
ಇನ್ಮುಂದೆ 10 ನಿಮಿಷದಲ್ಲಿ ಆರ್ಡರ್ ಬರಲ್ಲ! ಡೆಲಿವರಿ ಬಾಯ್ಸ್ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮಹತ್ವದ ಕ್ರಮ
ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಬ್ಲಿಂಕಿಟ್ ಸೇರಿದಂತೆ ಪ್ರಮುಖ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ತಮ್ಮ '10 ನಿಮಿಷಗಳ ಡೆಲಿವರಿ' ಭರವಸೆಯನ್ನು ತೆಗೆದುಹಾಕಿವೆ.
ನಮಗೆ 10 ನಿಮಿಷದಲ್ಲಿ ಆರ್ಡರ್ ಸಿಗಲಿ ಎಂಬ ಆತುರ, ಆದರೆ ಅದನ್ನು ಹೊತ್ತು ಬರುವ ಡೆಲಿವರಿ ಪಾರ್ಟ್‌ನರ್‌ಗೆ ಅದು ಬದುಕಿನ ಪ್ರಶ್ನೆ! ರಸ್ತೆಯಲ್ಲಿ ಪ್ರಾಣ ಪಣಕ್ಕಿಟ್ಟು ಓಡುತ್ತಿದ್ದ ಸಾವಿರಾರು ಗಿಗ್ ವರ್ಕರ್ಸ್ ಪರವಾಗಿ ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ. ಬ್ಲಿಂಕಿಟ್ (Blinkit) ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ತಮ್ಮ "10 ನಿಮಿಷಗಳಲ್ಲಿ ಡೆಲಿವರಿ" ಎಂಬ ಟ್ಯಾಗ್‌ಲೈನ್ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಡೆಲಿವರಿ ಪಾಲುದಾರರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ತಿಳಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಟ್ಯಾಗ್‌ಲೈನ್ ಬದಲಿಸಿದ ಬ್ಲಿಂಕಿಟ್
ಸರ್ಕಾರಿ ಮೂಲಗಳ ಪ್ರಕಾರ, ಡೆಲಿವರಿ ಅವಧಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸಚಿವರು ಜೊಮ್ಯಾಟೊ (Zomato), ಸ್ವಿಗ್ಗಿ (Swiggy), ಬ್ಲಿಂಕಿಟ್ ಮತ್ತು ಜೆಪ್ಟೋ (Zepto) ಸೇರಿದಂತೆ ಹಲವು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಲಿಂಕಿಟ್ ತನ್ನ ಹಳೆಯ ಟ್ಯಾಗ್‌ಲೈನ್ ಆದ "10,000 ಕ್ಕೂ ಹೆಚ್ಚು ಉತ್ಪನ್ನಗಳು 10 ನಿಮಿಷಗಳಲ್ಲಿ ಡೆಲಿವರಿ" ಎಂಬುದನ್ನು ಬದಲಿಸಿ, ಈಗ "30,000 ಕ್ಕೂ ಹೆಚ್ಚು ಉತ್ಪನ್ನಗಳು ನಿಮ್ಮ ಮನೆ ಬಾಗಿಲಿಗೆ" ಎಂದು ಪರಿಷ್ಕರಿಸಿದೆ.
ಡೆಲಿವರಿ ಬಾಯ್ಸ್ ಸುರಕ್ಷತೆ ಬಗ್ಗೆ ಆತಂಕ
ಈ 10 ನಿಮಿಷಗಳ ಡೆಲಿವರಿ ಭರವಸೆಯು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕೇವಲ 10 ನಿಮಿಷದಲ್ಲಿ ತಲುಪಿಸುವ ಒತ್ತಡದಿಂದಾಗಿ ಡೆಲಿವರಿ ಪಾಲುದಾರರು ರಸ್ತೆ ಅಪಘಾತಗಳಿಗೆ ಈಡಾಗುತ್ತಿದ್ದಾರೆ ಮತ್ತು ಅವರ ಜೀವಕ್ಕೆ ಅಪಾಯವಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಗಿಗ್ ವರ್ಕರ್ಸ್ ಪ್ರತಿಭಟನೆ ಮತ್ತು ಬೇಡಿಕೆ
ಡಿಸೆಂಬರ್ 25 ರಂದು ಗಿಗ್ ಕಾರ್ಮಿಕರ ಸಂಘಟನೆಗಳು ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಪ್ರತಿಭಟನೆ ನಡೆಸಿದ್ದವು. ಸಮಯದ ಆಧಾರಿತ ಡೆಲಿವರಿ ಗುರಿಗಳನ್ನು ಕೈಬಿಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಇದಕ್ಕೆ ಸ್ಪಂದಿಸಿದ ಸ್ವಿಗ್ಗಿ ಮತ್ತು ಜೊಮ್ಯಾಟೊ ಸಂಸ್ಥೆಗಳು ಪ್ರೋತ್ಸಾಹಧನವನ್ನು ಹೆಚ್ಚಿಸಿದ್ದವು.
ಹೊಸ ಕಾರ್ಮಿಕ ಸಂಹಿತೆ ಮತ್ತು ಸೌಲಭ್ಯಗಳು
2020ರ ಸಾಮಾಜಿಕ ಭದ್ರತಾ ಸಂಹಿತೆಯ ಪ್ರಕಾರ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ. ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಇವರಿಗೆ ಕನಿಷ್ಠ ವೇತನ, ಆರೋಗ್ಯ ಸೌಲಭ್ಯ, ಮತ್ತು ಔದ್ಯೋಗಿಕ ಸುರಕ್ಷತೆಯನ್ನು ಒದಗಿಸಲು ಸರ್ಕಾರ ಉದ್ದೇಶಿಸಿದೆ.
ಆಪ್ ಸಂಸದ ರಾಘವ್ ಚಡ್ಡಾ ಸ್ವಾಗತ
ಸಂಸತ್ತಿನ ಒಳಗೂ ಮತ್ತು ಹೊರಗೂ ಗಿಗ್ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದ್ದ ಎಎಪಿ ಸಂಸದ ರಾಘವ್ ಚಡ್ಡಾ ಸರ್ಕಾರದ ಈ ನಡೆಯನ್ನು ಸ್ವಾಗತಿಸಿದ್ದಾರೆ. "ಸತ್ಯಮೇವ ಜಯತೇ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. 10 ನಿಮಿಷಗಳ ಡೆಲಿವರಿ ಬ್ರ್ಯಾಂಡಿಂಗ್ ತೆಗೆದುಹಾಕುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಡೆಲಿವರಿ ಹುಡುಗರ ಟೀ-ಶರ್ಟ್ ಅಥವಾ ಬ್ಯಾಗ್ ಮೇಲೆ '10 ನಿಮಿಷ' ಎಂದು ಬರೆದಾಗ ಮತ್ತು ಗ್ರಾಹಕರ ಸ್ಕ್ರೀನ್ ಮೇಲೆ ಟೈಮರ್ ಓಡುತ್ತಿರುವಾಗ, ಆ ಸವಾರರ ಮೇಲೆ ಭಾರಿ ಒತ್ತಡವಿರುತ್ತದೆ. ಈ ನಿರ್ಧಾರವು ಸವಾರರ ಮತ್ತು ರಸ್ತೆಯಲ್ಲಿ ಸಂಚರಿಸುವ ಇತರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ," ಎಂದು ಅವರು ಹೇಳಿದ್ದಾರೆ.

