ನಿರಂತರ ಪ್ರತಿಭಟನೆಗೆ ಸ್ಪಂದಿಸದೇ ಕಡೇಚೂರು ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ
ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ, ಇಲ್ಲಿನ ಕಂಪನಿಗಳ ಉನ್ನತ ಅಧಿಕಾರಿಗಳು ಮತ್ತು ವ್ಯವಸ್ಥಾಪಕರು ಯಾರೂ ಈ ಸುತ್ತಮುತ್ತ ವಾಸಿಸುವುದಿಲ್ಲ. ಬದಲಾಗಿ ತೆಲಂಗಾಣದ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಕಡೆಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಕಾರ್ಖಾನೆಗಳು ಹೊರ ಬಿಡುವ ವಿಷಪೂರಿತ ಹೊಗೆ ಇಲ್ಲಿನ ಸ್ಥಳೀಯರು ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸುಮಾರು ನಾಲ್ಕೈದು ರಾಸಾಯನಿಕ ಕಾರ್ಖಾನೆಗಳು ವಿಷಗಾಳಿ ಉಗುಳುತ್ತಿದ್ದು, ನೀರು, ಗಾಳಿ ಕಲುಷಿತಗೊಂಡು, ಕೃಷಿ ಬೆಳೆಗಳು ಕೂಡ ಹಾಳಾಗುತ್ತಿವೆ. ಕೆಮಿಕಲ್ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸುವಂತೆ ಈ ಶೆಟ್ಟಿಹಳ್ಳಿ, ಸೈದಾಪುರ, ಕಡೇಚೂರು, ಮುನಗಾಲ್, ತೆಲಂಗಾಣದ ಚೇಗುಂಟ ಗ್ರಾಮಗಳ ಜನರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ.
ನಮಗೆ ಉಸಿರಾಡಲು ಶುದ್ಧ ಗಾಳಿ ಕೊಡಿ, ಬದುಕಲು ಯೋಗ್ಯವಾದ ವಾತಾವರಣ ನಿರ್ಮಿಸಿಕೊಡಿ ಎಂದು ಗೋಗೆರೆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಲಕ್ಷ್ಯದಿಂದಲೇ ಈಗ ಫಾರ್ಮಾ ಕಂಪನಿಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಬಡ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದುರಂತದ ನಂತರ ಎಚ್ಚೆತ್ತ ಜಿಲ್ಲಾಡಳಿತ, ಫ್ಯಾಕ್ಟರಿಗೆ ಸೀಲ್ ಹಾಕಿದೆ. ಆದರೆ, ಇನ್ನೂ ಹಲವು ಕೆಮಿಕಲ್ ಕಾರ್ಖಾನೆಗಳು ನಿಯಮಗಳನ್ನು ಉಲ್ಲಂಘಿಸಿ, ವಿಷಕಾರಿ ಹೊಗೆ ಬಿಡುತ್ತಿವೆ. ಲಾಭಕೋರ ಕಂಪನಿ ಮಾಲೀಕರು ಮತ್ತು ಭ್ರಷ್ಟ ಅಧಿಕಾರಿಗಳು ಶಾಮೀಲಾಗಿ ಇಂದು ಇಡೀ ಕರ್ನಾಟಕವೇ ಕೆಮಿಕಲ್ ತ್ಯಾಜ್ಯದ ತೊಟ್ಟಿಲಾಗಿ ಮಾರ್ಪಟ್ಟಿದೆ.
