ವಂಶರಾಜಕೀಯದ ಹಲವು ಮುಖಗಳು
ಪ್ರಾದೇಶಿಕ ಪಕ್ಷಗಳು ಮಾತ್ರವಲ್ಲ; ಆರ್‌ಎಸ್‌ಎಸ್, ಬಿಜೆಪಿಯಲ್ಲೂ ವಂಶಪಾರಂಪರ್ಯ ಅಧಿಕಾರ ವರ್ಗಾವಣೆ ಇದೆ. ಕಾಂಗ್ರೆಸ್ ನ್ನು ಗುರಿಯಾಗಿಟ್ಟುಕೊಂಡು ದೂಷಿಸುವುದು ಅರ್ಥಹೀನ.
ಬಿಜೆಪಿಯು ಉತ್ತರ ಪ್ರದೇಶದ ಪಿಲಿಭಿತ್‌ನಿಂದ ವರುಣ್ ಗಾಂಧಿ ಅವರನ್ನು ಕೈಬಿಟ್ಟಿದೆ ಮತ್ತು ಅವರ ಸ್ಥಾನಕ್ಕೆ ಜಿತಿನ್ ಪ್ರಸಾದ ಅವರನ್ನು ಆಯ್ಕೆ ಮಾಡಿದೆ. ಕುತೂಹಲಕರ ಅಂಶವೆಂದರೆ, ಈ ಇಬ್ಬರೂ ರಾಜಕೀಯ ಕುಟುಂಬಗಳ ಸದಸ್ಯರು ಮತ್ತು ಇವರ ಬಳಿಕ ಕುಟುಂಬದ ಸದಸ್ಯರೊಬ್ಬರು ರಾಜಕೀಯದಲ್ಲಿ ಮುಂದುವರಿದರು.
ವರುಣ್ 2004 ರಲ್ಲಿ ತಾಯಿ ಮೇನಕಾ ಗಾಂಧಿ ಅವರೊಂದಿಗೆ ಬಿಜೆಪಿ ಸೇರಿದರು.
'ಇತರ ಗಾಂಧಿಗಳು': ಮೇನಕಾ ಮೊದಲ ಬಾರಿಗೆ 1984 ರಲ್ಲಿ ಅಮೇಠಿಯಿಂದ ಎಲ್ಲ ವಿರೋಧ ಪಕ್ಷಗಳ ಬೆಂಬಲದೊಂದಿಗೆ ರಾಜಕೀಯ ಕಣವನ್ನು ಪ್ರವೇಶಿಸಿದರು. ಆ ಚುನಾವಣೆಯಲ್ಲಿ ಮತ್ತು ನಂತರದ ಹಲವಾರು ಚುನಾವಣೆಗಳಲ್ಲಿ ಅವರು ಸ್ವತಂತ್ರರಾಗಿ ಉಳಿದರು. ಕೆಲವನ್ನು ಹೊರತುಪಡಿಸಿ ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳು ಆಕೆಯನ್ನು ಬೆಂಬಲಿಸಿದರೂ, ಆಕೆಯ ಪ್ರಾಥಮಿಕ ಗುರುತು 'ಇತರ ಗಾಂಧಿ' ಆಗಿಯೇ ಉಳಿಯಿತು.
2004 ರಲ್ಲಿ ಮಗನೊಂದಿಗೆ ಬಿಜೆಪಿ ಸೇರುವಷ್ಟರಲ್ಲಿ, ಮೇನಕಾ ಆರು ವರ್ಷ(1998 ರ ಆರಂಭ) ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ೆನ್ ಡಿಎ)ನಲ್ಲಿ ಕೇಂದ್ರ ಸಚಿವೆಯಾಗಿ ಕಳೆದಿದ್ದರು. ಬಿಜೆಪಿಯಲ್ಲೂ ಸಂಜಯ್ ಗಾಂಧಿ ವಾರಸುದಾರರು ಎಂದು ತಾಯಿ-ಮಗನಿಗೆ ಸ್ಥಾನ ಕೊಡಲಾಯಿತು. ಪಿಲಿಭಿತ್ ಅನ್ನು 1996 ರಿಂದ 28 ವರ್ಷಗಳ ಕಾಲ ಏಳು ಸಂಸತ್ ಚುನಾವಣೆಗಳಲ್ಲಿ ಇಬ್ಬರು ಗಾಂಧಿಗಳು ಪ್ರತಿನಿಧಿಸಿದ್ದರು. ಕ್ಷೇತ್ರವನ್ನು ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು.
