ತಿರುಪತಿ ಲಡ್ಡು ನಿಜವಾಗಿಯೂ 300 ವರ್ಷ ಹಳೆಯದೇ? ದೇವರಿಗೆ ಮಾತ್ರ ಗೊತ್ತು!
x

ತಿರುಪತಿ ಲಡ್ಡು ನಿಜವಾಗಿಯೂ 300 ವರ್ಷ ಹಳೆಯದೇ? ದೇವರಿಗೆ ಮಾತ್ರ ಗೊತ್ತು!

ತಿರುಪತಿ ಲಡ್ಡುಗೆ 100 ವರ್ಷಕ್ಕಿಂತ ಕಡಿಮೆ ಇತಿಹಾಸವಿದೆ ಎಂದು ಕೆಲವರು ಹೇಳುತ್ತಾರೆ; ಇನ್ನು ಕೆಲವರು ಈಸ್ಟ್ ಇಂಡಿಯಾ ಕಂಪನಿ 1843 ರಲ್ಲಿ ನಿಯಂತ್ರಣವನ್ನು ಉತ್ತರ ಭಾರತದ ಸಾಧುಗಳಿಗೆ ಬಿಟ್ಟುಕೊಟ್ಟಾಗ ಲಡ್ಡು ಹುಟ್ಟಿಕೊಂಡಿತು ಎಂದು ಹೇಳುತ್ತಾರೆ; ಆದರೆ, ಯಾರಿಗೂ ಖಚಿತ ಮಾಹಿತಿ ಇಲ್ಲ ಮತ್ತು ಸಾಕ್ಷ್ಯಾಧಾರಗಳಿಲ್ಲ.


ತಿರುಪತಿಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ರುಚಿಕರ ಲಡ್ಡು ಪ್ರಸಾದ (ಧಾರ್ಮಿಕ ನೈವೇದ್ಯ) ವಿಶ್ವವಿಖ್ಯಾತ ವಾಗಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು, ಮೊದಲು ಬಾಲಾಜಿಯ ದರ್ಶನ ಪಡೆದು, ಆನಂತರ ಲಡ್ಡುಗಳನ್ನು ಸಂಗ್ರಹಿಸುತ್ತಾರೆ.

ಆದರೆ, ಈ ಲಡ್ಡು ನಿಜವಾಗಿಯೂ 300 ವರ್ಷ ಹಳೆಯದಾ? ತಿರುಪತಿ ಲಡ್ಡು ಸುಮಾರು ಮೂರು ಶತಮಾನಗಳ ಹಿಂದೆ ಹುಟ್ಟಿದೆ ಎನ್ನುವ ಸಂದೇಶಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿಕೊಂಡಿವೆ.

ವಾಸ್ತವವೆಂದರೆ, ಪ್ರತಿ ವರ್ಷ ಆಗಸ್ಟ್ 2 ರಂದು ವೈರಲ್ ಆಗುವ ತುಣುಕೊಂದು 1715ರ ಇದೇ ದಿನ ಲಡ್ಡು ಜನಿಸಿತು ಎಂದು ಹೇಳುತ್ತದೆ. ಈ ವರ್ಷ ಲಡ್ಡು ಪ್ರಿಯರು ಸಿಹಿ ತಿನಿಸಿನ 309 ನೇ ಜನ್ಮದಿನವನ್ನು ಆಚರಿಸಿದರು.

