ಎತ್ತಿನಹೊಳೆ ಯೋಜನೆ: ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ನೀರು - ಚಲುವರಾಯಸ್ವಾಮಿ
x

ಎತ್ತಿನಹೊಳೆ ಯೋಜನೆ: ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ನೀರು - ಚಲುವರಾಯಸ್ವಾಮಿ

ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ, ಮಣ್ಣಿನ ಗುಣಮಟ್ಟ, ತಾಂತ್ರಿಕ ಪ್ರಕ್ರಿಯೆಯನ್ನು ಪರಿಶೀಲಿಸಿದರು.


Click the Play button to hear this message in audio format

ರಾಜ್ಯದ ಬರಪೀಡಿತ ಪ್ರದೇಶಗಳ ರೈತರ ಪಾಲಿನ ಜೀವನಾಡಿ ಎಂದೇ ಬಿಂಬಿತವಾಗಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಬಲವಾದ ವೇಗ ನೀಡಿದ್ದಾರೆ. ಮೇಕೆದಾಟು ಯೋಜನೆಗಾಗಿ ರಾಜ್ಯ ಸರ್ಕಾರ ಶತಾಯಗತಾಯ ಹೋರಾಡುತ್ತಿರುವ ಮಧ್ಯೆಯೇ, ಎತ್ತಿನಹೊಳೆ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಮೂಲಕ ತುಮಕೂರಿನ ಜನರಿಗೆ ನೀರುಣಿಸಲು ಸಚಿವರು ಸಿದ್ಧತೆ ನಡೆಸಿದ್ದಾರೆ.

ಗುರುವಾರ ತುಮಕೂರಿನ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ 'ಪ್ಯಾಕೇಜ್ 11'ರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಮಣ್ಣಿನ ಗುಣಮಟ್ಟದಿಂದ ಹಿಡಿದು ತಾಂತ್ರಿಕ ಪ್ರಕ್ರಿಯೆಗಳವರೆಗೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಕ್ಷೇತ್ರ ಪರಿಶೀಲನೆಯ ಬಳಿಕ ಮಾತನಾಡಿದ ಸಚಿವರು, "ನವೆಂಬರ್ ಅಂತ್ಯದೊಳಗೆ ಎತ್ತಿನಹೊಳೆ ಯೋಜನೆಯ ಮೂಲಕ ತುಮಕೂರಿಗೆ ನೀರು ಹರಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಘೋಷಿಸಿದರು. ಯೋಜನೆಯ ಅನುಷ್ಠಾನದಲ್ಲಿ ಎದುರಾಗಿದ್ದ ಅರಣ್ಯ ಇಲಾಖೆಯ ಅನುಮತಿ ಸಮಸ್ಯೆಗಳನ್ನು ಸಚಿವರು ಪರಿಹರಿಸಿದ್ದಾರೆ. ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ವ್ಯಾಪ್ತಿಯಲ್ಲಿನ ತೊಡಕುಗಳನ್ನು ನಿವಾರಿಸಲು ಈಗಾಗಲೇ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಮೂಲಕ ದೆಹಲಿಯಲ್ಲಿರುವ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಕಡತಗಳನ್ನು ಕಳುಹಿಸಲಾಗಿದೆ. "ಸತತ ಪ್ರಯತ್ನದ ಫಲವಾಗಿ ಮುಂದಿನ ಒಂದು ವಾರದೊಳಗೆ ಕೇಂದ್ರದಿಂದ ಅಂತಿಮ ಒಪ್ಪಿಗೆ ದೊರೆಯುವ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

