ಪಾಲಿಕೆ ಚುನಾವಣೆ ಮುಂದೂಡಲು GBAಗೆ SIR ನೆಪ, ಕಾಂಗ್ರೆಸ್ -ಬಿಜೆಪಿ ನಡುವೆ PRC ಜಟಾಪಟಿ, ಈಗ 'ಅನಾಥ ವಾಹನʼಗಳ ತೆರವು
ಎಸ್‌ಐಆರ್ ಪರಿಷ್ಕರಣೆ ಮತ್ತು ಆಡಳಿತಾತ್ಮಕ ನೆಪ ಮುಂದಿಟ್ಟುಕೊಂಡು ಚುನಾವಣೆ ಮುಂದೂಡಿಕೆಗೆ ಸುಪ್ರೀಂಕೋರ್ಟ್ ಮೊರೆ ಹೋದ ಜಿಬಿಎ. ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಪ್ರಾರಂಭವಾಗಿದೆ. ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯವನ್ನು ಸಿಎಂ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು.
ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳ ಚುನಾವಣೆ ಇದೀಗ ಕಾನೂನು ಮತ್ತು ಆಡಳಿತಾತ್ಮಕ ಜಟಿಲತೆಗಳಲ್ಲಿ ಸಿಲುಕಿದೆ. ಸುಪ್ರೀಂಕೋರ್ಟ್ ನಿಗದಿಪಡಿಸಿದ್ದ ಗಡುವಿನೊಳಗೆ ಚುನಾವಣೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿರುವುದರಿಂದ, ಜಿಬಿಎ, ನ್ಯಾಯಾಲಯದ ಮೊರೆ ಹೋಗಿದೆ. ಈ ಮೂಲಕ ಬೆಂಗಳೂರಿನ ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಜಿಬಿಎ ಅರ್ಜಿ ಸಲ್ಲಿಕೆ ಮಾಡಿದೆ. ನ್ಯಾಯಾಲಯ ನೀಡಿರುವ ಆಗಸ್ಟ್31ರೊಳಗೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಆದೇಶವನ್ನು ಪಾಲನೆ ಮಾಡಲು ಕಷ್ಟಕರವಾಗಿದೆ. ಆಡಳಿತಾತ್ಮಕ ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್31ಕ್ಕೆ ವಿಸ್ತರಣೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ.
ಶಾಶ್ವತ ನಿವಾಸ ಪ್ರಮಾಣ ಪತ್ರ ಜಟಾಪಟಿ
ಇತ್ತೀಚೆಗೆ ರಾಜ್ಯ ಸರ್ಕಾರವು ಪ್ರಸ್ತಾಪಿಸಿರುವ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಯ ವಿಚಾರವು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಈ ನಡೆಯನ್ನು ದೇಶದ್ರೋಹದ ಕೆಲಸ ಎಂದು ಕರೆದಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ನಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಖಾತೆ ಸಚಿವ ಅಮಿತ್‌ಶಾ ಅವರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರವು ಜನಸಾಮಾನ್ಯರ ಅನುಕೂಲಕ್ಕಾಗಿ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದೆ. ಇದು ಕಾಂಗ್ರೆಸ್ ಪಕ್ಷದಿಂದ ನೀಡುತ್ತಿರುವ ಪ್ರಮಾಣಪತ್ರವಲ್ಲ, ಬದಲಾಗಿ ಸರ್ಕಾರದ ಅಧಿಕೃತ ವ್ಯವಸ್ಥೆಯಿಂದ ನೀಡುತ್ತಿರುವ ಸೌಲಭ್ಯ. ಶಾಸನಬದ್ಧವಾಗಿ ಕೆಲಸ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು, ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವುದನ್ನು ಬಿ.ಕೆ. ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಅವರಿಗೆ ಸಂವಿಧಾನದ ಅರಿವಿದ್ದರೆ ಪತ್ರವನ್ನು ರಾಷ್ಟ್ರಪತಿಗಳಿಗೆ ಬರೆಯಬೇಕಿತ್ತು, ಗೃಹ ಸಚಿವರಿಗೆ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪಾದಚಾರಿ ಮಾರ್ಗ ಒತ್ತುವರಿ ತೆರವು ವೀಕ್ಷಿಸಿದ ಸಿಎಂ
ಬೆಂಗಳೂರು ನಗರದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ, ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಅವರು ಬೆಳಗಾವಿಯಿಂದ ಆಗಮಿಸಿ ನೇರವಾಗಿ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಆರಂಭಿಸಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ತೆರವು ಕಾರ್ಯಾಚರಣೆಯನ್ನು ಖುದ್ದಾಗಿ ಪರಿಶೀಲಿಸಿದರು.
ಈ ನಡುವೆ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಬೆನ್ನಲ್ಲೇ ವಾರಸುದಾರರಿಲ್ಲದೆ ಪಾದಚಾರಿ ಮಾರ್ಗದಲ್ಲಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಬೃಹತ್ ಅಭಿಯಾನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ವಾಹನಗಳ ಮಾಲೀಕರಿಗೆ ಈಗಾಗಲೇ 15 ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ತಮ್ಮ ವಾಹನಗಳನ್ನು ತೆರವುಗೊಳಿಸಿಕೊಳ್ಳುವಂತೆ ಮುನ್ಸೂಚನೆ ನೀಡಿದ್ದರೂ, ಅನೇಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕಾರಣದಿಂದಾಗಿ, ಇದೀಗ ಆ ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸಿ, ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