ಲಡ್ಡುವಿನ ಮೂಲ ಅಸ್ಪಷ್ಟ: ಲಡ್ಡು ಆ ದಿನದಂದು ವೆಂಕಟೇಶ್ವರನ ನೈವೇದ್ಯವಾಗಿ ಪ್ರವೇಶಿಸಿತು ಎಂದು ಕಥೆ ಹೇಳುತ್ತದೆ. ಆದರೆ, ಇದಕ್ಕೆ ಪುರಾವೆಯಾಗಿ ಯಾವುದೇ ದಾಖಲೆ ನೀಡಿಲ್ಲ ಅಥವಾ ಧಾರ್ಮಿಕ ಪಠ್ಯವನ್ನು ಉಲ್ಲೇಖಿಸಿಲ್ಲ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಲಡ್ಡುವಿನ ಬಗ್ಗೆ ಹೆಚ್ಚು ಮಾತನಾಡಿದ್ದರೂ, ಅದು ಎಂದಿಗೂ ಈ ಸಿಹಿ ತಿನಿಸಿನ 'ಹುಟ್ಟುಹಬ್ಬ'ವನ್ನು 'ಆಚರಣೆ' ಮಾಡಿಲ್ಲ.

ಲಡ್ಡುವಿನ ಪಾವಿತ್ರ್ಯ ಮತ್ತು ಪ್ರಾಮುಖ್ಯತೆ ಹೊರತಾಗಿಯೂ, ಟಿಟಿಡಿಯ ಅಧಿಕೃತ ವೆಬ್‌ಸೈಟಿನಲ್ಲಿ ದೇವಾಲಯದ ಆಚರಣೆಗಳಿಗೆ ಸಂಬಂಧಿಸಿದ ಮಾಹಿತಿ ಇದೆ; ಆದರೆ, ಲಡ್ಡುವಿನ ಮೂಲದ ಬಗ್ಗೆ ಮೌನವಾಗಿದೆ.

ಕತ್ತಲಲ್ಲಿ ಟಿಟಿಡಿ: ಅದೇ ರೀತಿ ಟಿಟಿಡಿ ಜಾಲತಾಣವು ಹಿಂದಿನ ದಿನ ಆಗಮಿಸಿದ ಭಕ್ತರ ಸಂಖ್ಯೆ, ಒಟ್ಟು ಮುಂಡನಗಳು, ಸರ್ವದರ್ಶನಕ್ಕೆ ತೆಗೆದುಕೊಂಡ ಸಮಯ, ಭಗವಂತನಿಗೆ ಅರ್ಪಿಸಿದ ಹಣ ಮತ್ತು ಇತರ ಉಡುಗೊರೆಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆ ಬಗ್ಗೆ ಮಾಹಿತಿ ನೀಡುತ್ತದೆ. ಆದರೆ, ಲಡ್ಡುವಿನ ಜನ್ಮದಿನದ ಬಗ್ಗೆ ಯಾವುದೇ ಸುದ್ದಿ ಪ್ರಸಾರ ಮಾಡಿಲ್ಲ.

ತೆಲುಗು ಸಾಹಿತ್ಯ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳನ್ನು ಪ್ರಕಟನೆಗೆ ಟಿಟಿಡಿ ಅಪಾರ ಹಣ ಖರ್ಚು ಮಾಡುತ್ತದೆ. ಆದರೆ, ಗ್ರಂಥ ಪಟ್ಟಿ ಯಲ್ಲಿ ಲಡ್ಡು ಇತಿಹಾಸದ ಬಗ್ಗೆ ಯಾವುದೇ ಪುಸ್ತಕ ಅಥವಾ ಕರಪತ್ರ ಇಲ್ಲ. ಇದರಿಂದ ಅನುಪಸ್ಥಿತಿಯು ಲಕ್ಷಾಂತರ ಜನರ ತಿರುಪತಿ ದೇವಸ್ಥಾನದ ಭೇಟಿಯನ್ನು ಅಪೂರ್ಣವಾಗಿಸುತ್ತದೆ.

ದೇವಸ್ಥಾನದ ಪುರಾತನತೆ ಮತ್ತು ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಮಾಹಿತಿ ಇರುವಾಗ, ದೇವಸ್ಥಾನದ ಟ್ರಸ್ಟ್ ಪ್ರಕಟಿಸಿದ ಪುಸ್ತಕಗಳಲ್ಲಿ ಲಡ್ಡುವಿನ ಬಗ್ಗೆ ಏಕೆ ಪ್ರಸ್ತಾಪ ಇಲ್ಲ?

