
ಕ್ಲಬ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಗೋವಾ ನೈಟ್ ಕ್ಲಬ್ ದುರಂತ; ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು
ನಾಲ್ವರು ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಇಶಾಕ್, ಅಗ್ನಿ ದುರಂತ ಸಂಭವಿಸಿದ ಕ್ಲನ್‌ನಲ್ಲಿ ನೈಟ್ ಪಾರ್ಟಿಗೆ ಹೋಗಿದ್ದರು.
ಗೋವಾದ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಬೆಂಗಳೂರಿನ ಥಣಿಸಂದ್ರ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ. ಥಣಿಸಂದ್ರದ ಹೆಗಡೆನಗರ ನಿವಾಸಿ ಇಶಾಕ್(25) ಮೃತರು.
ಗೋವಾದಲ್ಲಿ ಮೃತ ಇಶಾಕ್ ಮೃತದೇಹದ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಕುಟುಂಬಸ್ಥರು ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುತ್ತಿದ್ದಾರೆ. ನಾಲ್ವರು ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಇಶಾಕ್, ಅಗ್ನಿ ದುರಂತ ಸಂಭವಿಸಿದ ಕ್ಲನ್‌ನಲ್ಲಿ ನೈಟ್ ಪಾರ್ಟಿಗೆ ಹೋಗಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಶಾಕ್ ಹಾಗೂ ಆತನ ಸ್ನೇಹಿತರು ಕ್ಲಬ್‌ನಿಂದ ಹೊರಬಂದಿದ್ದರು. ಆದರೆ, ಟೇಬಲ್ ಮೇಲೆ ಮೊಬೈಲ್ ಬಿಟ್ಟು ಬಂದಿದ್ದರಿಂದ ಮತ್ತೆ ಕ್ಲಬ್ ಒಳಗೆ ಹೋಗಿದ್ದಾಗ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ದಹನವಾಗಿದ್ದಾರೆ.
ಉತ್ತರ ಗೋವಾದ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್ ಪ್ರದೇಶದಲ್ಲಿರುವ ಕ್ಲಬ್‌ನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಡಿಜೆ ನೈಟ್ ಆಯೋಜಿಸಲಾಗಿತ್ತು. ರಾತ್ರಿ 10 ಗಂಟೆಯಿಂದಲೇ ಪಾರ್ಟಿ ಜೋರಾಗಿತ್ತು. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಬಂದಿದ್ದರು.
ರಾತ್ರಿ 12.30ರ ಹೊತ್ತಿಗೆ ವೇದಿಕೆ ಬಳಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದೆ. ಇಡೀ ಕ್ಲಬ್ ಬೆಂಕಿಗೆ ಆಹುತಿಯಾಗಿ ಒಟ್ಟು 25 ಮಂದಿ ಸಹೀವ ದಹನಗೊಂಡಿದ್ದರು. ಮೃತರಲ್ಲಿ ನಾಲ್ವರು ಪ್ರವಾಸಿಗರಿದ್ದಾರೆ. 14 ಮಂದಿ ಮೃತರ ಗುರುತು ಪತ್ತೆಯಾಗಿದ್ದು, 7 ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ನೈಟ್ ಕ್ಲಬ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕ್ಲಬ್ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ ಮತ್ತು ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಎಂಬುವರನ್ನು ಬಂಧಿಸಲಾಗಿತ್ತು.
ಕ್ಲಬ್ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ನಿಯಮ ಪಾಲಿಸದ, ನಿರ್ಲಕ್ಷ್ಯ ತೋರಿದ ಪಂಚಾಯತ್‌ಗಳ ನಿರ್ದೇಶಕರು ಸೇರಿ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

