ಆರ್ಥಿಕ ಸಮೀಕ್ಷೆ2024: ದೇಶಿ ಆರ್ಥಿಕತೆ ಎದುರಿಸುತ್ತಿರುವ ಸಂಕೀರ್ಣತೆಗಳ ಸೂಕ್ಷ್ಮ ತಿಳಿವಳಿಕೆ
x

ಆರ್ಥಿಕ ಸಮೀಕ್ಷೆ2024: ದೇಶಿ ಆರ್ಥಿಕತೆ ಎದುರಿಸುತ್ತಿರುವ ಸಂಕೀರ್ಣತೆಗಳ ಸೂಕ್ಷ್ಮ ತಿಳಿವಳಿಕೆ

ಆರ್ಥಿಕ ಸಮೀಕ್ಷೆ 2023-24 , ದೇಶದ ಆರ್ಥಿಕ ಬೆಳವಣಿಗೆಗೆ ಎಚ್ಚರಿಕೆಯ ಆಶಾವಾದಿ ಮುನ್ನಂದಾಜು ನೀಡುತ್ತದೆ: ಆರ್ಥಿಕ ವರ್ಷ 2025 ಕ್ಕೆ ಶೇ.6.5-7 ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ. ಈ ಸಂಪ್ರದಾಯವಾದಿ ದೃಷ್ಟಿಕೋನವು ಆರ್ಥಿಕತೆ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ, ವಿಶೇಷವಾಗಿ, ಏರುಗತಿಯ ಮಾರುಕಟ್ಟೆ ನಿರೀಕ್ಷೆಗಳ ಬೆಳಕಿನಲ್ಲಿ ಪರಿಗಣಿಸಿದೆ.


ಸೋಮವಾರ (ಜುಲೈ 22) ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24 , ದೇಶದ ಆರ್ಥಿಕ ಬೆಳವಣಿಗೆಗೆ ಎಚ್ಚರಿಕೆಯ ಆಶಾವಾದಿ ಮುನ್ನಂದಾಜು ನೀಡುತ್ತದೆ: ಆರ್ಥಿಕ ವರ್ಷ 2025 ಕ್ಕೆ ಶೇ.6.5-7 ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ. ಈ ಸಂಪ್ರದಾಯವಾದಿ ದೃಷ್ಟಿ ಕೋನವು ಆರ್ಥಿಕತೆ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ, ವಿಶೇಷವಾಗಿ, ಏರುಗತಿಯ ಮಾರುಕಟ್ಟೆ ನಿರೀಕ್ಷೆಗಳ ಬೆಳಕಿನಲ್ಲಿ ಪರಿಗಣಿಸಿದೆ.

ಯೋಜಿತ ಬೆಳವಣಿಗೆಯು ಹಿಂದಿನ ಮುನ್ಸೂಚನೆಗಳಿಗೆ ಹೋಲಿಸಿದರೆ, ಸಂಭನೀಯ ಸವಾಲುಗಳನ್ನು ಒಪ್ಪಿಕೊಂಡೇ, ಹೆಚ್ಚು ಹದಬೆರೆತ ನೋಟವನ್ನು ಸೂಚಿಸುತ್ತದೆ. ಖಾಸಗಿ ಬಂಡವಾಳ ಹೂಡಿಕೆ ಚೇತರಿಕೆ ಲಕ್ಷಣ ತೋರಿಸಿದ್ದರೂ, ಹೆಚ್ಚುವರಿ ಉತ್ಪಾದನೆ ಸಾಮರ್ಥ್ಯ ಹೊಂದಿರುವ ದೇಶಗಳಿಂದ ಅಗ್ಗದ ಆಮದುಗಳಿಂದಾಗಿ ಹೆಚ್ಚು ಜಾಗರೂಕ ಆಗಬಹುದು ಎಂದು ಸಮೀಕ್ಷೆ ಹೇಳುತ್ತದೆ.