ಜಿತಿನ್ ಅವರ ಪ್ರಯಾಣ: ಜಿತಿನ್ ಕಾಂಗ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಇದ್ದು, ಜೂನ್ 2021 ರಲ್ಲಿ ಬಿಜೆಪಿ ಸೇರಿದರು. 2004 ರಿಂದ 2014 ರವರೆಗೆ 10 ವರ್ಷಗಳ ಕಾಲ ಲೋಕಸಭೆ ಸದಸ್ಯ ಮತ್ತು ಕೇಂದ್ರ ಸಚಿವರಾಗಿದ್ದರು. ಅವರ ತಂದೆ ಜಿತೇಂದ್ರ ಪ್ರಸಾದ ಅವರ ಪಕ್ಷ ಕಾಂಗ್ರೆಸ್. ಜನವರಿ 2001ರಲ್ಲಿ ಜಿತೇಂದ್ರ ಪ್ರಸಾದ ಅವರ ಮರಣದ ನಂತರ, ಜಿತಿನ್ ಕಾಂಗ್ರೆಸ್ ಸೇರಿದರು. ತಂದೆ 1971, 1980, 1984 ಮತ್ತು 1999 ರಲ್ಲಿ ಗೆದ್ದ ಶಹಜಹಾನ್‌ಪುರ ಕ್ಷೇತ್ರದಿಂದ ಕಣಕ್ಕಿಳಿದರು.
ಮೇ 2001ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ತಾಯಿ ಕಾಂತಾ ಪ್ರಸಾದ ಅವರು ಪತಿಯ ಸಾವಿನಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡ ನಂತರ, ಸಮಾಜವಾದಿ ಪಕ್ಷದ ಪ್ರತಿಸ್ಪರ್ಧಿಯನ್ನು 80,000ಕ್ಕಿಂತ ಹೆಚ್ಚು ಅಂತರದಿಂದ ಸೋಲಿಸಿದ ಮಗ ಜಿತಿನ್‌ಗೆ ಕುಟುಂಬದ ಹೊಣೆ ವರ್ಗವಾಯಿತು. 2014ರಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಸೋಲು ಅನುಭವಿಸುವರೆಗೆ ಈ ಕ್ಷೇತ್ರವನ್ನು ಪ್ರಸಾದ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿತ್ತು.
ಬಿಜೆಪಿಯಲ್ಲೂ ವಂಶ ರಾಜಕಾರಣ: ಪಿಲಿಭಿತ್‌ನಲ್ಲಿ ರಾಜಕೀಯ ಉತ್ತರಾಧಿಕಾರಿಯನ್ನು ಇನ್ನೊಬ್ಬನಿಂದ ಬದಲಾಯಿಸಿರುವುದು ಬಿಜೆಪಿಯ ಏಕೈಕ ನಿದರ್ಶನವಲ್ಲ. ಸುಷ್ಮಾ ಸ್ವರಾಜ್ ಅವರನ್ನು ಪುತ್ರಿ ಬಾನ್ಸುರಿ ಸ್ವರಾಜ್ ಅವರಿಂದ ಮುಂದುವರಿಸಲಾಯಿತು.ಇದು ಎದ್ದು ಕಾಣಲು ಕಾರಣ ಅವರು ನವದೆಹಲಿಯಿಂದ ಕಣಕ್ಕಿಳಿದಿರುವುದು.
ಕುಟುಂಬ ರಾಜಕೀಯದ ಉತ್ತೇಜನದ ಹೊರತಾಗಿಯೂ, ಬಿಜೆಪಿ,ವಿಶೇಷವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಮೇಲೆ ಪರಿವಾರವಾದ ಅಥವಾ ವಂಶರಾಜಕೀಯದ ಆರೋಪ ಮಾಡುತ್ತಾರೆ.ಜೆಡಿ (ಯು) ಹೊರತುಪಡಿಸಿದರೆ, ಉಳಿದವು ಕುಟುಂಬವನ್ನುಗುರಿಯಾಗಿ ಹೊಂದಿವೆ.
