಯದ ಸಾರಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ದೇಶದ ನಾನಾ ರಾಜ್ಯಗಳ ಪ್ರಮುಖ ನಗರಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಬೆಂಗಳೂರು ಈ ವಿಚಾರದಲ್ಲಿ ಮುಂಚೂಣಿಯಲ್ಲಿದೆ.
ಸದ್ಯ ಸುಮಾರು 1,750 ಇವಿ ಬಸ್ಸುಗಳು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಿದ್ದು, ಟಾಟಾ ಮತ್ತು ಅಶೋಕ್ ಲೇಲ್ಯಾಂಡ್‌ನಂತಹ ಪ್ರಮುಖ ಕಂಪನಿಗಳು ಇವುಗಳನ್ನು ಪೂರೈಸಿವೆ. ಇದರಿಂದ ರಾಜ್ಯಕ್ಕೆ ಸಾಕಷ್ಟು ಅನುಕೂಲಗಳೂ ಆಗಿವೆ. ಆದರೆ, ಇವತ್ತಿನ ನಮ್ಮ ಚರ್ಚೆಯ ಮುಖ್ಯ ವಿಷಯ ಏನೆಂದರೆ, ಸದ್ದಿಲ್ಲದೆ ರಸ್ತೆಯಲ್ಲೋಡುವ ಈ ಬಸ್ಸುಗಳು ಈಗ ರಾಜಕೀಯವಾಗಿ ಭಾರಿ ಸದ್ದು ಮಾಡಲು ಹೊರಟಿವೆ.
ಕೇಂದ್ರ ಸರ್ಕಾರವು ಬೆಂಗಳೂರಿನ ಬಿಎಂಟಿಸಿ ವ್ಯಾಪ್ತಿಗೆ ಸುಮಾರು 4,500 ಹೊಸ ಇವಿ ಬಸ್ಸುಗಳನ್ನು ನೀಡಲು ಸಜ್ಜಾಗಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರ ಇದನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಸ್ಸುಗಳ ಖರೀದಿಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ಅನುಮೋದನೆ ಪಡೆಯುವ ಪ್ರಕ್ರಿಯೆಯಾಗಲಿ ಅಥವಾ ವರ್ಕ್ ಆರ್ಡರ್ ನೀಡುವ ಆಡಳಿತಾತ್ಮಕ ಕೆಲಸಗಳಾಗಲಿ ಇನ್ನು ಜರುಗಿಲ್ಲ. ಈ ವಿಳಂಬವನ್ನು ಅಸ್ತ್ರವಾಗಿಸಿಕೊಂಡಿರುವ ಪ್ರತಿಪಕ್ಷ ಜೆಡಿಎಸ್, ರಾಜ್ಯ ಸರ್ಕಾರದ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿದೆ. ಮುಖ್ಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಪ್ರಶ್ನಿಸುತ್ತಿರುವ ಪ್ರತಿಪಕ್ಷಗಳು, ನಿಮಗೆ ನಗರದ ಮಾಲಿನ್ಯ ಕಡಿಮೆ ಮಾಡುವ ವಿದ್ಯುತ್ ಬಸ್ಸುಗಳು ಬೇಡವೇ ಎಂದು ಪ್ರಶ್ನಿಸುತ್ತಿವೆ. ಕೇಂದ್ರ ಸರ್ಕಾರ ನೀಡುತ್ತಿರುವ 1,500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಬ್ಸಿಡಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ, ಉಳಿದ ರಾಜ್ಯಗಳು ಈಗಾಗಲೇ ಈ ಸೌಲಭ್ಯ ಬಳಸಿ ಬಸ್ಸುಗಳನ್ನು ಓಡಿಸುತ್ತಿದ್ದರೂ ನಮ್ಮಲ್ಲಿ ಮಾತ್ರ ಟೆಂಡರ್ ಕರೆಯಲು ಹಿಂಜರಿಯುತ್ತಿರುವುದರ ಹಿಂದೆ ಏನಾದರೂ ಕಮಿಷನ್ ಬಿಸಿನೆಸ್ ಇದೆಯೇ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ರಾಜ್ಯ ಸರ್ಕಾರದ ಪರವಾಗಿ ಈ ಆರೋಪಗಳಿಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಕೇಂದ್ರ ಸರ್ಕಾರ ನೀಡುತ್ತಿರುವ 1,500 ಕೋಟಿ ರೂಪಾಯಿಗಳ ಸಬ್ಸಿಡಿ ಮೊತ್ತವು 4,500 ಬಸ್ಸುಗಳ ನಿರ್ವಹಣೆಗೆ ಯಾವುದೇ ಕಾರಣಕ್ಕೂ ಸಾಲುವುದಿಲ್ಲ. ಇದು ಅತ್ಯಂತ ಸಣ್ಣ ಮೊತ್ತವಾಗಿದ್ದು, ಇದರಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಇಷ್ಟು ದೊಡ್ಡ ವೆಚ್ಚವನ್ನು ಹೊತ್ತು ಬಸ್ಸುಗಳನ್ನು ಪಡೆದರೆ ಅದು ಬಿಎಂಟಿಸಿಗೆ ದೊಡ್ಡ ಹೊರೆಯಾಗಲಿದೆಯೇ ಹೊರತು ಕಾರ್ಯಸಾಧುವಲ್ಲ ಎಂಬುದು ಸರ್ಕಾರದ ವಾದವಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿಗೆ ಬರಬೇಕಿದ್ದ 4,500 ಇವಿ ಬಸ್ಸುಗಳ ಯೋಜನೆ ಈಗ ತಟಸ್ಥವಾಗಿದೆ. ಪರಿಸರಕ್ಕೆ ಪೂರಕವಾದ ಸಾರಿಗೆ ವ್ಯವಸ್ಥೆಗೆ ಉತ್ತೇಜನ ಸಿಗಬೇಕಿದ್ದ ಈ ಯೋಜನೆ ಈಗ ಕೇವಲ ರಾಜಕೀಯ ಹಾಗೂ ಆರ್ಥಿಕ ಮುಖಾಮುಖಿಯ ಚರ್ಚೆಯಾಗಿ ಮಾರ್ಪಟ್ಟಿದೆ.