ಮತ್ತು, ಆಗಸ್ಟ್ 2, 1715 ರಂದು ಸಾಮಾಜಿಕ ಮಾಧ್ಯಮ ಹೇಗೆ ಬಂದಿತು?

ಅರ್ಚಕರಿಗೂ ಗೊತ್ತಿಲ್ಲ; ಟಿಟಿಡಿ ಒಂದು 'ಮುಚ್ಚುಮರೆ' ಸಂಸ್ಥೆ. ಅದರ ಮಾಹಿತಿ ಅಧಿಕಾರಿಗಳು ದೈನಂದಿನ ಘಟನೆಗಳ ಬಗ್ಗೆ ಸುದ್ದಿ ಹೊರತುಪಡಿಸಿ, ಯಾವುದೇ ಐತಿಹಾಸಿಕ ದಾಖಲೆಗಳನ್ನು ಒದಗಿಸುವುದಿಲ್ಲ. ದ ಫೆಡರಲ್ ಸಂಪರ್ಕಿಸಿದ ಪ್ರತಿಯೊಬ್ಬ ವ್ಯಕ್ತಿಯೂ, ಈ ಪ್ರಶ್ನೆ ಅವನ/ಅವಳ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ದೇವಾಲಯದ ಕೆಲವು ಪುರೋಹಿತರೊಂದಿಗೆ ದ ಫೆಡರಲ್ ನಡೆಸಿದ ಸಂವಾದದಿಂದ ಸಾರ್ವಜನಿಕವಾಗಿ ಲಭ್ಯವಿರುವುದನ್ನು ಹೊರತುಪಡಿಸಿ, ಬೇರೆ ಹೊಸ ಮಾಹಿತಿ ಸಿಗಲಿಲ್ಲ. ಅವರಲ್ಲಿ ಯಾರಿಗೂ ಲಡ್ಡುವಿನ ಇತಿಹಾಸದ ಅರಿವು ಇರಲಿಲ್ಲ.

ʻಹಾಲಿ ಲಡ್ಡು ತಯಾರಿಕೆ ವಿಧಾನ ಇತ್ತೀಚಿನ ಮೂಲದ್ದು,ʼ ಎಂದು ಪ್ರಧಾನ ಅರ್ಚಕ ವೇಣುಗೋಪಾಲ ದೀಕ್ಷಿತುಲು ಹೇಳಿದರು. ʻಅದರ ಮೂಲದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಲಡ್ಡು1940 ರಲ್ಲಿ ಅದರ ಪ್ರಸ್ತುತ ಆಕಾರವನ್ನು ಪಡೆದುಕೊಂಡಿತು,ʼ ಎಂದು ದ ಫೆಡರಲ್‌ಗೆ ತಿಳಿಸಿದರು. ʻಈ ಸಿಹಿ ತಿನಿಸಿನ ಇತಿಹಾಸ ಇರುವ ಯಾವುದೇ ಪುಸ್ತಕವನ್ನು ತಾನು ನೋಡಿಲ್ಲ,ʼ ಎಂದು ಒಪ್ಪಿಕೊಂಡರು.

ಖ್ಯಾತ ಸಂಸ್ಕೃತ ವಿದ್ವಾಂಸ ಮತ್ತು ಟಿಟಿಡಿಯ ಅಧಿಕೃತ ಶಾಸ್ತ್ರಜ್ಞರಲ್ಲಿ ಒಬ್ಬರಾದ ವೈದ್ಯಂ ವೆಂಕಟೇಶ್ವರಾಚಾರ್ಯಲು ಕೂಡ ಲಡ್ಡುವಿನ ಜನನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೋಡಿಲ್ಲ.