ಈ ವಿರೋಧಾಭಾಸವನ್ನು ಹೇಗೆ ವಿವರಿಸುವುದು ಅಥವಾ ಇದು ಸರಳ ವಿರೋಧಾಭಾಸವೇ?
ರಾಜಕೀಯ ಪೂರ್ವಜರು, ಉತ್ತರಾಧಿಕಾರಿಗಳು: ವಿವರಣೆಗಳನ್ನು ಹುಡುಕುವ ಮೊದಲು ಅಥವಾ ಬೂಟಾಟಿಕೆ ಎಂದು ಕರೆಯುವ ಮುನ್ನ ಬಿಜೆಪಿಯಲ್ಲಿ ವಂಶರಾಜಕೀಯ ಎಷ್ಟರ ಮಟ್ಟಿಗೆ ಚಾಲ್ತಿಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸಚಿವ ಸಂಪುಟದಲ್ಲಿ ಇಂಥ ಕನಿಷ್ಠ ನಾಲ್ವರು ಸದಸ್ಯರಿದ್ದು, ಇವರಲ್ಲಿ ಇಬ್ಬರು ರಾಜಮನೆತನಕ್ಕೆ ಸೇರಿದವರು- ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ರಾವ್ ಇಂದರ್‌ಜಿತ್ ಸಿಂಗ್.
ಜ್ಯೋತಿರಾದಿತ್ಯ ಅವರ ತಂದೆ ಮಾಧವರಾವ್ ಅವರಲ್ಲದೆ, ಅಜ್ಜಿ ವಿಜಯ ರಾಜೆ ಮತ್ತು ಚಿಕ್ಕಮ್ಮ ವಸುಂಧರಾ ರಾಜೆ ಮತ್ತು ಯಶೋಧರ ಕೂಡ ರಾಜಕೀಯದಲ್ಲಿ ಇದ್ದರು. ಮತ್ತೊಂದೆಡೆ, ಇಂದರ್‌ಜಿತ್ ಸಿಂಗ್ ಅವರ ತಂದೆ, ಬಿರೇಂದರ್ ಸಿಂಗ್ ಕೇಂದ್ರ ಸಚಿವರಾಗಿದ್ದರು. ಹರಿಯಾ ಣದ ರೇವಾರಿ ಸುತ್ತಮುತ್ತಲಿನ ಪ್ರದೇಶಗಳ ಅಹಿರ್ ಮುಖ್ಯಸ್ಥ ರಾವ್ ತುಲಾ ರಾಮ್ ಅವರು ವಂಶಾವಳಿಯ ಮೂಲ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ತಂದೆ ವೇದ್ ಪ್ರಕಾಶ್ ಗೋಯಲ್ ಬಿಜೆಪಿಯ ಖಜಾಂಚಿಯಾಗಿದ್ದರು ಮತ್ತು ಅನುರಾಗ್ ಠಾಕೂರ್ ಅವರ ತಂದೆ ಪ್ರೇಮ್ ಕುಮಾರ್ ಧುಮಾಲ್ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಇನ್ನಿಬ್ಬರು ಕೇಂದ್ರ ಸಚಿವರ ಪುತ್ರರು ರಾಜಕೀಯ ಅಥವಾ ಸಾರ್ವಜನಿಕ ಹುದ್ದೆಯಲ್ಲಿದ್ದಾರೆ; ಅವರೆಂದರೆ, ರಾಜನಾಥ್ ಸಿಂಗ್ ಅವರ ಮಗ ಪಂಕಜ್ ಉತ್ತರ ಪ್ರದೇಶದ ಶಾಸಕ ಮತ್ತು ರಾಜ್ಯ ಘಟಕದಲ್ಲಿ ಪದಾಧಿಕಾರಿ. ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿಯಾಗಿದ್ದಾರೆ.
