ತಮಿಳುನಾಡಿನಲ್ಲಿ ಹೊಸ ಘೋಷಣೆ: ಬಡ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ LPG ಸಿಲಿಂಡರ್
x

ತಮಿಳುನಾಡಿನಲ್ಲಿ ಹೊಸ ಘೋಷಣೆ: ಬಡ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ LPG ಸಿಲಿಂಡರ್

ಅರ್ಹ ಫಲಾನುಭವಿಗಳು ಖರೀದಿಸುವ ಮೂರು LPG ಸಿಲಿಂಡರ್‌ಗಳ ವೆಚ್ಚವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 4,000 ಕೋಟಿ ರೂ. ವೆಚ್ಚವಾಗಲಿದೆ.


ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸೋಮವಾರ ವಿಧಾನಸಭೆಯಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಾರ್ಷಿಕ 2.5 ಲಕ್ಷ ರೂ. ಕ್ಕಿಂತ ಕಡಿಮೆ ಆದಾಯ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಮೂರು ಉಚಿತ LPG ಸಿಲಿಂಡರ್‌ಗಳನ್ನು ಒದಗಿಸುವ ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆ 2027ರ ಪೊಂಗಲ್‌ನಿಂದ ಜಾರಿಗೆ ಬರಲಿದ್ದು, ಸುಮಾರು 1.30 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

ಅರ್ಹ ಫಲಾನುಭವಿಗಳು ಖರೀದಿಸುವ ಮೂರು LPG ಸಿಲಿಂಡರ್‌ಗಳ ವೆಚ್ಚವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 4,000 ಕೋಟಿ ರೂ. ವೆಚ್ಚವಾಗಲಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಉಂಟಾಗಿರುವುದು ಹಾಗೂ ಸಿಲಿಂಡರ್‌ಗಳ ಬೆಲೆ ಏರಿಕೆಯಿಂದಾಗಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ವಿಜಯ್ ವಿಧಾನಸಭೆಯಲ್ಲಿ ಹೇಳಿದರು. ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ಅವರ ಕಲ್ಯಾಣವನ್ನು ಕಾಪಾಡಲು ಮತ್ತು ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.

ಚುನಾವಣೆಗೂ ಮುನ್ನ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ LPG ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು.

ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ

ಮುಖ್ಯಮಂತ್ರಿ ವಿಜಯ್ ಅವರು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನೂ ಘೋಷಿಸಿದ್ದಾರೆ. ಇದೇ ವೇಳೆ ಮಹಿಳೆಯರಿಗಾಗಿ ಜಾರಿಯಲ್ಲಿರುವ ‘ವೆಟ್ರಿ ಪಯಣಂ’ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ. ವಿಸ್ತರಿತ ಯೋಜನೆಯಡಿ ಮಹಿಳೆಯರು ಸಾಮಾನ್ಯ ಬಸ್‌ಗಳ ಜೊತೆಗೆ ಎಕ್ಸ್‌ಪ್ರೆಸ್, LSS ಹಾಗೂ ಡಿಲಕ್ಸ್ ಸರ್ಕಾರಿ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು. ಈ ಸೌಲಭ್ಯವನ್ನು ಅಂತರಜಿಲ್ಲಾ ಬಸ್ ಸೇವೆಗಳಿಗೂ ವಿಸ್ತರಿಸಲಾಗುತ್ತಿದೆ.

ಈವರೆಗೆ ಜಾರಿಯಲ್ಲಿದ್ದ ಯೋಜನೆಯಡಿ ಮಹಾನಗರ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯ ಮತ್ತು ಗುಡ್ಡಗಾಡು ಮಾರ್ಗದ ಬಸ್‌ಗಳಲ್ಲಿ ಮಹಿಳೆಯರಿಗೆ ನಿರ್ದಿಷ್ಟ ಮಿತಿಯವರೆಗೆ ಮಾತ್ರ ಉಚಿತ ಪ್ರಯಾಣದ ಅವಕಾಶವಿತ್ತು. ಎಕ್ಸ್‌ಪ್ರೆಸ್, LSS, ಡಿಲಕ್ಸ್ ಹಾಗೂ ಕೆಲವು ಉಪನಗರ ಸೇವೆಗಳಲ್ಲಿ ಈ ಸೌಲಭ್ಯ ಇರಲಿಲ್ಲ.