ಲಡ್ಡು ಆರಂಭ 1843 ರಲ್ಲಿ?: ದ ಫೆಡರಲ್ ಜೊತೆ ಮಾತನಾಡಿ, ಲಡ್ಡುವಿನ ಪ್ರಾಚೀನತೆಯು 1843 ಕ್ಕಿಂತ ಹಿಂದೆ ಹೋಗಲಾರದು ಎಂದು ಊಹಿಸಿದರು; ಆಗ ದೇವಸ್ಥಾನವು ಹಾಥಿರಾಮ್ ಮಠದ ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿತು.

ದೇವಾಲಯದ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ಬ್ರಿಟಿಷ್ ಸರ್ಕಾರವು ಈಸ್ಟ್ ಇಂಡಿಯಾ ಕಂಪನಿಗೆ ಹೇಳಿದಾಗ, ಉತ್ತರ ಭಾರತದಿಂದ ವಲಸೆ ಬಂದ ಸಾಧುಗಳು ಸ್ಥಾಪಿಸಿದ ಮಠಕ್ಕೆ ಆಡಳಿತವನ್ನು ವಹಿಸಲಾಯಿತು.

ʻ1843 ಮತ್ತು 1932 ರ ನಡುವೆ ದೇವಾಲಯದ ಆಡಳಿತವನ್ನು ಮಠ ನಡೆಸಿತು. ಆಗ ಉತ್ತರ ಭಾರತೀಯರು ತಿರುಮಲಕ್ಕೆ ಭಾರಿ ಪ್ರಮಾಣದಲ್ಲಿ ಭೇಟಿ ನೀಡಲು ಪ್ರಾರಂಭಿಸಿದರು. ಈ ಅವಧಿಯಲ್ಲೇ ವೆಂಕಟೇಶ್ವರನಿಗೆ ‘ಬಾಲಾಜಿ’ ಎಂಬ ಹೆಸರು ಸಮಾನಾರ್ಥಕವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು,ʼ ಎಂದು ವೆಂಕಟೇಶ್ವರಾಚಾರ್ಯಲು ಹೇಳಿದರು.

ಉತ್ತರ ಭಾರತದ ಕೊಂಡಿ: ʻನಿಷ್ಪತ್ತಿ ಪ್ರಕಾರ, ಬಾಲಾಜಿ ಎಂದರೆ ಭಗವಾನ್ ಹನುಮಂತ. ಉತ್ತರ ಭಾರತದ ಭಕ್ತರು ತಿರುಮಲದಲ್ಲಿ ಹನುಮಾನ್ ದೇವಾಲಯ ನಿರ್ಮಿಸಿದರು ಮತ್ತು ದೇವರನ್ನು ಬಾಲಾಜಿ ಎಂದು ಕರೆದರು. ಬಾಲಾಜಿ ಎಂಬುದು ವಾಲಾಜಿಯ ಉತ್ತರ ಭಾರತೀಯ ಆವೃತ್ತಿ. ಇದರರ್ಥ 'ಬಾಲವಿರುವ ದೇವರು' (ಸಂಸ್ಕೃತದಲ್ಲಿ ವಲಂ ಎಂದರೆ ಬಾಲ).

ʻಉತ್ತರ ಭಾರತೀಯ ಭಕ್ತರು ತಿರುಮಲದಲ್ಲಿರುವ ಹನುಮಂತನಿಗೆ ಕಡಲೆ ಹಿಟ್ಟು ಇಲ್ಲವೇ ಹಾಲಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಅರ್ಪಿಸುತ್ತಿದ್ದರು. ಇದು ಕಾಲಕ್ರಮೇಣ ವೆಂಕಟೇಶ್ವರ ದೇವಸ್ಥಾನಕ್ಕೂ ಪ್ರವೇಶಿಸಿರಬಹುದು.

