ಸಿಜೆಪಿ ಬೆನ್ನಲ್ಲೇ 'ಇ20 ಜನತಾ ಪಾರ್ಟಿ' ಡಿಜಿಟಲ್ ಚಳವಳಿ: 100% ಪೆಟ್ರೋಲ್ ಆಯ್ಕೆಗೆ ಆಗ್ರಹ

27 July 2026 10:33 AM IST  ( Updated:2026-07-27 05:24:54  )

ದೇಶದಲ್ಲಿ ಮತ್ತೊಂದು ಹೊಸ ಡಿಜಿಟಲ್ ಚಳವಳಿ ಸದ್ದು ಮಾಡುತ್ತಿದೆ. E20 ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿರುವ ಈ ಅಭಿಯಾನ, E20 ಇಂಧನದ ವಿರೋಧವಲ್ಲ,

ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೇಶವ್ಯಾಪಿ ಸದ್ದು ಮಾಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಚಳವಳಿಯ ಬೆನ್ನಲ್ಲೇ, ಇದೀಗ ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಇಂಧನ ನೀತಿಯನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಡಿಜಿಟಲ್ ಜನಾಂದೋಲನವೊಂದು ರೂಪುಗೊಳ್ಳುತ್ತಿದೆ. 'ಇ20 ಜನತಾ ಪಾರ್ಟಿ' (E20 Janta Party) ಎಂಬ ಹೆಸರಿನಲ್ಲಿ ಒಗ್ಗೂಡುತ್ತಿರುವ ವಾಹನ ಸವಾರರು, ಪೆಟ್ರೋಲ್ ಬಂಕ್‌ಗಳಲ್ಲಿ ಇ20 ಇಂಧನದ ಜೊತೆಗೆ 100% ಶುದ್ಧ ಪೆಟ್ರೋಲ್ ಅನ್ನು ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.

ಏನಿದು ಇ20 ಜನತಾ ಪಾರ್ಟಿ?

ಇದು ಯಾವುದೇ ಚುನಾವಣಾ ಆಯೋಗದಲ್ಲಿ ನೋಂದಣಿಯಾದ ರಾಜಕೀಯ ಪಕ್ಷವಲ್ಲ. ಬದಲಾಗಿ, ವಾಹನ ಸವಾರರು ಮತ್ತು ಗ್ರಾಹಕರು ಒಗ್ಗೂಡಿ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಾಕಿರುವ ನಾಗರಿಕರ ಹಕ್ಕುಗಳ ವೇದಿಕೆಯಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ20) ಬಳಕೆಯಿಂದ ವಾಹನಗಳ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಪ್ರಶ್ನಿಸಿ ಈ ಅಭಿಯಾನ ಆರಂಭವಾಗಿದೆ.

ಹೋರಾಟಗಾರರ ಪ್ರಮುಖ ಬೇಡಿಕೆಗಳು

ಈ ಡಿಜಿಟಲ್ ಚಳವಳಿಯ ಬೇಡಿಕೆಗಳು ಅತ್ಯಂತ ಸ್ಪಷ್ಟವಾಗಿವೆ. ಇವರು ಕೇಂದ್ರ ಸರ್ಕಾರದಿಂದ ಇಂಧನ ಸಬ್ಸಿಡಿಯನ್ನಾಗಲಿ ಅಥವಾ ಉಚಿತ ಪೆಟ್ರೋಲ್ ಅನ್ನಾಗಲಿ ಕೇಳುತ್ತಿಲ್ಲ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ವಾದವೂ ಇವರದ್ದಲ್ಲ. ಬದಲಾಗಿ, "ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯವಿರಬೇಕು. ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ಇ20 ಇಂಧನದ ಜತೆಗೆ 100% ಪೆಟ್ರೋಲ್ ಕೂಡ ಲಭ್ಯವಾಗಬೇಕು. ತಮ್ಮ ವಾಹನಗಳಿಗೆ ಯಾವ ಇಂಧನ ಬಳಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಗ್ರಾಹಕರಿಗೆ ಇರಬೇಕು," ಎಂಬುದು ಇವರ ಪ್ರಮುಖ ಆಗ್ರಹವಾಗಿದೆ.

ಇ20 ಇಂಧನದ ಬಗ್ಗೆ ಗ್ರಾಹಕರ ಆಕ್ಷೇಪಗಳೇನು?

ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್ ಬೆರೆಸುವ ಸರ್ಕಾರದ ನೀತಿಯಿಂದ ವಾಹನಗಳ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬುದು ವಾಹನ ಮಾಲೀಕರ ದೂರು. ಪ್ರಮುಖವಾಗಿ: ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಳೆಯ ಮಾದರಿಯ ವಾಹನಗಳ ಎಂಜಿನ್‌ಗಳು ಇ20 ಇಂಧನಕ್ಕೆ ಪೂರಕವಾಗಿ ವಿನ್ಯಾಸಗೊಂಡಿಲ್ಲ. ಎಂಜಿನ್ ಸವೆತ ಹೆಚ್ಚಾಗುತ್ತಿದ್ದು, ವಾಹನ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದೆ. ದೀರ್ಘಾವಧಿಯಲ್ಲಿ ವಾಹನದ ಆಯಸ್ಸು ಕ್ಷೀಣಿಸುತ್ತದೆ ಎನ್ನುತ್ತಾರೆ.