ಕಡೆಚೂರಿನ ಪರಿಸ್ಥಿತಿ ಭಯಾನಕ
ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ, ಇಲ್ಲಿನ ಕಂಪನಿಗಳ ಉನ್ನತ ಅಧಿಕಾರಿಗಳು ಮತ್ತು ವ್ಯವಸ್ಥಾಪಕರು ಯಾರೂ ಈ ಸುತ್ತಮುತ್ತ ವಾಸಿಸುವುದಿಲ್ಲ. ವಿಷಗಾಳಿ ಮತ್ತು ತ್ಯಾಜ್ಯದ ಭೀತಿಯಿಂದ ಸುಮಾರು 30 ಕಿ.ಮೀ. ದೂರದ ತೆಲಂಗಾಣದ ಮಕ್ತಾಲ್ ಹಾಗೂ ಮೆಹಬೂಬ್ನಗರದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಆದರೆ, ಸ್ಥಳೀಯರು ಹಾಗೂ ಬಡ ಕಾರ್ಮಿಕರು ದಿನನಿತ್ಯ ಈ ವಿಷ ಗಾಳಿಯಲ್ಲೇ ಉಸಿರಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇಲ್ಲಿ ಆಸ್ಪತ್ರೆಗೆ ಬರುವ ಕಾರ್ಮಿಕರ ಕಣ್ಣು, ಕೈಕಾಲು ಮತ್ತು ಚರ್ಮ ನೀಲಿ-ಕಂದು ಬಣ್ಣಕ್ಕೆ ತಿರುಗುತ್ತಿವೆ. ಶ್ವಾಸಕೋಶದ ಕಾಯಿಲೆ, ದಮ್ಮು ಮತ್ತು ಕೆಮ್ಮಿನಿಂದ ಜನರು ನರಳುತ್ತಿದ್ದಾರೆ. ಕಾರ್ಮಿಕರ ವೈದ್ಯಕೀಯ ವರದಿಗಳು ಹೊರಬರದಂತೆ ಆಡಳಿತ ಮಂಡಳಿಗಳು ವ್ಯವಸ್ಥಿತವಾಗಿ ಮುಚ್ಚಿಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನು ವಿಷಕಾರಿ ಹೊಗೆ ಮತ್ತು ರಾಸಾಯನಿಕ ದೂಳಿನ ಕಣಗಳಿಂದ ಹತ್ತಿ, ತೊಗರಿ, ಮೆಣಸಿನಕಾಯಿ, ಶೇಂಗಾ ಹಾಗೂ ಭತ್ತದ ಬೆಳೆಗಳ ಎಲೆಗಳು ಕಪ್ಪಾಗಿ ಒಣಗುತ್ತಿವೆ. ದ್ಯುತಿಸಂಶ್ಲೇಷಣೆ ಪ್ರಕ್ರಿಯೆ ಕುಂಠಿತಗೊಂಡು ಶೇ. 50ಕ್ಕೂ ಹೆಚ್ಚು ಪ್ರಮಾಣದ ಬೆಳೆ ನಾಶವಾಗುತ್ತಿದೆ. ಕಲುಷಿತ ನೀರು ಮಣ್ಣನ್ನು ಬಂಜರು ಮಾಡುತ್ತಿದ್ದು, ವಿಷಗಾಳಿಗೆ ಸಿಲುಕಿ ಜಾನುವಾರುಗಳು ಮೃತಪಡುತ್ತಿವೆ.
ರಾಜ್ಯದ ಅನಿಲ ದುರಂತಗಳ ಕಥೆ
ಕೆಲ ದಿನಗಳ ಹಿಂದೆ ಮಂಡ್ಯದ ಕೆಮಿಕಲ್ಸ್ ಕಾರ್ಖಾನೆಯಲ್ಲಿ ರಾಸಾಯನಿಕ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಬಲಿಯಾಗಿದ್ದರು. ಕೆಮಿಕಲ್ ಕಾರ್ಖಾನೆ ಸ್ಥಗಿತಗೊಳಿಸುವಂತೆ ಹಲವು ವರ್ಷಗಳಿಂದ ಪ್ರತಿಭಟಿಸಿದರೂ ದುರಂತದ ನಂತರವೇ ಕ್ರಮ ಜರುಗಿಸಲಾಯಿತು. ನಂಜನಗೂಡಿನ ಇಮ್ಮಾವು ಸುತ್ತಮುತ್ತ ತಲೆ ಎತ್ತಿರುವ ಕಾರ್ಖಾನೆಗಳು ಕಪಿಲಾ ನದಿಗೆ ಸಂಸ್ಕರಿಸದ ರಾಸಾಯನಿಕ ತ್ಯಾಜ್ಯ ಹರಿಸುತ್ತಿದ್ದು, ವಿಷಕಾರಿ ಹೊಗೆ ಬಿಡುವುದರ ವಿರುದ್ಧ ಸ್ಥಳೀಯರು ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯದಿಂದ ಅರ್ಕಾವತಿ ನದಿ ಪಾತ್ರದ ದೊಡ್ಡ ತುಮಕೂರು ಮತ್ತು ಚಿಕ್ಕತುಮಕೂರು ಕೆರೆಗಳು ಸಂಪೂರ್ಣ ಕಲುಷಿತವಾಗಿವೆ. ಇಲ್ಲಿನ 13 ಹಳ್ಳಿಗಳ ಜನರು ಕಳೆದ 3-4 ವರ್ಷಗಳಿಂದ ಪ್ರತಿಭಟಿಸುತ್ತಿದ್ದರೂ ತ್ಯಾಜ್ಯ ಹರಿವು ನಿಂತಿಲ್ಲ. ಪರಿಣಾಮವಾಗಿ ಗ್ರಾಮಸ್ಥರಲ್ಲಿ ಚರ್ಮರೋಗ ಹಾಗೂ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಅದೇ ರೀತಿ ಬೆಂಗಳೂರಿನ ಜಿಗಣಿ, ಪೀಣ್ಯ ಹಾಗೂ ಮಂಗಳೂರಿನ ಬೈಕಂಪಾಡಿಯಲ್ಲೂ ಕೈಗಾರಿಕಾ ರಾಸಾಯನಿಕಗಳು ನೇರವಾಗಿ ಜಲಮೂಲಗಳನ್ನು ಸೇರಿ ಅಂತರ್ಜಲವನ್ನು ಕಲುಷಿತಗೊಳಿಸುತ್ತಿವೆ.
