
ಜೈಲಿನಲ್ಲಿ ಚಿಗುರಿದ ಪ್ರೇಮ- ಇಂದು ಇಬ್ಬರು ಕುಖ್ಯಾತ ಹಂತಕರ ಮದುವೆ
ಡೇಟಿಂಗ್ ಆಪ್ ಹಂತಕಿ ಪ್ರಿಯಾ ಸೇಠ್ ಮತ್ತು ಐವರನ್ನು ಕೊಂದ ಹನುಮಾನ್ ಪ್ರಸಾದ್ ಮದುವೆ! ಜೈಲಿನಲ್ಲಿ ಶುರುವಾದ ಈ ವಿಲಕ್ಷಣ ಪ್ರೇಮಕಥೆ ಮತ್ತು ಹೈಕೋರ್ಟ್ ವಿಧಿಸಿದ ಷರತ್ತುಗಳ ಪೂರ್ಣ ವಿವರ ಇಲ್ಲಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬರೋದಮೇವ್‌ನಲ್ಲಿ ಇಂದು ಒಂದು ವಿಚಿತ್ರ ವಿವಾಹ ನಡೆಯುತ್ತಿದೆ. ಡೇಟಿಂಗ್ ಆಪ್ ಮೂಲಕ ವ್ಯಕ್ತಿಯನ್ನು ಬಲೆಗೆ ಬೀಳಿಸಿ ಕೊಂದ ಹಂತಕಿ ಪ್ರಿಯಾ ಸೇಠ್ ಮತ್ತು ಐವರನ್ನು ಹತ್ಯೆಗೈದ ಹನುಮಾನ್ ಪ್ರಸಾದ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆಗಾಗಿ ರಾಜಸ್ಥಾನ್ ಹೈಕೋರ್ಟ್ ಇಬ್ಬರಿಗೂ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ.
ಯಾರು ಈ ಪ್ರಿಯಾ ಸೇಠ್?
ಡೇಟಿಂಗ್ ಆಪ್ ಹಂತಕಿ ಮಾಡೆಲ್ ಆಗಿದ್ದ ಪ್ರಿಯಾ ಸೇಠ್, 2018ರಲ್ಲಿ ಜೈಪುರದಲ್ಲಿ ನಡೆದ ದುಷ್ಯಂತ್ ಶರ್ಮಾ ಎಂಬುವವರ ಭೀಕರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಈಕೆ 'ಟಿಂಡರ್' ಆಪ್ ಮೂಲಕ ದುಷ್ಯಂತ್‌ನನ್ನು ಪರಿಚಯ ಮಾಡಿಕೊಂಡು, ಅಪಹರಿಸಿ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ತಂದೆಯಿಂದ 3 ಲಕ್ಷ ರೂ. ಪಡೆದ ನಂತರವೂ ಸಿಕ್ಕಿಬೀಳುವ ಭೀತಿಯಿಂದ, ತನ್ನ ಪ್ರಿಯಕರನೊಂದಿಗೆ ಸೇರಿ ದುಷ್ಯಂತ್‌ನನ್ನು ಚಾಕುವಿನಿಂದ ಇರಿದು ಸಾಯಿಸಿದ್ದಳು. ನಂತರ ಆತನ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಅಮೆರ್ ಬೆಟ್ಟದಲ್ಲಿ ಎಸೆದಿದ್ದಳು.
