
ಗಾಂಧಿ-ಬುದ್ಧರನ್ನು ಜಪಿಸಿ ಮೋದಿ ಜರ್ಝರಿತ ಜಗತ್ತಿನಲ್ಲಿ ಭಾರತವನ್ನು ನೈತಿಕ ಮಾರ್ಗದರ್ಶಿಯಾಗಿ ಬಿಂಬಿಸಲು ಪ್ರಯತ್ನಿಸಿದ್ದಾರೆ. ಇದು ರಷ್ಯಾದ ಮೇಲಿನ ಪ್ರಭಾವಕ್ಕಲ್ಲ, ಪಾಶ್ಚಾತ್ಯರ ಮೆಚ್ಚುಗೆಗಾಗಿ !?
“ಇಂದಿನ ಯುಗವು ಯುದ್ಧದ ಯುಗವಲ್ಲ ಎಂಬುದರ ಅರಿವು ನನಗಿದೆ. ಪ್ರಜಾಪ್ರಭುತ್ವ, ರಾಜತಾಂತ್ರಿಕತೆ ಮತ್ತು ಮಾತುಕತೆಗಳು ಜಗತ್ತನ್ನು ತಾಕುವ ಸಂಗತಿಗಳೆಂದು ನಾವು ಹಲವು ಬಾರಿ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದೇವೆ,” ಎಂದು 2022ರ ಸೆಪ್ಟೆಂಬರ್ನಲ್ಲಿ ಸಮರ್ಖಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್ಓಎಸ್)ಯ ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.
ಆ ಸಂದರ್ಭದಲ್ಲಿ ರಷ್ಯಾ-ಉಕ್ರೇನ್ ಯುದ್ಧವು ಎಂಟನೇ ತಿಂಗಳಿಗೆ ಕಾಲಿಟ್ಟಿತ್ತು. ಆ ಹಿನ್ನೆಲೆಯಲ್ಲಿಯೇ ಮೋದಿ ಅವರಾಡಿದ ಮಾತುಗಳು ವಿಶೇಷವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಸಾಕಷ್ಟು ಸದ್ದು ಮಾಡಿದ್ದವು. ಯುದ್ಧದ ಕುರಿತು ಮೋದಿ ಅವರು ಪುಟಿನ್ಗೆ ಬುದ್ಧಿವಾದದ ಮಾತು ಹೇಳಿದ್ದಾರೆ ಎಂದೇ ಆ ಮಾತುಗಳ ವ್ಯಾಖ್ಯಾನ ಮಾಡಲಾಗಿತ್ತು. ರಷ್ಯಾ ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಯಾಕೆಂದರೆ ಅವರಿಗೆ ಭಾರತದಲ್ಲಿ ಸಾಕಷ್ಟು ಹಿತಾಸಕ್ತಿಗಳಿದ್ದವು. ಅವರು ಮೋದಿ ಅವರ ಮಾತುಗಳನ್ನು ತೀರಾ ಲಘುವಾಗಿಯೇ ಸ್ವೀಕರಿಸಿದರು. ಮೋದಿ ಅವರಾಡಿದ ನುಡಿಗಳಿಂದ ಪುಟಿನ್ ಅವರು ಪ್ರೇರಿತರಾಗಿ ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಗೋಜಿಗೇನೂ ಹೋಗಲಿಲ್ಲ.
