BJP Hits Back at Sonia Gandhi: Nehru’s Legacy Is a Series of “Historic Mistakes,” Says Gaurav Bhatia
x

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ

ನೆಹರೂ ಕೊಡುಗೆ ಎಂದರೆ ‘ಐತಿಹಾಸಿಕ ತಪ್ಪುಗಳು’; ಸೋನಿಯಾ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು

ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಪಕ್ಷಗಳನ್ನು, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಹಾರದಲ್ಲಿ ತೇಜಸ್ವಿ ಯಾದವ್ ಅವರನ್ನು ಮುಗಿಸಿದ್ದು ರಾಹುಲ್‌ ಗಾಂಧಿ ಎಂದು ಬಿಜೆಪಿ ತಿರುಗೇಟು ನೀಡಿದೆ.


Click the Play button to hear this message in audio format

ಆಡಳಿತಾರೂಢ ಬಿಜೆಪಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪರಂಪರೆಯನ್ನು ಹೀಯಾಳಿಸುತ್ತಿದೆ ಮತ್ತು ಇತಿಹಾಸವನ್ನು ತಿರುಚಲು ಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಪಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ನೆಹರೂ ಅವರ ಪರಂಪರೆ ಎಂದರೆ 'ಐತಿಹಾಸಿಕ ಪ್ರಮಾದ'ಗಳ ಸರಣಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಟೀಕಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌರವ್ ಭಾಟಿಯಾ, ನೆಹರೂ ಅವರ ಆಡಳಿತಾವಧಿಯ ವೈಫಲ್ಯಗಳನ್ನು ಪಟ್ಟಿ ಮಾಡಿ ಲೇವಡಿ ಮಾಡಿದ್ದಾರೆ. "ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡಿದ್ದು, ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಹಾಗೂ ಚೀನಾಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವವನ್ನು ನಿರಾಕರಿಸಿದ್ದು ನೆಹರೂ ಅವರ ನಿಜವಾದ ಪರಂಪರೆಯಾಗಿದೆ," ಎಂದು ಅವರು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಇಂದು ಬಲವಾಗಿದ್ದು, 370ನೇ ವಿಧಿ ರದ್ದತಿಯಂತಹ ಕ್ರಮಗಳ ಮೂಲಕ ನೆಹರೂ ಮಾಡಿದ ಹಳೆಯ ತಪ್ಪುಗಳನ್ನು ಸರಿಪಡಿಸುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

ರಾಹುಲ್ ಗಾಂಧಿ ರಾಜಕೀಯದ 'ಭಸ್ಮಾಸುರ'

ದೇಶದ ಸಾಮಾಜಿಕ ಮತ್ತು ರಾಜಕೀಯ ಅಡಿಪಾಯವನ್ನು ನಾಶಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂಬ ಸೋನಿಯಾ ಗಾಂಧಿ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ ಭಾಟಿಯಾ, 'ವಿನಾಶ' ಎಂಬ ಪದ ರಾಹುಲ್ ಗಾಂಧಿಗೆ ಹೆಚ್ಚು ಒಪ್ಪುತ್ತದೆ ಎಂದರು. "ರಾಹುಲ್ ಗಾಂಧಿ ಇಂದಿನ ರಾಜಕೀಯದ 'ಭಸ್ಮಾಸುರ' ಇದ್ದಂತೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಪಕ್ಷಗಳನ್ನು, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಹಾರದಲ್ಲಿ ತೇಜಸ್ವಿ ಯಾದವ್ ಅವರನ್ನು ಮುಗಿಸಿದ ರಾಹುಲ್, ಈಗ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ," ಎಂದು ಅವರು ಗಂಭೀರ ಆರೋಪ ಮಾಡಿದರು.

ವಿದೇಶಿ ಗಣ್ಯರ ಭೇಟಿ ವಿವಾದ

ವಿದೇಶಿ ಗಣ್ಯರು ತಮ್ಮನ್ನು ಭೇಟಿಯಾಗದಂತೆ ಸರ್ಕಾರ ತಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನೂ ಬಿಜೆಪಿ ತಳ್ಳಿಹಾಕಿದೆ. ರಾಹುಲ್ 'ಸುಳ್ಳಿನ ರಾಜಕೀಯ' ಮಾಡುತ್ತಿದ್ದಾರೆ ಎಂದ ಭಾಟಿಯಾ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಮತ್ತು ನ್ಯೂಜಿಲೆಂಡ್ ಪ್ರಧಾನಿಗಳೊಂದಿಗೆ ರಾಹುಲ್ ಈ ಹಿಂದೆ ನಡೆಸಿದ ಭೇಟಿಯ ಫೋಟೋಗಳನ್ನು ಪ್ರದರ್ಶಿಸಿದರು. "ಜಾಗತಿಕ ರಾಜತಾಂತ್ರಿಕತೆಯು ವಿಶ್ವಾಸಾರ್ಹತೆಯ ಮೇಲೆ ನಡೆಯುತ್ತದೆಯೇ ಹೊರತು ಹಕ್ಕಿನ ಮೇಲಲ್ಲ. ರಾಹುಲ್ ಗಾಂಧಿ ದೇಶಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ," ಎಂದು ಭಾಟಿಯಾ ಆಕ್ರೋಶ ವ್ಯಕ್ತಪಡಿಸಿದರು

Read More
Next Story