
ಎಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಅಬಕಾರಿ ಸುಂಕ ಇಲ್ಲ - ಪೆಟ್ರೋಲ್ ದರದಲ್ಲಿ ಕಡಿತ ?
ಇತ್ತೀಚಿಗೆ ಇಂಧನ ದರಗಳು ಲೀಟರ್‌ಗೆ ಸುಮಾರು 7.50 ರೂ.ವರೆಗೂ ಏರಿಕೆಯಾಗಿದ್ದವು. ಜಾಗತಿಕ ರಾಜಕೀಯ ಬೆಳವಣಿಗೆಗಳು, ವಿಶೇಷವಾಗಿ ಮಧ್ಯಪ್ರಾಚ್ಯದ ಬಿಕ್ಕಟ್ಟು ಕಚ್ಚಾತೈಲ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ.
ಭಾರತವು ಇಂಧನ ಸ್ವಾವಲಂಬನೆಯತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಪರಿಸರ ಸಂರಕ್ಷಣೆ, ರೈತರ ಆದಾಯ ವೃದ್ಧಿ ಮತ್ತು ಕಚ್ಚಾತೈಲ ಆಮದು ವೆಚ್ಚವನ್ನು ತಗ್ಗಿಸುವ ಬಹುಮುಖಿ ಉದ್ದೇಶಗಳೊಂದಿಗೆ, ಕೇಂದ್ರ ಹಣಕಾಸು ಸಚಿವಾಲಯವು ಎಥನಾಲ್ ಮಿಶ್ರಿತ ಪೆಟ್ರೋಲ್‌ನ ಆಯ್ದ ಮಾದರಿಗಳ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ನಿರ್ಧಾರವು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಐತಿಹಾಸಿಕವೆಂದು ಪರಿಗಣಿಸಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯವು ಇತ್ತೀಚೆಗೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ನಿರ್ದಿಷ್ಟ ಪ್ರಮಾಣದ ಎಥನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ಶ್ರೇಣಿಗಳ ಮೇಲೆ ಇನ್ನು ಮುಂದೆ ಯಾವುದೇ ಅಬಕಾರಿ ಸುಂಕ ಇರುವುದಿಲ್ಲ. ಇದರನ್ವಯ E22 (ಶೇ.22 ಎಥನಾಲ್), E25 (ಶೇ.25 ಎಥನಾಲ್), E27 (ಶೇ.27 ಎಥನಾಲ್) ಮತ್ತು E30 (ಶೇ.30 ಎಥನಾಲ್) ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಈ ಮೂಲಕ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ನೇರವಾದ ಆರ್ಥಿಕ ಪ್ರೋತ್ಸಾಹವನ್ನು ನೀಡಿದೆ.
ನಿರ್ಧಾರದ ಹಿಂದಿರುವ ಗುರಿಗಳು
ಕೇಂದ್ರ ಸರ್ಕಾರದ ಈ ನಿರ್ಧಾರವು ನಾಲ್ಕು ಪ್ರಮುಖ ಆಯಾಮಗಳನ್ನು ಒಳಗೊಂಡಿದೆ. ಭಾರತವು ತನ್ನ ತೈಲ ಅಗತ್ಯದ ಬಹುಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇಥನಾಲ್ ಮಿಶ್ರಣದಿಂದ ಪೆಟ್ರೋಲ್ ಬಳಕೆಯಲ್ಲಿ ತೈಲದ ಪ್ರಮಾಣ ಕಡಿಮೆಯಾಗಲಿದ್ದು, ಇದರಿಂದ ವಿದೇಶಿ ವಿನಿಮಯ ವೆಚ್ಚ ಉಳಿಯಲಿದೆ. ಶುದ್ಧ ಇಂಧನವಾದ ಎಥನಾಲ್ ಬಳಕೆಯಿಂದ ವಾಹನಗಳ ಹೊಗೆಯಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದು ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಸಹಕಾರಿಯಾಗಿದೆ. ಇಥನಾಲ್ ಅನ್ನು ಕಬ್ಬು, ಜೋಳ, ಅಕ್ಕಿ ಸೇರಿದಂತೆ ಕೃಷಿ ಉಪ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಇಥನಾಲ್ ಬೇಡಿಕೆ ಹೆಚ್ಚಾದಂತೆ ಸಕ್ಕರೆ ಕಾರ್ಖಾನೆಗಳು ಮತ್ತು ರೈತರಿಗೆ ನೇರ ಲಾಭ ಸಿಗಲಿದೆ. ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಮತ್ತು ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳಿಂದಾಗಿ ಪೆಟ್ರೋಲ್ ದರ ಅಸ್ಥಿರವಾಗಿದೆ. ಅಬಕಾರಿ ಸುಂಕ ಮನ್ನಾದಿಂದ ಪೆಟ್ರೋಲ್ ಬೆಲೆಯನ್ನು ನಿಯಂತ್ರಣದಲ್ಲಿಡಲು ಅಥವಾ ಬೆಲೆ ಏರಿಕೆಯ ಹೊಡೆತವನ್ನು ತಗ್ಗಿಸಲು ಸಹಾಯಕವಾಗಲಿದೆ.
ಇಂಧನ ಆಮದು ಹಾಗೂ ಆರ್ಥಿಕ ಸವಾಲುಗಳು
ಇತ್ತೀಚಿನ ತಿಂಗಳುಗಳಲ್ಲಿ ಇಂಧನ ದರಗಳು ಲೀಟರ್‌ಗೆ ಸುಮಾರು 7.50 ರೂ.ವರೆಗೂ ಏರಿಕೆಯಾಗಿದ್ದವು. ಜಾಗತಿಕ ರಾಜಕೀಯ ಬೆಳವಣಿಗೆಗಳು, ವಿಶೇಷವಾಗಿ ಮಧ್ಯಪ್ರಾಚ್ಯದ ಬಿಕ್ಕಟ್ಟು ಕಚ್ಚಾತೈಲ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ಗಳಷ್ಟು ಕಡಿತಗೊಳಿಸಿತ್ತು. ಈ ಕ್ರಮದಿಂದ ಸರ್ಕಾರಕ್ಕೆ ವಾರ್ಷಿಕ 1 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ನಷ್ಟವಾಗಿದ್ದರೂ, ಜನರ ಹಿತದೃಷ್ಟಿಯಿಂದ ಸರ್ಕಾರ ಆ ಭಾರವನ್ನು ತಾನೇ ಹೊತ್ತುಕೊಂಡಿತ್ತು. ಈಗ ಇಥನಾಲ್ ಮಿಶ್ರಣಕ್ಕೆ ಆದ್ಯತೆ ನೀಡುವ ಮೂಲಕ ಪರ್ಯಾಯ ಇಂಧನಗಳತ್ತ ಸಾಗಲು ಸರ್ಕಾರ ದಾರಿ ಮಾಡಿಕೊಟ್ಟಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಲು ಇಂಧನ ವಲಯದಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದೆ. 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ಈಗಾಗಲೇ ಹಾಕಿಕೊಂಡಿದೆ. ಇದೀಗ E22 ರಿಂದ E30 ಶ್ರೇಣಿಯ ಇಂಧನಗಳನ್ನು ಪ್ರೋತ್ಸಾಹಿಸುತ್ತಿರುವುದು, ಭಾರತವು ತನ್ನ ಗುರಿಗಿಂತಲೂ ವೇಗವಾಗಿ ಮುನ್ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಹಿಂದೆ ಕಬ್ಬು ಬೆಳೆಗಾರರು ಸಕ್ಕರೆ ಉತ್ಪಾದನೆಯ ಮಿತಿ ಅಥವಾ ಬೆಲೆ ಏರಿಳಿತದಿಂದ ಸಂಕಷ್ಟಕ್ಕೀಡಾಗುತ್ತಿದ್ದರು. ಆದರೆ ಈಗ ಇಥನಾಲ್ ಉತ್ಪಾದನೆಯು ಕಬ್ಬಿನ ಗದ್ದೆಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಸಕ್ಕರೆ ಕಾರ್ಖಾನೆಗಳು ಈಗ ಸಕ್ಕರೆಯ ಜತೆಗೆ ಎಥನಾಲ್ ಅನ್ನು ಉತ್ಪಾದಿಸಿ ಮಾರಾಟ ಮಾಡುವುದರಿಂದ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇದರಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ಬಾಕಿ ಹಣ ಪಾವತಿಸಲು ಸಾಧ್ಯವಾಗುತ್ತದೆ.