ಭಾರತದ ಪ್ರಧಾನಿಯ ಮಾತುಗಳು ವಿವೇಚನಾಯುತವಾಗಿದ್ದರೂ ಅವು ಪುಟಿನ್ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮವನ್ನು ಬೀರಲಿಲ್ಲ. ಯಾವುದೇ ದೇಶದ ನಾಯಕನು ಮತ್ತೊಂದು ದೇಶದ ನಾಯಕನಿಗೆ ಸಾರ್ವಜನಿಕವಾಗಿ ಸಲಹೆ ನೀಡುವುದನ್ನು ಇಷ್ಟಪಡುವುದಿಲ್ಲ. ಅದು ಅತ್ಯಂತ ಸಾಮಾನ್ಯ ಸಾಂಪ್ರದಾಯಿಕ ರಾಜತಾಂತ್ರಿಕತೆ. ಅದರಲ್ಲೂ ವಿಶೇಷವಾಗಿ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳಿಂದ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇರುವುದಿಲ್ಲವಾಗ ಅದು ಹೆಚ್ಚು ಅನ್ವಯವಾಗುತ್ತದೆ. ಆದರೂ ಮೋದಿ ಅವರು ಈ ರಾಜತಾಂತ್ರಿಕ ಸಂಪ್ರದಾಯಗಳಿಗೆ ಸೀಮಿತರಾಗಿಲ್ಲ. ಆ ವಿದ್ಯಮಾನ ಘಟಿಸಿ ನಾಲ್ಕು ವರ್ಷಗಳ ಬಳಿಕ ಮತ್ತೊಂದು ಎಸ್ಸಿಒ ಶೃಂಗಸಭೆಯ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ಬಿಷ್ಕೆಕ್ನಲ್ಲಿ ನಡೆದ ಸಭೆಯಲ್ಲಿ ಪುಟಿನ್ ಅವರ ನಿರಭಿಮಾನದ ಮುಖಮುದ್ರೆಯ ಮುಂದೆಯೇ ಮೋದಿ ಅವರು ತಮ್ಮ ಆಲೋಚನೆಗಳನ್ನು ಮತ್ತಷ್ಟು ಬಲವಾಗಿ ಪ್ರತಿಪಾದಿಸುವ ಕೆಲಸ ಮಾಡಿದ್ದಾರೆ.
ಪಾಶ್ಚಿಮಾತ್ಯರ ಮೆಚ್ಚಿಸಲು ಪುಟಿನ್ಗೆ ಪಾಠವೇ?
ಉಕ್ರೇನ್ನಲ್ಲಿ ಶಾಂತಿಗಾಗಿ ನಡೆಯುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುತ್ತದೆ ಎಂದು ಮೋದಿ ಹೇಳಿದರು. "ಯುದ್ಧದಲ್ಲಿ ಕಳೆಯುವ ಪ್ರತಿಯೊಂದು ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ" ಎಂದು ಹೇಳುವ ಮೂಲಕ ಯುದ್ಧವು ಮಾನವೀಯತೆಯ ಮೇಲೆ ಬೀರುವ ಪರಿಣಾಮವನ್ನು ಅವರು ಪ್ರಸ್ತಾಪಿಸಿದರು ಮತ್ತು ಶಾಂತಿಯ ಕಡೆಗಿನ ಪ್ರತಿಯೊಂದು ಹೆಜ್ಜೆಯೂ ಭರವಸೆಯನ್ನು ಮೂಡಿಸುತ್ತದೆ ಎಂದರು. ಅಷ್ಟು ಮಾತ್ರವಲ್ಲದೆ, "ನಾವು ಯಾವತ್ತೂ ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗಬೇಕು, ಇದು ಇಡೀ ಮಾನವಕುಲಕ್ಕೆ ಬಹಳ ಮುಖ್ಯವಾಗಿದೆ" ಎಂದು ತಿಳಿಹೇಳಿದರು. ಅಂತಿಮವಾಗಿ, ಗಾಂಧಿ ಮತ್ತು ಬುದ್ಧರನ್ನು ಸ್ಮರಿಸಿದ ಮೋದಿ, ಅವರ ನಾಡು "ಶಾಂತಿಯ ಹಾದಿ" ಎಂಬ ಒಂದೇ ಒಂದು ಸಂದೇಶವನ್ನು ಹೊಂದಿದೆ ಎಂದರು.
