
ಗಡಿಯಲ್ಲಿ ಹಾರಾಡಿದ ಪಾಕ್ ಡ್ರೋನ್‌ಗಳು- ಕ್ಷಣಾರ್ಧದಲ್ಲಿ ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಪೂಂಚ್, ರಾಜೌರಿ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡಿವೆ. ಸೇನೆಯು ಗುಂಡಿನ ದಾಳಿ ನಡೆಸಿ ಅವುಗಳನ್ನು ಹಿಮ್ಮೆಟ್ಟಿಸಿದೆ. ಸಂಪೂರ್ಣ ವರದಿ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC) ಮತ್ತು ಅಂತರಾಷ್ಟ್ರೀಯ ಗಡಿಯ (IB) ಹಲವು ಸ್ಥಳಗಳಲ್ಲಿ ಭಾನುವಾರ ಸಂಜೆ ಸಂಶಯಾಸ್ಪದ ಡ್ರೋನ್ ಮಾದರಿಯ ವಸ್ತುಗಳು ಕಾಣಿಸಿಕೊಂಡಿದ್ದು, ಭದ್ರತಾ ಪಡೆಗಳು ತಕ್ಷಣವೇ ಗುಂಡಿನ ದಾಳಿ ನಡೆಸಿ ಅವುಗಳನ್ನು ಹೊಡೆದುರುಳಿಸಿದೆ.
ಘಟನೆಯ ವಿವರ
ರಕ್ಷಣಾ ಅಧಿಕಾರಿಗಳ ಪ್ರಕಾರ, ಸಂಜೆ 6:25 ರ ಸುಮಾರಿಗೆ ಪೂಂಚ್ ಜಿಲ್ಲೆಯ ಮಂಕೋಟ್ ಸೆಕ್ಟರ್‌ನ ತೈನ್‌ನಿಂದ ಟೋಪಾ ಕಡೆಗೆ ಡ್ರೋನ್ ಮಾದರಿಯ ವಸ್ತುವೊಂದು ಚಲಿಸುತ್ತಿರುವುದು ಕಂಡುಬಂದಿದೆ. ಬೆನ್ನಲ್ಲೇ ಸಂಜೆ 6:35 ಕ್ಕೆ ರಾಜೌರಿ ಜಿಲ್ಲೆಯ ಟೆರಿಯಾತ್‌ನ ಖಬ್ಬರ್ ಗ್ರಾಮದಲ್ಲಿ ಎರಡನೇ ಡ್ರೋನ್ ಪತ್ತೆಯಾಗಿದೆ. ಅಲ್ಲದೆ, ಕಾಲಾಕೋಟ್‌ನ ಧರ್ಮಶಾಲ್ ಗ್ರಾಮದಿಂದ ಭರಖ್ ಕಡೆಗೆ ಮಿನುಗುವ ಬೆಳಕಿನೊಂದಿಗೆ ಮತ್ತೊಂದು ಡ್ರೋನ್ ಹಾರಾಡುತ್ತಿರುವುದು ಕಂಡುಬಂದಿದೆ.
ಗಡಿ ಪ್ರದೇಶದಲ್ಲಿ ಡ್ರೋನ್ ಹಾರಾಟದ ದೃಶ್ಯ
ಸಂಜೆ 7:15 ರ ಸುಮಾರಿಗೆ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಕೆಲ ನಿಮಿಷಗಳ ಕಾಲ ಡ್ರೋನ್ ಹಾರಾಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸೇನೆ ಮತ್ತು ಭದ್ರತಾ ಪಡೆಗಳು 'ಕೌಂಟರ್-ಡ್ರೋನ್' (Counter-UAS) ಕ್ರಮಗಳನ್ನು ಕೈಗೊಂಡವು. ಇದರಿಂದಾಗಿ ಸಂಶಯಾಸ್ಪದ ಡ್ರೋನ್‌ಗಳು ಗಡಿಯ ಆ ಕಡೆಗೆ ಹಿಂತಿರುಗಿವೆ.
ಸ್ಯಾಟಲೈಟ್ ಫೋನ್ ಸಂವಹನ ಪತ್ತೆ
ಇದೇ ದಿನ ಬೆಳಿಗ್ಗೆ, ಅಂತರಾಷ್ಟ್ರೀಯ ಗಡಿಯ ಸಮೀಪವಿರುವ ಕನಾಚಕ್ ಪ್ರದೇಶದಲ್ಲಿ ಸಂಶಯಾಸ್ಪದ ಭಯೋತ್ಪಾದಕರು ಸ್ಯಾಟಲೈಟ್ ಫೋನ್ ಮೂಲಕ ನಡೆಸಿದ ಸಂವಹನವನ್ನು ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಭಾರಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ಜಂಟಿ ಕಾರ್ಯಾಚರಣೆ
ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG), ಬಿಎಸ್‌ಎಫ್ (BSF), ಸಿಆರ್‌ಪಿಎಫ್ (CRPF) ಮತ್ತು ಸೇನೆಯು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿವೆ. ಗಡಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಕನಾಚಕ್ ಪ್ರದೇಶವು ಈ ಹಿಂದೆ ಭಯೋತ್ಪಾದಕರು ಒಳನುಸುಳಲು ಬಳಸುತ್ತಿದ್ದ ಮಾರ್ಗವಾಗಿತ್ತು.
ಪ್ರಸ್ತುತ ಜಮ್ಮು ವಲಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಇರುವ ಹಿನ್ನೆಲೆಯಲ್ಲಿ, ಬೆಟ್ಟದ ಪ್ರದೇಶಗಳು ಸೇರಿದಂತೆ ಇಡೀ ವಲಯದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಡ್ರೋನ್ ಹಾರಾಟದ ಹಿಂದೆ ಇದೆ ಪಾಕ್‌ನ ಸಂಚು
ಗಡಿ ಪ್ರದೇಶದಲ್ಲಿ ಡ್ರೋನ್ ಹಾರಾಟ ಮಾಡುವ ಮೂಲಕ ಪಾಕ್ ಭಾರತದ ವಿರುದ್ಧ ಹಲವು ಸಂಚು ರೂಪಿಸುತ್ತಿದೆ. ಗುಪ್ತವಾಗಿ ಸ್ಫೋಟಕಗಳು, ಪಿಸ್ತೂಲ್‌ಗಳು ಅಥವಾ ಡ್ರಗ್ಸ್ ಅನ್ನು ಭಾರತದ ಭೂಭಾಗಕ್ಕೆ ಎಸೆಯುವುದು, ಭಾರತೀಯ ಸೇನೆಯ ಬಂಕರ್‌ಗಳು ಮತ್ತು ಸಿಬ್ಬಂದಿಯ ಓಡಾಟದ ಮೇಲೆ ಕಣ್ಗಾವಲು ಇಡುವುದು. ಒಂದು ಕಡೆ ಡ್ರೋನ್ ಹಾರಿಸಿ ಭದ್ರತಾ ಪಡೆಗಳ ಗಮನವನ್ನು ಅಲ್ಲಿಗೆ ಸೆಳೆದು, ಇನ್ನೊಂದು ಕಡೆಯಿಂದ ಭಯೋತ್ಪಾದಕರನ್ನು ಒಳನುಸುಳಿಸುವುದು ಹೀಗೆ ಹಲವು ಕುಕೃತ್ಯಗಳಿಗೆ ಡ್ರೋನ್‌ಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ.