ಭಾರತಕ್ಕೆ ಮಾತ್ರ ವಿಶಿಷ್ಟವಲ್ಲ: ದೇಶದಲ್ಲಿ ವಂಶರಾಜಕೀಯ ಹೊಸ ವಿದ್ಯಮಾನವಲ್ಲ. ಅನೇಕ ರಾಷ್ಟ್ರೀಯತಾವಾದಿಗಳ ಮಕ್ಕಳು ಪೋಷಕರ ಹೆಜ್ಜೆಗಳನ್ನು ಅನುಸರಿಸಿದರು; ಜವಾಹರಲಾಲ್ ನೆಹರೂ ಅವರಲ್ಲಿ ಅತ್ಯಂತ ಪ್ರಸಿದ್ಧರು. ಸ್ವಾತಂತ್ರ್ಯಾನಂತರ ಮತ್ತು ರಾಜಪ್ರಭುತ್ವದ ರಾಜ್ಯಗಳು ದೇಶದಲ್ಲಿ ವಿಲೀನಗೊಂಡಾಗ ಸಿಂಧ್ಯ ಮತ್ತಿತರ ಹಲವು ರಾಜ ಮನೆತನಗಳ ವಂಶಸ್ಥರು ರಾಜಕೀಯವನ್ನು ಪ್ರವೇಶಿಸಿದರು.
ರಾಜಕೀಯಶಾಸ್ತ್ರಜ್ಞರು ಈ ಪ್ರವೃತ್ತಿಯನ್ನು ದೀರ್ಘಕಾಲ ಅಧ್ಯಯನ ಮಾಡಿದ್ದಾರೆ. ಇದು ಭಾರತಕ್ಕೆ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳ ಹಲವಾರು ಪ್ರಜಾಪ್ರಭುತ್ವಗಳಲ್ಲಿ ರಾಜವಂಶಗಳು ಅಸ್ತಿತ್ವದಲ್ಲಿವೆ. ಪ್ಯಾಟ್ರಿಕ್ ಫ್ರೆಂಚ್, ಕಾಂಚಲ್ ಚಂದ್ರ ಮತ್ತು ರೊಮೈನ್ ಕಾರ್ಲೆವನ್ ಅವರಂತಹ ಶಿಕ್ಷಣ ತಜ್ಞರ ಕೃತಿಗಳಿಂದ ರಾಜಕೀಯ ರಾಜವಂಶಗಳ ಕುರಿತ ತಿಳಿವಳಿಕೆ ಬೆಳೆದಿದೆ.
ಫ್ರೆಂಚ್ ಮತ್ತು ಚಂದ್ರ ಅವರ ಅಧ್ಯಯನ ಪ್ರಕಾರ, 15 ನೇ ಲೋಕಸಭೆಯಲ್ಲಿ (2009-14) ಶೇ.30 ರಷ್ಟು ಸಂಸದರ ಕುಟುಂಬದ ಸದಸ್ಯರು ಈಮೊದಲು ಆಯ್ಕೆಯಾಗಿದ್ದರೆಂದು ತೋರಿಸಿದೆ. ಉತ್ತರ ಭಾರತವನ್ನು ಅಧ್ಯಯನ ಮಾಡಿದ ಕಾರ್ಲೆವನ್, 2009-2014ರಲ್ಲಿ ಈ ಪ್ರದೇಶದಿಂದ ಚುನಾಯಿತರಾದ ಸಂಸದರಲ್ಲಿ ಶೇ.33.6 ರಷ್ಟು ಮಂದಿ ರಾಜಕೀಯ ಉತ್ತರಾಧಿಕಾರಿಗಳು ಎಂದು ಕಂಡುಕೊಂಡರು.
ಕೇಂದ್ರ ಸರ್ಕಾರದ ಬಹುತೇಕ 1/3 ರಷ್ಟು ಶಾಸಕರು ತಮ್ಮ ಸ್ಥಾನಗಳನ್ನು 'ಆನುವಂಶಿಕ'ವಾಗಿ ಪಡೆದವರು ಎಂದು ಅಧ್ಯಯನಗಳು ತೋರಿಸಿವೆ. ಅವರೆಲ್ಲರು ಚುನಾವಣೆ ಪ್ರಕ್ರಿಯೆ ಮೂಲಕ ಆಯ್ಕೆಯಾದರು.