ʻವೈಕನಾಸ ಸಾಹಿತ್ಯದ ಪ್ರಕಾರ, ವೆಂಕಟೇಶ್ವರ ದೇವರ ನೆಚ್ಚಿನ ತಿನಿಸು ವಡೆ. ಲಡ್ಡು ಇತ್ತೀಚಿನ ಮೂಲದ್ದು ಮತ್ತು ಆ ದಿನಗಳಲ್ಲಿ ತಿರುಮಲಕ್ಕೆ ಭೇಟಿ ನೀಡಿದ ಉತ್ತರ ಭಾರತದ ಹನುಮಾನ್ ಭಕ್ತರ ಕೊಡುಗೆಯಾಗಿರಬಹುದು. ಜಾನಪದ ಕಥೆಗಳನ್ನು ಹೊರತುಪಡಿಸಿ, ಲಡ್ಡು ಬಗ್ಗೆ ಅಧಿಕೃತವಾದ ಯಾವುದೇ ಮಾಹಿತಿ ಲಭ್ಯವಿಲ್ಲ,ʼ ಎಂದು ಹೇಳಿದರು.

ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ (ಎಸ್‌ವಿಯು)ದ ಇತಿಹಾಸ ತಜ್ಞ ಡಾ.ತಿಮ್ಮಪ್ಪ ಅವರು, ಮಿಠಾಯಿಗೆ ಸಂಬಂಧಿಸಿದ ಸಂಶೋಧನೆ ವೇಳೆ ಭಗವಂತನ ನೈವೇದ್ಯದಲ್ಲಿ ಲಡ್ಡು ಪ್ರವೇಶಿಸಿದ ದಿನವನ್ನು ನಾನು ನೋಡಿಲ್ಲ ಎಂದು ಹೇಳಿದರು.

ಬೆಟ್ಟದ ದೇಗುಲದಲ್ಲಿ ಕಾಣಿಕೆ: ʻಭಗವಂತನಿಗೆ ಅರ್ಪಿಸುವ ನೈವೇದ್ಯದಲ್ಲಿ ಲಡ್ಡುವನ್ನು ಉಲ್ಲೇಖಿಸುವ ಯಾವುದೇ ಐತಿಹಾಸಿಕ ಪಠ್ಯ ಅಥವಾ ಶಾಸನವನ್ನು ನಾನು ನೋಡಿಲ್ಲ,ʼ ಎಂದು ತಿಮ್ಮಪ್ಪ ಹೇಳಿದರು.

ʻಹಿಂದಿನ ನೈವೇದ್ಯಗಳು ಅಕ್ಕಿಯನ್ನು ಆಧರಿಸಿದ್ದವು. ವಿಜಯನಗರದ ರಾಜ 2ನೇ ದೇವರಾಯನ ಅಧಿಕಾರಿಯೊಬ್ಬರು ಭಗವಂತನ ನೈವೇದ್ಯಕ್ಕೆ ಪಟ್ಟಿಯನ್ನು ಪರಿಚಯಿಸಿದರು. ನೈವೇದ್ಯದ ಒಂದು ಭಾಗವನ್ನು ಯಾತ್ರಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿತ್ತು. ಆನಂತರ ದೇವರಿಗೆ ಸುಕ್ಕಿಯಂ, ಅಪ್ಪಂ, ಮನೋಹರ ಪಾಡಿ, ವಡೆ ಇತ್ಯಾದಿಗಳನ್ನು ಅರ್ಪಿಸಲಾಗುತ್ತಿತ್ತುʼ.

ʻದೇವರಿಗೆ ಅರ್ಪಿಸುವ ನೈವೇದ್ಯಕ್ಕೆ ಅವಸರ ಎಂದು ಹೆಸರು. ಸಂಸ್ಕೃತದಲ್ಲಿ ಅವಾಸ್ ಪದದ ಅರ್ಥ ಆಹಾರ. 1554, 1579 ಮತ್ತು 1616 ರ ಹಿಂದಿನ ಮೂರು ಶಾಸನಗಳಲ್ಲಿ ಈ ಪದವನ್ನು ಗಮನಿಸಲಾಗಿದೆ. ಗೋಲ್ಕೊಂಡ ನವಾಬರು ವಿಜಯನಗರ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ನಂತರ ನೈವೇದ್ಯವನ್ನು ಅರ್ಪಿಸುವ ಅಭ್ಯಾಸ ನಿಂತುಹೋಯಿತು,ʼ ಎಂದು ತಿಮ್ಮಪ್ಪ ಹೇಳಿದರು.

