ಕ್ರಿಕೆಟ್ ಕೀನ್ಯಾ| ಕೋಚ್ ಸ್ಥಾನದಿಂದ ದೊಡ್ಡ ಗಣೇಶ್ ವಜಾ
ಭಾರತದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಅವರನ್ನು ನೇಮಕಗೊಂಡ ಒಂದು ತಿಂಗಳೊಳಗೆ ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಭಾರತಕ್ಕಾಗಿ ನಾಲ್ಕು ಟೆಸ್ಟ್ ಮತ್ತು ಒಂದು ಒಡಿಐ ಆಡಿರುವ ಗಣೇಶ್ ಅವರನ್ನು ಆಗಸ್ಟ್ 13 ರಂದು ಕ್ರಿಕೆಟ್ ಕೀನ್ಯಾ (ಸಿಕೆ) ರಾಷ್ಟ್ರೀಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗಿತ್ತು. ಸಿಕೆ ಮಂಡಳಿಯ ಸದಸ್ಯರು ಅವರ ಆಯ್ಕೆಯನ್ನು ಅನು ಮೋದಿಸದೆ ಇರುವುದು ಸ್ಥಾನ ಕಳೆದುಕೊಳ್ಳಲು ಕಾರಣ ಎಂದು ತಿಳಿದುಬಂದಿದೆ.
ʻಕ್ರಿಕೆಟ್ ಕೀನ್ಯಾದ ಕಾರ್ಯನಿರ್ವಾಹಕ ಮಂಡಳಿಯು ನಿಮ್ಮ ಆಯ್ಕೆಯನ್ನು ಅನುಮೋದಿಸಲು ನಿರಾಕರಿಸಿದೆ. ಪುರುಷರ ಕ್ರಿಕೆಟ್ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರನ ನೇಮಕವನ್ನು ಸ್ಥಾಪಿತ ಕಾರ್ಯವಿಧಾನದ ಮೂಲಕವೇ ಮಾಡಬೇಕು ಎಂದು ಮಂಡಳಿ ಹೇಳಿದೆ,ʼ ಎಂದು ಕ್ರಿಕೆಟ್ ಕೀನ್ಯಾದ ನಿರ್ದೇಶಕಿ ಪರ್ಲಿನ್ ಒಮಾಮಿ ತಿಳಿಸಿದ್ದಾರೆ.
ʻಮನೋಜ್ ಪಟೇಲ್ ಮತ್ತು ನಿಮ್ಮ ನಡುವಿನ ಆಗಸ್ಟ್ 7, 2024 ರ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಪುರುಷರ ಕ್ರಿಕೆಟ್ ತಂಡ ದೊಂದಿಗಿನ ಯಾವುದೇ ತರಬೇತಿ ಇತ್ಯದಿ ಕಾರ್ಯಕ್ರಮಗಳನ್ನು ತಕ್ಷಣವೇ ನಿಲ್ಲಿಸಲು ಸೂಚಿಸಲಾಗಿದೆ,ʼ ಎಂದಿದ್ದಾರೆ.
ನೇಮಕಗೊಂಡ ಬಳಿಕ ಗಣೇಶ್(51), ಕೀನ್ಯಾ ತಂಡವನ್ನು ಟಿ 20 ಮತ್ತು ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹಾಯ ಮಾಡುವುದು ನನ್ನ ಗುರಿ ಎಂದು ಹೇಳಿದ್ದರು.