ಕೋವಿಡ್ ನಂತರದ ಚೇತರಿಕೆ: ಈ ಎಚ್ಚರಿಕೆಯು ಕಳೆದ ಕೆಲವು ವರ್ಷಗಳಿಂದ ಗಳಿಸಿಕೊಂಡ ವೇಗಕ್ಕೆ, ವಿಶೇಷವಾಗಿ, ಕೋವಿಡೋತ್ತರ ಆರ್ಥಿಕತೆಯ ಚೇತರಿಕೆಯ ಸ್ಥಿತ್ಯಂತರದಿಂದ ಅಡ್ಡಿಯಾಗಬಹುದು. ಮುಂದುವರಿದ ಆರ್ಥಿಕತೆ (ಎಇ)ಗಳಲ್ಲಿ ಸುಧಾರಿತ ಬೆಳವಣಿಗೆಯ ನಿರೀಕ್ಷೆಯಿಂದ ನಡೆಯುವ ರಫ್ತುಗಳಲ್ಲಿ ಸಂಭವನೀಯ ಹೆಚ್ಚಳವನ್ನು ಸಮೀಕ್ಷೆ ಸೂಚಿಸುತ್ತದೆ. ಹೆಚ್ಚುವರಿಯಾಗಿ, ಸೇವೆಗಳ ರಫ್ತು ಮತ್ತಷ್ಟು ಬೆಳವಣಿಗೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಇದು ದೇಶಿ ಅನಿಶ್ಚಿತತೆಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

ಆದರೆ, ಬಾಹ್ಯ ಮಾರುಕಟ್ಟೆಗಳ ಮೇಲಿನ ಅವಲಂಬನೆಯು ಜಾಗತಿಕ ಆರ್ಥಿಕ ಏರಿಳಿತಗಳಿಗೆ ಭಾರತೀಯ ಆರ್ಥಿಕತೆಯು ಪಕ್ಕಾಗುವುದನ್ನು ಒತ್ತಿ ಹೇಳುತ್ತದೆ.

ಮುಂಗಾರು ಮತ್ತು ಕೃಷಿ ವಲಯ: ಮಳೆ ಮುನ್ಸೂಚನೆ ಮತ್ತು ನೈಋತ್ಯ ಮುಂಗಾರು ತೃಪ್ತಿಕರವಾಗಿರುವುದು ಕೃಷಿ ವಲಯಕ್ಕೆ ಆಶಾದಾಯಕವಾಗಿದೆ. ಗ್ರಾಮೀಣ ಬೇಡಿಕೆ ಪುನರುಜ್ಜೀವನಕ್ಕೆ ಇದು ನಿರ್ಣಾಯಕವಾಗಿದೆ. ಅದೇನೇ ಇದ್ದರೂ,ಮುಂಗಾರು ಋತು ಇನ್ನೂ ನಡೆಯುತ್ತಿದೆ ಮತ್ತು ಅದರ ಒಟ್ಟಾರೆ ಪ್ರಭಾವದ ಬಗ್ಗೆ ಅನಿಶ್ಚಿತತೆ ಉಳಿದಿದೆ.

ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ರೂಪಿಸುವಲ್ಲಿ ಕೃಷಿ ಕ್ಷೇತ್ರದ ಕಾರ್ಯಕ್ಷಮತೆ ಪ್ರಮುಖವಾಗಿರುತ್ತದೆ.

ಫಲಿತಾಂಶಗಳನ್ನು ನೀಡುವ ಸುಧಾರಣೆ: ಆರ್ಥಿಕ ವರ್ಷ 2023 ಮತ್ತು 24 ರಲ್ಲಿ ಹವಾಮಾನ ವೈಪರೀತ್ಯ, ಕಡಿಮೆ ಜಲಾಶಯದ ಮಟ್ಟಗಳು ಮತ್ತು ಹಾನಿಗೊಳಗಾದ ಬೆಳೆಗಳಿಂದ ಕೃಷಿ ವಲಯ ಸೊರಗಿ, ಕೃಷಿ ಉತ್ಪಾದನೆ ಮತ್ತು ಆಹಾರ ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು. ಇದರಿಂದ, ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್‌ಪಿಐ ) ಆಧಾರಿತ ಆಹಾರ ಹಣದುಬ್ಬರ 2022 ರಲ್ಲಿ ಶೇ.3.8ರಿಂದ 2023 ರಲ್ಲಿ ಶೇ. 6.6 ಶೇಕಡಾ ಮತ್ತು 2024 ರಲ್ಲಿ ಶೇ.7.5ಕ್ಕೆ ಏರಿತು.