ಮದ್ರಾಸ್ ಪ್ರೆಸಿಡೆನ್ಸಿ ಮತ್ತು ತಿರುಮಲ: ತಿಮ್ಮಪ್ಪ ಅವರ ಪ್ರಕಾರ, ಪ್ರಸಾದ ಇಲ್ಲದಿರುವುದು ಭಕ್ತರಿಗೆ ನಿರಾಸೆ ಮೂಡಿಸಿತು.

ʻಭಕ್ತರು ಪ್ರಸಾದವಾಗಿ ಶುದ್ಧನ್ನಂ (ಬೇಯಿಸಿದ ಆಹಾರ)ದಂಥ ಕೆಲವು ಸಂಪೂರ್ಣ ಆಹಾರವನ್ನು ಬಯಸುತ್ತಾರೆ. 1801ರಲ್ಲಿ ಆರ್ಕಾಟ್ ನವಾಬನಿಂದ ದೇವಾಲಯದ ನಿಯಂತ್ರಣವನ್ನು ತೆಗೆದುಕೊಂಡ ಮದ್ರಾಸ್ ಪ್ರೆಸಿಡೆನ್ಸಿಯು 1803ರಲ್ಲಿ ಸಮಸ್ಯೆಯನ್ನು ಗುರುತಿಸಿತು, ಏಕೆಂದರೆ, ಹೆಚ್ಚು ಕಾಲ ಇಡಬಹುದಾದ ವಡೆಯನ್ನು ಪ್ರಸಾದವಾಗಿ ಮಾರಾಟ ಮಾಡಲು ಪ್ರಾರಂಭಿಸಿತು. ದೇವಸ್ಥಾನದ ಆಡಳಿತವನ್ನು ಹಾಥಿರಾಮ್ ಮಠಕ್ಕೆ ಹಸ್ತಾಂತರಿಸಿದ ಸಮಯದಲ್ಲಿ ಮದ್ರಾಸ್ ಸರ್ಕಾರವು ಸಿಹಿ ಬೂಂದಿಯನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಬೂಂದಿ ಲಡ್ಡುವಿನ ಆರಂಭಿಕ ರೂಪವಾಗಿತ್ತು. 1940 ರಲ್ಲಿ, ಬೂಂದಿಯನ್ನು ಲಡ್ಡು ಎಂದು ಕರೆದು, ದೇವರ ನೈವೇದ್ಯದ ಭಾಗವಾಗಿ ಅರ್ಪಿಸಲಾಯಿತು,ʼ ಎಂದು ತಿಮ್ಮಪ್ಪ ಹೇಳಿದರು.

ಇದು ಯಾರ ಕಲ್ಪನೆ?: ಬೂಂದಿಯಿಂದ ಶ್ರೀವಾರಿ ಲಡ್ಡು ತಯಾರಿಸಲು ಅಧಿಕಾರಿಗಳಿಗೆ ಯಾರು ಹೇಳಿದರು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಕಲ್ಯಾಣಂ ಅಯ್ಯಂಗಾರ್ ಎಂಬುವರು ಇದರ ಶಿಲ್ಪಿ ಎಂದು ನಂಬಲಾಗಿದೆ. ಆದರೆ, ಅವರು ಯಾರು ಎಂಬುದು ಯಾರಿಗೂ ತಿಳಿದಿಲ್ಲ,ʼ.