ಮೋದಿ ನುಡಿದ ಈ ಮಾತುಗಳನ್ನು ಪಾಶ್ಚಿಮಾತ್ಯ ಮಾಧ್ಯಮಗಳು ಸಹಜವಾಗಿಯೇ ಸಕಾರಾತ್ಮಕವಾಗಿ ಸ್ವೀಕರಿಸಿವೆ, ಅಲ್ಲಿ ಅವುಗಳನ್ನು ಪುಟಿನ್ಗೆ ನೀಡಿದ ಎಚ್ಚರಿಕೆ ಎಂದು ಬಿಂಬಿಸಲಾಗುತ್ತಿದೆ. ಪುಟಿನ್ಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಕ್ಕಾಗಿ ಪಾಶ್ಚಿಮಾತ್ಯರ ಮೇಲೆ ಪ್ರಭಾವ ಬೀರುವುದು ಮೋದಿಯವರ ಉದ್ದೇಶವಾಗಿದ್ದರೆ, ಅಥವಾ ಮೋದಿಯವರ ನೇತೃತ್ವದಲ್ಲಿ 'ವಿಶ್ವಗುರು' ಭಾರತವು ಅಧಿಕಾರದ ಮುಂದೆ ಮುಕ್ತವಾಗಿ ಮತ್ತು ಸಾರ್ವಜನಿಕವಾಗಿ ಸತ್ಯವನ್ನು ನುಡಿಯುತ್ತದೆ ಎಂದು ಸಂಘ ಪರಿವಾರದ ಬೆಂಬಲಿಗರಿಗೆ ತೋರಿಸುವುದಾಗಿದ್ದರೆ, ಆ ಉದ್ದೇಶವು ಸ್ಪಷ್ಟವಾಗಿ ಈಡೇರಿದೆ.
ಆದಾಗ್ಯೂ, ಉಕ್ರೇನ್ ಯುದ್ಧಕ್ಕೆ ಕೊನೆ ಹಾಡುವಂತೆ ಪುಟಿನ್ ಅವರನ್ನು ಮನವೊಲಿಸುವುದು ಅವರ ಗುರಿಯಾಗಿದ್ದರೆ, ಇದು ಖಂಡಿತವಾಗಿಯೂ ಅದಕ್ಕೆ ಸರಿಯಾದ ಮಾರ್ಗವಾಗಿರಲಿಲ್ಲ. ರಾಜತಾಂತ್ರಿಕತೆಯು ಎಂದಿಗೂ ತನ್ನ ಮಾತುಕತೆಯ ಪಾಲುದಾರರನ್ನು ಮುಜುಗರಕ್ಕೆ ಒಳಪಡಿಸಬಾರದು, ಏಕೆಂದರೆ ಇದು ಅವರನ್ನು ಮತ್ತಷ್ಟು ಪ್ರತಿರೋಧಕ್ಕೆ ತಳ್ಳುತ್ತದೆ. ಪ್ರಮುಖ ವಿಶ್ವ ಶಕ್ತಿಯೊಂದರ ದೀರ್ಘಕಾಲದ ನಾಯಕನ ಘನತೆಯ ವಿಷಯ ಬಂದಾಗ ಇದು ವಿಶೇಷವಾಗಿ ಅನ್ವಯವಾಗುತ್ತದೆ. ವಿಷಯ ಹೇಗೆ ಇದ್ದರೂ, ಉಕ್ರೇನ್ ಯುದ್ಧದ ವಿಷಯದಲ್ಲಿ ರಷ್ಯಾದ ಮೇಲೆ ಭಾರತಕ್ಕೆ ಯಾವುದೇ ಪ್ರಭಾವವಿಲ್ಲ. ಆದ್ದರಿಂದ, 'ವಿಶ್ವಗುರು' ಭ್ರಮೆಯನ್ನು ಹೊರತುಪಡಿಸಿ, ಈ ತಿಂಗಳ ಉತ್ತರಾರ್ಧದಲ್ಲಿ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೂ ಮುಂಚಿತವಾಗಿ ಪಾಶ್ಚಿಮಾತ್ಯ ದೇಶಗಳ, ವಿಶೇಷವಾಗಿ ಯುರೋಪಿನ ಮೆಚ್ಚುಗೆಯನ್ನು ಗಳಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬುದಂತೂ ಇದರಿಂದ ಸ್ಪಷ್ಟವಾಗುತ್ತಿದೆ.