ರಚನಾತ್ಮಕ ಸುಧಾರಣೆಗಳು, ವಿಶೇಷವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಸಾಲ ಬಾಕಿ ಮತ್ತು ದಿವಾಳಿತನ ಕೋಡ್ (ಐಬಿಸಿ) ಅನುಷ್ಠಾನ ಪ್ರಬುದ್ಧವಾಗಿದೆ ಮತ್ತು ಸಕಾರಾತ್ಮಕ ಫಲಿತಾಂಶ ನೀಡಲು ಪ್ರಾರಂಭಿಸಿದೆ ಎಂದು ಸಮೀಕ್ಷೆ ಗಮನಿಸಿದೆ. ಆರ್ಥಿಕ ದಕ್ಷತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಈ ಸುಧಾರಣೆಗಳು ಅತ್ಯಗತ್ಯ.

ಜಾಗತಿಕ ಆರ್ಥಿಕ ಬೆಳವಣಿಗೆ: ಜಾಗತಿಕವಾಗಿ ನೋಡಿದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2024 ರಲ್ಲಿ ವಿಶ್ವ ಆರ್ಥಿಕತೆ ಬೆಳವಣಿಗೆ ದರ ಶೇ. 3.2 ರಷ್ಟು ಇರಲಿದೆ ಎಂದು ಹೇಳಿದೆ. ಅನೇಕ ಪ್ರದೇಶಗಳಲ್ಲಿ ಹಣದುಬ್ಬರದ ಒತ್ತಡಗಳು ಕಡಿಮೆಯಾಗಲಿವೆ.

ಆದರೆ, ಸೇವಾ ವಲಯದ ಹಣದುಬ್ಬರದಿಂದಾಗಿ‌ ಮುಖ್ಯ(ಕೋರ್) ಹಣದುಬ್ಬರವು ಕಾಳಜಿಯಾಗಿ ಉಳಿದಿದೆ. ಕೇಂದ್ರೀಯ ಬ್ಯಾಂಕುಗಳ, ನಿರ್ದಿಷ್ಟವಾಗಿ, ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್, ಬಡ್ಡಿ ದರಗಳನ್ನು ಕಡಿಮೆ ಮಾಡುವ ಸಾಮರ್ಥ್ಯವು ಭಾರತವನ್ನು ಒಳಗೊಂಡಂತೆ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಗೆ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ.

ಜಾಗತಿಕ ಮತ್ತು ಬಾಹ್ಯ ಸವಾಲುಗಳ ಹೊರತಾಗಿಯೂ, ಭಾರತದ ಆರ್ಥಿಕತೆಯು 2023ರಲ್ಲಿ ಗಳಿಸಿದ ವೇಗವನ್ನು 2024 ಕ್ಕೆ ಕೊಂಡೊಯ್ದಿದೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಿಕೆ ಮೇಲಿನ ಗಮನದಿಂದಾಗಿ, ಈ ಸವಾಲುಗಳು ದೇಶದ ಆರ್ಥಿಕತೆ ಮೇಲೆ ಕನಿಷ್ಠ ಪರಿಣಾಮ ಬೀರುವುದನ್ನು ಖಚಿತಪಡಿಸಿತು. ಇದರಿಂದಾಗಿ, 2024 ರಲ್ಲಿ ಭಾರತದ ನೈಜ ಜಿಡಿಪಿ ಶೇ.8.2 ರಷ್ಟು ಬೆಳವಣಿಗೆಯಾಯಿತು; ಸತತ ಮೂರನೇ ವರ್ಷ ಶೇ. 7 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನುದಾಖಲಿಸಿದ್ದು, ಸ್ಥಿರ ಬಳಕೆ ಬೇಡಿಕೆ ಮತ್ತು ಸ್ಥಿರ ಹೂಡಿಕೆಯ ಬೇಡಿಕೆಯಿಂದ ಮುನ್ನಡೆಸಲ್ಪಟ್ಟಿದೆ.

