x

ಖಂಡ್ರೆ vs ಕುಮಾರಸ್ವಾಮಿ ಚರ್ಚೆಗೆ ಸವಾಲು, ಬಿಡದಿ ಚಲೋ ರೈತ ಬಣಗಳ ಘರ್ಷಣೆ, ಕುಟುಂಬದ ನಾಲ್ವರ ಹ**ತ್ಯೆ ಬಳಿಕ ತಾನೂ ಆತ್ಮಹ..ತ್ಯೆ

ಖಂಡ್ರೆ ಸವಾಲಿಗೆ ಎಚ್‌ಡಿಕೆ ಉತ್ತರವೇನು?, ಬಿಡದಿ ಟೌನ್‌ಶಿಪ್‌ ಜಟಾಪಟಿ ತೀವ್ರಗೊಳ್ಳುತ್ತಿದೆ. ತಾಯಿ, ಅಜ್ಜಿ, ಬಾವನನ್ನು ಕೊಂದು ಯುವಕ ಆತ್ಮಹ..ತ್ಯೆ


Click the Play button to hear this message in audio format

ಬೆಂಗಳೂರಿನ ಹೃದಯಭಾಗದಲ್ಲಿರುವ ಎಚ್‌ಎಂಟಿ ಒಡೆತನದ ನೂರಾರು ಎಕರೆ ಭೂಮಿ ಇದೀಗ ರಾಜ್ಯ ರಾಜಕಾರಣದ ಅತ್ಯಂತ ಬಿಸಿಯಾದ ಚರ್ಚೆಯ ವಿಷಯವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಈ ವಿವಾದವು ಕೇವಲ ಭೂಮಿಯ ಹಕ್ಕಿನ ಪ್ರಶ್ನೆಯಾಗಿ ಉಳಿಯದೆ, ಇದು ರಾಜ್ಯ ಮತ್ತು ಕೇಂದ್ರದ ನಡುವಿನ ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ. ವಿವಾದ ಸಂಬಂಧ ಚರ್ಚೆ ಬರಲಿ ಎಂದು ನೇರವಾಗಿ ಸವಾಲು ಹಾಕುವ ಮೂಲಕ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವಂತಾಗಿದೆ.

ಕುಮಾರಸ್ವಾಮಿ ಮತ್ತು ಈಶ್ವರ್ ಖಂಡ್ರೆ ನಡುವಿನ ಈ ಜಟಾಪಟಿಯು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳಿವೆ. ಎಚ್‌ಎಂಟಿ ಭೂಮಿಯ ಮೌಲ್ಯ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿಗಳಷ್ಟಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅರಣ್ಯ ಇಲಾಖೆಯ ಕ್ರಮಗಳನ್ನು ತೀವ್ರವಾಗಿ ಟೀಕಿಸಿದ್ದರು. ಅರಣ್ಯ ಇಲಾಖೆಯು ಅತಿಕ್ರಮ ಪ್ರವೇಶ ಮಾಡುತ್ತಿದೆ ಮತ್ತು ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳುವ ನೆಪದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂಬುದು ಕುಮಾರಸ್ವಾಮಿ ಮುಖ್ಯ ಆರೋಪವಾಗಿದೆ.

ಇದಕ್ಕೆ ಪ್ರತಿಯಾಗಿ ಸಚಿವ ಈಶ್ವರ್ ಖಂಡ್ರೆ, "280 ಎಕರೆಯಷ್ಟು ವಿಸ್ತಾರವಾದ ಈ ಪ್ರದೇಶದಲ್ಲಿ ದಟ್ಟ ಅರಣ್ಯವಿತ್ತು. ಆದರೆ ಅಲ್ಲಿಗೆ ಭೇಟಿ ನೀಡಿದಾಗ ಅರಣ್ಯ ಸ್ವರೂಪವೇ ನಾಶವಾಗಿರುವುದು ಕಂಡುಬಂತು. ಈ ಅರಣ್ಯ ನಾಶಕ್ಕೆ ಯಾರು ಹೊಣೆ?" ಎಂದಿದ್ದಾರೆ. ಎಚ್‌ಎಂಟಿ ಭೂಮಿಯು ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಅದನ್ನು ಅತಿಕ್ರಮಣದಿಂದ ರಕ್ಷಿಸುವುದು ತಮ್ಮ ಜವಾಬ್ದಾರಿ. ಕುಮಾರಸ್ವಾಮಿ ಅವರು ಕೇವಲ ಆರೋಪ ಮಾಡುವುದಲ್ಲ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿ. ಅವರು ಹೋಗಿ ನೋಡಿದ್ದಾರೆಯೇ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರೈತ ಬಣಗಳ ನಡುವೆ ಜಟಾಪಟಿ