ಮೋದಿಯವರ ಆರೋಪ ದುರ್ಬಲ: ವಂಶರಾಜಕೀಯದ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಅನುಕೂಲ ಹೊಂದಿರುತ್ತಾರೆ: ಪಕ್ಷದ ಟಿಕೆಟ್ ಪಡೆಯುವುದು ಸುಲಭ, ಆಯ್ಕೆಯ ಕ್ಷೇತ್ರವನ್ನು ಪಡೆಯಬಹುದು, ಚುನಾವಣೆ ಕಣಕ್ಕೆ ಪ್ರವೇಶಿಸುವ ಮೊದಲು ಕ್ಷೇತ್ರದ ಅರಿವು ಇರುತ್ತದೆ ಮತ್ತು ಚುನಾವಣಾ ಪ್ರಚಾರ ಮತ್ತು ಸಂಪನ್ಮೂಲಗಳಿಗಾಗಿ ಕಾರ್ಯಜಾಲ ಸಿದ್ಧವಾಗಿರುತ್ತದೆ.
ವಂಶರಾಜಕೀಯಕ್ಕೆ ಕಾಂಗ್ರೆಸ್ ಪ್ರಮುಖ ಕಾರಣ ಎಂದು ದೂರುವ ಮೋದಿ ಅವರಿಗೆ ಕಾರ್ಲೆವನ್ ಅವರ ಸಂಶೋಧನೆ ಕಣ್ಣು ತೆರೆಸಬಹುದು. 2014 ರ ಲೋಕಸಭೆಯಲ್ಲಿ ಕಾಂಗ್ರೆಸ್ ಶೇ.80 ರಷ್ಟು ಸ್ಥಾನ ಕಳೆದುಕೊಂಡಿದ್ದರೂ, ಲೋಕಸಭೆಯಲ್ಲಿ ವಂಶರಾಜಕೀಯದ ಉತ್ತರಾಧಿಕಾರಿಗಳ ಪ್ರಮಾಣ ಶೇ.10 ಅಂಶದಿಂದ ಕುಸಿಯಿತು; 15 ನೇ ಲೋಕಸಭೆಯಲ್ಲಿ ಶೇ. 33.6 ರಿಂದ 16 ನೇ ಲೋಕಸಭೆಯಲ್ಲಿ ಶೇ. 27 ಕ್ಕೆ.
ದೇಶದಲ್ಲಿ ರಾಜಕೀಯವಂಶ ಮತ್ತು ರಾಜವಂಶಗಳು ಸ್ಥಿತಿಸ್ಥಾಪಕತ್ವ ಗುಣ ಹೊಂದಿವೆ; ಬೆರಳೆಣಿಕೆಯ ಪಕ್ಷಗಳನ್ನು ಹೊರತುಪಡಿಸಿ, ಎಲ್ಲ ಪಕ್ಷಗಳು ರಾಜವಂಶಗಳನ್ನು, ಸ್ವಪಕ್ಷ ಮತ್ತು ಇತರ ಪಕ್ಷಗಳಿಂದ ಸೇರ್ಪಡೆಗೊಳಿಸುತ್ತವೆ.
ಆರ್‌ಎಸ್‌ಎಸ್ ಕೂಡ: 16 ನೇ ಲೋಕಸಭೆ ಸದಸ್ಯರ ಹಿನ್ನೆಲೆ ಮತ್ತು ರಾಜಕೀಯ ಸಂಬಂಧ ಕುರಿತ ಕಾರ್ಲೆವನ್ ಅವರ ವಿಶ್ಲೇಷಣೆ ಪ್ರಕಾರ, ಬಿಜೆಪಿ ಶೇ.44.4 ರಷ್ಟು ರಾಜಕೀಯ ಉತ್ತರಾಧಿಕಾರಿಗಳನ್ನು ಹೊಂದಿದೆ. ಆರ್‌ಎಸ್‌ಎಸ್‌ನಲ್ಲಿ ಕೂಡ ವಂಶರಾಜಕೀಯ ಇದೆ. ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರ ತಂದೆ ಮಧುಕರ್ ರಾವ್ ಭಾಗವತ್, ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತ. ಅವರು ಮೋದಿಯವರ ಆರಂಭಿಕ ಮಾರ್ಗದರ್ಶಕರಲ್ಲಿ ಒಬ್ಬರು.
