Tourists, staff among 25 in Goa club blast; manager arrested
x
ಗೋವಾ ನೈಟ್‌ ಕ್ಲಬ್‌ನಲ್ಲಿ ಅಗ್ನಿ ದುರಂತ

ಗೋವಾ ಅಗ್ನಿ ದುರಂತ; ನೈಟ್‌ಕ್ಲಬ್‌ ಮ್ಯಾನೇಜರ್‌ ಅರೆಸ್ಟ್‌; ಮಾಲೀಕನಿಗೂ ಬಂಧನ ಭೀತಿ

ಗೋವಾದ ಅರ್ಪೋರಾ ಗ್ರಾಮದ ಬಾಗಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ಕ್ಲಬ್‌ನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಕ್ಲಬ್‌ ಮ್ಯಾನೇಜರ್‌ ಅನ್ನು ಅರೆಸ್ಟ್‌ ಮಾಡಲಾಗಿದೆ.


Click the Play button to hear this message in audio format

ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಬರೋಬ್ಬರಿ 25 ಜನರನ್ನು ಬಲಿ ಪಡೆದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಟ್‌ ಕ್ಲಬ್‌ ಮ್ಯಾನೇಜರ್‌ ಅನ್ನು ಅರೆಸ್ಟ್‌ ಮಾಡಲಾಗಿದೆ. ಮತ್ತೊಂದೆಡೆ ಕ್ಲಬ್‌ನ ಮಾಲೀಕನ ವಿರುದ್ಧವೂ ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಲಾಗಿದ್ದು, ಆತನೂ ಅರೆಸ್ಟ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದ ಬಾಗಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ಕ್ಲಬ್‌ನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದು, ನೈಟ್‌ಕ್ಲಬ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ವ್ಯವಸ್ಥಾಪಕರನ್ನು ಈಗಾಗಲೇ ಬಂಧಿಸಲಾಗಿದೆ. ಕ್ಲಬ್ ಮಾಲೀಕರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ವ್ಯವಸ್ಥಾಪಕರು ಮತ್ತು ಇತರರನ್ನು ಈಗಾಗಲೇ ಬಂಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದವರನ್ನು ಜೈಲಿಗೆ ಹಾಕಲಾಗುವುದು ಎಂದು ತಿಳಿಸಿದರು.

ಈ ಬೆಂಕಿ ಅವಘಡದಲ್ಲಿ ನಾಲ್ವರು ಪ್ರವಾಸಿಗರು ಮತ್ತು 14 ಸಿಬ್ಬಂದಿ ಸೇರಿದಂತೆ 25 ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಆದರೆ ಏಳು ಮೃತದೇಹಗಳ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಆರು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ಮಧ್ಯರಾತ್ರಿಯ ನಂತರ ಸಿಲಿಂಡರ್ ಸ್ಫೋಟದಿಂದಾಗಿ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಪೊಲೀಸರು ಹೇಳಿದ್ದರೂ, ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಕ್ಲಬ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಬೆಂಕಿ ವೇಗವಾಗಿ ಹರಡಿ ದಟ್ಟ ಹೊಗೆ ತುಂಬಿಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಸುರಕ್ಷತಾ ಕ್ರಮ ಪಾಲಿಸುವಲ್ಲಿ ವಿಫಲ?

ರಾತ್ರಿ ತಡವಾಗಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ದುರ್ಘಟನೆಯಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಸಿಬ್ಬಂದಿಯಾಗಿದ್ದಾರೆ. ಇನ್ನು ನಾಲ್ವರು ಪ್ರವಾಸಿಗರೂ ಸಜೀವ ದಹನಗೊಂಡಿದ್ದಾರೆ. ಪ್ರಾಥಮಿಕ ವರದಿಗಳು ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂದು ಸೂಚಿಸುತ್ತವೆ. ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದರೂ ಕ್ಲಬ್ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಹಿಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸಾವಂತ್ ಹೇಳಿದರು.

ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಗೋವಾದ ನೈಟ್‌ಕ್ಲಬ್'ನಲ್ಲಿ ಅಗ್ನಿ ದುರಂತ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ 50,000 ರೂ ಪರಿಹಾರ ಘೋಷಿಸಿದ್ದಾರೆ.

Read More
Next Story