ಭಾಗವತ್ ಮುಂದಿಟ್ಟ ವಿಶ್ವಗುರು ಪ್ರಸ್ತಾವನೆ
ಮೋದಿ ಅವರು ಪುಟಿನ್ಗೆ ಶಾಂತಿಯ ಮೌಲ್ಯಗಳನ್ನು ಬೋಧಿಸುತ್ತಿದ್ದ ಅದೇ ದಿನ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಕೆನಡಾದ ಟೊರೊಂಟೊದಲ್ಲಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಗತ್ತಿಗೆ ಧರ್ಮದ ದಾರಿಯನ್ನು ತೋರಿಸುವುದು ಹಿಂದೂಗಳ ದೈವದತ್ತವಾದ ಕರ್ತವ್ಯ ಎಂದು ಹೇಳಿದರು. ಅವರು ಎಂದಿನಂತೆ ಹಿಂದೂ ಜೀವನಶೈಲಿ ಹಾಗೂ ಜಗತ್ತು ಮತ್ತು ಮಾನವೀಯತೆಯ ಕಡೆಗಿನ ದೃಷ್ಟಿಕೋನದ ಬಗ್ಗೆ ಮಾತನಾಡುತ್ತಾ, ಸಮಸ್ತ ಮಾನವಕುಲವೂ ಒಂದೇ ಎಂದು ಪ್ರತಿಪಾದಿಸಿದರು.
ಹಿಂದೂಗಳು ಯಾವಾಗಲೂ ವಿಶ್ವ ಬಂಧುಗಳಾಗಿ ಮಾನವಕುಲದ ಒಳಿತನ್ನು ಬಯಸಿದ್ದಾರೆ ಎಂದೂ ಭಾಗವತ್ ಅವರು ಹೇಳಿದರು. ವಾಸ್ತವವಾಗಿ, ಇತರರ ಸೇವೆಯಲ್ಲಿ ತೊಡಗಿಕೊಳ್ಳುವುದು ಮತ್ತು ಹಾಗೆ ಮಾಡುವುದರಿಂದ ಸಂತೋಷವನ್ನು ಪಡೆಯುವುದು ಹಿಂದೂಗಳ ಕರ್ತವ್ಯವಾಗಿದೆ. ತಮ್ಮ ಕರ್ತವ್ಯವಾಗಿ ಹಿಂದೂಗಳು ಜಗತ್ತಿಗೆ ನೀಡಬೇಕಾಗಿರುವುದು ಇದನ್ನೇ. ವಾಸ್ತವವಾಗಿ, ಇದು ಹಿಂದೂಗಳ ರಾಷ್ಟ್ರೀಯ ಕರ್ತವ್ಯವೂ ಹೌದು. ಆದ್ದರಿಂದ, ಭಾರತವು ಬೃಹತ್ತಿನ ಕಡೆಗೆ ಹೆಜ್ಜೆ ಇಟ್ಟಾಗ, ಅದು ಮಹಾಶಕ್ತಿಯಾಗಲಿಲ್ಲ ಬದಲಿಗೆ "ಅದರ ಸ್ವಂತ ಚಾರಿತ್ರ್ಯದಿಂದಾಗಿ ವಿಶ್ವಗುರುವಾಯಿತು", ಹೀಗಾಗಿ ಭಾರತದ ಉದಯವು ಹೆಚ್ಚು ಒಂದಾದ ಮತ್ತು ಹೆಚ್ಚು ವಿಮೋಚನೆಯಿಂದ ಕೂಡಿದ ಮಾನವೀಯತೆಯ ಪ್ರತೀಕ ಎಂದವರು ಹೇಳಿದರು.
