x

ವಿಶ್ವ ಆನೆಗಳ ದಿನ: ಆನೆಗಳ ಪಾದದಿಂದ ಕಣ್ಣಿನವರೆಗೆ ಅಚ್ಚರಿಗಳೇ ಅಚ್ಚರಿ; ತಜ್ಞರೊಂದಿಗೆ ವಿಶೇಷ ಸಂದರ್ಶನ

ವಿಶ್ವ ಆನೆಗಳ ದಿನದಂದು ಆನೆಗಳ ಅಚ್ಚರಿ ಸಂಗತಿಗಳು, ಬುದ್ಧಿಮತ್ತೆ, ಭಾವನೆಗಳು ಮತ್ತು ಕರ್ನಾಟಕದ ಆನೆ-ಮಾನವ ಸಂಘರ್ಷದ ಕುರಿತು ತಜ್ಞರ ಮಾಹಿತಿ ಇಲ್ಲಿದೆ.


Click the Play button to hear this message in audio format

ಇಂದು ವಿಶ್ವ ಆನೆಗಳ ದಿನ. ಆನೆ ಎಂದರೆ ಕೇವಲ ಬೃಹತ್ ದೇಹ ಹೊಂದಿರುವ ಪ್ರಾಣಿ ಮಾತ್ರವಲ್ಲ. ಅದರ ಪಾದದಿಂದ ಹಿಡಿದು ಕಣ್ಣಿನವರೆಗೆ, ಸೊಂಡಿಲಿನಿಂದ ಹಿಡಿದು ಅದರ ಸಾಮಾಜಿಕ ಜೀವನದವರೆಗೆ ಅಚ್ಚರಿಯ ಸಂಗತಿಗಳೇ ತುಂಬಿವೆ.

ಸುಮಾರು ಐದರಿಂದ ಆರು ಕಿಲೋಮೀಟರ್ ದೂರದಲ್ಲಿ ಉಂಟಾಗುವ ಕಂಪನವನ್ನು ಆನೆಗಳು ಗ್ರಹಿಸಬಲ್ಲವೇ? ಸತ್ತ ಆನೆಯ ಬಗ್ಗೆ ಇತರ ಆನೆಗಳು ದುಃಖಿಸುತ್ತವೆಯೇ? ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ತಾವೇ ಗುರುತಿಸಿಕೊಳ್ಳುತ್ತವೆಯೇ? ಮನುಷ್ಯರ ಧ್ವನಿ ಮತ್ತು ಮಾತಿನ ಧಾಟಿಯಿಂದಲೇ ಅಪಾಯವನ್ನು ಗುರುತಿಸಬಲ್ಲವೇ? ಇಂತಹ ಹಲವು ಪ್ರಶ್ನೆಗಳು ಆನೆಗಳ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ವಿಶ್ವ ಆನೆಗಳ ದಿನದ ಅಂಗವಾಗಿ, ಈ ದೈತ್ಯ ಜೀವಿಯ ಕುರಿತ ಅಚ್ಚರಿ ಸಂಗತಿಗಳು, ಅದರ ವರ್ತನೆ, ಬುದ್ಧಿಮತ್ತೆ, ಭಾವನೆಗಳು ಮತ್ತು ಕರ್ನಾಟಕದಲ್ಲಿನ ಆನೆ–ಮಾನವ ಸಂಘರ್ಷದ ಕುರಿತು A Rocha India ಸಂಸ್ಥೆಯಲ್ಲಿ ಸೀನಿಯರ್ ರಿಸರ್ಚ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ಕುಮಾರ್ ಎ.ವಿ. ಅವರೊಂದಿಗೆ ವಿಶೇಷವಾಗಿ ಮಾತನಾಡಲಾಗಿದೆ.

ಆನೆಗಳು ತಮ್ಮ ಪಾದಗಳ ಮೂಲಕ ಭೂಮಿಯಲ್ಲಿ ಉಂಟಾಗುವ ಕಂಪನಗಳನ್ನು ಗ್ರಹಿಸುತ್ತವೆ ಎನ್ನಲಾಗುತ್ತದೆ. ಸುಮಾರು 5-6 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಆನೆಯ ಹೆಜ್ಜೆಯ ಸದ್ದು ಅಥವಾ ಭೂಮಿಯಲ್ಲಿನ ಕಂಪನವನ್ನು ಅವುಗಳ ಪಾದಗಳು ಗ್ರಹಿಸುತ್ತವೆ ಎಂದು ಅವರು ಹೇಳಿದ್ದಾರೆ.