ಆರ್‌ಎಸ್‌ಎಸ್ ಸಹ ಸರಕಾರ್ಯವಾಹ(ಜಂಟಿ ಪ್ರಧಾನ ಕಾರ್ಯದರ್ಶಿ) ಮನಮೋಹನ್ ವೈದ್ಯ ಅವರ ತಂದೆ ಎಂ.ಜಿ. ವೈದ್ಯ ಅವರು 1990 ರ ದಶಕದ ಉತ್ತರಾರ್ಧದಲ್ಲಿ ಹಿರಿಯ ಕಾರ್ಯಕಾರಿ, ಬೌದ್ಧಿಕ್ ಪ್ರಮುಖ್ ಆಗಿದ್ದರು.
ರಾಜವಂಶದ ಬಗ್ಗೆ ಮೋದಿ ವ್ಯಾಖ್ಯಾನ: ಫೆಬ್ರವರಿಯಲ್ಲಿ ನಡೆದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಮಾತನ್ನಾಡಿದ ಮೋದಿ, ʻಎರಡು ರೀತಿಯ ಪಕ್ಷಗಳಿವೆ - ಒಂದರಲ್ಲಿ ಕುಟುಂಬಕ್ಕೆ ಸೇರಿದ ನಾಯಕರು ನೇತೃತ್ವ ವಹಿಸುತ್ತಾರೆ ಮತ್ತು ಇನ್ನೊಂದರಲ್ಲಿ ರಾಜಕೀಯದಲ್ಲಿ ಪ್ರಗತಿ ಸಾಧಿಸಿದ ಬಳಿಕ ಕುಟುಂಬದ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಪಕ್ಷದಲ್ಲಿ ಇರುತ್ತಾರೆ: ಪ್ರಗತಿಗೆ ಸ್ವಂತ ಅರ್ಹತೆ ಕಾರಣವೇ ಹೊರತು ಕುಟುಂಬದ ಬೆಂಬಲವಲ್ಲ.
ಈ ಪಕ್ಷಗಳನ್ನು ವಿವರಿಸಿದ ಮೋದಿ, ʻಕುಟುಂಬವೊಂದು ಪಕ್ಷವನ್ನು ಹೊಂದಿರುವಾಗ ವಂಶರಾಜಕೀಯ ಆಗುತ್ತದೆ. ಅದು ಕುಟುಂಬಕ್ಕೆ ಆದ್ಯತೆ ನೀಡುತ್ತದೆ ಮತ್ತು ಎಲ್ಲಾ ನಿರ್ಧಾರಗಳನ್ನು ಕುಟುಂಬದ ಸದಸ್ಯರು ತೆಗೆದುಕೊಳ್ಳುತ್ತಾರೆʼ.
ರಾಜಕೀಯದಲ್ಲಿ ಯುವಕರು: ಕುಟುಂಬವೊಂದರ ಹಲವು ಸದಸ್ಯರು ರಾಜಕೀಯದಲ್ಲಿ ಇರುವುದನ್ನು ಮೋದಿ ಖಂಡಿಸಿಲ್ಲ ಎಂಬ ಸಂದೇಹವಿದ್ದರೆ, ʻಕುಟುಂಬವೊಂದರ 10 ಸದಸ್ಯರು ಹುದ್ದೆ ಹೊಂದಿರುವುದು ಅಥವಾ ರಾಜಕೀಯಕ್ಕೆ ಸೇರುವುದು ಕೆಟ್ಟದಲ್ಲ. ನಾವು ಯುವಕರು ಬರಬೇಕೆಂದು ಬಯಸುತ್ತೇವೆ. ರಾಜಕೀಯಕ್ಕೆ ಬರಲು ಬಯಸುವ ಯುವಜನರಿಗೆ ಕುಟುಂಬದ ವ್ಯಕ್ತಿಯೊಬ್ಬರು ಈಗಾಗಲೇ ಪ್ರಭಾವಿ ಸ್ಥಾನದಲ್ಲಿದ್ದರೆ ಅನುಕೂಲ ಆಗುತ್ತದೆ ಎಂದು ಎಲ್ಲರಿಗೂ ತಿಳಿದಿದೆʼ ಎಂದಿದ್ದರು.
ಅವರ ವಿವರಣೆಯು ಬಿಜೆಪಿ, ಜೆಡಿಯು ಮತ್ತು ಇತರ ಮಿತ್ರಪಕ್ಷಗಳಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಮಾತ್ರ ವಂಶರಾಜಕೀಯ ಮಾಡುತ್ತವೆ ಎಂದು ಬಣ್ಣಿಸುವ ಗುರಿಯನ್ನು ಹೊಂದಿದೆ.