ಹೊಸ ವಿಸ್ತರಣೆಯ ಬಳಿಕ ಮಹಾನಗರ ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್, LSS ಹಾಗೂ ಡಿಲಕ್ಸ್ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಪನಗರ ಹಾಗೂ ಗುಡ್ಡಗಾಡು ಪ್ರದೇಶಗಳ ಸಾಮಾನ್ಯ ದರದ ಬಸ್‌ಗಳಿಗೂ ಈ ಸೌಲಭ್ಯ ಅನ್ವಯವಾಗಲಿದೆ. ‘ವೆಟ್ರಿ ಪಯಣಂ’ ಯೋಜನೆಯ ವಿಸ್ತರಣೆ ಅಕ್ಟೋಬರ್ 2ರಿಂದ, ಮಹಾತ್ಮ ಗಾಂಧಿ ಜಯಂತಿಯಂದು ಜಾರಿಗೆ ಬರಲಿದೆ ಎಂದು ವಿಜಯ್ ತಿಳಿಸಿದ್ದಾರೆ.

ಪರಂದೂರ್ ವಿಮಾನ ನಿಲ್ದಾಣ ಯೋಜನೆಗೆ ವಿರೋಧ

ಚೆನ್ನೈ ಸಮೀಪದ ಪರಂದೂರ್‌ನಲ್ಲಿ ಪ್ರಸ್ತಾವಿತವಾಗಿರುವ ಹೊಸ ವಿಮಾನ ನಿಲ್ದಾಣ ಯೋಜನೆ ಕುರಿತು ವಿಜಯ್ ತಮ್ಮ ಸರ್ಕಾರದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ರೈತರು ಮತ್ತು ಸ್ಥಳೀಯ ನಿವಾಸಿಗಳ ತೀವ್ರ ವಿರೋಧ ಎದುರಿಸುತ್ತಿರುವ ಈ ಯೋಜನೆಯನ್ನು ಮುಂದುವರಿಸುವುದಿಲ್ಲ ಎಂದು ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಯೋಜನೆಯಿಂದ ಪರಿಣಾಮಕ್ಕೊಳಗಾಗುವ ಸ್ಥಳೀಯ ನಿವಾಸಿಗಳ ಪರವಾಗಿ ತಮ್ಮ ಸರ್ಕಾರ ನಿಲ್ಲಲಿದೆ ಎಂದು ವಿಜಯ್ ಹೇಳಿದ್ದಾರೆ. ರೈತರು ದೇಶದ ಬೆನ್ನೆಲುಬಾಗಿದ್ದು, ಕುಟುಂಬಗಳ ಸ್ಥಳಾಂತರ ಅಥವಾ ರೈತರ ಜೀವನೋಪಾಯಕ್ಕೆ ಹಾನಿಯಾಗದ ಸ್ಥಳದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪರ್ಯಾಯ ಸ್ಥಳಗಳ ಪರಿಶೀಲನೆ ನಡೆಯುತ್ತಿದ್ದು, ಈಗಾಗಲೇ ಕೆಲವು ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹೊಸ ವಿಮಾನ ನಿಲ್ದಾಣದ ಸ್ಥಳವನ್ನು ಆಯ್ಕೆ ಮಾಡುವಾಗ ರೈತರ ಮೇಲಿನ ಪರಿಣಾಮವನ್ನು ಕನಿಷ್ಠಗೊಳಿಸುವುದು ಹಾಗೂ ಹೆಚ್ಚಿನ ಪ್ರಮಾಣದ ವಸತಿ ಪ್ರದೇಶಗಳ ಸ್ಥಳಾಂತರವನ್ನು ತಪ್ಪಿಸುವುದು ಮುಖ್ಯ ಎಂದು ವಿಜಯ್ ಹೇಳಿದ್ದಾರೆ.

Read More
Next Story