ಖಾಸಗಿ ವಲಯದ ನಿಧಾನಗತಿ: ಹಿಂದಿನ ವರ್ಷದ ಸಮೀಕ್ಷೆಯು ಕೋವಿಡ್ -19 ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುವುದರ ಮೇಲೆ ಹೆಚ್ಚು ಗಮನ ಹರಿಸಿತ್ತು. ಹಿಂದಿನ ವರ್ಷಗಳಲ್ಲಿ ಶೇ. 9.7 ಮತ್ತು ಶೇ. 7.0 ಬೆಳವಣಿಗೆ ದರಗಳನ್ನು ಗಮನಿಸಿದೆ. ಆದರೆ, ಈ ಚೇತರಿಕೆಯ ಸಮರ್ಥನೀಯತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಎರಡೂ ಸಮೀಕ್ಷೆಗಳಲ್ಲಿ ಹೂಡಿಕೆ ಮತ್ತು ಬಂಡವಾಳ ಪ್ರಮುಖ ಕ್ಷೇತ್ರಗಳಾಗಿವೆ. 2022-23ರ ಸಮೀಕ್ಷೆಯು ಬೆಳವಣಿಗೆಯನ್ನು ಹೆಚ್ಚಿಸಲು ನಿರಂತರ ಖಾಸಗಿ ಹೂಡಿಕೆಯ ಅಗತ್ಯವನ್ನು ಒತ್ತಿಹೇಳಿತು; ವಿಶೇಷವಾಗಿ, ಖಾಸಗಿ ವಲಯದ ಬಂಡವಾಳದ ಮೇಲೆ ಸಾಂಕ್ರಾಮಿಕದ ಪ್ರಭಾವದ ನಂತರ.

ಆದರೆ, ಸಾರ್ವಜನಿಕ ಹೂಡಿಕೆಯು ಬಂಡವಾಳವನ್ನು ಬೆಂಬಲಿಸುವುದನ್ನು ಮುಂದುವರಿಸಿದ್ದರೂ, ಖಾಸಗಿ ವಲಯದ ಬೆಳವಣಿಗೆಯು ನಿಧಾನಗೊಂಡಿದೆ ಎಂದು ಇತ್ತೀಚಿನ ಸಮೀಕ್ಷೆಯು ಗಮನಿಸಿದೆ. ಈ ನಿಧಾನಗತಿಯು ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಖಾಸಗಿ ಹೂಡಿಕೆಯಲ್ಲಿ ವೇಗ ವರ್ಧನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನು ಕಾಳಜಿಯ ಕ್ಷೇತ್ರವೆಂದು ಗುರುತಿಸಿದೆ.

ವಿದೇಶಿ ಹೂಡಿಕೆದಾರರ ಓಲೈಕೆ: ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯು ಮಿಶ್ರವಾಗಿ ಉಳಿದಿದೆ. 2022-23ರ ಸಮೀಕ್ಷೆಯು ಜಾಗತಿಕ ಆರ್ಥಿಕ ಪರಿಸ್ಥಿತಿ ನಡುವೆ ವಿದೇಶಿ ಹೂಡಿಕೆದಾರರ ಆಸಕ್ತಿಯನ್ನು ಉಳಿಸಿಕೊಳ್ಳುವ ಬಗ್ಗೆ ಎಚ್ಚರಿಸಿತ್ತು. 2023-24 ರ ಸಮೀಕ್ಷೆಯು ಎಫ್ಡಿಐ ಲನಾತ್ಮಕವಾಗಿ ಸ್ಥಿರವಾಗಿದೆ ಎಂದು ತೋರಿಸುತ್ತದೆ. ಹೊಸ ಬಂಡವಾಳದ ಒಳಹರಿವು 2023 ರಲ್ಲಿ 47.6 ಶತಕೋಟಿ ಡಾಲರಿಗೆ ಹೋಲಿಸಿದರೆ, 2024 ರಲ್ಲಿ 45.8 ಶತಕೋಟಿ ಡಾಲರ್‌ ಇದೆ.