ಕಡೆಚೂರು ಗ್ರಾಮದಲ್ಲಿ ಕಾರ್ಖಾನೆಗಳು ವಿಷಕಾರಿ ಹೊಗೆ ಬಿಡುತ್ತಿರುವುದರಿಂದ ಬೆಳೆಗಳು ನಾಶವಾಗುತ್ತಿವೆ. ಕಂಪನಿಗಳು ಸಂಸ್ಕರಿಸದೇ ತ್ಯಾಜ್ಯ ನೀರು ಬಿಡುತ್ತಿರುವುದರಿಂದ ಕೃಷಿ ಭೂಮಿ ಬಂಜರಾಗುತ್ತಿದೆ. ಈಗ ವಿಷಾನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಠಿಣ ಕ್ರಮ ಜರುಗಿಸಬೇಕು ಎಂದು ಕನ್ನಡಪರ ಹೋರಾಟಗಾರ ವೀರೇಶ್ ಸಜ್ಜನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು. ಕೇವಲ ಒಂದು ಫ್ಯಾಕ್ಟರಿಗೆ ಸೀಲ್ ಹಾಕುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕಡೆಚೂರು ದುರಂತಕ್ಕೆ ಕಾರಣವಾದ ಕಂಪನಿ ಮಾಲೀಕರನ್ನು ತಕ್ಷಣವೇ ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳ ಅಮಾನತಿಗೆ ಆಗ್ರಹ
ಕೆಮಿಕಲ್ ಕಾರ್ಖಾನೆಗಳಲ್ಲಿ ಸುರಕ್ಷತಾ ತಪಾಸಣೆ ನಡೆಸದೇ ನಿರ್ಲಕ್ಷ್ಯ ವಹಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು. ಕರ್ನಾಟಕದಲ್ಲಿರುವ ಎಲ್ಲಾ ಕೆಮಿಕಲ್ ಮತ್ತು ಫಾರ್ಮಾ ಕಾರ್ಖಾನೆಗಳಲ್ಲಿ ಉನ್ನತ ಮಟ್ಟದ ಭದ್ರತಾ ತಪಾಸಣೆ ತಕ್ಷಣವೇ ನಡೆಯಬೇಕು. ಕೆರೆ-ನದಿಗಳಿಗೆ ಹಾಗೂ ಕೃಷಿ ಭೂಮಿಗೆ ಹರಿಯುವ ಕೆಮಿಕಲ್ ತ್ಯಾಜ್ಯವನ್ನು ತಕ್ಷಣವೇ ತಡೆದು, ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಕಾರ್ಖಾನೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅನಿಲ ಸೋರಿಕೆ ಹೇಗಾಯಿತು ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲಾಗುವುದು, ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಫೋರೆನ್ಸಿಕ್ ತಂಡಗಳು ಆಗಮಿಸಿವೆ ಎಂದು ಹೇಳಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗುರಮಿಠಕಲ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಕಡೇಚೂರು ಭಾಗದಲ್ಲಿ ಕೆಮಿಕಲ್ ಕಾರ್ಖಾನೆಗಳು ನಿತ್ಯ ವಿಷಕಾರಿ ಹೊಗೆ ಉಗುಳುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರಿಗೆಲ್ಲಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮೂವರನ್ನು ಬಲಿ ಪಡೆದ ವಿಷಾನಿಲ ದುರಂತಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಚಿವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

