ಸ್ಥಳೀಯ ಸಂಸ್ಥೆ ಉಪಚುನಾವಣೆ: ಎಲ್‌ಡಿಎಫ್ ಗೆಲುವು
ಕೇರಳದಲ್ಲಿ ಗುರುವಾರ ನಡೆದ 23 ಸ್ಥಳೀಯ ಸಂಸ್ಥೆಯ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 10 ಕ್ಷೇತ್ರರಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದೆ. ಇದು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಪಿನರಾಯಿ ವಿಜಯನ್ ಸರ್ಕಾರಕ್ಕೆ ಸ್ಪೂರ್ತಿ ತುಂಬಿದೆ.
8 ವಾರ್ಡ್‌ಗಳಲ್ಲಿ ಸಿಪಿಐ(ಎಂ), ಒಂದರಲ್ಲಿ ಸಿಪಿಐ ಹಾಗೂ ಇನ್ನೊಂದು ವಾರ್ಡ್‌ನಲ್ಲಿ ಎಲ್‌ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಯುಡಿಎಫ್ 13, ಎಲ್ಡಿಎಫ್ 5 ಮತ್ತುಎನ್ಡಿಎ 4 ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದವು. ಹಾಲಿ ಚುನಾವಣೆಯಲ್ಲಿ ಯುಡಿಎಫ್ 6 ಸ್ಥಾನ ಕಳೆದುಕೊಂಡಿದೆ. ಆದರೆ, ಪ್ರತಿಸ್ಪರ್ಧಿಗಳಿಂದ 3 ಸ್ಥಾನ ಕಸಿದುಕೊಂಡಿದೆ. ಅದೇ ರೀತಿ, ಎನ್ಡಿಎ 3 ಸ್ಥಾನ ಕಳೆದುಕೊಂಡಿದೆ.
ತಿರುವನಂತಪುರಂ ಸಿಟಿ ಕಾರ್ಪೊರೇಶನ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ಗೆಲುವು ದಾಖಲಿಸಿದರು. ಎರ್ನಾಕುಲಂ ಜಿಲ್ಲೆಯ ನೆಡುಂಬಸ್ಸರಿಯ ಒಂದು ವಾರ್ಡ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ಗೆಲುವಿನ ನಂತರ, ಪಂಚಾಯತ್‌ನಲ್ಲಿ ಯುಡಿಎಫ್ ಅಧಿಕಾರವನ್ನು ಕಳೆದುಕೊಂಡಿತು. ಪಿಣರಾಯಿ ವಿಜಯನ್ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ ನಂತರ 2021 ರಿಂದ ನಡೆದ ಐದು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯುಡಿಎಫ್ ಗೆಲುವಿನ ಹಾದಿಯಲ್ಲಿತ್ತು. ಈ ಫಲಿತಾಂಶ ಆಡಳಿತ ರಂಗಕ್ಕೆ ಸ್ವಲ್ಪ ಸಮಾಧಾನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ʻತಿರುವನಂತಪುರಂ ಸಿಟಿ ಕಾರ್ಪೋರೇಷನ್ ನ ಎರಡು ಸ್ಥಾನಗಳನ್ನು ನಾವು ಬಿಜೆಪಿಯಿಂದ ಕಸಿದುಕೊಂಡಿದ್ದೇವೆʼ ಎಂದು ಎಲ್‌ಎಸ್‌ಜಿ ಸಚಿವ ಮತ್ತು ಸಿಪಿಐ(ಎಂ) ಮುಖಂಡ ಎಂ.ಬಿ.ರಾಜೇಶ್ ಹೇಳಿದ್ದಾರೆ.