ಈ ಕುಸಿತವು ವಿಸ್ತೃತ ಜಾಗತಿಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಹೆಚ್ಚುತ್ತಿರುವ ಬಡ್ಡಿದರ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆಯೇ ವಿದೇಶಿ ಹೂಡಿಕೆದಾರರಿಗೆ ಆಕರ್ಷಣೀಯವಾಗಬೇಕಾದ ಅಗತ್ಯವನ್ನು ಒತ್ತಿಹೇಳುತ್ತದೆ.

ಉದ್ಯೋಗ ಸೃಷ್ಟಿ: ಉದ್ಯೋಗ ಸೃಷ್ಟಿಯು ಕಾಳಜಿಯ ವಿಷಯವಾಗಿ ಮುಂದುವರಿದಿದೆ. 2022-23 ರ ಸಮೀಕ್ಷೆಯು ಉದ್ಯೋಗದ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಲು, ಸಮಗ್ರ ಕಾರ್ಮಿಕ ಮಾರುಕಟ್ಟೆಯ ದತ್ತಾಂಶದ ಅಗತ್ಯವನ್ನು ಒತ್ತಿಹೇಳಿದೆ.

2023-24ರ ಸಮೀಕ್ಷೆಯು ಕಾರ್ಖಾನೆ ಉದ್ಯೋಗಗಳಲ್ಲಿನ ಸುಧಾರಣೆಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕಾರ್ಪೊರೇಟ್ ವಲಯದ ಪಾತ್ರದ ಸುಧಾರಣೆಯನ್ನು ಗಮನಿಸಿದ್ದು, ಉದ್ಯೋಗ ಸೃಷ್ಟಿ ಪ್ರಯತ್ನಗಳಲ್ಲಿ ಉತ್ತಮ ದತ್ತಾಂಶ ಮತ್ತು ಉತ್ತರದಾಯಿತ್ವಕ್ಕೆ ಕರೆ ನೀಡುತ್ತದೆ. ಪ್ರಗತಿ ಯಾಗಿದ್ದರೂ, ಉದ್ಯೋಗದ ಸವಾಲುಗಳನ್ನು ಸಮಗ್ರವಾಗಿ ಎದುರಿಸಲು ಗಣನೀಯ ಕೆಲಸ ಆಗಬೇಕಿದೆ ಎಂದು ಇದು ಸೂಚಿಸುತ್ತದೆ.

ಕಾರ್ಪೊರೇಟ್ ವಲಯದ ಕಾರ್ಯಕ್ಷಮತೆ ಗಮನಾರ್ಹ ಬದಲಾವಣೆಯನ್ನು ಕಂಡಿದೆ. 2022-23ರ ಸಮೀಕ್ಷೆ ಬಂಡವಾಳ ಮತ್ತು ಉದ್ಯೋಗ ಸೃಷ್ಟಿಗೆ ಕಾರ್ಪೊರೇಟ್ ವಲಯದಿಂದ ಹೆಚ್ಚಿನ ಕೊಡುಗೆಗಳ ಅಗತ್ಯವನ್ನು ಎತ್ತಿ ತೋರಿಸಿದೆ.

