ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ: ಬಸವರಾಜ ರಾಯರೆಡ್ಡಿ ಸ್ಫೋಟಕ ಹೇಳಿಕೆ

25 May 2026 7:23 PM IST

ದ ಫೆಡರಲ್ ಕರ್ನಾಟಕ' ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಅವರ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

'ದ ಫೆಡರಲ್ ಕರ್ನಾಟಕ' ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಆದರೆ, ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಬದಲಾವಣೆಗೆ ಮುಂದಾದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ನೇರವಾಗಿ ಹೇಳಿದ್ದಾರೆ.

ಖರ್ಗೆ ಅವರೇ ಸರಿಸಾಟಿ

"ಸಿದ್ದರಾಮಯ್ಯ ಅವರು ದೇಶದ ಅತ್ಯಂತ ಪ್ರಬಲ ಹಾಗೂ ಅನುಭವವಿರುವ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಅವರು ಇನ್ನೂ ಕನಿಷ್ಠ ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಬದಲಾವಣೆ ಮಾಡಲೇಬೇಕು ಎಂದು ಹೈಕಮಾಂಡ್ ನಿರ್ಧರಿಸಿದರೆ, ಆ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ತರಬೇಕು. ಅವರ ಅನುಭವ ಮತ್ತು ವ್ಯಕ್ತಿತ್ವಕ್ಕೆ ಅವರೇ ಸರಿಸಾಟಿ. ಈ ಬಗ್ಗೆ ನಾನು ಈಗಾಗಲೇ ಖರ್ಗೆ ಅವರನ್ನೂ ಭೇಟಿ ಮಾಡಿ ಮಾತನಾಡಿದ್ದೇನೆ," ಎಂದು ರಾಯರೆಡ್ಡಿ ತಿಳಿಸಿದರು.

ಶೇ. 90ರಷ್ಟು ಶಾಸಕರು ಸಿಎಂ ಪರ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರ ಬೆಂಬಲ ಯಾರ ಪರವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸದ್ಯದ ಪರಿಸ್ಥಿತಿಯಲ್ಲಿ ಶೇಕಡಾ 90 ರಷ್ಟು ಶಾಸಕರು ಸಿದ್ದರಾಮಯ್ಯ ಅವರ ಪರವಾಗಿದ್ದಾರೆ. ಹೈಕಮಾಂಡ್ ನಾಯಕತ್ವ ಬದಲಾವಣೆಯ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಶಾಸಕಾಂಗ ಪಕ್ಷದ (CLP) ಸಭೆಯನ್ನು ಕರೆಯಲೇಬೇಕು. ಅಲ್ಲಿ ಶಾಸಕರ ಮುಕ್ತ ಅಭಿಪ್ರಾಯಕ್ಕೆ ಅವಕಾಶ ನೀಡಬೇಕು," ಎಂದು ಒತ್ತಾಯಿಸಿದರು.

ಸಚಿವ ಸಂಪುಟ ಪುನರ್ರಚನೆ ಅಗತ್ಯ

ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ರಚನೆಯ ಬಗ್ಗೆಯೂ ರಾಯರೆಡ್ಡಿ ಧ್ವನಿ ಎತ್ತಿದ್ದಾರೆ. "ಆಡಳಿತದ ದೃಷ್ಟಿಯಿಂದ ಹಾಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಪುನರ್ರಚನೆ ಮಾಡುವುದು ಸೂಕ್ತ. ಹಲವು ಹಿರಿಯ ಶಾಸಕರು ಮಂತ್ರಿಗಳಾಗಲು ಕಾಯುತ್ತಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಿಸಬಹುದು," ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ನೀಟ್ ಹಗರಣದ ಬಗ್ಗೆ ಕಿಡಿ

ಕೇಂದ್ರ ಸರ್ಕಾರದ ನೀಟ್ (NEET) ಪರೀಕ್ಷಾ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಪರೀಕ್ಷಾ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೇ ನೀಡಬೇಕು. ಆಗ ಮಾತ್ರ ಸ್ಥಳೀಯ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲು ಸಾಧ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.