ಈ ಆರೋಪಗಳ ಹಿನ್ನೆಲೆಯಲ್ಲಿ, ಇ20 ಇಂಧನ ಬಳಕೆಯಿಂದ ವಾಹನಗಳ ಮೇಲಾಗುವ ಪರಿಣಾಮಗಳ ಕುರಿತು ಸ್ವತಂತ್ರ ತಜ್ಞರ ಸಮಿತಿಯಿಂದ ಅಧ್ಯಯನ ನಡೆಸಿ, ಅದರ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಸರ್ಕಾರದ ಸಮರ್ಥನೆ ಏನು?

ಗ್ರಾಹಕರ ಆಕ್ಷೇಪಗಳ ನಡುವೆಯೂ ಕೇಂದ್ರ ಸರ್ಕಾರ ತನ್ನ ಇ20 ಇಂಧನ ನೀತಿಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಸರ್ಕಾರದ ವಾದದ ಪ್ರಕಾರ, ಎಥೆನಾಲ್ ಮಿಶ್ರಣದಿಂದ ವಿದೇಶಗಳಿಂದ ಮಾಡಲಾಗುವ ದುಬಾರಿ ಕಚ್ಚಾ ತೈಲ ಆಮದು ಪ್ರಮಾಣ ತಗ್ಗುತ್ತದೆ. ಇದರಿಂದ ದೇಶದ ಬೊಕ್ಕಸಕ್ಕೆ ಹೊರೆ ಕಡಿಮೆಯಾಗುವುದರ ಜೊತೆಗೆ, ಕಬ್ಬು ಬೆಳೆಗಾರರಿಗೆ ಆರ್ಥಿಕ ಲಾಭ ಸಿಗಲಿದೆ. ಅಲ್ಲದೆ, ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗಿ ಪರಿಸರ ಸಂರಕ್ಷಣೆ ಹಾಗೂ ದೇಶದ ಇಂಧನ ಭದ್ರತೆ ಹೆಚ್ಚಾಗುತ್ತದೆ ಎಂಬುದು ಸರ್ಕಾರದ ನಿಲುವು. 100% ಪೆಟ್ರೋಲ್ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ, ಅದು 'ಪ್ರೀಮಿಯಂ' ಆಯ್ಕೆಯಾಗಿ ಲಭ್ಯವಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ, ಈ ಪ್ರೀಮಿಯಂ ಪೆಟ್ರೋಲ್ ಎಲ್ಲಾ ಬಂಕ್‌ಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬುದು ಗ್ರಾಹಕರ ದೂರಾಗಿದೆ.

ಸಿಜೆಪಿ (CJP) ಚಳವಳಿಯೊಂದಿಗೆ ಹೋಲಿಕೆ

ಇತ್ತೀಚೆಗೆ ನೀಟ್ ವಿವಾದದ ವೇಳೆ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ಆರಂಭವಾದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಚಳವಳಿಗೂ, ಇ20 ಜನತಾ ಪಾರ್ಟಿಗೂ ಹಲವು ಸಾಮ್ಯತೆಗಳಿವೆ. ಸಿಜೆಪಿ ಮಾದರಿಯಲ್ಲೇ ಮೀಮ್ಸ್, ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಜನರನ್ನು ಸಂಘಟಿಸಲಾಗುತ್ತಿದೆ. ಇತ್ತೀಚೆಗೆ ಈ ಅಭಿಯಾನದ ಪೋಸ್ಟ್ ವೊಂದು, "ಎಲ್ಲಾ ಬೈಕ್ ಮತ್ತು ಕಾರು ಮಾಲೀಕರು ಒಂದಾದರೆ?" ಎಂದು ಪ್ರಶ್ನಿಸಿದ್ದು, ಇದು ಸಿಜೆಪಿಯ "ಎಲ್ಲಾ ಕಾಕ್ರೋಚ್‌ಗಳು ಒಂದಾದರೆ?" ಎಂಬ ವೈರಲ್ ಘೋಷಣೆಯನ್ನು ನೆನಪಿಸುವಂತಿದೆ.

ಸದ್ಯಕ್ಕೆ 'ಇ20 ಜನತಾ ಪಾರ್ಟಿ'ಗೆ ಯಾವುದೇ ಅಧಿಕೃತ ನಾಯಕರಿಲ್ಲ ಅಥವಾ ಸಂಘಟನಾತ್ಮಕ ಸ್ವರೂಪವಿಲ್ಲ. ಇದು ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾದ ಚಳವಳಿಯಾಗಿದೆ. ಆದರೆ, ಆರಂಭದಲ್ಲಿ ಡಿಜಿಟಲ್ ವೇದಿಕೆಯಲ್ಲೇ ಮೊಳಕೆಯೊಡೆದ ಸಿಜೆಪಿ, ನಂತರ ರಾಷ್ಟ್ರವ್ಯಾಪಿ ಬೀದಿ ಹೋರಾಟವಾಗಿ ಮಾರ್ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಸರ್ಕಾರದ ನೀತಿಗಳನ್ನು ಪ್ರಶ್ನಿಸಲು ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನಾ ವೇದಿಕೆಯಾಗಿ ಉಳಿಯದೆ, ಹೊಸ ರಾಜಕೀಯ ಮತ್ತು ಸಾಮಾಜಿಕ ಅಸ್ತ್ರವಾಗಿ ಬಳಕೆಯಾಗುತ್ತಿರುವುದಕ್ಕೆ ಈ ಬೆಳವಣಿಗೆ ಸ್ಪಷ್ಟ ನಿದರ್ಶನವಾಗಿದೆ.