2023-24 ರ ಸಮೀಕ್ಷೆ ಮತ್ತೊಂದು ಹೆಜ್ಜೆ ಮುಂದಿರಿಸಿದ್ದು,ಆರ್ಥಿಕ ವರ್ಷ 20 ರಿಂದ ತೆರಿಗೆ ಪಾವತಿಗೆ ಮುನ್ನ ಕಾರ್ಪೊರೇಟ್ ಗಳ ಲಾಭದಾಯ ಕತೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿರುವುದನ್ನು ವರದಿ ಮಾಡಿದೆ. ಇದು ಉದ್ಯೋಗ ಸೃಷ್ಟಿ ಮತ್ತು ನಿರ್ಣಾಯಕ ವಲಯಗಳಲ್ಲಿ ಹೂಡಿಕೆಯಲ್ಲಿ ಕಾರ್ಪೊರೇಟ್ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ; ಸಾಮಾಜಿಕ ಜವಾಬ್ದಾರಿ ಮತ್ತು ಆರ್ಥಿಕ ಕೊಡುಗೆ ವಿಷಯದಲ್ಲಿ ಕಾರ್ಪೊರೇಟ್ ವಲಯದಿಂದ ಹೆಚ್ಚಿನದನ್ನು ನಿರೀಕ್ಷಿಸುವ ಕಡೆಗೆ ಬದಲಾವಣೆಯನ್ನು ಸೂಚಿಸುತ್ತದೆ.

ಕೃಷಿ ನೀತಿ, ಸಣ್ಣ ಉದ್ಯಮಗಳು: ಎರಡೂ ಸಮೀಕ್ಷೆಗಳು ರಚನಾತ್ಮಕ ಸುಧಾರಣೆಗಳು ಮತ್ತು ಉತ್ತಮ ನೀತಿ ಸಮನ್ವಯದ ಅಗತ್ಯವನ್ನು ಒತ್ತಿಹೇಳುತ್ತವೆ. 2022-23ರ ಸಮೀಕ್ಷೆಯು ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸರ್ಕಾರ, ಖಾಸಗಿ ವಲಯ ಮತ್ತು ಶಿಕ್ಷಣವನ್ನು ಒಳಗೊಂಡ ತ್ರಿಪಕ್ಷೀಯ ಮಾರ್ಗವನ್ನು ಸೂಚಿಸಿದೆ.

2023-24 ರ ಸಮೀಕ್ಷೆಯು ಈ ವಿಷಯಗಳನ್ನು ಪುನರುಚ್ಚರಿಸುತ್ತದೆ ಮತ್ತು ಕೃಷಿ ನೀತಿಗಳನ್ನು ಒಟ್ಟುಗೂಡಿಸುವ ಮತ್ತು ಸಣ್ಣ ಉದ್ಯಮ ಗಳನ್ನು ಬೆಂಬಲಿಸುವ ಮಹತ್ವವನ್ನು ಒತ್ತಿಹೇಳುತ್ತದೆ. ಜಾಗತಿಕ ಕ್ರಿಯಾಸರಣಿ ಮತ್ತು ತಾಂತ್ರಿಕ ಪ್ರಗತಿಗಳು ಎದುರಿಸುತ್ತಿರುವ ಸವಾಲು ಗಳನ್ನು ಎದುರಿಸಲು, ಇದು ಹೆಚ್ಚು ಸಮಗ್ರ ಮಾರ್ಗವನ್ನು ನೀಡುತ್ತದೆ; ಬೆಳವಣಿಗೆಯನ್ನು ಉಳಿಸಿಕೊಳ್ಳಲು ನಿರ್ಣಾಯಕವಾಗಿದೆ.

ಹಿಂದಿನ ವರ್ಷದ ಸಮೀಕ್ಷೆಗೆ ಹೋಲಿಸಿದರೆ, 2023-24 ರ ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕತೆ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಸ್ಥಿತಿಸ್ಥಾಪಕ ಚಿತ್ರವನ್ನು ಪ್ರಸ್ತುತಪಡಿಸುತ್ತದೆ; ವಿಶೇಷವಾಗಿ, ಖಾಸಗಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನಡೆಯುತ್ತಿರುವ ಸವಾಲುಗಳನ್ನು ಇದು ಅಂಗೀಕರಿಸುತ್ತದೆ.

