ಯಶವಂತಪುರ–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು:  ಶೀಘ್ರವೇ ಕಾರ್ಯಾಚರಣೆ ದಿನಾಂಕ ಪ್ರಕಟ
x

ಯಶವಂತಪುರ–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು: ಶೀಘ್ರವೇ ಕಾರ್ಯಾಚರಣೆ ದಿನಾಂಕ ಪ್ರಕಟ

ಹೊಸ ವಂದೇ ಭಾರತ್ ರೈಲಿನ ಸಂಚಾರದಿಂದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವಿನ ಪ್ರಯಾಣದ ಸಮಯ ಇನ್ನಷ್ಟು ಕಡಿತಗೊಳ್ಳಲಿದ್ದು, ಪ್ರಯಾಣಿಕರಿಗೆ ಐಷಾರಾಮಿ ಹಾಗೂ ವೇಗದ ಸಂಚಾರ ಅನುಭವ ಸಿಗಲಿದೆ.


ಯಶವಂತಪುರ ಹಾಗೂ ಮಂಗಳೂರು ನಡುವೆ ಸಂಚರಿಸುವ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬೆನ್ನಲ್ಲೇ ಶೀಘ್ರವೇ ವಾಣಿಜ್ಯ ಕಾರ್ಯಾಚರಣೆಯ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಗರಿಗೆದರಿದೆ. ಎರಡನೇ ಪ್ರಾಯೋಗಿಕ ಸಂಚಾರದಲ್ಲಿ ರೈಲು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತನ್ನ ಗಮ್ಯಸ್ಥಾನ ತಲುಪುವ ಮೂಲಕ ತಾಂತ್ರಿಕವಾಗಿಯೂ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ರೈಲು ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್‌ ತಲುಪಲು ತೆಗೆದುಕೊಂಡ ಸಮಯ 7 ಗಂಟೆ 10 ನಿಮಿಷ. ಮೊದಲ ಪ್ರಾಯೋಗಿಕ ಸಂಚಾರದಲ್ಲಿ ವಂದೇ ಭಾರತ್‌ ರೈಲು ಮಂಗಳೂರು ತಲುಪಲು ಸುಮಾರು 10 ಗಂಟೆ 20 ನಿಮಿಷಗಳನ್ನು ತೆಗೆದುಕೊಂಡಿತ್ತು.

ಅಧಿಕಾರಿಗಳಿಂದ ಪರಿಶೀಲನೆ

ಪ್ರಾಯೋಗಿಕ ಸಂಚಾರದ ವೇಳೆ ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ಪ್ರಮುಖ ವಿಭಾಗಗಳಾದ ವಿದ್ಯುತ್, ಮೆಕ್ಯಾನಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗಗಳ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ರೈಲಿನಲ್ಲೇ ಪ್ರಯಾಣಿಸಿದರು. ಈ ತಂಡವು ಘಾಟ್ ಪ್ರದೇಶದಲ್ಲಿ ರೈಲಿನ ಸಂಚಾರ ಸಮಯ, ಕಾರ್ಯಾಚರಣಾ ಅಂಶಗಳು ಹಾಗೂ ಸುರಕ್ಷತಾ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿತು.

ಯಶವಂತಪುರ–ಮಂಗಳೂರು ವಂದೇ ಭಾರತ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರವು ಸೆ.5 ರಂದು ನಡೆದಿತ್ತು.ಆ ಸಂದರ್ಭದಲ್ಲಿ ಘಾಟ್ ಪ್ರದೇಶದಲ್ಲಿ ಬೀಸಿದ ಬಲವಾದ ಗಾಳಿ ಹಾಗೂ ಓವರ್‌ಹೆಡ್‌ ಉಪಕರಣ ಮತ್ತು ರೈಲಿನ ಪ್ಯಾಂಟೋಗ್ರಾಫ್ ನಡುವೆ ಹೊಂದಾಣಿಕೆ ಸಮಸ್ಯೆಯಿಂದಾಗಿ ರೈಲು ಸಂಚಾರ ವಿಳಂಬವಾಗಿತ್ತು.

ಈ ತಾಂತ್ರಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸೆ.10 ರಂದು ನಡೆಸಿದ ಎರಡನೇ ಪ್ರಾಯೋಗಿಕ ಸಂಚಾರದಲ್ಲಿ ರೈಲು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಗಮ್ಯಸ್ಥಾನ ತಲುಪಿದೆ. ಆದಾಗ್ಯೂ, ಕೆಲ ತಾಂತ್ರಿಕ ಅಂಶಗಳು ಇನ್ನೂ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಪ್ರಾಯೋಗಿಕ ಸಂಚಾರ ನಡೆಸುವ ಸಾಧ್ಯತೆಯಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕಬಕ-ಪುತ್ತೂರಿನಲ್ಲಿ ನಿಲುಗಡೆ

ಮಂಗಳೂರು–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಕಬಕ–ಪುತ್ತೂರು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆ ಆಗಲಿದೆ. ಸೆ.5ರಂದು ನಡೆದ ಮೊದಲ ಪೂರ್ಣ ಪ್ರಮಾಣದ ಸಂಚಾರದ ವೇಳೆಯಲ್ಲಿ ಕಬಕ–ಪುತ್ತೂರು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅವಕಾಶ ನೀಡಿರಲಿಲ್ಲ. ಆದರೆ, ಸಾರ್ವಜನಿಕರು ಹಾಗೂ ಪ್ರಯಾಣಿಕರ ಬೇಡಿಕೆ ಪರಿಗಣಿಸಿ ಈ ನಿಲುಗಡೆಗೆ ಅವಕಾಶ ನೀಡಲಾಗಿದೆ.

ತಾಂತ್ರಿಕ ವರದಿ ಹಾಗೂ ಪ್ರಯಾಣಿಕರ ಬೇಡಿಕೆಗಳ ಆಧಾರದ ಮೇಲೆ ಅಂತಿಮ ವೇಳಾಪಟ್ಟಿ ಮತ್ತು ವಾಣಿಜ್ಯ ಸಂಚಾರದ ದಿನಾಂಕವು ಶೀಘ್ರವೇ ಪ್ರಕಟವಾಗುವ ನಿರೀಕ್ಷೆಯಿದೆ. ಹೊಸ ವಂದೇ ಭಾರತ್ ರೈಲಿನ ಸಂಚಾರದಿಂದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವಿನ ಪ್ರಯಾಣದ ಸಮಯ ಇನ್ನಷ್ಟು ಕಡಿತಗೊಳ್ಳಲಿದ್ದು, ಪ್ರಯಾಣಿಕರಿಗೆ ಐಷಾರಾಮಿ ಹಾಗೂ ವೇಗದ ಸಂಚಾರ ಅನುಭವ ಸಿಗಲಿದೆ.

Read More
Next Story