ಐವರ ಹಂತಕ ಹನುಮಾನ್ ಪ್ರಸಾದ್
ಐವರ ಬಲಿ ಪಡೆದ ಕ್ರೂರಿ ಮತ್ತೊಂದೆಡೆ ವರ ಹನುಮಾನ್ ಪ್ರಸಾದ್, 2017ರಲ್ಲಿ ಅಲ್ವಾರ್‌ನಲ್ಲಿ ನಡೆದ ಅತ್ಯಂತ ಭೀಕರ ಹತ್ಯಾಕಾಂಡದ ರೂವಾರಿ. ತನ್ನ ಪ್ರಿಯತಮೆ ಸಂತೋಷ್ ಎಂಬಾಕೆಯ ಸೂಚನೆಯಂತೆ, ಆಕೆಯ ಗಂಡ ಬನ್ವಾರಿ ಲಾಲ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದ. ಆ ಸಂದರ್ಭದಲ್ಲಿ ಎಚ್ಚರಗೊಂಡ ಮೂವರು ಮಕ್ಕಳು ಮತ್ತು ಸೋದರಳಿಯನನ್ನು ಕೂಡ ಸಾಕ್ಷಿ ನಾಶಪಡಿಸಲು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದ. ಒಟ್ಟು ಐವರನ್ನು ಕೊಂದ ಪ್ರಕರಣದಲ್ಲಿ ಈತ ಜೈಲು ಪಾಲಾಗಿದ್ದ.
ಜೈಲಿನಲ್ಲಿ ಚಿಗುರಿದ ಪ್ರೇಮ
ಸಂಗಾನೇರ್ ಓಪನ್ ಜೈಲಿನಲ್ಲಿ ಕಳೆದ ಆರು ತಿಂಗಳ ಹಿಂದೆ ಇವರಿಬ್ಬರ ಭೇಟಿಯಾಗಿತ್ತು. ಕ್ರೈಮ್ ಹಿನ್ನೆಲೆಯ ಈ ಜೋಡಿಯ ನಡುವೆ ಪ್ರೇಮಾಂಕುರವಾಗಿ, ಈಗ ಮದುವೆಯಾಗಲು ನಿರ್ಧರಿಸಿದ್ದಾರೆ. ಸಿನಿಮಾ ಸ್ಕ್ರಿಪ್ಟ್‌ಗಿಂತಲೂ ಭೀಕರವಾಗಿರುವ ಈ ಇಬ್ಬರ ಹಿನ್ನೆಲೆ ಮತ್ತು ಈಗಿನ ಮದುವೆ ರಾಜಸ್ಥಾನದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಮದುವೆಗಾಗಿ ರಾಜಸ್ಥಾನ್ ಹೈಕೋರ್ಟ್ ಇಬ್ಬರಿಗೂ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ.
ಸಂತ್ರಸ್ತ ಕುಟುಂಬಗಳ ತೀವ್ರ ವಿರೋಧ
ಈ ಮದುವೆಗೆ ಪೆರೋಲ್ ನೀಡಿರುವ ವಿಚಾರ ತಿಳಿಯುತ್ತಿದ್ದಂತೆಯೇ, ಇಬ್ಬರು ಹಂತಕರಿಂದ ಬಲಿಯಾದವರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನನ್ನ ಮಗನನ್ನು ಅತ್ಯಂತ ಕ್ರೂರವಾಗಿ ಕೊಂದವಳಿಗೆ ಸಂಭ್ರಮಿಸಲು ಹೈಕೋರ್ಟ್ ಅವಕಾಶ ನೀಡುತ್ತಿರುವುದು ನಮಗೆ ಮಾಡುತ್ತಿರುವ ಅಪಮಾನ" ಎಂದು ಪ್ರಿಯಾ ಸೇಠ್‌ನಿಂದ ಹತ್ಯೆಗೀಡಾದ ದುಷ್ಯಂತ್ ಶರ್ಮಾ ಅವರ ತಂದೆ ಕಣ್ಣೀರಿಟ್ಟಿದ್ದಾರೆ.
ಹನುಮಾನ್ ಪ್ರಸಾದ್‌ನಿಂದ ಹತ್ಯೆಗೀಡಾದ ಬನ್ವಾರಿ ಲಾಲ್ ಅವರ ಸಂಬಂಧಿಕರು, "ಐದು ಜನರನ್ನು ಕೊಂದ ಕ್ರೂರಿ ಹೊರಬರುತ್ತಿರುವುದು ನಮಗೆ ಪ್ರಾಣಭಯ ಉಂಟುಮಾಡಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹಂತಕರಿಗೆ ಇಂತಹ ಸೌಲಭ್ಯ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂಬುದು ಅವರ ವಾದ.