ಧರ್ಮ vs ವಾಸ್ತವ ರಾಜಕಾರಣ
ಸಂಘ ಪರಿವಾರದ ಭಾರತದ ದೃಷ್ಟಿಕೋನವು ಸ್ಪಷ್ಟವಾಗಿ ಪ್ರಾಚೀನ ಭಾರತವನ್ನು ಸೂಚಿಸುತ್ತದೆ. ಇದನ್ನು ಅನೇಕ ಹಿಂದೂಗಳು ಒಪ್ಪುತ್ತಾರೆ. ಭಾರತವು ಇತರ ದೇಶಗಳೊಂದಿಗೆ ಯಾವಾಗಲೂ ಶಾಂತಿಯನ್ನು ಬಯಸಿದ ಪುಣ್ಯಭೂಮಿ ಎಂಬುದು ಅವರ ನಂಬಿಕೆ. ಅದು ಎಂದಿಗೂ ವಿದೇಶಗಳ ಮೇಲೆ ದಾಳಿ ಮಾಡಲಿಲ್ಲ ಅಥವಾ ತನ್ನ ಗಡಿಯನ್ನು ವಿಸ್ತರಿಸಲು ಪ್ರಯತ್ನಿಸಲಿಲ್ಲ. ಆದರೆ ಈ ದೃಷ್ಟಿಕೋನವು ವಾಸ್ತವಕ್ಕೆ ಎಷ್ಟು ದೂರ?
ಮೂಲತಃ ಪ್ರಾಚೀನ ಭಾರತೀಯರಿಗೆ ಜಗತ್ತು ಎಂದರೆ ಭಾರತ ಉಪಖಂಡ ಮಾತ್ರವಾಗಿತ್ತು. ಬೌದ್ಧಧರ್ಮ ಹಾಗೂ ಭಾರತೀಯ ಸಂಸ್ಕೃತಿಯು ಅನೇಕ ದೇಶಗಳಿಗೆ ಹರಡಿದರೂ, ಪ್ರಾಚೀನ ಭಾರತದ ರಾಜ್ಯಗಳು ರಾಜಕೀಯವಾಗಿ ಅಥವಾ ಕಾರ್ಯತಂತ್ರದ ದೃಷ್ಟಿಯಿಂದ ನೋಡುವುದಾದರೆ ಅದು ಉಪಖಂಡದ ಆಚೆಗೆ ಯಾವುದೇ ಸಾಹಸ ಮಾಡಲಿಲ್ಲ. ಪ್ರಾಚೀನ ಕಾಲದಲ್ಲಿ ಹಾಗೂ ತದನಂತರದ ಉಪಖಂಡದ ಇತಿಹಾಸವು ಶಾಂತಿಯುತವಾಗಿರಲಿಲ್ಲ. ಇತಿಹಾಸವು ಇದನ್ನು ಸಾಬೀತುಪಡಿಸುತ್ತದೆ. ಋಷಿಗಳು ಮಾನವೀಯತೆಯ, ಏಕತೆ ಮತ್ತು ಶಾಂತಿಯ ಮೌಲ್ಯದ ಸಂದೇಶವನ್ನು ನೀಡಿದ್ದಿರಬಹುದು, ಆದರೆ ಅದನ್ನು ಹಿಂದೂ ರಾಜಕೀಯ ಮತ್ತು ಸಾಮಾಜಿಕ ಗಣ್ಯರು ಆಚರಣೆಗೆ ತಂದಿದ್ದರೇ?