ರಾಜವಂಶದ ನಾಯಕತ್ವ: ಮೋದಿಯವರ ಸೂತ್ರ ಸಂಪೂರ್ಣವಾಗಿ ಸುಳ್ಳಲ್ಲದಿದ್ದರೂ(ಕುಟುಂಬದ ಹಿರಿಯರು ಅಥವಾ ಒಡಹುಟ್ಟಿದವರ ಸಹಾಯವಿಲ್ಲದೆ ಸ್ವಯಂ ನಾಯಕರಾಗಬಹುದು ಎಂಬ ಹೇಳಿಕೆ) ,ಅಂಥವರು ʻಕಣ್ಮರೆಯಾಗುತ್ತಿರುವ ಸಣ್ಣ ಸಂಖ್ಯೆʼ ಯಲ್ಲಿದ್ದಾರೆ ಎಂದು ಕಾರ್ಲೆವನ್ ಹೇಳುತ್ತಾರೆ.
ಅವರ ಅಧ್ಯಯನದ ಪ್ರಕಾರ, ಶೇ.4 ಕ್ಕಿಂತ ಕಡಿಮೆ ರಾಜಕಾರಣಿಗಳು ಮಾತ್ರ ಕುಟುಂಬದ ಸಹಾಯ ಪಡೆಯದೆ ರಾಜಕೀಯ ಸಾಧನೆ ಮಾಡಿದ್ದಾರೆ.
ಪಿಲಿಭಿತ್‌ನಲ್ಲಿ ಕೂಡ 'ವಂಶಪಾರಂಪರ್ಯ ನಾಯಕತ್ವ' ಮತ್ತು 'ವಂಶಪಾರಂಪರ್ಯ ಸದಸ್ಯತ್ವ'ದ ನಡುವಿನ ವ್ಯತ್ಯಾಸ ಅರ್ಥಹೀನ. ಏಕೆಂದರೆ, ವರುಣ್ ಅವರ ಸೀಟು ಮತ್ತೆ 'ಹೊರಗಿನವ' ಮತ್ತು 'ವಂಶರಾಜಕೀಯ'ಕ್ಕೆ ಹೋಗಿದೆ.
ಕ್ಷುಲ್ಲಕ ವಿವರಣೆ: ಮೋದಿಯವರ ವಿವರಣೆ ಕ್ಷುಲ್ಲಕ ಶೋಧನೆ. ಆದರೆ ವಿವಿಧ ಅಧ್ಯಯನಗಳು ಹೇಳುವ ವಾಸ್ತವಾಂಶವೇನೆಂದರೆ, ಬಿಜೆಪಿ ಹೆಚ್ಚಿನ ಸಂಖ್ಯೆಯ ವಂಶರಾಜಕಾರಣಿಗಳನ್ನು ಉತ್ತೇಜಿಸಿದೆ. ಬಿಜೆಪಿಯು ಪ್ರಜಾಸತ್ತಾತ್ಮಕ ಕಾರ್ಯವೈಖರಿಯನ್ನು ದೂರ ಮಾಡಿದೆ. ಬಹುಪಾಲು ನಿರ್ಣಾಯಕ ವಿಷಯಗಳಲ್ಲಿ ಯಾವುದೇ ಚರ್ಚೆ ನಡೆಸಿಲ್ಲ. ಹೈಕಮಾಂಡ್ ಹಿಡಿತದ ಸಂಸ್ಕೃತಿಯಿರುವ ಮತ್ತು 1990 ರ ಉತ್ತರಾರ್ಧದಿಂದ ಕಾಂಗ್ರೆಸ್‌ನಷ್ಟೇ ವಂಶರಾಜಕಾರಣಿಗಳನ್ನು ಹೊಂದಿರುವ ಬಿಜೆಪಿಯ ಮೋದಿ ಅವರು, ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ವಿರೋಧ ಪಕ್ಷಗಳನ್ನು ವಂಶರಾಜಕೀಯ ಮಾಡುತ್ದತಿವೆ ಎಂದು ದೂರುವುದು ಕುಡಿಕೆಯು ಕಾವಲಿಯನ್ನು ಕಪ್ಪು ಎಂದು ಕರೆದಂತೆ ಆಗುತ್ತದೆ.