ಬಿಡದಿ ಟೌನ್‌ಶಿಪ್‌ ಜಟಾಪಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಒಂದೆಡೆ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 486ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದೆಡೆ ಯೋಜನೆ ಪರವಾಗಿರುವ ರೈತರೂ ಪ್ರತಿಭಟನೆ ನಡೆಸುತ್ತಿದ್ದು, ರೈತರ ನಡುವಿನ ಪರ-ವಿರೋಧವು ಘರ್ಷಣೆ, ವಾಗ್ವಾದಕ್ಕೆ ಕಾರಣವಾಗಿದೆ. ಬಿಡದಿ ಚಲೋಗೆ ಕರೆ ಕೊಟ್ಟಿದ್ದು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಮಂಡ್ಯ, ಮೈಸೂರು, ಹಾಸನ ಸೇರಿ ಬರೋಬ್ಬರಿ 15ಕ್ಕೂ ಹೆಚ್ಚು ಜಿಲ್ಲೆಗಳ ರೈತ ಮುಖಂಡರು ಮತ್ತು ಹೋರಾಟಗಾರರು ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿ ಬೃಹತ್ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ರೈತರ ಹೋರಾಟಕ್ಕೆ ಬೆಂಬಲ ನೀಡಲು ಬಂದ ಹೊರ ಜಿಲ್ಲೆಯ ರೈತರಿಗೆ ಯೋಜನೆ ಪರ ಇರುವ ರೈತರು ತಡೆಯಲು ಮುಂದಾದಾಗ ಪರಿಸ್ಥಿತಿ ಉದ್ವಿಗ್ನವಾಗಿತ್ತು. ರೈತರ ನಡುವೆ ವಾಗ್ವಾದ ನಡೆದು ತಳ್ಳಾಟ-ನೂಕಾಟವೂ ನಡೆದಿದೆ. ಯೋಜನೆ ಪರ ಇರುವ ರೈತರು ಕಾರು, ಬಸ್ಸುಗಳನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಊರಿನ ವಿಚಾರಕ್ಕೆ ಹೊರಗಿನವರು ಬರೋದು ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ. ಉಭಯ ಬಣಗಳ ಮಧ್ಯೆ ಕೈ ಕೈ ಮಿಲಾಯಿಸುವ ಮಟ್ಟಿಗೆ ಪರಿಸ್ಥಿತಿ ಉದ್ವಿಗ್ನವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಎರಡೂ ಕಡೆಯವರನ್ನು ಸಮಾಧಾನಪಡಿಸಿ ಘರ್ಷಣೆ ತಪ್ಪಿಸಿದ್ದಾರೆ.

ಕುಟುಂಬದವರನ್ನು ಹತ್ಯೆ ಮಾಡಿ ಆತ್ಮಹತ್ಯೆ

ಇತ್ತೀಚೆಗಷ್ಟೇ ಪ್ರಿಯಕರನ ಜತೆ ಸೇರಿ ಶ್ವೇತಾ ಎಂಬಾಕೆ ತನ್ನ ಪೋಷಕರು, ಸಹೋದರಿಯನ್ನು ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿರುವುದು ನಾಗರಿಕರನ್ನು ತಲ್ಲಣಗೊಳಿಸುತ್ತಿವೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದ ಕೌಟುಂಬಿಕ ಹತ್ಯೆ ಬೆಚ್ಚಿಬೀಳಿಸಿದ್ದು, ಇವತ್ತು ಬೆಳಗಿನ ಜಾವ ನಡೆದ ಈ ಘಟನೆಯಲ್ಲಿ ಪ್ರಶಾಂತ್ ಎಂಬ ಯುವಕ ತನ್ನ ತಾಯಿ ಮಂಗಳಮ್ಮ , ಅಜ್ಜಿ ನಂಜಮ್ಮ ಹಾಗೂ ಬಾವ ಸತೀಶ್ ಅವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ.

ತಂದೆ ಚಿಕ್ಕಣ್ಣ ಕೆಲಸದ ನಿಮಿತ್ತ ಹೊರಹೋದ ತಕ್ಷಣ, ಮನೆಯಲ್ಲಿದ್ದ ತನ್ನ ಕುಟುಂಬದ ಸದಸ್ಯರ ಮೇಲೆ ಪ್ರಶಾಂತ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿ ಪ್ರಶಾಂತ್‌ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಆದರೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಂತೆ ವರ್ತಿಸುತ್ತಿದ್ದ ಪ್ರಶಾಂತ್, ಅಷ್ಟರಲ್ಲಿಯೇ ಒಳಗಿನಿಂದ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Read More
Next Story