ವಿಭಜನೆಯೊಂದಿಗೆ ಸಂಭವಿಸಿದ ಭೀಕರ ಸಂಗತಿಗಳ ಹೊರತಾಗಿಯೂ, ಎಂ.ಕೆ. ಗಾಂಧಿ ಅವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವು ಅಹಿಂಸೆಯನ್ನು ಆಧರಿಸಿತ್ತು ಎಂಬುದು ಜಗತ್ತನ್ನು ಬೆರಗುಗೊಳಿಸಿತು ಎಂಬ ಮಾತು ನಿಜ. ಇದು ಭಾರತೀಯ ರಾಜತಾಂತ್ರಿಕ ವ್ಯವಸ್ಥೆಗೆ ಒಂದು ನೈತಿಕ ಅಧಿಕಾರವನ್ನು ನೀಡಿತು, ಸ್ವಾತಂತ್ರ್ಯದ ಮೊದಲ ದಶಕದಲ್ಲಿ ಭಾರತೀಯ ರಾಜತಾಂತ್ರಿಕತೆಯು ಇದನ್ನೇ ಹೆಚ್ಚಾಗಿ ಅವಲಂಬಿಸಿತ್ತು. ಹೀಗಾಗಿ, ಕೊರಿಯನ್ ಯುದ್ಧದ ನಂತರ ತಟಸ್ಥ ಪಕ್ಷವಾಗಿ ಶಾಂತಿಯನ್ನು ಕಾಪಾಡಲು ಭಾರತವನ್ನು ಆಹ್ವಾನಿಸಲಾಯಿತು.
ಭಾರತವು ಯಾವತ್ತೂ ತನ್ನ ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ ನೀಡುತ್ತಾ ಬಂದಿದೆ. ಶೀತಲ ಸಮರದ ಅವಧಿಯಲ್ಲಿ ಅಲಿಪ್ತ ನೀತಿಯನ್ನು ಅನುಸರಿಸಿದರೂ, 1956ರ ಹಂಗೇರಿ ದಂಗೆಯ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಪರ ಒಲವು ತೋರಿದೆ ಎಂಬ ಆರೋಪಗಳು ಮತ್ತು 1961ರಲ್ಲಿ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ನಡೆಸಿದ ಮಿಲಿಟರಿ ಕಾರ್ಯಾಚರಣೆಯು ಭಾರತದ ನೈತಿಕ ಮೇಲ್ಮೆಯನ್ನು ತಕ್ಕಮಟ್ಟಿಗೆ ಮಂಕಾಗಿಸಿತು. ಇದು ಭಾರತೀಯ ವಿದೇಶಾಂಗ ನೀತಿಯು ಸದಾ ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಅನ್ವೇಷಣೆಯನ್ನು ಆಧರಿಸಿತ್ತು ಎಂಬುದನ್ನು ತೋರಿಸುತ್ತದೆ.
ಮಿಷನ್ vs ವಿಷನ್
ಜಗತ್ತಿನಲ್ಲಿ ತಮಗೊಂದು ವಿಶೇಷ ಮಿಷನ್ ಇದೆ ಎಂದು ಅನೇಕ ರಾಷ್ಟ್ರಗಳು ಭಾವಿಸುತ್ತವೆ. ಯೆಹೂದಿಗಳು ತಾವು ದೇವರಿಂದ ಆಯ್ಕೆಯಾದವರು ಎಂದು ನಂಬುತ್ತಾರೆ. ವಸಾಹತುಶಾಹಿ ಕಾಲದಲ್ಲಿ, ಯುರೋಪಿಯನ್ ಶಕ್ತಿಗಳು ತಾವು ವಸಾಹತುಗಳ ಮೇಲೆ ಎಸಗಿದ ದೌರ್ಜನ್ಯಗಳನ್ನು ಅವುಗಳಿಗೆ ನಾಗರಿಕತೆಯನ್ನು ಕಲಿಸುವ ಪ್ರಕ್ರಿಯೆಯೆಂದು ಸಮರ್ಥಿಸಿಕೊಂಡವು. ಆದರೆ ವಾಸ್ತವವೆಂದರೆ ವಸಾಹತುಶಾಹಿ ವ್ಯವಸ್ಥೆಯು ಸಂಪೂರ್ಣವಾಗಿ ವಸಾಹತುಗಳ ನಿರ್ದಯ ಶೋಷಣೆಯ ಮೇಲೆಯೇ ಆಧಾರಿತವಾಗಿತ್ತು. ಚೀನೀಯರು ಸಾಂಪ್ರದಾಯಿಕವಾಗಿ ವಿಶ್ವದ ಉಳಿದ ಭಾಗದ ಜನರನ್ನು ಅನಾಗರಿಕರೆಂದು ನಂಬಿದ್ದಾರೆ. ಆದರೆ ಇತಿಹಾಸವು ನಮಗೆ ಕಲಿಸುವುದೇನೆಂದರೆ, ಪ್ರತಿಯೊಂದು ಜನಸಮುದಾಯವು ಏಳು-ಬೀಳುಗಳನ್ನು ಕಂಡಿರುತ್ತದೆ ಮತ್ತು ಯಾರು ತಮ್ಮ ರಾಷ್ಟ್ರೀಯ ಭವಿಷ್ಯಕ್ಕಿಂತ ಹೆಚ್ಚಾಗಿ ತರ್ಕ, ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ನಂಬುತ್ತಾರೋ ಅವರೇ ಹೆಚ್ಚು ಯಶಸ್ಸು ಸಾಧಿಸುತ್ತಾರೆ.
ಭಾರತವು ಗಾಂಧಿ ಮತ್ತು ಬುದ್ಧನ ಭೂಮಿಯಾಗಿರುವಂತೆಯೇ, ವಾಸ್ತವ ರಾಜಕಾರಣದ ಗುಣಗಳನ್ನು ನಮಗೆ ಬೋಧಿಸಿದ ಚಾಣಕ್ಯನ ನಾಡೂ ಹೌದು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ.
ಕೊನೆಯದಾಗಿ, ಟೊರೊಂಟೊದಲ್ಲಿ ನಡೆದ ತಮ್ಮ ಭಾಷಣದಲ್ಲಿ ಮೋಹನ್ ಭಾಗವತ್ ಅವರು ಪಾಕಿಸ್ತಾನದ ರಾಷ್ಟ್ರೀಯ ಕವಿ, ಅಲ್ಲಾಮಾ ಮುಹಮ್ಮದ್ ಇಕ್ಬಾಲ್ ಅವರ ಸಾರೇ ಜಹಾ ಸೇ ಅಚ್ಚಾ ಹಿಂದುಸ್ತಾನ್ ಹಮಾರ್ ಕವಿತೆಯ ಪ್ರಸಿದ್ಧ ಸಾಲುಗಳಾದ "ಯೂನನ್ ಓ ಮಿಸ್ರ್ ಓ ರೋಮಾ ಸಬ್ ಮಿಟ್ ಗಯೇ ಜಹಾನ್ ಸೆ / ಕುಚ್ ಬಾತ್ ಹೈ ಕಿ ಹಸ್ತಿ ಮಿಟಿ ನಹಿ ಹಮಾರೀ" (ಗ್ರೀಸ್, ಈಜಿಪ್ಟ್ ಮತ್ತು ರೋಮ್ ನಾಗರಿಕತೆಗಳೆಲ್ಲವೂ ಜಗತ್ತಿನಿಂದ ಮಾಯವಾಗಿವೆ, ಆದರೆ ನಮ್ಮ ಅಸ್ತಿತ್ವವು ಅಳಿದುಹೋಗದಂತೆ ಇರಲು ಯಾವುದೋ ವಿಶೇಷ ಶಕ್ತಿಯಿದೆ) ಎಂಬುದನ್ನು ಉಲ್ಲೇಖಿಸಿದರು. ಆದರೆ ಆ ಸಾಲುಗಳನ್ನು ಬರೆದವರು ಇಕ್ಬಾಲ್ ಎಂಬ ಅಂಶವನ್ನು ಭಾಗವತ್ ಅವರು ಪ್ರಸ್ತಾಪಿಸಲಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