ಆನೆಯೊಂದು ಸತ್ತಾಗ ಇತರ ಆನೆಗಳು ಅದರ ದೇಹದ ಸುತ್ತ ಸೇರಿ, ಕೆಲವೊಮ್ಮೆ ಮೌನವಾಗಿ ನಿಂತುಕೊಳ್ಳುತ್ತವೆ. ಬಹುತೇಕ ಶವಸಂಸ್ಕಾರದಂತಹ ರೀತಿಯಲ್ಲಿ ವರ್ತಿಸುತ್ತವೆ ಎನ್ನಲಾಗುತ್ತದೆ. ಆನೆಗಳಲ್ಲಿ ಇಂತಹ ದುಃಖ ಅಥವಾ ಶೋಕದ ವರ್ತನೆ ನಿಜವಾಗಿಯೂ ಕಂಡುಬರುತ್ತದೆಯೇ ಎಂಬುದೂ ಸಂಶೋಧಕರ ಗಮನ ಸೆಳೆದಿರುವ ವಿಚಾರ.

ಆನೆಗಳ ಗರ್ಭಾವಸ್ಥೆ ಏಕೆ ಇಷ್ಟು ದೀರ್ಘ?

ಆನೆಗಳು ಅತ್ಯಂತ ದೀರ್ಘ ಗರ್ಭಾವಸ್ಥೆ ಹೊಂದಿರುವ ಭೂಪ್ರಾಣಿಗಳಲ್ಲಿ ಪ್ರಮುಖವಾಗಿವೆ. ಸಾಮಾನ್ಯವಾಗಿ ಸುಮಾರು 18ರಿಂದ 22 ತಿಂಗಳವರೆಗೆ ಆನೆಗಳ ಗರ್ಭಾವಸ್ಥೆ ಮುಂದುವರಿಯುತ್ತದೆ. ಮರಿ ಆನೆಯ ಮೆದುಳು ಹುಟ್ಟುವ ವೇಳೆಗೆ ಸಾಕಷ್ಟು ಅಭಿವೃದ್ಧಿಯಾಗಿರುತ್ತದೆ. ಹೀಗಾಗಿ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಿಗಳು ನಡೆಯಲು ಆರಂಭಿಸುತ್ತವೆ ಎನ್ನಲಾಗುತ್ತದೆ. ಈ ದೀರ್ಘ ಗರ್ಭಾವಸ್ಥೆ ಮತ್ತು ಮರಿ ಆನೆಯ ಆರಂಭಿಕ ಬೆಳವಣಿಗೆಯ ನಡುವಿನ ಸಂಬಂಧವೂ ಗಮನಾರ್ಹವಾಗಿದೆ.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷ

ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಆದರೆ ಆನೆಗಳ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ ಅವುಗಳ ಆವಾಸಸ್ಥಾನ, ಸಂಚಾರ ಮಾರ್ಗಗಳು ಮತ್ತು ಮಾನವ ವಸತಿ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗುತ್ತಿರುವುದು ಆನೆ–ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿದೆ.

ಆನೆಗಳ ಸಂರಕ್ಷಣೆ ಮತ್ತು ಮಾನವ ಬದುಕಿನ ಸುರಕ್ಷತೆ ಎರಡನ್ನೂ ಹೇಗೆ ಸಮತೋಲನಗೊಳಿಸಬೇಕು? ಆನೆಗಳ ಸಂಚಾರ ಮಾರ್ಗಗಳನ್ನು ರಕ್ಷಿಸುವುದು ಎಷ್ಟು ಮುಖ್ಯ? ಸಂಘರ್ಷ ಕಡಿಮೆ ಮಾಡಲು ಸರ್ಕಾರ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಮುದಾಯಗಳು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಇಂದಿನ ಸಂದರ್ಭದಲ್ಲಿ ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story