ಸೀಟು ಹಂಚಿಕೆ ಒಪ್ಪಂದ ಅಂತಿಮ, ಶೀಘ್ರದಲ್ಲೇ ಘೋಷಣೆ: ರಾವುತ್
ಮುಂಬೈ,ಫೆ.28- ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸೂತ್ರಕ್ಕೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸದಸ್ಯರು ಬುಧವಾರ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಕಾಂಗ್ರೆಸ್, ಎನ್‌ಸಿಪಿ-ಶರದ್ ಪವಾರ್ ಮತ್ತು ಶಿವಸೇನೆ (ಯುಬಿಟಿ) ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸೀಟು ಹಂಚಿಕೆ ಕುರಿತು ಚರ್ಚಿಸಲು ಇನ್ನು ಯಾವುದೇ ಸಭೆ ನಡೆಸುವುದಿಲ್ಲ ಎಂದು ಹೇಳಿದರು.
ʻಶರದ್ ಪವಾರ್, ಉದ್ಧವ್ ಠಾಕ್ರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಪ್ರಕಾಶ್ ಅಂಬೇಡ್ಕರ್ ಅವರನ್ನು ಭೇಟಿಯಾಗಿ ಒಪ್ಪಂದಕ್ಕೆ ಅಂತಿಮ ಒಪ್ಪಿಗೆ ಪಡೆಯಲಾಗುತ್ತದೆ. ಆ ಬಳಿಕ ಅದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗುವುದುʼ ಎಂದು ರಾವುತ್ ಹೇಳಿದರು. ಇದೇ ವೇಳೆ ವಂಚಿತ್ ಬಹುಜನ ಅಘಾಡಿ (ವಿಬಿಎ) ಪಕ್ಷ 27 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂಬ ವರದಿಯನ್ನು ರಾವುತ್ ನಿರಾಕರಿಸಿದರು.
ʻ48 ಲೋಕಸಭೆ ಸ್ಥಾನಗಳ ಕುರಿತು ಸಮಗ್ರ ಚರ್ಚೆ ನಡೆದಿದ್ದು,ಯಾರು ಎಷ್ಟು ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ; ಗೆಲುವು ಮುಖ್ಯ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ನಮ್ಮ ಅಜೆಂಡಾ. ಪ್ರಕಾಶ್ ಅಂಬೇಡ್ಕರ್ ಅವರು ಅದೇ ದೃಷ್ಟಿಕೋನವನ್ನು ಹೊಂದಿದ್ದಾರೆʼ ಎಂದು ರಾವತ್ ಹೇಳಿದರು.
ಮಹಾರಾಷ್ಟ್ರ 48 ಲೋಕಸಭೆ ಸ್ಥಾನಗಳನ್ನು ಹೊಂದಿದ್ದು,ಉತ್ತರ ಪ್ರದೇಶ (80) ನಂತರ ಎರಡನೇ ಅತಿ ಹೆಚ್ಚು ಸ್ಥಾನ ಹೊಂದಿದೆ. ಕಾಂಗ್ರೆಸ್ ಮುಖಂಡರಾದ ಪಟೋಲೆ, ಪೃಥ್ವಿರಾಜ್ ಚವ್ಹಾಣ್, ವರ್ಷ ಗಾಯಕ್ವಾಡ್, ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕರಾದ ಜಯಂತ್ ಪಾಟೀಲ್, ಜಿತೇಂದ್ರ ಅವ್ಹಾದ್ ಮತ್ತು ಅನಿಲ್ ದೇಶಮುಖ್ ಮತ್ತು ಶಿವಸೇನೆಯ (ಯುಬಿಟಿ) ಸಂಜಯ್ ರಾವುತ್ ಮತ್ತು ವಿನಾಯಕ್ ರಾವುತ್ ಅಲ್ಲದೆ, ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಪ್ರತಿನಿಧಿ ಸಭೆಯಲ್ಲಿ ಉಪಸ್ಥಿತರಿದ್ದರು.
2019 ರ ಚುನಾವಣೆಯಲ್ಲಿ ಬಿಜೆಪಿ 23 ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು. ಮೈತ್ರಿ ಪಾಲುದಾರ ಶಿವಸೇನೆ (ಆಗ ಅವಿಭಜಿತ) 18 ಸ್ಥಾನ, ಅವಿಭಜಿತ ಎನ್‌ಸಿಪಿ ನಾಲ್ಕು, ಕಾಂಗ್ರೆಸ್ ಮತ್ತು ಎಐಎಂಐಎಂ ತಲಾ ಒಂದು ಸ್ಥಾನ ಗೆದ್ದಿದ್ದವು. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರು.