
ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ: ವೈದ್ಯನ ವಿರುದ್ಧ ಎಫ್‌ಐಆರ್ ದಾಖಲು
ಇತ್ತೀಚೆಗಷ್ಟೇ ಸಚಿವ ಈಶ್ವರ ಖಂಡ್ರೆ ಅವರು ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಗೆ ಭೇಟಿ ನೀಡಿದ್ದಾಗ ಸ್ಥಳೀಯರು ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಕರೆಗೆ ಸುರಿಯುತ್ತಿದ್ದಾರೆ ಎಂದು ದೂರು ನೀಡಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಂಟಗಾನಹಳ್ಳಿ ಗ್ರಾಮದ ಕೆರೆಗೆ ಅತ್ಯಂತ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ರಾಜಾರೋಷವಾಗಿ ಸುರಿಯುತ್ತಿದ್ದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಕೊನೆಗೂ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಜಲಮೂಲವನ್ನು ಕಲುಷಿತಗೊಳಿಸಿದ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಚಿವರ ಹಠಾತ್ ಭೇಟಿ ಮತ್ತು ಸಾರ್ವಜನಿಕರ ದೂರು
ಇತ್ತೀಚೆಗಷ್ಟೇ ಸಚಿವ ಈಶ್ವರ ಖಂಡ್ರೆ ಅವರು ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಚಿವರನ್ನು ಸುತ್ತುವರೆದ ಸ್ಥಳೀಯರು, ಗ್ರಾಮದ ಜೀವನಾಡಿಯಾಗಿರುವ ಕೆರೆಗೆ ಕೆಲವರು ಉದ್ದೇಶಪೂರ್ವಕವಾಗಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ ಎಂದು ಲಿಖಿತ ಹಾಗೂ ಮೌಖಿಕ ದೂರು ನೀಡಿದ್ದರು. ಸಾರ್ವಜನಿಕರ ದೂರು ಆಲಿಸಿ ತೀವ್ರ ಅಸಮಾಧಾನಗೊಂಡ ಸಚಿವರು, ಜಲಸಂಪನ್ಮೂಲಗಳೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ (ಇಒ) ಸ್ಥಳದಲ್ಲೇ ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ರಕ್ತಸಿಕ್ತ ತ್ಯಾಜ್ಯ ಪತ್ತೆ ಮತ್ತು ಎಫ್‌ಐಆರ್ ದಾಖಲು
ಸಚಿವರ ಖಡಕ್ ಸೂಚನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿಂದು ಹಾಗೂ ಇತರ ಅಧಿಕಾರಿಗಳ ತಂಡ, ತಕ್ಷಣವೇ ಕೆರೆಯ ಬಳಿ ತೆರಳಿ ಸ್ಥಳ ಪರಿಶೀಲನೆ ನಡೆಸಿತು. ಈ ವೇಳೆ ಕೆರೆಗೆ ನೀರು ಹರಿದುಬರುವ ರಾಜಕಾಲುವೆಯಲ್ಲಿ ಬಳಸಿದ ಸಿರಿಂಜ್‌ಗಳು, ರಕ್ತಸಿಕ್ತವಾಗಿದ್ದ ಹತ್ತಿ, ಬ್ಯಾಂಡೇಜ್ ಹಾಗೂ ಇತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸಿಮೆಂಟ್ ಚೀಲಗಳಲ್ಲಿ ತುಂಬಿ ಎಸೆದಿರುವುದು ಪತ್ತೆಯಾಗಿತ್ತು. ಅಧಿಕಾರಿಗಳು ಈ ದುಷ್ಕೃತ್ಯದ ಸಂಪೂರ್ಣ ಸಚಿತ್ರ ಮಾಹಿತಿಯನ್ನು ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದರು. ಆ ವರದಿಯ ಆಧಾರದ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ. ಪದ್ಮಿನಿ ಅವರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ತಪ್ಪೊಪ್ಪಿಕೊಂಡ ಖಾಸಗಿ ವೈದ್ಯ
ಗ್ರಾಮದ ಜನ ಹಾಗೂ ಜಾನುವಾರುಗಳು ಕುಡಿಯಲು ಮತ್ತು ದೈನಂದಿನ ಬಳಕೆಗೆ ಇದೇ ಕೆರೆಯ ನೀರನ್ನು ಅವಲಂಬಿಸಿದ್ದಾರೆ. ಇಂತಹ ಸೂಕ್ಷ್ಮ ಜಲಮೂಲಕ್ಕೆ ವೈದ್ಯಕೀಯ ತ್ಯಾಜ್ಯ ಎಸೆಯುವುದರಿಂದ ಮಾರಣಾಂತಿಕ ಸಾಂಕ್ರಾಮಿಕ ರೋಗಗಳು ಹರಡುವ ಗಂಭೀರ ಅಪಾಯವಿತ್ತು. ಈ ಘೋರ ಅಪರಾಧದ ಹಿನ್ನೆಲೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಡಾ. ಅರುಣ್ ಗಿರೀಶ್ ಸಾಗರ್ ಎಂಬುವವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆಯ ವೇಳೆ ಡಾ. ಅರುಣ್ ಗಿರೀಶ್ ಸಾಗರ್ ಅವರು, ಕೆರೆಯಲ್ಲಿ ಪತ್ತೆಯಾದ ತ್ಯಾಜ್ಯವು ತಮ್ಮ ಆಸ್ಪತ್ರೆಗೆ ಸೇರಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕುಡಿಯುವ ನೀರಿನ ಮೂಲಗಳಾದ ನದಿ, ಕೆರೆ, ಬಾವಿಗಳನ್ನು ಕಲುಷಿತಗೊಳಿಸುವ ಕಿಡಿಗೇಡಿಗಳಿಗೆ ಈ ಘಟನೆ ಒಂದು ಸ್ಪಷ್ಟ ಎಚ್ಚರಿಕೆಯ ಗಂಟೆಯಾಗಿದೆ.

