ಬಿಡದಿ ರೈತರ ಮೇಲಿನ FIRಗೆ ಭಾರೀ ಆಕ್ರೋಶ, ಬೆಂಗಳೂರಿನಲ್ಲಿ ದೇಶದ ಮೊದಲ AI ವಿವಿ, ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಇನ್ನು ಗಾಂಧೀಜಿ ಹೆಸರು
ಬಿಡದಿ: ರೈತರ ಮೇಲಿನ FIRಗೆ ರಾಜಕೀಯ ಕಿಡಿ | ಬೆಂಗಳೂರಿನಲ್ಲಿ ದೇಶದ ಮೊದಲ AI ವಿಶ್ವವಿದ್ಯಾಲಯ | ಗ್ರಾಮ ಪಂಚಾಯತ್‌ಗಳಿಗೆ ಗಾಂಧೀಜಿ ಹೆಸರು?
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ, ಅಲ್ಲಿನ ರೈತರು ಬೀದಿಗಿಳಿದಿದ್ದಾರೆ. ಈ ಹೋರಾಟ ಕೇವಲ ಜಮೀನಿನ ವಿಷಯವಾಗಿ ಉಳಿಯದೆ, ಇದೀಗ ರಾಜಕೀಯ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದ್ದು, ರೈತರು ಮತ್ತು ಸರ್ಕಾರದ ನಡುವಿನ ಕಂದಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಿಡದಿಯ ಮಂಡಲಹಳ್ಳಿಯಲ್ಲಿ ಜಂಟಿ ಭೂಮಾಪನ ಕಾರ್ಯ ನಡೆಸಲು ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದ ವೇಳೆ ರೈತರು ಪೊರಕೆ ಏಟು ನೀಡಿದ ಘಟನೆ ನಡೆಯಿತು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಸರ್ವೇ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ 20ಕ್ಕೂ ಹೆಚ್ಚು ರೈತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ಕ್ರಮವನ್ನು ರೈತರು ಖಂಡಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ಹೈಕಮಾಂಡಿಗೆ ನೀಡಿದ ಆಶ್ವಾಸನೆ ಈಡೇರಿಸಲು ಸಿಎಂ ಡಿ.ಕೆ. ಶಿವಕುಮಾರ್ ಈ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯದಿದ್ದರೆ ತಾವು ಧರಣಿ ಕೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಈ ನಡುವೆ, ಕಂದಾಯ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಶಾಂತಿಯುತ ಪ್ರತಿಭಟನೆಗೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ, ರಾಜಕೀಯ ಪ್ರೇರಿತವಾಗಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಕಾನೂನುಬಾಹಿರ. ಇಂತಹ ಸಂದರ್ಭದಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದ ಮೊದಲ ಎಐ ವಿವಿ
ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಜಾಗತಿಕ ತಂತ್ರಜ್ಞಾನ ದಿಗ್ಗಜ ಗೂಗಲ್ ಆಯೋಜಿಸಿದ್ದ 'ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ದೇಶದ ಟೆಕ್ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಹೊಸ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ಎಐ ತಂತ್ರಜ್ಞಾನದಲ್ಲಿ ನುರಿತ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಿದಂತಾಗಲಿದೆ. ಸಾರ್ವಜನಿಕ ಸೇವೆಗಳ ವಿತರಣೆಯನ್ನು ಪಾರದರ್ಶಕ ಮತ್ತು ವೇಗವಾಗಿಸಲು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.40ರಷ್ಟು ಇದೆ. ಬೆಂಗಳೂರು 17 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು ಸಂಶೋಧನೆಗಾಗಿ ಕರ್ನಾಟಕವನ್ನೇ ಆರಿಸಿಕೊಳ್ಳುತ್ತಿವೆ. ಭಾರತದಲ್ಲಿ ಗೂಗಲ್‌ನ 18 ಸಾವಿರ ಸಿಬ್ಬಂದಿ ಪೈಕಿ 12 ಸಾವಿರ ಸಿಬ್ಬಂದಿ ಬೆಂಗಳೂರಿನಲ್ಲಿದ್ದಾರೆ. ಇದು ನಮ್ಮ ನಗರದ ಮೇಲಿರುವ ನಂಬಿಕೆಗೆ ಸಾಕ್ಷಿ. ಗೂಗಲ್ ಜೊತೆಗಿನ ಸಂಬಂಧವನ್ನು ರಾಜ್ಯವು ಮುಂದಿನ ಹಂತಕ್ಕೆ ಕೊಂಡೊಯ್ಯಸಲು ಸಹಕಾರಿಯಾಗಲಿದೆ.
ಮಹಾತ್ಮ ಗಾಂಧೀಜಿ ಎಂಬುದಾಗಿ ನಾಮಕರಣ
ಗ್ರಾಮೀಣ ಭಾರತದ ಆರ್ಥಿಕ ಬೆನ್ನೆಲುಬನ್ನು ಬಲಪಡಿಸುವ ಮತ್ತು ಬಡ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಜಾರಿಗೆ ಬಂದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ' (ಮನರೇಗಾ) ಹೆಸರನ್ನು ಬದಲಿಸಿ ಕೇಂದ್ರ ಸರ್ಕಾರವು ಹಳೆಯ ‘ಮನರೇಗಾ’ ಯೋಜನೆಯ ಬದಲಿಗೆ ಜಾರಿಗೆ ತಂದಿರುವ ‘ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ (ವಿಬಿ ಜಿ ರಾಮ್‌ಜಿ) ಎಂದು ಹೆಸರಿಸಿದೆ. ರಾಜ್ಯ ಸರ್ಕಾರವು ಇದಕ್ಕೆ ತಿರುಗೇಟು ನೀಡಲು ಮುಂದಾಗಿದೆ. ಕೇಂದ್ರದ ಯೋಜನೆಗಳ ಹೆಸರುಗಳಿಗೆ ಟಕ್ಕರ್ ನೀಡುವಂತೆ, ರಾಜ್ಯದ ಎಲ್ಲಾ 5,927 ಗ್ರಾಮ ಪಂಚಾಯತ್‌ಗಳಿಗೂ 'ಮಹಾತ್ಮ ಗಾಂಧೀಜಿ' ಅವರ ಹೆಸರನ್ನು ಇಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ಖಂಡ್ರೆ ಅಧಿಕಾರಿಗಳ ಸಭೆ ನಡೆಸಿ ಗ್ರಾಮ ಪಂಚಾಯತ್‌ಗಳ ಹೆಸರಿನ ಮೊದಲು ಮಹಾತ್ಮ ಗಾಂಧಿ ಹೆಸರಿಡುವಂತೆ ತಿಳಿಸಿದರು.
ರಾಜ್ಯ ಸರ್ಕಾರವು ಆಗಸ್ಟ್ 15ರೊಳಗಾಗಿ ರಾಜ್ಯದ ಎಲ್ಲಾ 5,927 ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರನ್ನು ಇಡಲು ನಿರ್ಧರಿಸಿದೆ. ಇದು ಮಹಾತ್ಮ ಗಾಂಧಿಯವರ ತತ್ವಗಳನ್ನು ಗ್ರಾಮೀಣ ಮಟ್ಟದಲ್ಲಿ ಉಳಿಸಿಕೊಳ್ಳುವ ಸಾಂಕೇತಿಕ ಕ್ರಮವಾಗಿದೆ. ರಾಜ್ಯವು 4,800 ಕೋಟಿ ರೂ.ಗಳ ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರ 56,492 ಕೋಟಿ ರೂ. ನೀಡಿದೆ. ಈ ಹಿಂದೆ ಇದ್ದ 75:25 ಅನುಪಾತವನ್ನು ಕೇಂದ್ರವು 60:40ಕ್ಕೆ ಬದಲಾಯಿಸಿರುವುದು ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಅಭಿವೃದ್ಧಿಶೀಲ ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಹಾಕಿದೆ ಎಂದರು.