ಗುಣಮಟ್ಟವೇ ಮುಖ್ಯ: 'ಕಟ್ ಅಂಡ್ ಕವರ್' ತಂತ್ರಜ್ಞಾನ

ಕಾಮಗಾರಿಯ ಗುಣಮಟ್ಟದ ವಿಚಾರದಲ್ಲಿ ಅಧಿಕಾರಿಗಳಿಗೆ ಸಚಿವರು ಕಠಿಣ ಸಂದೇಶ ರವಾನಿಸಿದ್ದಾರೆ. ಯೋಜನೆಗೆ ಅಗತ್ಯವಿರುವ 28 ಮೀಟರ್ ಆಳದ ಭೂಮಿಯನ್ನು ಅಗೆಯುವಾಗ (ಡೀಪ್ ಕಟ್), ಅತ್ಯಂತ ಎಚ್ಚರಿಕೆ ವಹಿಸುವಂತೆ ಸೂಚಿಸಿದರು. ಮಣ್ಣು ಕುಸಿಯದಂತೆ ತಡೆಯಲು 'ಕಟ್ ಅಂಡ್ ಕವರ್' ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಬೇಕೆಂದು ತಾಕೀತು ಮಾಡಿದರು. ಕಾಮಗಾರಿಗೆ ಹೆಚ್ಚುವರಿಯಾಗಿ ನೀಡಿರುವ 10 ಎಕರೆ ಜಾಗದಲ್ಲಿ ಮಣ್ಣನ್ನು ತಾತ್ಕಾಲಿಕವಾಗಿ ಸಂಗ್ರಹಿಸಿ, ಬಳಿಕ ಮರಳಿ ತುಂಬುವ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಕ್ಟೋಬರ್ 15ರ ಒಳಗಾಗಿ ತುಮಕೂರು ಭಾಗದ ನಿರ್ಮಾಣ ಕಾಮಗಾರಿಗಳು ಸಂಪೂರ್ಣಗೊಳ್ಳಲಿದ್ದು, ನಿಗದಿತ ಸಮಯದಲ್ಲಿ ನೀರು ಹರಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆ ಹಿನ್ನೆಲೆ ಹಾಗೂ ಸವಾಲುಗಳು

ಎತ್ತಿನಹೊಳೆ ಯೋಜನೆಯು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ 'ಕನಸಿನ ಯೋಜನೆ' ಎಂಬುದನ್ನು ನೆನಪಿಸಿದರು. ಆರಂಭದಲ್ಲಿ ಈ ಯೋಜನೆಯ ಅಂದಾಜು ವೆಚ್ಚ 8 ಸಾವಿರ ಕೋಟಿ ರೂಪಾಯಿಗಳಷ್ಟಿತ್ತು, ಆದರೆ ಇಂದು ಅದು 23 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹಣಕಾಸಿನ ಹೊರೆ ಹೆಚ್ಚಾಗಿದ್ದರೂ, ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರ ಜೊತೆಗೆ ವಿಳಂಬವಾಗಿದ್ದ ಬಿಕ್ಕೆಗುಡ್ಡ ಯೋಜನೆಯನ್ನು ಸಹ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ರೈತರ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ, ಹೇಮಾವತಿ ಲಿಂಕ್ ಕೆನಾಲ್ ಕೈಬಿಡುವಂತೆ ರೈತರು ಸಲ್ಲಿಸಿರುವ ಮನವಿಯ ಕುರಿತು ಸಚಿವರು ಪ್ರತಿಕ್ರಿಯಿಸಿ, "ತುಮಕೂರು ಮತ್ತು ರಾಮನಗರದ ರೈತರು ನಮಗೆ ಇಬ್ಬರೂ ಸಮಾನರು. ಯಾವೊಬ್ಬ ರೈತರಿಗೂ ಅನ್ಯಾಯವಾಗದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನಾವು ಯಾರನ್ನೂ ಕಡೆಗಣಿಸುವುದಿಲ್ಲ" ಎಂದು ಭರವಸೆ ನೀಡಿದರು.

ಮೈಕ್ರೋ ಫೈನಾನ್ಸ್ ಸಾಲದ ಸುಳಿಗೆ ಬೀಳಬೇಡಿ

ಸಚಿವರು ರೈತರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಮೈಕ್ರೋ ಫೈನಾನ್ಸ್ (ಕಿರು ಸಾಲ) ಸಂಸ್ಥೆಗಳ ಬಗ್ಗೆ ಎಚ್ಚರಿಕೆ ನೀಡಿದರು. "ಬರಗಾಲದಂತಹ ಸಂಕಷ್ಟದ ಸಮಯದಲ್ಲಿ ರೈತರು ಆರ್ಥಿಕವಾಗಿ ಹತಾಶರಾಗಿ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ. ಅಲ್ಲಿನ ಹೆಚ್ಚಿನ ಬಡ್ಡಿ ದರ ಮತ್ತು ಕಿರುಕುಳಕ್ಕೆ ರೈತರು ಬಲಿಯಾಗುತ್ತಿದ್ದಾರೆ" ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು. ಲಿಖಿತ ದೂರುಗಳಿಲ್ಲದೆ ಕೇವಲ ಮೌಖಿಕವಾಗಿ ಹೇಳಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ ಸುಳಿಗೆ ಬೀಳದೆ, ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಮನವಿ ಮಾಡಿದರು.

Read More
Next Story