ʻಅವರ ಹೆಸರು ಕನ್ಯಾದಾನಂ ತಾತಾಚಾರ್ಯುಲು.ಅವರು ಮದುವೆ ಸಮಯದಲ್ಲಿ ಬಡವರಿಗೆ ಮಂಗಳಸೂತ್ರ ಮತ್ತು ಹೊಸ ವಸ್ತ್ರಗಳನ್ನು ದಾನ ಮಾಡುತ್ತಿದ್ದುದರಿಂದ ಅವರಿಗೆ ಕಲ್ಯಾಣ ಅಯ್ಯಂಗಾರ್ ಎಂದು ಮದ್ರಾಸ್ ಪ್ರೆಸಿಡೆನ್ಸಿಯ ಪ್ರಧಾನಿಯಾಗಿದ್ದ ಸಿ. ರಾಜಗೋಪಾಲಾಚಾರಿ (ರಾಜಾಜಿ) ಹೆಸರಿಟ್ಟರು. ಬೂಂದಿಯನ್ನು ಲಡ್ಡುವಾಗಿ ಪರಿವರ್ತಿಸಿದ್ದರಲ್ಲಿ ಅವರ ಸಂಬಂಧವಿದೆ.ಆದರೆ, ಇದಕ್ಕೆ ಯಾವುದೇ ಪುರಾವೆ ಇಲ್ಲ’ ಎಂದು ಇತಿಹಾಸ ಪ್ರಾಧ್ಯಾಪಕ ತಿಮ್ಮಪ್ಪ ಹೇಳಿದರು.

ಲಡ್ಡುಗಳಲ್ಲಿ ಮೂರು ವಿಧ: ಲಡ್ಡು ತಯಾರಿಕೆಯನ್ನು ವಿವರಿಸಿದ ತಿಮ್ಮಪ್ಪ,ʼ ಮೊದಲಿಗೆ ಉರುವಲಿಯಿಂದ ತಯಾರಿಸಲಾಗುತ್ತಿತ್ತು.1984 ರಲ್ಲಿ ಎಲ್‌ಪಿಜಿ ಬಳಕೆ ಆರಮಭಗೊಂಡಿತು. ಏಕೆಂದರೆ, ಪ್ರತಿದಿನ ಬೇಕಾಗುವ ಲಡ್ಡುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ದಿನವೊಂದಕ್ಕೆ ಒಂದು ಲಕ್ಷ ಲಡ್ಡುಗಳನ್ನು ಸುಧಾರಿತ ತಂತ್ರಜ್ಞಾನದಿಂದ 150 ಅಡುಗೆಯವರು ನಿಭಾಯಿಸುತ್ತಾರೆ,ʼ

ಮೂರು ವಿಧದ ಲಡ್ಡುಗಳನ್ನು ತಯಾರಿಸಲಾಗುತ್ತದೆ - ಆಸ್ಥಾನಂ, ಕಲ್ಯಾಣೋತ್ಸವಂ ಮತ್ತು ಪ್ರೋಕ್ತಂ. ಆಸ್ಥಾನಂ ಲಡ್ಡುವನ್ನು ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ; ರಾಷ್ಟ್ರಪತಿ ಮತ್ತು ಪ್ರಧಾನಿಯಂಥ ವಿವಿಐಪಿಗಳಿಗೆ ಮಾತ್ರ ವಿತರಿಸಲಾಗುತ್ತದೆ. ಕಲ್ಯಾಣೋತ್ಸವ ಮತ್ತು ಆರ್ಜಿತ ಸೇವಾದಾರರಿಗೆ ಕಲ್ಯಾಣ ಲಡ್ಡುವನ್ನು ನೀಡಲಾಗುತ್ತದೆ. ಪ್ರೋಕ್ತಮ್ ಲಡ್ಡು ಚಿಕ್ಕದು ಮತ್ತು ಯಾತ್ರಾರ್ಥಿಗಳಿಗೆ ಮೀಸಲಾಗಿದೆ.

Read More
Next Story