ಕಾರ್ಪೊರೇಟ್ ಜವಾಬ್ದಾರಿ ಮತ್ತು ಕಾರ್ಯತಂತ್ರದ ನೀತಿ ಮಧ್ಯಸ್ಥಿಕೆಗಳ ಮೇಲಿನ ಒತ್ತು ಭಾರತೀಯ ಆರ್ಥಿಕತೆ ಎದುರಿಸುತ್ತಿರುವ ಸಂಕೀರ್ಣತೆಗಳ ಸೂಕ್ಷ್ಮವಾದ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ವೇಗವನ್ನು ಕಾಪಾಡಿಕೊಳ್ಳಲು ಮತ್ತು ಮುಂಬರುವ ವರ್ಷಗಳಲ್ಲಿ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು, ಈ ಕ್ಷೇತ್ರಗಳಲ್ಲಿ ನಿರಂತರ ಪ್ರಯತ್ನಗಳು ಅತ್ಯಗತ್ಯವಾಗಿರುತ್ತದೆ.

ಭಾರತದ ಆರ್ಥಿಕತೆಗೆ ಸವಾಲುಗಳು: 2016 ರಿಂದ 2023 ವರೆಗೆ ಕಳೆದ ಏಳು ವರ್ಷಗಳಲ್ಲಿ ಬಜೆಟ್ ಬಂಡವಾಳ ವೆಚ್ಚ 2.7 ಪಟ್ಟು ಹೆಚ್ಚಾಗಿದೆ. ಇದು ಬಂಡವಾಳ ವೆಚ್ಚ(ಕ್ಯಾಪೆಕ್ಸ್ )ಚಕ್ರವನ್ನು ಪುನಶ್ಚೇತನಗೊಳಿಸಿದೆ. ಸರಕು ಮತ್ತು ಸೇವಾ ತೆರಿಗೆ ಮತ್ತು ಸಾಲ ಬಾಕಿ ಹಾಗೂ ದಿವಾಳಿತನ ಕೋಡ್‌ನಂಥ ಸುಧಾರಣೆಗಳು ಆರ್ಥಿಕತೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತು ಹೆಚ್ಚಿಸಿವೆ; ಸುಧಾರಿತ ಬೆಳವಣಿಗೆಯ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತವೆ.

ಆದರೆ, 2023-24 ರ ಸಮೀಕ್ಷೆಯು ಐಎಂಎಫ್‌ ಮುನ್ನಂದಾಜು ಉಲ್ಲೇಖಿಸಿದ್ದು, ಜಾಗತಿಕ ಆರ್ಥಿಕತೆಯು 2024 ರಲ್ಲಿ ಶೇ. 3.2 ಬೆಳೆಯುವ ನಿರೀಕ್ಷೆಯಿದ್ದು, ಅಪಾಯಗಳನ್ನು ವಿಸ್ತೃತವಾಗಿ ಸಮತೋಲಗೊಳಿಸಲಾಗಿದೆ. 2020 ಕ್ಕೆ ಕೊನೆಗೊಂಡ ದಶಕದಲ್ಲಿ ಸರಾಸರಿ ವಾರ್ಷಿಕ ಜಾಗತಿಕ ಬೆಳವಣಿಗೆಯು ಶೆ. 3.7. ಭಾರತದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದರೂ, ನಿಧಾನಗೊಂಡ ಜಾಗತಿಕ ಬೆಳವಣಿಗೆ ಮತ್ತು ಹೆಚ್ಚಿದ ಅನಿಶ್ಚಿತತೆಯಂತಹ ಬಾಹ್ಯ ಅಂಶಗಳು ಸವಾಲುಗಳನ್ನು ಒಡ್ಡಬಹುದು ಎಂದು ಇದು ಸೂಚಿಸುತ್ತದೆ.

Read More
Next Story